ಕರಾವಳಿಯ ಅನೈತಿಕ ಪೊಲೀಸ್‌ಗಿರಿ ಸರಣಿ ಮುಂದುವರಿಕೆ | ಸಂಘಪರಿವಾರದ ದುಷ್ಕರ್ಮಿಗಳಿಂದ ವೈದ್ಯರ ಮೇಲೆ ದೌರ್ಜನ್ಯ

ಪ್ರಕರಣದಲ್ಲಿ ಐವರು ಸಂಘಪರಿವಾರದ ದುಷ್ಕರ್ಮಿಗಳನ್ನು ಬಂಧಿಸಲಾಗಿದೆ ಅನೈತಿಕ ಪೊಲೀಸ್‌ಗಿರಿ

ಉಡುಪಿ: ಕರಾವಳಿಯಲ್ಲಿ ಸಂಘಪರಿವಾರದ ದುಷ್ಕರ್ಮಿಗಳು ಇತ್ತೀಚೆಗಷ್ಟೆ ಪೊಲೀಸ್‌ ಅಧಿಕಾರಿ ಮತ್ತು ಪತ್ರಕರ್ತರನ್ನು ತಡೆದು ಅನೈತಿಕ ಪೊಲೀಸ್‌ಗಿರಿ ನಡೆಸಿದ್ದ ಪ್ರಕರಣ ಮರೆಯುವ ಮುಂಚೆಯೆ, ಮತ್ತೊಂದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಕಾರಿನಲ್ಲಿ ತೆರಳುತ್ತಿದ್ದ ವೈದ್ಯರು ಹಾಗೂ ಪ್ರಾಧ್ಯಾಪಕರನ್ನು ತಡೆದು ಸಂಘಪರಿವಾರದ ದುಷ್ಕರ್ಮಿಗಳು ಅನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆ. ಘಟನೆಯಲ್ಲಿ ಐವರು ಸಂಘ ಪರಿವಾರದ ದುಷ್ಕರ್ಮಿಗಳನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ.

ಘಟನೆ ಜುಲೈ 29ರ ಶನಿವಾರ ನಡೆದಿದ್ದು, ಬಂಧಿತ ಆರೋಪಿಗಳನ್ನು ಸಂತೋಷ್ ನಂದಳಿಕೆ, ಕಾರ್ತಿಕ್ ಪೂಜಾರಿ, ಸುನೀಲ್ ಮೂಲ್ಯ ಮಿಯ್ಯಾರು, ಸಂದೀಪ್ ಪೂಜಾರಿ ಮಿಯ್ಯಾರು, ಸುಜಿತ್ ಸಫಲಿಗ ತೆಳ್ಳಾರು ಎಂದು ಗುರುತಿಸಲಾಗಿದೆ.

ಮಂಗಳೂರಿನ ಕಾಲೇಜೊಂದರ ನಾಲ್ವರು ವೈದ್ಯರು ಹಾಗೂ ಅದೇ ಕಾಲೇಜಿನ ಇಬ್ಬರು ಮಹಿಳಾ ಪ್ರೊಫೆಸರ್ ಅವರೊಂದಿಗೆ ಒಂದೇ ಕಾರಿನಲ್ಲಿ ತೆರಳುತ್ತಿದ್ದಾಗ ಅವರನ್ನು ಸಂಘಪರಿವಾರದ ದುಷ್ಕರ್ಮಿಗಳು ಬೆನ್ನಟ್ಟಿದ್ದಾರೆ. ಕಾರ್ಕಳದ ಕುಂಟಲ್ಪಾಡಿ ಎಂಬಲ್ಲಿ ಅಡ್ಡಗಟ್ಟಿದ ಸಂಘಪರಿವಾರದ ಕಾರ್ಯಕರ್ತರು, ಅವರನ್ನು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.

ಇದನ್ನೂ ಓದಿ: ಮಂಗಳೂರು: ದಲಿತ ಬಾಲಕಿಯ ಅತ್ಯಾಚಾರ; 3 ಸಂಘಪರಿವಾರದ ದುಷ್ಕರ್ಮಿಗಳ ಸೆರೆ; ಇನ್ನಿಬ್ಬರು ನಾಪತ್ತೆ

ಈ ವೇಳೆ ಕಾರಿನಲ್ಲಿದ್ದ ಮಹಿಳೆ ತಕ್ಷಣ ಪೊಲೀಸ್ ಕಂಟ್ರೋಲ್ ರೂಮಿಗೆ ಮಾಹಿತಿ ನೀಡಿದ್ದಾರೆ ಎಂದು ವಾರ್ತಾಭಾರತಿ ವರದಿ ಮಾಡಿದೆ. ಮಹಿಳೆಯ ಮಾಹಿತಿಯಂತೆ ಸ್ಥಳಕ್ಕೆ ಆಗಮಿಸಿದ ಕಾರ್ಕಳ ಡಿವೈಎಸ್ಪಿ ಅರವಿಂದ ಕಲ್ಲಗುಜ್ಜೆ, ಪೊಲೀಸ್ ವೃತ್ತ ನಿರೀಕ್ಷಕ ನಾಗರಾಜ್, ಎಸ್ಸೈ ಸಂದೀಪ್ ಶೆಟ್ಟಿ ಐವರು ದುಷ್ಕರ್ಮಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ಹೇಳಿದೆ.

ಕಳೆದ ಒಂದು ವಾರದಲ್ಲಿ ಕರಾವಳಿಯ ಮೂರು ಕಡೆ ಅನೈತಿಕ ಪೊಲೀಸ್‌ಗಿರಿ ಪ್ರಕರಣಗಳು ವರದಿಯಾಗಿವೆ. ಮೊದಲ ಪ್ರಕರಣದಲ್ಲಿ, ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ NIA ಪೊಲೀಸ್ ಸಿಬ್ಬಂದಿಯೊಬ್ಬರ ಮೇಲಿನ ಹಲ್ಲೆ ನಡೆಸಿದ ಸಂಘಪರಿವಾರದ ದುಷ್ಕರ್ಮಿಗಳು, ಅವರ ಪತ್ನಿ ಮತ್ತು ಪತ್ನಿಯ ತಂಗಿಯ ಜೊತೆಗಿನ ಅಸಭ್ಯವಾಗಿ ವರ್ತಿಸಿದ್ದರು. ಇದರ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಪತ್ರಕರ್ತರಿಬ್ಬರನ್ನು ಬೆದರಿಸಿ, ನಿಂದಿಸಿದ ಪ್ರಕರಣ ವರದಿಯಾಗಿತ್ತು.

ಆಗಸ್ಟ್‌ 1ರ ಮಂಗಳವಾರ ಕರಾವಳಿಯ ಅವಳಿ ಜಿಲ್ಲೆಗಳಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ, “ಕಾನೂನು ಕೈಗೆತ್ತಿಕೊಂಡವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ಹೇಳಿದ್ದರು.

ವಿಡಿಯೊ ನೋಡಿ: ವೀಣಾ ಮಜುಂದಾರ್‌ ಮಹಿಳಾ ಸಮುದಾಯದ ಸಾಕ್ಷಿಪ್ರಜ್ಞೆ – ಡಾ. ದು ಸರಸ್ವತಿ Janashakthi Media

Donate Janashakthi Media

Leave a Reply

Your email address will not be published. Required fields are marked *