ಪಾಟ್ನಾ: ಕಳೆದ 9 ವರ್ಷಗಳಿಂದ ನಿರ್ಮಾಣ ಹಂತದಲ್ಲೇ ಇರುವ ಸೇತುವೆ ಮೂರನೇ ಬಾರಿ ಕುಸಿದು ಬಿದ್ದ ಬಿಹಾರದಲ್ಲಿ ನಡೆದಿದೆ.
ಸುಲ್ತಾನ್ ಘಂಜ್- ಅಂಗ್ವಾನಿ ಘಾಟ್ ಸೇತುವೆಯ ಒಂದು ಭಾಗ ಗಂಗಾನದಿಯಲ್ಲಿ ಬಿದ್ದಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ.
ಕಳೆದ 9 ವರ್ಷಗಳಿಂದ ನಿರ್ಮಾಣ ಹಂತದಲ್ಲಿರುವ ಈ ಸೇತುವೆ ಪದೇಪದೆ ಕುಸಿದು ಬೀಳುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಬಿಹಾರದ ಹಲವಾರು ಸೇತುವೆ ದಿನಕ್ಕೊಂದರಂತೆ ಕುಸಿದು ಬೀಳುತ್ತಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಸೇತುವೆಗಳು ಪದೇಪದೆ ಕುಸಿದು ಬೀಳುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಸಿಎಂ ನಿತೀಶ್ ಕುಮಾರ್ ತನಿಖೆಗೆ ಆದೇಶಿಸಿದ್ದರು. ಆದರೆ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಟೀಕೆಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ : ಸ್ವದೇಶಕ್ಕೆ ಮರಳಿದ ವಿನೇಶ್ ಪೊಗಟ್ ಗೆ ಭರ್ಜರಿ ಸ್ವಾಗತ
3ನೇ ಬಾರಿ ಘಟನೆ
ಇನ್ನು ಈ ಸೇತುವೆ ಕುಸಿಯುತ್ತಿರುವುದು ಇದೇ ಮೊದಲೇನಲ್ಲ. ಕಳೆದ 9 ವರ್ಷಗಳಿಂದ ಈ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಒಂದಲ್ಲ ಒಂದು ಭಾಗದಲ್ಲಿ ವಿವಿಧ ಕಾರಣಗಳಿಂದ ಈ ವರೆಗೂ ಮೂರು ಬಾರಿ ಸೇತುವೆ ವಿವಿಧ ಭಾಗಗಳು ಕುಸಿದಿವೆ. ಈ ಹಿಂದೆ ಜೂನ್ 4, 2023 ರಂದು ಇದೇ ಸೇತುವೆಯ ಒಂದು ಭಾಗ ಕುಸಿದಿತ್ತು. ಖಗಾರಿಯಾ ಭಾಗದಲ್ಲಿ ಪಿಲ್ಲರ್ ಸಂಖ್ಯೆ 10 ಮತ್ತು 12 ರ ನಡುವಿನ ಭಾಗ ಕುಸಿದು ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.
ಭಾಗಲ್ಪುರ್ ಬದಿಯಲ್ಲಿರುವ ಸೇತುವೆಯ ಮತ್ತೊಂದು ಭಾಗವು ಜೂನ್ 30, 2022 ರಂದು ಕುಸಿದು ಬಿದ್ದಿತು, ಪಿಲ್ಲರ್ ಸಂಖ್ಯೆ 5 ಮತ್ತು 6 ರ ನಡುವಿನ ಸೂಪರ್ ಸ್ಟ್ರಕ್ಚರ್ ಗಂಗಾ ನದಿಗೆ ಬಿದ್ದಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಹಾರ ಸರ್ಕಾರ SK ಸಿಂಗ್ಲಾ ಕನ್ಸ್ಟ್ರಕ್ಷನ್ ಪ್ರೈ.ಲಿ. ಲಿಮಿಟೆಡ್, ಮತ್ತು ಸೇತುವೆಯನ್ನು ಕಂಪನಿಯ ವೆಚ್ಚದಲ್ಲಿ ಮರುನಿರ್ಮಾಣ ಮಾಡಬೇಕೆಂದು ಆದೇಶಿಸಿತ್ತು.
ಮುಗಿಯುತ್ತಲೇ ಇಲ್ಲ ಕಾಮಗಾರಿ
3.16 ಕಿ.ಮೀ ಉದ್ದದ ಸೇತುವೆಗೆ 2014ರ ಫೆ.23ರಂದು ಶಂಕುಸ್ಥಾಪನೆ ನೆರವೇರಿಸಲಾಗಿದ್ದು, 2015ರ ಮಾರ್ಚ್ 9ರಂದು ಕಾಮಗಾರಿ ಆರಂಭಗೊಂಡಿತ್ತು. ಬಿಹಾರ ಸರ್ಕಾರವು ಈ ಯೋಜನೆಗೆ ₹ 1,710 ಕೋಟಿ ಮಂಜೂರು ಮಾಡಿದ್ದು, ಇದರ ಹೊರತಾಗಿಯೂ, ನಿರ್ಮಾಣದಲ್ಲಿ ಸುಮಾರು ಒಂಬತ್ತು ವರ್ಷಗಳ ನಂತರ, ಸೇತುವೆಯು ಅಪೂರ್ಣವಾಗಿದೆ.
ಬಿಹಾರ ಸರ್ಕಾರದ ರಸ್ತೆ ನಿರ್ಮಾಣ ಇಲಾಖೆಯು ಖಗಾರಿಯಾ ಕಡೆಯಿಂದ 16 ಕಿಮೀ ಅಪ್ರೋಚ್ ರಸ್ತೆ ಮತ್ತು ಭಾಗಲ್ಪುರ್ ಕಡೆಯಿಂದ 4 ಕಿಮೀ ಅಪ್ರೋಚ್ ರಸ್ತೆಯನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ, ಆದರೆ ಸೇತುವೆಯ ಮುಖ್ಯ ರಚನೆಯು ಅಪೂರ್ಣವಾಗಿದೆ. ಈ ದೀರ್ಘ ವಿಳಂಬ, ಪುನರಾವರ್ತಿತ ರಚನಾತ್ಮಕ ವೈಫಲ್ಯಗಳು ಈ ಸೇತುವೆ ಕಾಮಗಾರಿಯನ್ನು ಮತ್ತಷ್ಟು ವಿಳಂಬಗೊಳಿಸುತ್ತಾ ಸಾಗಿದೆ. ಅಲ್ಲದೆ SK ಸಿಂಗ್ಲಾ ಕನ್ಸ್ಟ್ರಕ್ಷನ್ ಪ್ರೈವೇಟ್‌ನ ಕೆಲಸದ ಗುಣಮಟ್ಟದ ಮೇಲೆ ಶಂಕೆ ವ್ಯಕ್ತವಾಗುತ್ತಿದ್ದು, ಬಿಹಾರ ಸರ್ಕಾರ ಕೂಡ ವ್ಯಾಪಕ ಮುಜುಗರಕ್ಕೀಡಾಗುತ್ತಿದೆ.