5ನೇ ಬಾರಿಗೆ ವಿಶ್ವಕಪ್ ಗೆದ್ದ ಭಾರತ

ಆಂಟಿಗುವಾ : ಭಾರತ ಅಂಡರ್-19 ತಂಡ 5ನೇ ಬಾರಿಗೆ ವಿಶ್ವಕಪ್​ಗೆ ಗೆದ್ದು ಬೀಗಿದೆ. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಭಾರತ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಿದೆ.

ಫೈನಲ್​ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಇಂಗ್ಲೆಂಡ್ ತಂಡ, ಭಾರತದ ರವಿಕುಮಾರ್ ಮತ್ತು ರಾಜ್​ ಭಾವಾ ಅಮೋಘ ಬೌಲಿಂಗ್ ದಾಳಿಗೆ ತತ್ತರಿಸಿ 189 ರನ್​ಗಳ ಸಾಧಾರಣ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಯಶ್ ಧುಲ್ ಟೀಂ 47.4 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು.

ಆರಂಭಿ ಕರಾಗಿ ಆಗಮಿಸಿದ್ದ ಅಂಗ್​ಕೃಶ್ ರಘುವಂಶಿ ಸೊನ್ನೆ ಸುತ್ತಿ ಔಟಾದರು. ಇನ್ನು ಹರ್ನೂರ್ ಸಿಂಗ್ ಜೊತೆಯಾದ ಶೇಖ್ ರಶೀದ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ತಂಡದ ಮೊತ್ತ 49 ರನ್ ಆಗಿದ್ದಾಗ ಹರ್ನೂರ್ ಸಿಂಗ್ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ನಾಯಕ ಯಶ್ ಧುಲ್, ಶೇಖ್ ರಶೀದ್​ಗೆ ಸಾಥ್ ನೀಡಿದರು.

ಉತ್ತಮವಾಗಿ ಆಡುತ್ತಿದ್ದ ಶೇಖ್ ರಶೀದ್ (50) ಅರ್ಧ ಶತಕ ಗಳಿಸಿ ವಿಕೆಟ್ ಒಪ್ಪಿಸಿದರು. ಅದೇ ಓವರ್​ನಲ್ಲಿ ಯಶ್ ಧುಲ್ (17) ಕೂಡ ಔಟಾದರು. ಆಗ ತಂಡದ ಮೊತ್ತ 4 ವಿಕೆಟ್ ನಷ್ಟಕ್ಕೆ 97 ರನ್ ಆಗಿತ್ತು. ಬಳಿಕ ಕ್ರೀಸ್​ಗೆ ಬಂದ ನಿಶಾಂತ್ ಸಿಧು ಮತ್ತು ರಾಜ್ ಬಾವಾ ತಂಡವನ್ನು ನಿಧಾನವಾಗಿ ಗೆಲುವಿನ ಗುರಿಯತ್ತ ಸಾಗಿಸಿದರು.

ಅಂಡರ್ 19 ವಿಶ್ವಕಪ್ ನಲ್ಲಿ ಎಂಟನೇ ಬಾರಿ ಫೈನಲ್ ತಲುಪಿದ್ದ ಭಾರತ 5 ಸಲ ವಿಶ್ವಕಪ್ ಜಯಿಸಿದೆ.

Donate Janashakthi Media

Leave a Reply

Your email address will not be published. Required fields are marked *