– ವಸಂತರಾಜ ಎನ್.ಕೆ
ಆರ್ಥಿಕ ಸಮಸ್ಯೆಗಳ ಕುರಿತು ಕಳೆದ ವಾರದ ಇರಾನಿನ ಜನತಾ ಪ್ರತಿಭಟನೆಗಳು ಹಠಾತ್ತಾಗಿ ದಂಗೆಗೆ ತಿರುಗಿ ನಾಲ್ಕುವರೆ ದಶಕಗಳ ಇಸ್ಲಾಮಿಕ ಪ್ರಭುತ್ವ ವ್ಯವಸ್ಥೆಯನ್ನು ಉರುಳಿಸುವ ಮಟ್ಟಕ್ಕೆ ಬಂದವು. ಈ ದಂಗೆಗಳನ್ನು ಇರಾನಿ ಸರಕಾರ ಕ್ರೂರವಾಗಿ ದಮನ ಮಾಡಿದ ರೀತಿಯ ದುರ್ಬಳಕೆ ಮಾಡಿ, ಯು.ಎಸ್-ಇಸ್ರೇಲಿ ದುಷ್ಟಕೂಟ “ಮಾನವೀಯ ಕಾರಣ” ಗಳ ನೆಪದಲ್ಲಿ ಇರಾನ್ ನಲ್ಲಿ ಮಿಲಿಟರಿ ಹಸ್ತಕ್ಷೇಪ ಮಾಡಿ ತಮ್ಮ ಬಾಲಬಡುಕ ಸರಕಾರ ಸ್ತಾಪಿಸಲು ಹೊರಟಿದ್ದವು. ಇದು ಇಡೀ ಪಶ್ಚಿಮ ಏಶ್ಯಾವನ್ನು ಮತ್ತೆ ರಣರಂಗವಾಗಿಸುವ ಅಪಾಯ ಹೊಂದಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಅಧ್ಯಕ್ಷ ಟ್ರಂಪ್ ಹಿಂಜರಿದಂತೆ ಕಾಣುತ್ತದೆ. ಆದರೆ ಇರಾನಿನ ಮೇಲೆ ಯುದ್ಧ ಹೂಡಿ ಅಲ್ಲಿ ಬಾಲಬಡುಕ ಸರಕಾರ ಸ್ಥಾಪಿಸುವ ಕನಸನ್ನು ಯು.ಎಸ್-ಇಸ್ರೇಲಿ ದುಷ್ಟಕೂಟ ಇನ್ನೂ ಬಿಟ್ಟಿಲ್ಲ. ಯು.ಎಸ್-ಯುರೋ ಕೂಟಗಳ ಆರ್ಥಿಕ ದಿಗ್ಬಂಧನಗಳು ಮತ್ತು ಧಾರ್ಮಿಕ-ಬಂಡವಾಳಶಾಹಿ ಸರಕಾರದ ಜನ-ವಿರೋಧಿ ನಿರಂಕುಶ ನೀತಿಗಳಿಂದ ಇರಾನಿ ಜನರ ತೀವ್ರ ಸಂಕಷ್ಟಗಳು ಕೊನೆಯಾಗಿಲ್ಲ. ಆದರೆ ಆಂತರಿಕವಾಗಿ ಬದಲಿ ಸರಕಾರ ರಚಿಸುವ ಸಹಜ ರಾಜಕೀಯ ಪ್ರಕ್ರಿಯೆಗೆ ತೀವ್ರ ತೊಡಕುಗಳು ಉಂಟಾಗಿವೆ. ಈ ಹಿನ್ನೆಲೆಯಲ್ಲಿ ಇರಾನಿನ ಜನತಾ ದಂಗೆಯ ಕಾರಣಗಳನ್ನು, ಪರಿಣಾಮಗಳನ್ನು, ಮುಂದಣ ಬೆಳವಣಿಗೆಯನ್ನು ವಿಶ್ಲೇಷಿಸುವ ಬರಹ. ಧಾರ್ಮಿಕ
ಕಳೆದ ಕೆಲವು ವಾರಗಳಿಂದ ಇರಾನಿನಲ್ಲಿ ವ್ಯಾಪಕವಾದ ಭಾರೀ ಪ್ರಮಾಣದ ಪ್ರತಿಭಟನೆಗಳು ನಡೆಯುತ್ತಿವೆ, ಅವುಗಳ ವಿರುದ್ದ ಸರಕಾರದ ಕ್ರೂರ ದಮನ ಮತ್ತು ಭದ್ರತಾ ಪಡೆಗಳ ಮೇಲೆ ಪ್ರತಿಭಟನಾಕಾರರ ದಾಳಿಯ ಮೂಲಕ ಪ್ರತಿಭಟನೆಯು ದಂಗೆಯ ಸ್ವರೂಪ ಪಡೆಯುತ್ತಿರುವುದರ ಬಗ್ಗೆ ವರದಿಗಳು ಬರುತ್ತಿವೆ. ಪಾಶ್ಚಿಮಾತ್ಯ-ಜಾಗತಿಕ ಮಾಧ್ಯಮಗಳ ನಿರೀಕ್ಷಿತ ಅತಿರಂಜಿತ ‘ಕಥನ ಕಟ್ಟುವ’ ವರದಿಗಳು ಒಂದು ಕಡೆಗಾದರೆ, ಯು.ಎಸ್-ಇರಾನ್ ಬೆಂಬಲಿತ ಏಜೆಂಟ್ ಗಳ ಪ್ರಚೋದನೆಯ ಮೇಲೆ ಆಪಾದಿಸುವ ಇರಾನಿ ಸರಕಾರಿ ಪ್ರೊಪಗಾಂಡ ಇನ್ನೊಂದು ಕಡೆ. ಹೀಗಾಗಿ ನಿಜವಾಗಿಯೂ ಏನಾಗುತ್ತಿದೆ ಎಂದು ಹೇಳುವುದೂ ಕಷ್ಟವಾಗಿರುವ ಪರಿಸ್ಥಿತಿಯಿದೆ. ಧಾರ್ಮಿಕ
ಪಾಶ್ಚಿಮಾತ್ಯ-ಜಾಗತಿಕ ಮಾಧ್ಯಮಗಳ ‘ಕಥನ’
ಪಾಶ್ಚಿಮಾತ್ಯ-ಜಾಗತಿಕ ಮಾಧ್ಯಮಗಳ ಪ್ರಕಾರ 100ಕ್ಕೂ ಹೆಚ್ಚು ಪಟ್ಟಣಗಳಲ್ಲಿ ಲಕ್ಷಾಂತರ ಜನ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದು ಸರಕಾರ ‘ಕಂಡಲ್ಲಿ ಗುಂಡು’ ಆದೇಶದಿಂದ ಮತ್ತು ಪ್ರತಿಭಟನಾಕಾರರ ಕ್ರೂರ ದಮನದಿಂದ 3400ಕ್ಕೂ ಹೆಚ್ಚು ಜನ ಸತ್ತಿದ್ದಾರೆ. 15 ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. 10 ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಇಂಟರ್ ನೆಟ್ ನ್ನು ಹಲವು ದಿನಗಳ ಕಾಲ ಕಡಿತ ಮಾಡಲಾಗಿದೆ. ಕೆಲವು ಬಂದಿತರನ್ನು ನ್ಯಾಯಾಂಗ ಪ್ರಕ್ರಿಯೆಯಿಲ್ಲದೆ ಮರಣದಂಡನೆ ಶಿಕ್ಷೆ ವಿಧಿಸಿದ್ದು, ಅದರ ಜಾರಿ ಆರಂಭವಾಗಿದೆ. ಧಾರ್ಮಿಕ
ಇದನ್ನೂ ಓದಿ: ಮರಾಠವಾಡ| 5 ವರ್ಷಗಳಲ್ಲಿ 5,000ಕ್ಕೂ ಹೆಚ್ಚು ರೈತರು ಆತ್ಮಹತ್ಯೆ: ವರದಿಯಲ್ಲಿ ಬಹಿರಂಗ!
ಇರಾನಿಯನ್ನರು ವ್ಯಾಪಕವಾಗಿ ಸರಕಾರದ ವಿರುದ್ಧ ದಂಗೆಯೆದ್ದಿದ್ದಾರೆ. “ಮಾಜಿ ಇರಾನಿ ರಾಜ ಶಾ ಮಗ ಅಧಿಕಾರ ವಹಿಸಿಕೊಳ್ಳಲಿ’ ಎಂದು ಪ್ರತಿಭಟನೆಗಳಲ್ಲಿ ಘೋಷಣೆ ಕೂಗುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಇರಾನಿ ಸರಕಾರ ಬೀಳಲಿದೆ. ಇರಾನಿ ಮುಖ್ಯಸ್ಥ ಖಮೇನಿ ರಶ್ಯಾಕ್ಕೆ ಓಡಿ ಹೋಗಿ ತಲೆಮರೆಸಿಕೊಂಡಿದ್ದಾರೆ. ಇರಾನಿ ಸರಕಾರ ದಮನ ಮತ್ತು ಮರಣದಂಡನೆ ಮುಂದುವರಿಸಿದರೆ ಯು.ಎಸ್ ಮಿಲಿಟರಿ ಮಧ್ಯ ಪ್ರವೇಶ ಮಾಡುವುದಾಗಿ ಟ್ರಂಪ್ ಹೇಳಿದ್ದಾರೆ. ಆದರೆ ಜನವರಿ 14 ರಂದು ಸೌದಿ ಅರೇಬಿಯ, ಯು.ಎ.ಇ ಮತ್ತು ಕತಾರ್ ಮಧ್ಯಸ್ತಿಕೆಯಿಂದ, ಇರಾನ್ ಮರಣಡಂಡನೆ ವಿಧಿಸುವುದಿಲ್ಲ ಮತ್ತು ಯು.ಎಸ್ ದಾಳಿ ಮಾಡುವುದಿಲ್ಲ ಎಂಬ ರಾಜಿಗೆ ಬಂದಿದ್ದಾರೆ ಎಂದು ಹೇಳಲಾಗಿದೆ. ಧಾರ್ಮಿಕ
ಇದು ಜಾಗತಿಕ ಮಾಧ್ಯಮಗಳ ‘ಕಥನ’ದ ಸಾರ.

ಇರಾನಿ ಸರಕಾರದ ‘ಕಥನ’.
ಇರಾನಿ ಸರಕಾರ ಆರ್ಥಿಕ ಸಂಕಷ್ಟದ ನಿಜವಾದ ಸಮಸ್ಯೆಗಳ ಬಗ್ಗೆ ಪ್ರತಿಭಟನೆ ನಡೆಯುತ್ತಿದೆ ಎಂದು ಒಪ್ಪಿಕೊಂಡರೂ, ಮೊದಲ ದಿನಗಳ ನಂತರ ತನ್ನ ನಿಲುವು ಬದಲಾಯಿಸಿತು. ಯು.ಎಸ್-ಇಸ್ರೇಲಿ ಏಜೆಂಟರು ಮತ್ತು ಅವರ ಕುಮ್ಮಕ್ಕಿನ ಭಯೋತ್ಪಾದಕ ಗುಂಪುಗಳು ಅದರಲ್ಲಿ ನುಸುಳಿ ದಂಗೆಯೆಬ್ಬಿಸಿವೆ. ಶಾಂತಿಯುತ ಪ್ರತಿಭಟನಾಕಾರರ ಮಧ್ಯೆ ನುಸುಳಿ ಈ ಸಶಸ್ತ್ರ ಬುಡಮೇಲು ಕೃತ್ಯಗಳಲ್ಲಿ ತರಬೇತಿ ಹೊಂದಿದ ಈ ಭಯೋತ್ಪಾದಕರು ಪೋಲಿಸರು ಮತ್ತು ಪ್ರತಿಭಟನಾಕಾರರ ಮೇಲೂ ಹತ್ತಿರದಿಂದ ಪಿಸ್ತೂಲುಗಳಲ್ಲಿ ಗುಂಡು ಹಾರಿಸಿದ್ದಾರೆ. ಆ ಮೂಲಕ ಪೋಲಿಸರನ್ನೂ ಪ್ರತಿಭಟನಾಕಾರರನ್ನೂ ಹಿಂಸಾಚಾರಕ್ಕೆ ಪ್ರಚೋದಿಸಿದ್ದಾರೆ. 100ಕ್ಕೂ ಹೆಚ್ಚು ಪೋಲಿಸರು ಸತ್ತಿದ್ದಾರೆ. ಒಬ್ಬ ಪೋಲಿಸನ ತಲೆ ಕಡಿಯಲಾಗಿದೆ. ಕೆಲವು ಪೋಲಿಸರನ್ನು ಚಚ್ಚಿ ಕೊಲೆ ಮಾಡಲಾಗಿದೆ. ಒಬ್ಬ ನರ್ಸನ್ನು ಜೀವಂತ ಸುಡಲಾಗಿದೆ. ಇವನ್ನು ನಡೆಸಿರುವುದು ಪ್ರತಿಭಟನಾಕಾರರಲ್ಲ. ಇಂತಹ ಭಯೋತ್ಪಾದಕ ಗುಂಪುಗಳಿಗೆ ಸಿ.ಐ.ಎ-ಮೊಸಾದ್ ಏಜೆಂಟರು ಶಸ್ತ್ರ, ಹಣ ಮತ್ತು ಸಂಪರ್ಕ ಬೆಂಬಲ ನೀಡಿರುವುದು ಅಲ್ಲದೆ ಅವರು ಸ್ವತಃ ಈ ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗವಹಿಸಿದ್ದಾರೆ. ಧಾರ್ಮಿಕ
ಇದಕ್ಕೆ ಸರಕಾರದ ಬಳಿ ಪುರಾವೆಯಿದೆ. ಅಲ್ಲದೆ ಸಿ.ಐ.ಎ-ಮೊಸಾದ್ ಹಿರಿಯ ಅಧಿಕಾರಿಗಳು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳಲ್ಲಿ ಇರಾನಿನ ಬೀದಿಗಳಲ್ಲಿ ನಡೆಯುತ್ತಿರುವ ದಂಗೆಗಳಿಗೆ ನಾವು ಬೆಂಬಲ ನೀಡುತ್ತಿದ್ದೇವೆ ಎಂದು ಕೊಚ್ಚಿಕೊಂಡಿದ್ದಾರೆ. ಇದಕ್ಕಿಂತ ಹೆಚ್ಚಿನ ಪುರಾವೆ ಏನು ಬೇಕು? ಅಲ್ಲದೆ ಇಂಟರ್ ನೆಟ್ ಮೂಲಕ ಈ ದಂಗೆಗಳ ಸಂಯೋಜನೆ ನಡೆಸುತ್ತಿದ್ದು, ಇಂಟರ್ ನೆಟ್ ಕಡಿತವಾದ ನಂತರ ಪ್ರತಿಭಟನೆಗಳು ಮುಂದುವರೆದರೂ, ಹಿಂಸಾಚಾರ ಹೆಚ್ಚು ಕಡಿಮೆ ಸ್ಥಗಿತವಾಗಿದ್ದೇ ಇದಕ್ಕೆ ಪುರಾವೆ. ಇಂತಹ ಭಯೋತ್ಪಾದಕರನ್ನು ಬಂಧಿಸಲಾಗಿದ್ದು, ಶೀಘ್ರ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಜನವರಿ 13ರಂದು ರಾಜಧಾನಿ ಮತ್ತು ಹಲವು ನಗರಗಳಲ್ಲಿ ಸರಕಾರ-ಪರ ಪ್ರದರ್ಶನಗಳು ನಡೆದಿವೆ. ಸುಮಾರು 22 ಲಕ್ಷಕ್ಕೂ ಹೆಚ್ಚು ಜನ ಈ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ದಂಗೆಗಳಲ್ಲಿ ಹತ್ಯೆಯಾದ ಪೋಲಿಸರಿಗೆ ಪ್ರದರ್ಶನಗಳು ಶೋಕ ವ್ಯಕ್ತಪಡಿಸಿವೆ. ಪ್ರತಿಭಟನೆಗಳನ್ನು ಹಿಂಸಾತ್ಮಕ ದಂಗೆಗಳಿಗೆ ತಿರುಗಿಸಿದ ‘ಭಯೋತ್ಪಾದಕ ಗುಂಪು’ಗಳನ್ನು ಮತ್ತು ಈ ಗುಂಪುಗಳಿಗೆ ಪ್ರಚೋದನೆ ನೀಡಿ ಈ ಸನ್ನಿವೇಶವನ್ನು ಬಳಸಿ ಮಿಲಿಟರಿ ಮಧ್ಯಪ್ರವೇಶದ ಮೂಲಕ ತಮ್ಮ ಕೈಗೊಂಬೆ ಸರಕಾರ ಸ್ಥಾಪಿಸಲು ಹವಣಿಸುತ್ತಿರುವ ಯು.ಎಸ್-ಇಸ್ರೇಲಿ ಸರಕಾರಗಳನ್ನು ಈ ಸಭೆಗಳಲ್ಲಿ ಖಂಡಿಸಲಾಯಿತು ಎಂದು ಇರಾನಿ ಸರಕಾರಿ ಮಾಧ್ಯಮಗಳು ತಿಳಿಸಿವೆ. ಧಾರ್ಮಿಕ
ತೀವ್ರ ಪ್ರತಿಭಟನೆಗಳಿಗೆ ಕಾರಣವಾದ ಇರಾನಿ ಕರೆನ್ಸಿ ರಿಯಾಲ್ ನ ಬೆಲೆಯಲ್ಲಿ ಶೇ.40ರಷ್ಟು ಕುಸಿತವನ್ನು ಸಹ ಯು.ಎಸ್ ಸರಕಾರ ಪರೋಕ್ಷವಾಗಿ ಮಾಡಿಸಿದೆ. ಜನತೆಯನ್ನು ಬಾಧಿಸುತ್ತಿರುವ ಸಮಸ್ಯೆಗಳಿಗೆ ಇರಾನಿನ ಮೇಲೆ ಯು.ಎಸ್ ಮತ್ತು ಯುರೋ ಕೂಟ ಹೊರಿಸಿರುವ ಮತ್ತು ಇತ್ತೀಚೆಗೆ ಇನ್ನಷ್ಟು ಕಠೋರಗೊಳಿಸಿರುವ ಆರ್ಥಿಕ ದಿಗ್ಬಂಧನಗಳೇ ಕಾರಣ. ಯು.ಎಸ್ ಅಧ್ಯಕ್ಷ, ಮತ್ತು ಹಲವು ಯುರೋ ಕೂಟದ ನಾಯಕರು ದಂಗೆಕೋರರಿಗೆ ಸರಕಾರಿ ಸಂಸ್ಥೇಗಳನ್ನು ವಶಪಡಿಸಿಕೊಳ್ಳಲು ಬಹಿರಂಗವಾಗೇ ಕರೆ ಕೊಟ್ಟಿದ್ದಾರೆ.
ಇರಾನಿನಲ್ಲಿ ಸರಕಾರ ಉರುಳಿಸಿ ಶಾ ನ ಮಗನನ್ನು ಅಧಿಕಾರಕ್ಕೆ ತರಲು ದಂಗೆಕೋರರಿಗೆ ನಾವು ಬೆಂಬಲ ನೀಡುತ್ತೇವೆ ಎಂದು ಸಹ ಬಹಿರಂಗವಾಗೇ ಹೇಳಿದ್ದಾರೆ. ದಂಗೆಕೋರರನ್ನು ಗಲ್ಲಿಗೇರಿಸಿದರೆ . ಅಧ್ಯಕ್ಷ ಟ್ರಂಫ್ ‘ಗಂಭೀರ ಕಾರ್ಯಾಚರಣೆ’ ನಡಸುವುದಾಗಿ ಹೇಳುವ ಮೂಲಕ ಮಿಲಿಟರಿ ಕಾರ್ಯಾಚರಣೆ ನಡೆಸುವ ಸುಳಿವು ಕೊಟ್ಟಿದ್ದಾರೆ. ಈ ಪ್ರದೇಶದಲ್ಲಿ ಯು.ಎಸ್ ಮಿಲಿಟರಿ ಚಲನವಲನ ಸಹ ಇದನ್ನು ಸ್ಪಷ್ಟಪಡಿಸುತ್ತಿವೆ. ಶಾ ನ ಮಗ ಸಹ ದಂಗೆ ಮುಂದುವರೆಸಲು ದಿನಾ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ರಿಯಾಲ್ ಕುಸಿತ, ಫ್ರತಿಭಟನೆಯನ್ನು ದಂಗೆಗೆ ಸಾವು-ನೋವುಗಳಿಗೆ ತಿರಗಿಸುವ ಪಿತೂರಿ, ಇರಾನಿನ ದಂಗೆಗಳ ಮತ್ತು ದಮನದ ಕುರಿತ ,ಅತಿರಂಜಿತ ಸುಳ್ಳು ಪ್ರಚಾರ – ಇವೆಲ್ಲ ಯು.ಎಸ್ ಮಿಲಿಟರಿ ಮಧ್ಯ ಪ್ರವೇಶಕ್ಕೆ ಅನುವು ಮಾಢಲು ಮತ್ತು ಸಮರ್ಥಿಸಿಕೊಳ್ಳಲು ಕಟ್ಟಿದ ‘ಕಥನ’ ಎಂಬುದು ಇರಾನಿ ಸರಕಾರದ ‘ಕಥನ’. ಧಾರ್ಮಿಕ

ಜನತಾ ದಂಗೆಗೆ ಕಾರಣಗಳೇನು?
ಇರಾನಿನಲ್ಲಿ ಏನಾಗುತ್ತಿದೆ? ಜನತಾ ದಂಗೆಗೆ ಕಾರಣಗಳೇನು? ಎಂಬುದನ್ನು ತಿಳಿಯಲು ಇನ್ನೂ ಹಲವು ಸ್ವತಂತ್ರ ಮೂಲಗಳಿವೆ. ಇರಾನಿನ ವಿರೋಧ ಪಕ್ಷಗಳು, ಇರಾನ್ ಸೇರಿದಂತೆ ಜಾಗತಿಕ ಪ್ರಗತಿಪರ ಎಡ ಸಾಮ್ರಾಜ್ಯಶಾಹಿ-ವಿರೋಧಿ ಶಕ್ತಿಗಳು, ಮಾಧ್ಯಮಗಳು ಇರಾನಿನ ಈ ಕೆಳಗಿನ ನಿಜ ಚಿತ್ರಣಗಳನ್ನು ಕೊಡುತ್ತಿವೆ.
ಈಗಿನ ಬೆಳವಣಿಗೆಗಳಿಗೆ ಹೊಗುವ ಮುನ್ನ ಇರಾನಿನಲ್ಲಿ 1979ರಲ್ಲಿ ಆರಂಭವಾದ ಇಸ್ಲಾಮಿಕ್ ರಿಪಬ್ಲಿಕ್ ವಿರುದ್ಧ ಜನತಾ ದಂಗೆಯಾಗಲಿ, ಇರಾನಿನ ಸರಕಾರಗಳನ್ನು ಉರುಳಿಸುವ ಸಾಮ್ರಾಜ್ಯಶಾಹಿ ಪ್ರಯತ್ನವಾಗಲಿ ಹೊಸದಲ್ಲ ಎಂಬುದನ್ನು ನೆನಪಿಸಬೇಕು ಇಸ್ಲಾಮಿಕ್ ಸರಕಾರದ ವಿರುದ್ದ 2009, 2015, 2022ರಲ್ಲಿ ಗಂಭೀರ ಜನತಾ ದಂಗೆಗಳು ನಡೆದಿವೆ. 1953ರಲ್ಲಿ ತೈಲ ಸ್ಥಾವರಗಳ ರಾಷ್ಟ್ರೀಕರಣ ಮಾಡಿದ ಚುನಾಯಿತ ಇರಾನಿನ ಪ್ರಧಾನಿ ಮೊಸಾದೆಯನ್ನು ಸಿ.ಐ.ಎ ಹತ್ಯೆ ಮಾಡಿ, ‘ಇರಾನಿ ಶಾ’ ಎಂದು ಕರೆಯಲಾಗುವ ರೆಜಾ ಪಹಲವಿ ಅವರ ಯು,ಎಸ್ ಬಾಲಬಡುಕ ಸರ್ವಾಧಿಕಾರವನ್ನು ಸ್ಥಾಪಿಸಲಾಗಿತ್ತು. 1979ರಲ್ಲಿ ಶಾ ವಿರುದ್ಧ ಜನತಾ ಕ್ರಾಂತಿಯಲ್ಲಿ ಶಾ ನನ್ನು ಉರುಳಿಸಲಾಯಿತು. ಈ ಜನತಾ ಕ್ರಾಂತಿಯಲ್ಲಿ ಸೆಕ್ಯುಲರ್, ಎಡ-ಪ್ರಗತಿಪರ ಮತ್ತು ಧಾರ್ಮಿಕ ಶಕ್ತಿಗಳು ಭಾಗವಹಿಸಿದ್ದು, ಆ ಮೇಲೆ ಧಾರ್ಮಿಕ ಮೂಲಭೂತವಾದಿ ಶಕ್ತಿಗಳ ಕೈಮೇಲಾಗಿತ್ತು.
ಸ್ವತಂತ್ರ ಮೂಲಗಳ ಪ್ರಕಾರ 2025 ಡಿಸೆಂಬರ್ ನಿಂದಲೇ ಬೆಲೆಏರಿಕೆ, ಹಣದುಬ್ಬರದ ವಿರುದ್ಧ ಮುಷ್ಕರಗಳು, ಪ್ರತಿಭಟನೆಗಳು ಆರಂಭವಾಗಿದ್ದವು. ಪ್ರತಿಭಟನೆ ಟೆಹರಾನ್ ಮಹಾ ಬಜಾರ್ ವ್ಯಾಪಾರಿಗಳಿಂದ ಆರಂಭವಾಗಿತ್ತು. ಈ ಪ್ರತಿಭಟನೆಗೆ ತಕ್ಷಣದ ಕಿಡಿ ಇರಾನಿ ಕರೆನ್ಸಿಯ ಬೆಲೆಯಲ್ಲಿ ಕಂಡು ಬಂದ ಏಕಾಏಕಿ ಕುಸಿತ. ಜನವರಿ 2 ರಂದು 1 ಡಾಲರಿಗೆ 42 ಸಾವಿರ ಇರಾನಿ ರಿಯಾಲ್ ಇದ್ದಿದ್ದು ಒಂದೇ ದಿನದಲ್ಲಿ 7.6 ಲಕ್ಷಕ್ಕೆ ಕುಸಿದು ಈಗ (ಜನವರಿ 14ಕ್ಕೆ) 10 ಲಕ್ಷ ರಿಯಾಲ್ ಗೆ ಕುಸಿದಿದೆ. ಕಳೆದ ವರ್ಷ (2025) ಇರಾನಿನ ಹಣದುಬ್ಬರ 42-45% ಆಗಿದ್ದು, ಬೆಲೆಏರಿಕೆ ದುರ್ಭರ ಮಟ್ಟ ಮುಟ್ಟಿತ್ತು. ಆಹಾರದ ಹಣದುಬ್ಬರ 70% ಮುಟ್ಟಿತ್ತು. ನಿರುದ್ಯೋಗ ಸಹ ತೀವ್ರವಾಗಿ ಏರಿದೆ.

ಈ ಇರಾನಿನ ಆರ್ಥಿಕ ದುಸ್ಥಿತಿಯು 1979ರಿಂದ ಯು,,ಎಸ್ ವಿಧಿಸುತ್ತಾ ಬಂದಿರುವ ಆರ್ಥಿಕ ದಿಗ್ಬಂಧನಗಳ ಸರಣಿಯ ಒಟ್ಟು ಪರಿಣಾಮವೆಂಬುದಕ್ಕೆ ಸಂಶಯವೇ ಇಲ್ಲ. 2015-17ರ ನಡುವೆ ಅಣುಶಕ್ತಿ ಬಳಕೆ ಕುರಿತು ಒಪ್ಪಂದ ಜಾರಿಯಲ್ಲಿದ್ದಾಗ ಕೆಲ ಕಾಲ ಕೆಲವು ದಿಗ್ಬಂಧನಗಳನ್ನು ಸಡಿಲಿಸಿದ್ದು ಬಿಟ್ಟರೆ, ಈ ದಿಗ್ಬಂಧನ ಸತತವಾಗಿ ಕಟುವಾಗುತ್ತಾ ಬಂದಿದೆ. ಯುರೋಕೂಟ ಸಹ 2011ರಿಂದ ಆರ್ಥಿಕ ದಿಗ್ಬಂಧನ ವಿಧಿಸಿದ್ದು ಅದನ್ನು ಕಟುಗೊಳಿಸುತ್ತಾ ಬಂದಿದೆ. ಯು.ಎಸ್ ತನ್ನ ದಿಗ್ಬಂಧನಗಳನ್ನು ಮನ್ನಿಸದ ಮೂರನೇ ದೇಶದ ಕಂಪನಿಗಳು, ವ್ಯಕ್ತಿಗಳ ಮೇಲೆ ಸಹ ದಿಗ್ಬಂಧನಗಳನ್ನು ವಿಸ್ತರಿಸಿದೆ. ಉದಾಹರಣೆಗೆ ಭಾರತ ಇಂತಹ ಬೆದರಿಕೆಗಳಿಂದ ಇರಾನಿ ತೈಲ ಖರೀದಿಯಲ್ಲಿ ತೀವ್ರ ಕಡಿತ ಮಾಡಬೇಕಾಯಿತು. ಇತರ ಹಲವು ವ್ಯಾಪಾರಗಳನ್ನು ನಿಲ್ಲಿಸಬೇಕಾಯಿತು. ಹೆಚ್ಚಿನ ಇರಾನಿ ಜನತೆಯ ಸಂಕಷ್ಟಗಳು ಆರ್ಥಿಕ ದಿಗ್ಬಂಧನಗಳ ಪರಿಣಾಮ. ಆದರೆ ಜನವರಿ 2ನೇ ವಾರದಲ್ಲಿ ರಿಯಾಲ್ ನ ವಿನಿಮಯ ದರ ಡಾಲರಿಗೆ 42 ಸಾವಿರ ರಿಯಾಲ್ ನಿಂದ ಏಕಾಏಕಿ 10 ಲಕ್ಷ ರಿಯಾಲ್ ಗೆ ಕುಸಿದದ್ದು ಯು.ಎಸ್-ಇಸ್ರೇಲಿ ಉತ್ತೇಜಿತ ಪಿತೂರಿಯಂತೆ ಕಾಣುತ್ತಿದೆ.
ಸಾಲದ್ದಕ್ಕೆ ಆರ್ಥಿಕ ದಿಗ್ಬಂಧನದಿಂದ ಉಂಟಾದ ಪರಿಸ್ಥಿತಿ ನಿರ್ವಹಣೆ ಮಾಡಲು ಈ ವರೆಗೆ ಇರಾನ್ ಸರಕಾರ ಎರಡು ವಿನಿಮಯ ದರಗಳ ವ್ಯವಸ್ಥೆ ಜಾರಿಗೆ ತಂದಿತ್ತು. ಇದರ ಪ್ರಕಾರ ಕೆಲವು ಅವಶ್ಯಕ ವಸ್ತುಗಳ (ಆಹಾರ, ಔಷಧಿ, ಪಶುಆಹಾರ ಇತ್ಯಾದಿ) ಆಮದು ಮತ್ತು ಕೆಲವು ಸಂಸ್ಥೆಗಳಿಗೆ ಅಧಿಕೃತ ಸಬ್ಸಿಡಿ-ಸಹಿತ ದರ. ಇನ್ನೊಂದು ಸಾರ್ವಜನಿಕರಿಗೆ ಮುಕ್ತ ಮಾರುಕಟ್ಟೆ ದರ. ಇದು ಅಧಿಕೃತ ದರಕ್ಕಿಂತ ಬಹಳ ಹೆಚ್ಚು ಇರುತ್ತದೆ. ಅಧಿಕೃತ ದರದ ಅನುಕೂಲ ಇರುವ ಸಂಸ್ಥೆಗಳು ಹೆಚ್ಚಾಗಿ ಸರಕಾರಿ (ರಕ್ಷಣಾ, ಇಂಧನ, ಶಕ್ತಿ ಕೈಗಾರಿಕೆ/ಸಂಸ್ಥೆಗಳು), ಮಿಲಿಟರಿ (ಇಸ್ಲಾಮಿಕ್ ರಿವೊಲ್ಯುಶನರಿ ಗಾರ್ಡ್) ಮತ್ತು ಧಾರ್ಮಿಕ ನಾಯಕರು ನಡೆಸುವ ವಾಣಿಜ್ಯ ಸಂಸ್ಥೆಗಳು. ಈ ಮೂರು ರೀತಿಯ ಸಂಸ್ಥೆಗಳ ಹಿರಿಯ ಪ್ರತಿಷ್ಟಿತ ನಾಯಕರಲ್ಲಿಯೇ ಇರಾನಿನ ರಾಜಕೀಯ-ಆರ್ಥಿಕ ಅಧಿಕಾರ ಮತ್ತು ಸಂಪತ್ತು ಸಹ ಕ್ರೋಢೀಕೃತವಾಗಿದೆ.
ಕಳೆದ ವರ್ಷದ 12 ದಿನಗಳ ಯುದ್ಧದ ಪರಿಣಾಮವಾಗಿ ವಿದೇಶಿ ವಿನಿಮಯ ನಿಧಿ ಇನ್ನಷ್ಟು ಕರಗಿದ್ದು, ಡಿಸೆಂಬರ್ ಕೊನೆಯಲ್ಲಿ ಅವಶ್ಯಕ ವಸ್ತುಗಳ ಆಮದಿಗೆ ಸಬ್ಸಿಡಿ ವಿನಿಮಯ ದರ ಹಿಂತೆಗೆದಿದ್ದು, ಇದು ಜನತೆಯ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಆದರೆ ಈ ಸಂಸ್ಥೆಗಳ ಸಬ್ಸಿಡಿ ವಿನಿಮಯ ದರ ಹಿಂತೆಗೆದಿಲ್ಲ. ಕಳೆದ ಕೆಲವು ವರ್ಷಗಳಿಂದ ಇರಾನಿನಲ್ಲಿ ಬರ ಬಿದ್ದಿದ್ದು ರಾಜಧಾನಿ ತೆಹರಾನ್ ಸೇರಿದಂತೆ ಹಲವು ನಗರಗಳು ನೀರಿನ ತೀವ್ರ ಕೊರತೆ ಎದುರಿಸುತ್ತಿವೆ. ಸೆಕ್ಯುಲರ್, ಮಹಿಳಾ ಸಮಾನತೆಯ, ಎಡ-ಪ್ರಗತಿಪರ ರಾಜಕೀಯ ಶಕ್ತಿಗಳ ಮತ್ತು ಧೋರಣೆಯ ಕುರಿತು, ಧಾರ್ಮಿಕ-ಬಂಡವಾಳಶಾಹಿ ಆಡಳಿತದ ತೀವ್ರ ಅಸಹನೆ ಮತ್ತು ಅದರ ವಿರುದ್ಧ ದಮನದ ಧೋರಣೆಯಿಂದ ಸಹ ಹಲವರು ಆಕ್ರೋಶಿತರಾಗಿದ್ದರು.
ಇರಾನಿನಲ್ಲಿ ನಿಜವಾಗಿ ಏನಾಗುತ್ತಿದೆ ?
ಹೀಗಾಗಿ ಇಸ್ಲಾಮಿಕ್ ಕ್ರಾಂತಿಯ ಮತ್ತು ಸರಕಾರದ ಬೆನ್ನೆಲುಬು ಮತ್ತು ಪ್ರಮುಖ ಬೆಂಬಲಿಗರಾಗಿದ್ದ ವ್ಯಾಪಾರಿಗಳಿಂದ ಹಿಡಿದು, ಕಾರ್ಮಿಕರು, ವಿದ್ಯಾರ್ಥಿಗಳು, ಶಿಕ್ಷಿತ ಯುವಕ ನಿರುದ್ಯೋಗಿಗಳು, ಮಧ್ಯಮ ವರ್ಗದ ಉದ್ಯೋಗಿಗಳು, ಮಹಿಳೆಯರು – ಎಲ್ಲರ ಆಕ್ರೋಶ ಮುಗಿಲು ಮುಟ್ಟಿದೆ. ರಾಜಧಾನಿ ತೆಹರಾನ್ ಮತ್ತು ನೂರಾರು ಪಟ್ಟಣಗಳಲ್ಲಿ ಇರಾನಿನ ಉದ್ದಗಲಕ್ಕೂ ವ್ಯಾಪಕ ಪ್ರತಿಭಟನೆಗಳು ನಡೆದದ್ದೂ ನಿಜ. ಸರಕಾರ ಆ ಪ್ರತಿಭಟನೆಗಳನ್ನು ದಮನ ಮಾಡಲು ಗೋಲಿಬಾರು ಮುಂತಾದ ಕಟುವಾದ ಕ್ರಮಗಳನ್ನು ತೆಗೆದುಕೊಂಡದ್ದು ನಿಜ. ಸುಮಾರು ಏಳು ದಿನಗಳ ಕಾಲ ಇಂಟರ್ ನೆಟ್ ಕಡಿತ ಮಾಡಿದ್ದೂ ನಿಜ. ವ್ಯಾಪಕ ಸಾವು-ನೋವು ಮತ್ತು ಬಂಧನಗಳು ಆದದ್ದೂ ನಿಜ.ಆದರೆ ಅವುಗಳ ಸಂಖ್ಯೆಯಷ್ಟೇ ಪಾಶ್ಚಿಮಾತ್ಯ ಮಾಧ್ಯಮಗಳು ಹೆಚ್ಚಿಸಿ ಹೇಳುತ್ತಿವೆ. ಸ್ವತಂತ್ರ ಮೂಲಗಳ ಪ್ರಕಾರ ಸಹ (ಜನವರಿ 13ರ ಹೊತ್ತಿಗೆ) 600-700 ಸಾವುಗಳು ಸಂಭವಿಸಿವೆ. ಸುಮಾರು 1500 ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಸಾವಿರಕ್ಕೂ ಹೆಚ್ಚು ಜನ ಬಂಧಿತರಾಗಿದ್ದಾರೆ, ಒಬ್ಬ ಬಂಧಿತನಿಗೆ ಮರಣದಂಡನೆಯ ಶಿಕ್ಷೆ ಕೊಡಲಾಗಿದೆ. ಆದರೆ ಶಿಕ್ಷೆ ಜಾರಿಯಾಗಿಲ್ಲ. ದಂಗೆಕೋರರ ನಾಯಕರಿಗೆ ಮರಣದಂಡನೆ ನೀಡಲಾಗುವುದು ಎಂದು ಗೃಹ ಮಂತ್ರಿ ಹೇಳಿದ್ದು ನಿಜ. ಇದು ಜನತೆಯ ಪ್ರತಿಭಟನೆ ಮಾತ್ರವಲ್ಲ. ದಂಗೆಯಾಗಿತ್ತು. ಈ ಸರಕಾರ ತೊಲಗಬೇಕು ಎಂಬ ಕೂಗು ಎದ್ದದ್ದೂ ನಿಜ.
ಹಾಗೆನೇ ಸಿಐಎ-ಮೊಸಾದ್ ಗೂಢಚಾರ ಸಂಸ್ಥೆಗಳ ಸಶಸ್ತ್ರ ಏಜೆಂಟರು ಈ ಪ್ರತಿಭಟನೆಗಳಲ್ಲಿ ನುಸುಳಿ ಅದನ್ನು ಹಿಂಸಾತ್ಮಕವಾಗಿಸಲು ಪ್ರಯತ್ನಿಸಿದ್ದೂ ನಿಜ. ಬಹುಶಃ ದೊಡ್ಡ ಸಂಖ್ಯೆಯ ಪೋಲಿಸ್ ಸಾವು-ನೋವಿಗೆ ಇದು ಕಾರಣವಾಗಿರಬಹುದು. ನಾಗರಿಕ ಪ್ರತಿಭಟನಾಕಾರರು ನಿಶ್ಶಸ್ತ್ರರಾಗಿದ್ದು ದೊಡ್ಡ ಸಂಖ್ಯೆಯ ಪೋಲಿಸ್ ಸಾವು-ನೋವಿಗೆ ಕಾರಣರಾಗಿರುವ ಸಾಧ್ಯತೆ ಕಡಿಮೆ. ‘ಶಾ ಮಗ ಅಧಿಕಾರ ವಹಿಸಿಕೊಳ್ಳಬೇಕು” ಎಂದು ಕೆಲವು ಕಡೆ ಘೋಷಣೆ ಕೂಗಿದ್ದು ಇಂತಹ ಏಜೆಂಟರೇ ಇರಬಹುದು. ಇರಾನಿನಲ್ಲಿ ಸುಮಾರು 10 ಸಾವಿರ ನಿಷೇಧಿತ ಸ್ಟಾರ್-ಲಿಂಕ್ (ಉಪಗ್ರಹದ ಮೂಲಕ ನೇರ ನೆಟ್/ಮೊಬೈಲ್) ಸೇವೆಯ ಮೊಬೈಲ್/ಉಪಕರಣಗಳನ್ನು ಸರಕಾರ ಜಾಮ್ ಮಾಡಿ ಅವುಗಳು ಇರುವ ಸ್ಥಳವನ್ನು ಗುರುತಿಸಿ ವಶಪಡಿಸಿಕೊಂಡಿತು.
ಅಂದರೆ ಸುಮಾರು 10 ಸಾವಿರ ಮೊಸಾದ್/ಸಿಐಎ ಏಜೆಂಟರು ಬುಡಮೇಲು ಕೃತ್ಯದಲ್ಲಿ ತೊಡಗಿದ್ದರು. ಜನತೆಯ ದಂಗೆಯ ಪರಿಸ್ಥಿತಿ ಬಳಸಿ ಅವರು ವ್ಯಾಪಕ ಹಿಂಸಾಚಾರ ನಡೆಸಿ, ಮಿಲಿಟರಿ ಹಸ್ತಕ್ಷೇಪಕ್ಕೆ ಪೂರಕವಾಗಿ ಕೆಲಸ ಮಾಡಿ ಸರಕಾರ ಉರುಳಿಸಲು ಯು.ಎಸ್-ಇಸ್ರೇಲ್ ಪಿತೂರಿ ಮಾಡಿತ್ತು. ಅವರನ್ನು ಗುರುತಿಸಿ ಬಂಧಿಸಿದ ಮೇಲೆ ಯು.ಎಸ್ ತನ್ನ ಮಿಲಿಟರಿ ಹಸ್ತಕ್ಷೇಪದ ಯೋಜನೆ ಕೈಬಿಟ್ಟಿದೆ ಎಂದು ಕೆಲವು ಸ್ವತಂತ್ರ ಮೂಲಗಳು ಹೇಳಿವೆ. ಆದರೆ ಇಂಟರ್ ನೆಟ್ ಕಡಿತ ಮಾಡಿದಾಗ ಪ್ರತಿಭಟನೆಗಳು ಮತ್ತು ಹಿಂಸಾಚಾರ ನಿಂತವು ಎನ್ನುವುದೇ ಪ್ರತಿಭಟನೆ, ದಂಗೆಗಳು ಬಾಹ್ಯ ಪ್ರಚೋದನೆಯಿಂದ ಆದವು ಎಂಬುದಕ್ಕೆ ಪುರಾವೆಯಲ್ಲ. ಇಂಟರ್ ನೆಟ್ ಇಲ್ಲದಿದ್ದಾಗ ಪ್ರತಿಭಟನೆ, ದಂಗೆಗಳ ಕುರಿತು ಮಾಹಿತಿ ಸಿಗುವುದಿಲ್ಲ. ಮಾತ್ರವಲ್ಲ ನಿಜವಾದ ಪ್ರತಿಭಟನಾಕಾರರ ಮನೋಬಲ ಸರಕಾರ ಹರಿಯ ಬಿಟ್ಟ ಕ್ರೂರ ದಮನದಿಂದಲೂ ತಗ್ಗಿರಬಹುದು.

ಧಾರ್ಮಿಕ-ನಿರಂಕುಶ ಸರಕಾರದ ಮತ್ತು ಸಾಮ್ರಾಜ್ಯಶಾಹಿ ಹಸ್ತಕ್ಷೇಪಗಳ ವಿರುದ್ಧ ಐಕ್ಯ ಪ್ರತಿರೋಧ
“ಇರಾನಿ ಸರಕಾರ ಹೇಳುವಂತೆ ಈ ಜನತಾ ಪ್ರತಿಭಟನಾ ಚಳವಳಿ ಅಮೆರಿಕನ್ ಸಾಮ್ರಾಜ್ಯಶಾಹಿ ಅಥವಾ ಜನಾಂಗ-ಹತ್ಯಾಕಾರಿ ಇಸ್ರೇಲಿ ಆಡಳಿತದ ಸೃಷ್ಟಿಯಲ್ಲ,..ಇದು ಆಡಳಿತದಲ್ಲಿರುವ ಬಂಡವಾಳಶಾಹಿ ವ್ಯವಸ್ಥೆಯ ವಿಪರೀತ ಆರ್ಥಿಕ ನೀತಿಗಳು, ವ್ಯಾಪಕ ಭ್ರಷ್ಟಾಚಾರ, ಅಸುರಕ್ಷತೆ ಮತ್ತು ಜನರ ಮೇಲೆ ಹೇರಿರುವ ಭಾರೀ ದಮನದ ನೇರ ಫಲಿತಾಂಶವಾಗಿದೆ.” ಎಂದು ಇರಾನಿ ಕಮ್ಯುನಿಸ್ಟ್ ಪಕ್ಷ ತುದೆ ಹೇಳಿದೆ. “ಈ ಸರ್ಕಾರವು ದೇಶದ ಉತ್ಪಾದಕ ಆರ್ಥಿಕತೆಯನ್ನು ನಾಶಪಡಿಸಿದೆ…. ‘ಇಸ್ಲಾಮಿಕ್ ಕ್ರಾಂತಿಯ ರಫ್ತು’ ಎಂಬ ಹೆಸರಿನ ಸಾಹಸಮಯ ವಿದೇಶಾಂಗ ನೀತಿಗಳ ಮೂಲಕ, ಇರಾನನ್ನು ವಿದೇಶಿ ಹಸ್ತಕ್ಷೇಪ ಮತ್ತು ಅದರ ಭೀಕರ ಪರಿಣಾಮಗಳ ಅಪಾಯದತ್ತ ತಳ್ಳಿದೆ.” ಎಂದು ತುದೆ ಹೇಳಿದೆ. ಧಾರ್ಮಿಕ
ಸರಕಾರಿ ಭದ್ರತಾ ಪಡೆಗಳು ಪ್ರತಿಭಟನೆಗಳಿಗೆ ನೀಡಿರುವ ಪ್ರತಿಕ್ರಿಯೆಯ ಪ್ರಮಾಣ ಮತ್ತು ಕ್ರೂರತೆ, “ಇಂದಿನ ಭ್ರಷ್ಟ ಮತ್ತು ಜನವಿರೋಧಿ ಸರ್ಕಾರ ಮುಂದುವರಿಯುವುದನ್ನು ಇರಾನಿನ ಬಹುಪಾಲು ಜನರು ಬಯಸುವುದಿಲ್ಲ” ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಎಂದೂ ಅದು ಹೇಳಿದೆ.
.ಕಳೆದ ದಶಕಗಳಲ್ಲಿ ಅನುಸರಿಸಿದ ಖಾಸಗೀಕರಣ ಮತ್ತು ಮುಕ್ತ ಮಾರುಕಟ್ಟೆ ನೀತಿಗಳು ಉದ್ಯೋಗಗಳನ್ನು ನಾಶಪಡಿಸಿವೆ, ಆಹಾರ ಸಬ್ಸಿಡಿಗಳನ್ನು ಕಡಿತಗೊಳಿಸಿವೆ ಮತ್ತು ಅಸಮಾನತೆಯನ್ನು ಹೆಚ್ಚಿಸಿವೆ. 2022ರ ನಂತರ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಸರ್ಕಾರ “ಆರ್ಥಿಕ ಶಸ್ತ್ರಚಿಕಿತ್ಸೆ” ಎಂಬ ಹೆಸರಿನಲ್ಲಿ ಬ್ರೆಡ್ ಮತ್ತು ಔಷಧಿಗಳಂತಹ ಅಗತ್ಯ ವಸ್ತುಗಳ ಬೆಲೆಯನ್ನು ಭಾರಿಯಾಗಿ ಹೆಚ್ಚಲು ಬಿಡಿತು ಎಂದು ಸಹ ತುದೆ ಪಕ್ಷ ಹೇಳಿದೆ.
ಈ ಪ್ರತಿಭಟನೆಗಳು ಇರಾನನ್ನು ಮಹತ್ವದ ತಿರುವಿನ ಬಳಿ ತಂದಿವೆ. 17 ಪ್ರಮುಖ ನಾಗರಿಕ ಮುಖಂಡರ ಹೇಳಿಕೆಯಂತೆ, ಈ ಸಂಕಷ್ಟದಿಂದ ಹೊರಬರುವ ಏಕೈಕ ದಾರಿ ಜನರು ತಮ್ಮ ಭವಿಷ್ಯವನ್ನು ತಾವು ನಿರ್ಧರಿಸುವುದಾಗಿದೆ. ಈಗಿನ ಸರಕಾರದ ವಿರುದ್ಧದ ಜನತಾ ದಂಗೆಯು ಧಾರ್ಮಿಕ-ನಿರಂಕುಶ ಸರಕಾರದ ದಮನ ಮತ್ತು ಸಾಮ್ರಾಜ್ಯಶಾಹಿ ಹಸ್ತಕ್ಷೇಪಗಳ ಅಪಾಯಗಳ ಅಡಕತ್ತರಿಯಲ್ಲಿ ಸಿಕ್ಕಿದೆ. ಪ್ರಸಕ್ತ ಸರಕಾರವನ್ನು ವಿರೋಧಿಸುವ ಶಕ್ತಿಗಳು ಹಲವಿವೆ ಮತ್ತು ಅವುಗಳಲ್ಲಿ ಹೆಚ್ಚಿನವು ಈ ಎರಡರ ವಿರುದ್ಧವೂ ಪ್ರತಿರೋಧ ಒಡ್ಡಲು ಸಿದ್ಧವಿವೆ. ಆಧರೆ ಅವುಗಳ ನಡುವಿನ ಅನೈಕ್ಯತೆ, ಪ್ರಗತಿಪರ ರಾಷ್ಟ್ರೀಯ ನಾಯಕತ್ವದ ಕೊರತೆ ಮತ್ತು ವಿದೇಶಿ ಸರ್ಕಾರಗಳು ಹಾಗೂ ಸಾಮ್ರಾಜ್ಯಶಾಹಿ ಹಸ್ತಕ್ಷೇಪಗಳು, ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಿವೆ. ಆದರೆ ಎಲ್ಲ ವಿರೋಧಿ ರಾಜಕೀಯ ಶಕ್ತಿಗಳಿಂದ ಧಾರ್ಮಿಕ-ನಿರಂಕುಶ ಸರಕಾರದ ಮತ್ತು ಸಾಮ್ರಾಜ್ಯಶಾಹಿ ಹಸ್ತಕ್ಷೇಪಗಳ ವಿರುದ್ಧ ಐಕ್ಯ ಪ್ರತಿರೋಧ ಇಂದಿನ ತುರ್ತು ಅಗತ್ಯ
*******************
ಇದನ್ನೂ ನೋಡಿ: ಲಾಲ್‌ಬಾಗ್ ಫ್ಲವರ್ ಶೋ| ಬಣ್ಣಬಣ್ಣದ ಹೂಗಳ ಚಿತ್ತಾರದಲ್ಲಿ ‘ತೇಜಸ್ವಿ ವಿಸ್ಮಯ’ Janashakthi Media
