-ವಿಮಲಾ ಕೆ.ಎಸ್.
ʼಅತ್ಯಾಚಾರಿಗಳ ಪುರುಷತ್ವ ಹರಣ ಮಾಡಿಬಿಡಬೇಕು, ಗಲ್ಲು ಶಿಕ್ಷೆ ವಿಧಿಸಬೇಕು, ಕಾನೂನು ಬಿಗಿಯಾಗಬೇಕುʼ. ರೋಷಾವೇಶದಲ್ಲಿ ಈ ಮಾತುಗಳು ನಿರ್ಭಯಾ ಸಂದರ್ಭದಿಂದ ಬಹಳ ಸಾಮಾನ್ಯವಾಗಿ ಕೇಳಿಬರುತ್ತಿವೆ. ಈಗ ಮತ್ತೆ ಕೊಲ್ಕತ್ತಾದ ಆರ್.ಜಿ.ಕರ್ ಆಸ್ಪತ್ರೆಯಲ್ಲಿ ಕಿರಿಯ ವೈದ್ಯಕೀಯ ಟ್ರೈನಿಯೊಬ್ಬಳ ಮೇಲೆ ನಡೆದ ಬರ್ಭರವಾದ ಆಕ್ರಮಣ ಮತ್ತು ಕೊಲೆಯ ನಂತರವೂ ಅದೇ ಮಾತುಗಳು ಕಿವಿಗೆ ಬೀಳುತ್ತಿವೆ. ಹೆಣ್ಣಿಗೆ ವಿಧಿಸುವ ಎಲ್ಲ ನಿರ್ಬಂಧಗಳ ಬಗ್ಗೆಯೂ ಮಾತೇ ಮಾತು. ದೌರ್ಜನ್ಯ
ಆರ್.ಜಿ.ಕರ್ ಆಸ್ಪತ್ರೆಯ ಘಟನೆಯನ್ನೇ ತೆಗೆದುಕೊಂಡರೆ, ದೇಶದ ಸರ್ವೋಚ್ಛ ನ್ಯಾಯಾಲಯವೂ ಗಮನಿಸಿದಂತೆ ದುಷ್ಕೃತ್ಯ ನಡೆದ ಆ ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಕನಿಷ್ಟ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೂ ವಿಶ್ರಾಂತಿಗೆ ಸ್ಥಳವಿಲ್ಲ. ವ್ಯಕ್ತಿಯೊಬ್ಬರಿಗೆ 8 ಘಂಟೆಗಳ ಕೆಲಸ ಎನ್ನುವ ವೈಜ್ಞಾನಿಕ ಅವಧಿಯನ್ನು ಮೀರಿ ವೈದ್ಯಕೀಯ ವಲಯದಲ್ಲಿ ತರಬೇತಿಯಲ್ಲಿ ಇರುವ ವೈದ್ಯರು 30-36 ಘಂಟೆ ನಿರಂತರ ಕೆಲಸ ಮಾಡುತ್ತಾರೆ. ಅಂತಹ ದುಷ್ಕೃತ್ಯಕ್ಕೆ ಒಳಗಾಗಿ ಕೊಲೆಯಾದ ಯುವತಿಯ ಪೋಷಕರಿಗೆ ಮಗಳು ಅತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಸ್ಪತ್ರೆಯ ಕಡೆಯಿಂದ ಕರೆ ಮಾಡಿದ್ದು, ಘಟನೆಯ ನಂತರದ ಹಲವು ಬೆಳವಣಿಗೆಗಳು ನೂರಾರು ಪ್ರಶ್ನೆಗಳಿಗೆ ಹಾದಿ ಮಾಡಿಕೊಟ್ಟಿದೆ. ಈ ಘೋರ ಘಟನೆ ಮತ್ತು ಅದರ ಸುತ್ತಮುತ್ತಲಿನ ಪರಿಸ್ಥಿತಿಗಳನ್ನು ನೋಡಿದರೆ ಹಲವು ಸಡಿಲ ಗಂಟುಗಳು ಗೋಚರಿಸುತ್ತವೆ. ದೌರ್ಜನ್ಯ
ಪ್ರಾಂಶುಪಾಲರು ರಾಜಿನಾಮೆ ಕೊಡುತ್ತಾರೆ. ಕೊಟ್ಟ ಮರುಕ್ಷಣವೇ ಇನ್ನೊಂದು ಅಂತಹುದೇ ಹುದ್ದೆಗೆ ನೇಮಕವಾಗುತ್ತದೆ!!. ವೈದ್ಯರು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸುತ್ತಿರುತ್ತಾರೆ, ಅದೇ ಹೊತ್ತಿಗೆ ದುಷ್ಕರ್ಮಿಗಳು ಆಸ್ಪತ್ರೆಗೆ ನುಗ್ಗಿ ದಾಂದಲೆ ಎಬ್ಬಿಸುತ್ತಾರೆ. ಪೋಲೀಸರ ಸಮ್ಮುಖದಲ್ಲಿಯೇ ಇದು ನಡೆಯುತ್ತದೆ.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಉತ್ಸವ: ರೂ.1,685 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿಯಾಗಿ ಕಲಬುರಗಿ ಅಭಿವೃದ್ಧಿ- ಸಿಎಂ ಸಿದ್ದರಾಮಯ್ಯ
ನವೀಕರಣದ ಕಾರಣ ಕೊಟ್ಟು ದುಷ್ಕೃತ್ಯ ನಡೆದ ಆಸುಪಾಸಿನ ಗೋಡೆಗಳನ್ನು ಕೆಡವಲಾಯಿತು. ದುರ್ಘಟನೆ, ದುಷ್ಕೃತ್ಯ ನಡೆದುದು ಮೊದಲ ಅಪರಾಧವಾದರೆ, ಅದನ್ನು ನಿಷ್ಪಕ್ಷಪಾತ ತನಿಖೆಗೆ ಒಳಪಡಿಸುವ ಬದಲು ಅದನ್ನು ಮುಚ್ಚಿ ಹಾಕಲು ನಡೆಸಿದ ಪ್ರಯತ್ನ ಮತ್ತು ಈಗಾಗಲೇ ಆರೋಪಿ ಎಂದು ಬಂಧಿಸಲ್ಪಟ್ಟ ವ್ಯಕ್ತಿಯಲ್ಲದೆಯೂ ಇತರರೂ ಇರಬಹುದಾದ ಅಂಶಗಳನ್ನು ಮರೆ ಮಾಚಲು ನಡೆಸಿದ ಪ್ರಯತ್ನಗಳು ಉದ್ದೇಶಪೂರ್ವಕ ಘೋರ ಅಪರಾಧವೇ ಆಗುತ್ತದೆ. ಇದನ್ನು ಪುಷ್ಟೀಕರಿಸಲು ಮತ್ತೊಂದು ಸಾಕ್ಷ್ಯ ಕೊಲ್ಕತ್ತಾದಲ್ಲಿ ನಾಲ್ಕೈದು ಸರಕಾರೀ ವೈದ್ಯಕೀಯ ಮಹಾ ವಿದ್ಯಾಲಯಗಳು+ ಆಸ್ಪತ್ರೆಗಳಿದ್ದಾಗಲೂ ಯಾವ ಆಸ್ಪತ್ರೆಯಲ್ಲಿ ಇಂತಹ ಘಟನೆ ನಡೆದಿದೆಯೋ ಮತ್ತು ಸಹಜವಾಗಿಯೇ ಹಲವು ಅನುಮಾನಗಳನ್ನೂ ಹುಟ್ಟು ಹಾಕಿದೆಯೋ ಅದೇ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತದೆ. ಸ್ವತಃ ಸರಕಾರ ನಡೆಸುತ್ತಿರುವ ಪಕ್ಷ, ಮುಖ್ಯಮಂತ್ರಿಯೂ ಆಗಿರುವ ಮೇಡಂ ಮಮತಾ ಬ್ಯಾನರ್ಜಿಯವರ ನೇತೃತ್ವದಲ್ಲಿ ಕೊಲ್ಕತ್ತಾ ನಗರದಲ್ಲೊಂದು ಪ್ರತಿಭಟನಾ ಮೆರವಣಿಗೆಯೂ ನಡೆಯುತ್ತದೆ! ಅದು ಯಾರ ವಿರುದ್ಧ ಅಥವಾ ಯಾವ ಬೇಡಿಕೆ ಇಟ್ಟು? ದೌರ್ಜನ್ಯ
ಅದರ ಬೆನ್ನಲ್ಲೇ, ಪ.ಬಂಗಾಲ ಸರಕಾರದ ಕಾರ್ಯದರ್ಶಿಯವರು 17 ಅಂಶಗಳ ರಕ್ಷಣಾ ಸೂತ್ರಗಳ ಸಲಹೆ ಪ್ರಕಟವಾಗಿದೆ..ಆರ್.ಜಿ.ಕರ್ ಆಸ್ಪತ್ರೆಯ ಘಟನೆಯ ಬೆನ್ನಲ್ಲೇ ಎದ್ದ ಘೋಷಣೆ ‘ವಿಮೆನ್ ರೀ ಕ್ಲೈಮ್ ಅವರ್ ನೈಟ್ಸ್’ ಎಂದರೆ ‘ಮಹಿಳೆಯರ ನಿರ್ಭೀತ ಸ್ವಾತಂತ್ರ್ಯದ ಅಧಿಕಾರದ ಭಾಗವಾಗಿ ನಮ್ಮ ರಾತ್ರಿಗಳನ್ನು ನಾವು ಮರಳಿ ಪಡೆಯುತ್ತೇವೆ’ ಎಂದಾಗಿತ್ತು. ಆದರೆ ಕೇವಲ ಕಾರ್ಯದರ್ಶಿಯವರ ಮೂಲಕ ಸಲಹೆಯಂತೆ ಪ್ರಕಟವಾದ 17 ಅಂಶಗಳು ಈ ಘೋಷಣೆಯನ್ನೇ ಅವಮಾನಿಸುವಂತೆ ಇರುವ ಅಂಶಗಳನ್ನು ಒಳಗೊಂಡಿದೆ, ವ್ಯಾಪಕವಾಗಿ ಎದ್ದ ಪ್ರತಿಭಟನೆಗಳನ್ನು ಶಮನಗೊಳಿಸಲು ಪ.ಬಂಗಾಲದ ಮುಖ್ಯಮಂತ್ರಿಗಳು ರಚಿಸಿದ ಒಂದು ಸ್ಟಾçಟೆಜಿ ಎನ್ನುತ್ತಿವೆ ಅದರ ಕುರಿತಾದ ವಿಮರ್ಶೆಗಳು.
ಖಚಿತ ನಿರ್ಧಾರಗಳನ್ನಾಗಲಿ, ಪ್ರಸ್ತಾಪಗಳನ್ನಾಗಲಿ ಹೊಂದಿಲ್ಲದ ಈ 17 ಅಂಶಗಳು ಮಹಿಳೆಯರ ಸ್ವಾತಂತ್ರ್ಯ ಮತ್ತು ಘನತೆಯಿಂದ ಉದ್ಯೋಗದಲ್ಲಿ ತೊಡಗಿಕೊಳ್ಳುವ ಸುರಕ್ಷಿತ ವಾತಾವರಣ ನಿರ್ಮಾಣದತ್ತ ಬದ್ಧತೆಯನ್ನು ಹೊಂದುವ ಬದಲು, ಅವರ ಉದ್ಯೋಗದ ಹಕ್ಕಿಗೇ ಅಡ್ಡಿ ಪಡಿಸುವಂತಿದೆ. ರಾತ್ರಿಪಾಳಿಯಲ್ಲಿ ಕೆಲಸ ಮಾಡಲು ಅಗತ್ಯವಾದ ಸುರಕ್ಷಿತ ವಾತಾವರಣ ನಿರ್ಮಿಸುವ ಬದಲು ಕಣ್ಗಾವಲಿನ ನಿಗಾವಣೆ, ರಾತ್ರಿ ಕೆಲಸದ ಸಮಯದ ಕಡಿತ ಇತ್ಯಾದಿಗಳು ಏನನ್ನು ಸೂಚಿಸುತ್ತಿವೆ ಎಂದು ಯೋಚಿಸಬೇಕಲ್ಲವೇ? ದೌರ್ಜನ್ಯ
ವೈದ್ಯಕೀಯ ವಲಯದಲ್ಲಿ ಆಯಾಗಳು, ನರ್ಸ್ಗಳು, ವೈದ್ಯರು ಅನಿವಾರ್ಯವಾಗಿ ರಾತ್ರಿ ಪಾಳಿ ಮಾಡಲೇಬೇಕಾದ ಅಗತ್ಯವೂ ಇದೆ ಎಂಬುದು ನಿರ್ವಿವಾದದ ಸಂಗತಿ. ರಾತ್ರಿಯಲ್ಲಿ ಪೊಲೀಸ್ ಗಸ್ತು ಹೆಚ್ಚಿಸುವ, ಮಹಿಳಾ ರಕ್ಷಣಾ ಪಡೆಯನ್ನು/ಪೊಲೀಸರನ್ನು ನಿಯೋಜಿಸುವ ಪ್ರಸ್ತಾಪವೂ ಅದರಲ್ಲಿದ್ದು ಅವರ ಸುರಕ್ಷತೆಗೇನು ಮಾಡುವಿರಿ ಎಂದೂ ಪ್ರಶ್ನಿಸಲಾಗುತ್ತಿದೆ.
ವಿಶ್ರಾಂತಿ ಕೊಠಡಿಗಳಿರಬೇಕು, ಸಿಸಿ ಕ್ಯಾಮರಾಗಳಿರಬೇಕು, ವಿಶಾಖಾ ಕಾನೂನಿನ ಅಡಿ ದೂರು ನಿರ್ವಹಣಾ ಸಮಿತಿಗಳಿರಬೇಕು ಎಂಬಿತ್ಯಾದಿ ಸದಾಶಯದ ಅಂಶಗಳನ್ನು ಹೊಂದಿದ ಹೇಳಿಕೆಯನ್ನು ಹಂಚುವ ಮೂಲಕ ಜನರ ಆಕ್ರೋಶ ಕಡಿಮೆ ಮಾಡಲು ಹೊರಟ ನಡೆಯಷ್ಟೆ ಅದು ಎನ್ನಬಹುದು.ಆರ್.ಜಿ.ಕರ್ ಆಸ್ಪತ್ರೆಯಲ್ಲಿ ಘಟನೆ ನಡೆದ ಸ್ಥಳ ಸಿಸಿ ಕ್ಯಾಮರಾವನ್ನು ಹೊಂದಿದ ಸೋಕಾಲ್ಡ್ ಸುಸಜ್ಜಿತ ಕೊಠಡಿಯೇ ಆಗಿತ್ತು. ಕೊಲ್ಕತ್ತಾದ ವೈದ್ಯಕೀಯ ವಲಯದಲ್ಲಿ ವ್ಯಾಸಂಗ ಮಾಡುತ್ತಿರುವ, ಈ ಘಟನೆಯಿಂದ ತತ್ತರಿಸಿಹೋಗಿ, ಅಪರಾಧಿಗಳಿಗೆ ರಕ್ಷಣೆ ನೀಡದೆ ಸೂಕ್ತ ಕಾನೂನಿನ ಕ್ರಮಕ್ಕಾಗಿ ಒತ್ತಾಯಿಸಿ ಪ್ರತಿಭಟನಾ ನಿರತ ಕಿರಿಯ ವೈದ್ಯರನೇಕರು ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ನಿರಂತರವಾಗಿ ಹಂಚಿಕೊಳ್ಳುತ್ತಿದ್ದಾರೆ. ಎಲ್ಲರ ಅನುಮಾನಗಳೂ, ಅಭಿಪ್ರಾಯಗಳು ಆರೋಪಿಗಳನ್ನು ರಕ್ಷಿಸಲು ಪ್ರಭಾವ ಬೀರಲಾಗುತ್ತಿದೆ ಎಂಬುದೇ ಆಗಿದೆ.
ಇಂತಹ ಘಟನೆಗಳು ನಡೆದಾಗೆಲ್ಲ ಹೀಗೊಂದು ತಿಪ್ಪೆ ಸಾರಿಸುವ ಅಥವಾ ಮಹಿಳೆಯರ ಸಹಜ ಬದುಕಿನ ನಡೆಗಳನ್ನು ನಿಯಂತ್ರಿಸುವ ಧೋರಣೆಗಳು ಢಾಳಾಗಿ ಕಾಣುತ್ತವೆ. ನೆನಪಿಸಿಕೊಳ್ಳಬಹುದು, ಬೆಂಗಳೂರು ವಿಶ್ವವಿದ್ಯಾಲಯದ ಪ್ರದೇಶದಲ್ಲಿ ಯುವತಿಯೋರ್ವಳ ಮೇಲೆ ಅತ್ಯಾಚಾರ ನಡೆದಾಗ ಜ್ಞಾನಭಾರತಿ ರಸ್ತೆಗಳನ್ನು ರಾತ್ರಿ ಎಂಟರ ನಂತರ ಸಂಚಾರಕ್ಕೆ ನಿರ್ಬಂಧಿಸಲಾಗಿತ್ತು. ಅಸಲಿಗೆ ಅಲ್ಲಿ ಹೇರಳವಾಗಿರುವ ಶ್ರೀಗಂಧದ ಮರಗಳನ್ನು ಕದ್ದು ಸಾಗಿಸುವ ದಂಧೆ ಮಾಡುವವರಿಂದ ಯುವತಿಯ ಮೇಲೆ ಅತ್ಯಾಚಾರ ನಡೆದದ್ದು ಎಂಬುದು ಸತ್ಯವಲ್ಲವೇ?
ಪ್ರಕರಣ ಮುಚ್ಚಿ ಹಾಕಲು ಸರ್ವ ಪ್ರಯತ್ನಗಳೂ ನಡೆಯುತ್ತಿವೆ ಮತ್ತು ರಕ್ಷಣೆಯ ಮಾತುಗಳನ್ನು ಬದಿಗಿಟ್ಟು ಸುರಕ್ಷೆಯ ವಾತಾವರಣ ನಿರ್ಮಾಣ ಮಾಡಲು ಆದ್ಯತೆ ನೀಡಿ ಎಂಬುದೇ ಆಗಿದೆ. ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಜೊತೆಗೇ ವೈದ್ಯಕೀಯ ವಲಯದಲ್ಲಿ ಕೆಲಸ ಮಾಡುವವರ ಸುರಕ್ಷತೆಗಾಗಿ ಸಮಿತಿಯೊಂದನ್ನು ನೇಮಕ ಮಾಡಿ ಹಲವು ಸುಧಾರಣಾ ಕ್ರಮಗಳಿಗೂ ಆದೇಶ ನೀಡಿದೆ. ರಾಷ್ಟ್ರೀಯ ಮಟ್ಟದಲ್ಲಿ ಜಾರಿಗೆ ತರಬೇಕಾಗಿರುವ ನಿಯಮಗಳನ್ನು ಮತ್ತು ವೈದ್ಯಕೀಯ ವಲಯ ಮತ್ತು ಆರೋಗ್ಯ ಪಾಲನಾ ಸಿಬ್ಬಂದಿಗಳ ಸುರಕ್ಷತೆಗೆ ಕಾರ್ಯಪಡೆ ರಚನೆ ಮಾಡಿದೆ. ಇವೆಲ್ಲವನ್ನೂ ಸ್ವಾಗತಿಸೋಣ, ಆದರೆ ಇವು ನಿಜವಾದ ಅರ್ಥದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಘನತೆಯ ಬದುಕಿನ ಹಕ್ಕನ್ನು ಖಾತ್ರಿ ಮಾಡಬಲ್ಲವೇ?
ಮೇಲಿನ ಪ್ರಶ್ನೆಯ ಜೊತೆಯೇ ಈ ಸಮಾಜ ಕೇಳಿಕೊಳ್ಳಬೇಕಾದ ಮತ್ತೊಂದು ಪ್ರಶ್ನೆ ದಿನವೊಂದಕ್ಕೆ ದಾಖಲಾಗುತ್ತಿರುವ 86-90 ಅತ್ಯಾಚಾರದ ಪ್ರಕರಣಗಳು, ದಾಖಲಾಗದೇ ಮರೆಯಾಗುವ ಇನ್ನಷ್ಟೋ ಅಸಂಖ್ಯ ಪ್ರಕರಣಗಳನ್ನು ಎದುರಿಟ್ಟುಕೊಂಡು ಈ ಸಮಾಜ, ಆಡಳಿತ, ನ್ಯಾಯದಾನ ವ್ಯವಸ್ಥೆ ತನ್ನನ್ನು ಪ್ರಶ್ನೆ ಮಾಡಿಕೊಳ್ಳುವುದೇ? ಅಂದಿನ ನಿರ್ಭಯಾ ಪ್ರಕರಣ, ಅದರ ಹಿಂದೆ ಮುಂದೆ ಮತ್ತು ಇಂದೂ ಕೂಡ ನಡೆಯುತ್ತಿರುವ ಅದೆಷ್ಟು ಪ್ರಕರಣಗಳು ಕೇವಲ ಸುದ್ದಿಯಾಗಿ ಮರೆಯಾಗುತ್ತಿವೆ.
ಆರ್.ಜಿ.ಕರ್ ಜೊತೆಯೇ ವರದಿಯಾದ ಕೊಯಮತ್ತೂರು, ಉತ್ತರಾಖಾಂಡದ ವೈದ್ಯಕೀಯ ವಲಯದ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳು, ಬಿಹಾರದಲ್ಲಿ ದಲಿತ ಸಮುದಾಯದ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ, ಉತ್ತರ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮರಕ್ಕೆ ನೇತಾಡಿದ ಇಬ್ಬರು ದಲಿತ ಬಾಲಕಿಯರ ದೇಹ. ಅಪರಾಧ ತಡೆಗಟ್ಟಲು ದೇಶದಲ್ಲಿರುವ ಕಾನೂನುಗಳನ್ನು ಮತ್ತು ನಿಯಂತ್ರಣಕ್ಕೆ ಸಾಂವಿಧಾನಿಕ ಕ್ರಮಗಳಿಗೆ ಬದಲು ಬುಲ್ಡೋಜರ್ ರಾಜಕಾರಣವನ್ನು ಜಾರಿಗೆ ತಂದ ಉತ್ತರಪ್ರದೇಶ ಅಥವಾ ಮಧ್ಯಪ್ರದೇಶಗಳಲ್ಲಿ ಅವು ಕೋಮು ರಾಜಕಾರಣಕ್ಕಾಗಿ ಮಾತ್ರವೇ ಬಳಕೆಯಾಗುತ್ತಿವೆ ಎಂಬುದೂ ಸತ್ಯವಲ್ಲವೇ? ಮತ್ತು ಯಾವ ವರ್ಗದ ಧ್ವನಿ ಗಟ್ಟಿಯಾದರೆ ಪ್ರಭುತ್ವದ ನಿದ್ದೆ ಕೆಡಬಲ್ಲುದೋ ಆ ವರ್ಗ ಎಂದರೆ ಮಧ್ಯಮ ವರ್ಗ ಬಹಳ ಎಚ್ಚರಿಕೆಯ ನಡೆಗಳನ್ನೇ ಇಡುತ್ತದೆ.
ದಲಿತ ದಮನಿತ ವಿಭಾಗದ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ನಡೆಯುವ ಪ್ರತಿಭಟನೆಗಳಿಗೆ ಹೆಚ್ಚು ಸ್ಪಂದಿಸುವುದಕ್ಕಿಂತ, ಮೇಲ್ ಸ್ಥರದ ಸಂದರ್ಭಕ್ಕೆ ಪ್ರತಿರೋಧ, ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ ಎಂಬುದು ಕೂಡಾ ಯೋಚಿಸಬೇಕಾದ ಸಂಗತಿಯೇ ಆಗಿದೆ. ಇಲ್ಲೊಂದು ವರ್ಗ ರಾಜಕಾರಣವೂ ಇರುವುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ನಿರ್ಭಯಾ, ಅಭಯಾ ಮುಂತಾದ ಪ್ರಕರಣಗಳಿಗೆ ಕಿತ್ತೆದ್ದು ಪ್ರತಿಭಟಿಸಿದ ಆಕ್ರೋಶಕ್ಕೆ ತಲೆಬಾಗುತ್ತಲೇ ನನ್ನೊಳಗೆ ಒಂದು ಗಂಭೀರ ಪ್ರಶ್ನೆ ಎದ್ದಿದೆ.
ಅದೆಂದರೆ ಒಂದೊಮ್ಮೆ ಅದೇ ಆರ್.ಜಿ.ಕರ್ ಆಸ್ಪತ್ರೆಯಲ್ಲಿ ಆಯಾ ಒಬ್ಬಳು ಅಥವಾ ಅಲ್ಲಿನ ಕಸ ಗುಡಿಸುವ ಒಬ್ಬ ಮಹಿಳೆಯ ಮೇಲೆ ಇಂಥಹ ಆಕ್ರಮಣ ನಡೆದಿದ್ದರೆ ಆಗಲೂ ಮಧ್ಯಮವರ್ಗ ಇಷ್ಟೇ ತೀವ್ರವಾದ ಪ್ರತಿರೋಧ ಅಥವಾ ಪ್ರತಿಕ್ರಿಯೆ ವ್ಯಕ್ತಪಡಿಸುವುದೇ? ಅಥವಾ ಮಧ್ಯಮ, ಮೇಲ್ಮಧ್ಯಮ ವರ್ಗದ ಸಂದರ್ಭಕ್ಕೆ ಸ್ಪಂದಿಸುವ ರೀತಿಯಲ್ಲಿ ಅಂಚಿಗೆ ತಳ್ಳಲ್ಪಟ್ಟ ಸಮೂಹದ ಮೇಲೆ ನಡೆಯುವ ಅತ್ಯಂತ ಬರ್ಭರ ಕ್ರೌರ್ಯ, ದೌರ್ಜನ್ಯಗಳಿಗೆ ಯಾಕೆ ಪ್ರತಿಕ್ರಿಯೆ ಸಿಗುವುದಿಲ್ಲ? ಅವು ಕೇವಲ ಮಹಿಳಾ ಮತ್ತು ಮಹಿಳಾ ಪರ ಸಂಘಟನೆಗಳು, ವ್ಯಕ್ತಿಗಳ ಕರ್ತವ್ಯವೆಂಬಂತೆ ಕಾಣ ಸಿಗುತ್ತವೆ. ಇದೂ ಈ ಸಮಾಜದ ಪ್ರಜ್ಞೆಗೆ ದಕ್ಕಲೇ ಬೇಕಾದ ಅತಿ ಮುಖ್ಯ ಅಂಶ. ಪುರುಷ ಪ್ರಧಾನ ಮೌಲ್ಯಗಳನ್ನು ಪೋಷಿಸುವ, ಹೆಣ್ಣಿನ ಮೇಲೆ ತನ್ನ ಅಧಿಕಾರದ ಮುದ್ರೆಯನ್ನು ಗಟ್ಟಿಗೊಳಿಸಲು ಅತ್ಯಾಚಾರವನ್ನು ಶಸ್ತçವನ್ನಾಗಿ ಬಳಸುವ ಗಂಡಾಳ್ವಿಕೆಯ ಮನೋಭಾವಕ್ಕೆ ಅಂತ್ಯ ಹಾಡುವುದು ಯಾವಾಗ?
ಇದೇ ಹೊತ್ತಿಗೆ ಚಿತ್ರರಂಗದ ಒಳಗೊಂದು ಮತ್ತೆ ಸುನಾಮಿಯೆದ್ದಿದೆ ಎಂಬಂತೆ ಚರ್ಚೆ ಪ್ರಾರಂಭವಾಗಿದೆ. ಮಲೆಯಾಳಂ ಚಿತ್ರರಂಗದಲ್ಲಿ 2017 ರಲ್ಲಿ ನಡೆದ ಒಂದು ಘಟನೆ ಮತ್ತು ಅದರ ಬೆನ್ನಲ್ಲೇ `ವಿಮೆನ್ ಇನ್ ಸಿನೆಮಾ ಕಲೆಕ್ಟೀವ್’ ಹೆಸರಿನ ಸಂಘಟನೆಯ ಬೇಡಿಕೆಯೂ ಸೇರಿದಂತೆ ಜಸ್ಟೀಸ್ ಹೇಮಾ ಸಮಿತಿಯ ರಚನೆಯಾಗಿತ್ತು. ಮೂವರು ಸದಸ್ಯರ ಸಮಿತಿ ವಿಸ್ತಾರವಾದ ಮಾಹಿತಿ ಸಂಗ್ರಹಿಸಿ 2019ರಲ್ಲಿಯೇ ವರದಿ ಸಲ್ಲಿಸಿದೆ. ವರದಿಯ ವಿವರಗಳು ಈಗ ಸಾರ್ವಜನಿಕ ಚರ್ಚೆಗೆ ಒಳಪಟ್ಟಿದೆ. ಹಲವು ಸತ್ಯಗಳು ಹೊರಬರುತ್ತಿವೆ. `ಅಮ್ಮ’ (ಅಸೋಸಿಯೇಷನ್ ಆಫ್ ಮಲೆಯಾಳಂ ಮೂವಿ ಆಕ್ಟರ್ಸ್)ದ ಎಲ್ಲ ಪದಾಧಿಕಾರಿಗಳು ನೈತಿಕ ಹೊಣೆ ಹೊತ್ತು ರಾಜಿನಾಮೆಯೂ ಕೊಟ್ಟಾಯ್ತು. ಅದರ ಮುಖ್ಯ ಪದಾಧಿಕಾರಿಗಳ ಮೇಲೆಯೇ ಆರೋಪಗಳು, ದೂರುಗಳು ದಾಖಲಾಗಿವೆ. ಜನಪ್ರತಿನಿಧಿಗಳಾಗಿ ಆಯ್ಕೆಯಾದ ಸಿನಿಮಾ ನಟರೊಬ್ಬರ ಮೇಲೆಯೂ ದೂರು ದಾಖಲಾಗಿದೆ. ಕೇರಳ ಸರಕಾರ ವಿಶೇಷ ತನಿಖಾ ದಳವೊಂದನ್ನು ರಚಿಸಿ ಸೂಕ್ತ ತನಿಖೆಗೆ ಆದೇಶಿಸಿದೆ.
ಅದನ್ನು ಸ್ವಾಗತಿಸೋಣ. ಆದರೆ ಅದೇ ವೇಳೆಗೆ 2017-18ರಲ್ಲಿ ದೇಶದ ಹಲವೆಡೆ ಎದ್ದ #ಮೀಟೂಗೆ ಪ್ರತಿಧ್ವನಿಯಾಗಿ ಕರ್ನಾಟಕದಲ್ಲಿಯೂ ಧ್ವನಿ ಸೇರಿಸಿದವರ ಪರಿಸ್ಥಿತಿ ಏನಾಯಿತು. ಸಿನಿಮೋದ್ಯಮದಲ್ಲಿ ಇರುವ ಎಷ್ಟು ಜನ ಬೆಂಬಲಿಸಿದರು ಅಥವಾ ಅಂದಿನ, ಇಂದಿನ, ನಾಳಿನ ಸರಕಾರಗಳ ಪ್ರತಿಕ್ರಿಯೆ?? ಈಗ ತೆಲಂಗಾಣದಿಂದ ಸದ್ದು ಕೇಳುತ್ತಿದೆ. 2019ರಲ್ಲಿ ಅಸ್ತಿತ್ವಕ್ಕೆ ಬಂದ `ವಾಯ್ಸ್ ಆಫ್ ವಿಮೆನ್’ ಹೆಸರಿನ ವೇದಿಕೆ ಆ ವರ್ಷವೇ ರಚನೆಯಾದ ಉಪ ಸಮಿತಿಯೊಂದರ ವರದಿಯನ್ನು ಬಹಿರಂಗಗೊಳಿಸಿ ಕ್ರಮ ಕೈಗೊಳ್ಳಲು ಮುಂದಾಗಲು ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ಮತ್ತೆ ಫೈರ್-ಸಿನಿಮಾರಂಗದಲ್ಲಿ ಇರುವವರ ಹಕ್ಕುಗಳ ಮತ್ತು ಸಮಾನತೆಗಾಗಿ ಒತ್ತಾಯಿಸಲು ಅಸ್ತಿತ್ವಕ್ಕೆ ಬಂದ ವೇದಿಕೆಯು ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದರ ರಚನೆಗೆ ಒತ್ತಾಯಿಸಿದ್ದಾರೆ. ಸಿನಿಮಾ ರಂಗವೂ ಒಳಗೊಂಡಂತೆ ಎಲ್ಲ ಕ್ಷೇತ್ರಗಳಲ್ಲಿ ಅತ್ಯಂತ ಸಹಜವೆಂಬಂತೆ ನಡೆದುಬಿಡುವ ಅಥವಾ, ಮಹಿಳೆಯರು ಅಸಹನೀಯ ಎನಿಸಿದರೂ ಮೌನವಾಗಿರುವ ಒತ್ತಡಕ್ಕೆ ಒಳಗಾಗುವ ಪರಿಸರವೇ ಸುತ್ತ ಇರುವಾಗ, ಯಾರನ್ನು ಹದ್ದುಬಸ್ತಿಗೆ ಒಳಪಡಿಸಬೇಕು. ಅಧಿಕಾರದಲ್ಲಿದ್ದು ಅಂತಹ ಕ್ರಮಕ್ಕೆ ಮುಂದಾಗಬಹುದಾದವರೇ ಬಹುತೇಕ ಅಪರಾಧ ಎಸಗುವ, ಎಸಗಿದವರೂ ಆಗಿರುವವರೇ ಇರುವುದೂ ಕೂಡ ನಿಯಂತ್ರಣದ ಅಥವಾ ಸೂಕ್ತ ಕ್ರಮದ ದಾರಿಗೆ ಅಡ್ಡಗೋಡೆಗಳಾಗುತ್ತವೆ.
ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ಕಾನೂನು ಸುವ್ಯವಸ್ಥೆ ಎಂದು ನೋಡದೇ, ಮಹಿಳೆಯರ ಘನತೆಯ ಬದುಕಿನ ಹಕ್ಕಿನ ಉಲ್ಲಂಘನೆ ಎಂದು ಪರಿಗಣಿಸಬೇಕು. ಮತ್ತು ಪುರುಷ ಪ್ರಧಾನ ಆಲೋಚನೆಯ ಪಾಳೆಯಗಾರಿ ಮೌಲ್ಯಗಳ ಮುಂದುವರೆದ ಭಾಷೆಯಾಗಿ ಮಹಿಳೆಯರ ರಕ್ಷಣೆ ಎಂಬ ಶಬ್ದ ಕಿವಿಗೆ ಬೀಳುತ್ತಲೇ ಇರುತ್ತದೆ. ಇಲ್ಲ ಸಮಾಜ ತನ್ನ ಭಾಷೆ, ಭಾವ ಎಲ್ಲವನ್ನೂ ಬದಲಿಸಿಕೊಳ್ಳಬೇಕು. ಅದೆಂದರೆ ಮಹಿಳೆಯರಿಗೆ ಬೇಕಿರುವುದು ಸುರಕ್ಷತೆಯ ವಾತಾವರಣ, ಯಾರ ರಕ್ಷಣೆಯಲ್ಲ. ಕಟ್ಟುಪಾಡಿಗೆ ಅಥವಾ ನಿಯಂತ್ರಣಕ್ಕೆ ಒಳಪಡಿಸಬೇಕು ಅಪರಾಧ ಎಸಗುವವರನ್ನು, ಅತ್ಯಾಚಾರ ನಡೆದರೆ, ದೌರ್ಜನ್ಯ ನಡೆದರೆ ಮಹಿಳೆಯ ಮೇಲೆ, ಬಾಲಕಿಯ ಮೇಲೆ ಇತ್ಯಾದಿ ಭಾಷೆಯ ಬದಲು ಇಂತಹ ಪುರುಷ/ರು ಅತ್ಯಾಚಾರವೆಸಗಿದ್ದಾನೆ/ರೆ ಎಂದು ಪ್ರಚಾರ ಮಾಡುವುದೂ ಒಂದು ಹೆಜ್ಜೆ. ಈ ನಿಟ್ಟಿನಲ್ಲಿ ಸಮಾಜ ಗಂಭೀರವಾಗಿ ಹೆಜ್ಜೆ ಇಡಬೇಕು. ಅಧಿಕಾಸ್ಥರನ್ನು, ನ್ಯಾಯಾಂಗ ವ್ಯವಸ್ಥೆಯನ್ನು ಈ ಎಚ್ಚರಕ್ಕೆ ತರುವ ಹೊಣೆ ಇಡೀ ಸಮಾಜದ್ದಾಗಬೇಕು.
ರಾಷ್ಟ್ರೀಯ ಮಟ್ಟದಲ್ಲಿ ಜಾರಿಗೆ ತರಬೇಕಾಗಿರುವ ನಿಯಮಗಳನ್ನು ಮತ್ತು ವೈದ್ಯಕೀಯ ವಲಯ ಮತ್ತು ಆರೋಗ್ಯ ಪಾಲನಾ ಸಿಬ್ಬಂದಿಗಳ ಸುರಕ್ಷತೆಗೆ ಕಾರ್ಯಪಡೆ ರಚನೆ ಮಾಡಿದೆ. ಇವೆಲ್ಲವನ್ನೂ ಸ್ವಾಗತಿಸೋಣ, ಆದರೆ ಇವು ನಿಜವಾದ ಅರ್ಥದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಘನೆತೆಯ ಬದುಕಿನ ಹಕ್ಕನ್ನು ಖಾತ್ರಿ ಮಾಡಬಲ್ಲವೇ?
ದಲಿತ ದಮನಿತ ವಿಭಾಗದ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ನಡೆಯುವ ಪ್ರತಿಭಟನೆಗಳಿಗೆ ಹೆಚ್ಚು ಸ್ಪಂದಿಸುವುದಕ್ಕಿಂತ, ಮೇಲ್ ಸ್ಥರದ ಸಂದರ್ಭಕ್ಕೆ ಪ್ರತಿರೋಧ, ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ ಎಂಬುದು ಕೂಡಾ ಯೋಚಿಸಬೇಕಾದ ಸಂಗತಿಯೇ ಆಗಿದೆ.
ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ಕಾನೂನು ಸುವ್ಯವಸ್ಥೆ ಎಂದು ನೋಡದೇ, ಮಹಿಳೆಯರ ಘನತೆಯ ಬದುಕಿನ ಹಕ್ಕಿನ ಉಲ್ಲಂಘನೆ ಎಂದು ಪರಿಗಣಿಸಬೇಕು. ಮತ್ತು ಪುರುಷ ಪ್ರಧಾನ ಆಲೋಚನೆಯ ಪಾಳೆಯಗಾರಿ ಮೌಲ್ಯಗಳ ಮುಂದುವರೆದ ಭಾಷೆಯಾಗಿ ಮಹಿಳೆಯರ ರಕ್ಷಣೆ ಎಂಬ ಶಬ್ದ ಕಿವಿಗೆ ಬೀಳುತ್ತಲೇ ಇರುತ್ತದೆ. ಇಲ್ಲ ಸಮಾಜ ತನ್ನ ಭಾಷೆ, ಭಾವ ಎಲ್ಲವನ್ನೂ ಬದಲಿಸಿಕೊಳ್ಳಬೇಕು.
ಇದನ್ನೂ ನೋಡಿ: ದಲಿತ ವ್ಯಕ್ತಿಗೆ ಕ್ಷೌರ ನಿರಾಕರಿಸಿ ಕೊಲ ಪ್ರಕರಣ – ಜನಪರ ಸಂಘಟನೆಗಳಿಂದ ಸಂಗನಹಾಳ ಚಲೋ Janashakthi Media