ಮಾನಹಾನಿ | ಹೊಸ ದಿಗಂತ ಸೇರಿ 4 ಸಂಪಾದಕರಿಂದ ಬೇಷರತ್ ಕ್ಷಮೆ ಯಾಚನೆ!

2012 ರಲ್ಲಿ ಬೆಂಗಳೂರಿನಲ್ಲಿ ವಕೀಲರ ಬಗ್ಗೆ ವರದಿ ಮಾಡುವಾಗ ಪತ್ರಿಕೆಗಳು ‘ತಾಲಿಬಾನ್’ ಮತ್ತು ‘ಗೂಂಡಾ’ ಎಂಬ ಅಸಂಸದೀಯ ಪದಗಳನ್ನು ಬಳಸಿದ್ದವು  ಹೊಸ ದಿಗಂತ

ಬೆಂಗಳೂರು: ವಕೀಲರ ಬಗ್ಗೆ ಮಾಡಲಾದ ವರದಿಯಲ್ಲಿ ಬಳಸಿದ್ದ ಅವಹೇಳನಕಾರಿ ಮತ್ತು ಅಸಂಸದೀಯ ಪದಗಳಿಗೆ ಸಂಯುಕ್ತ ಕರ್ನಾಟಕ, ಹೊಸ ದಿಗಂತ, ನವೋದಯ ಮತ್ತು ಕಿತ್ತೂರು ಕರ್ನಾಟಕ ಪತ್ರಿಕೆಗಳ ಸಂಪಾದಕರು ಬೇಷರತ್ ಕ್ಷಮೆ ಕೇಳಿದ್ದಾರೆ. ಪತ್ರಿಕೆಗಳ ಸಂಪಾದಕರು ಕ್ಷಮೆ ಕೇಳಿದ ನಂತರ ಅವರ ವಿರುದ್ಧ ದಾಖಲಿಸಲಾಗಿದ್ದ 11 ವರ್ಷಗಳ ಹಿಂದಿನ ಮಾನನಷ್ಟ ಪ್ರಕರಣವನ್ನು ಹೈಕೋರ್ಟ್‌ನಲ್ಲಿ ರದ್ದು ಮಾಡಿದೆ.

ನ್ಯಾಯಾಲಯಗಳು ತಮ್ಮ ಮೇಲ್ವಿಚಾರಣಾ ಅಧಿಕಾರ ವ್ಯಾಪ್ತಿಯನ್ನು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೇಲೂ ಮಾಡಲು ಇದು ಸಕಾಲ ಎಂದು ಕರ್ನಾಟಕ ಹೈಕೋರ್ಟ್ ಪ್ರಕರಣದ ವಿಚಾರಣೆ ವೇಳೆ ಹೇಳಿದೆ. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮವನ್ನು ನಿರ್ವಹಿಸುವ ವ್ಯಕ್ತಿಗಳು “ಸುದ್ದಿ ವರದಿ ಮಾಡುವಾಗ ಅಸಂಸದೀಯ ಅಥವಾ ಮಾನಹಾನಿಕರ ಪದಗಳನ್ನು ಬಳಸುವಾಗ ಅತ್ಯಂತ ಸಂಯಮ ತೋರುವುದು ಅಗತ್ಯವಾಗಿದೆ” ಎಂದು ನ್ಯಾಯಾಲಯವು ಹೇಳಿದೆ.

ಇದನ್ನೂ ಓದಿ: ಧರ್ಮಸ್ಥಳ ಹೆಗ್ಗಡೆ ಪರ ಪ್ರತಿಭಟನೆಯಲ್ಲಿ ಸೌಜನ್ಯ ಕುಟುಂಬ ಸದಸ್ಯರ ಮೇಲೆ ಹಲ್ಲೆಗೆ ಯತ್ನ!

ಸಂಯುಕ್ತ ಕರ್ನಾಟಕ, ಹೊಸ ದಿಗಂತ, ನವೋದಯ ಮತ್ತು ಕಿತ್ತೂರು ಕರ್ನಾಟಕ ಎಂಬ ನಾಲ್ಕು ಕನ್ನಡ ಪತ್ರಿಕೆಗಳ ಸಂಪಾದಕರ ವಿರುದ್ಧ ವಕೀಲರೊಬ್ಬರು ನೀಡಿದ್ದ ದೂರಿನ ಆಧಾರದ ಮೇಲೆ 2012ರಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು. ಈ ಮೊಕದ್ದಮೆಯನ್ನು ಕಳೆದ ವಾರ ರದ್ದುಪಡಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

2012 ರಲ್ಲಿ ಬೆಂಗಳೂರಿನಲ್ಲಿ ವಕೀಲರ ಬಗ್ಗೆ ವರದಿ ಮಾಡುವಾಗ ಪತ್ರಿಕೆಗಳು “ತಾಲಿಬಾನ್” ಮತ್ತು “ಗೂಂಡಾ” ನಂತಹ “ಅಸಂಸದೀಯ” ಭಾಷೆಯನ್ನು ಬಳಸಿದ್ದವು. ಸುದ್ದಿಗಳನ್ನು ಸಿದ್ಧಪಡಿಸುವಾಗ ಯಾರದೆ ಘನತೆಗೆ ಧಕ್ಕೆಯಾಗದಂತೆ ಸಂಯಮವನ್ನು ವಹಿಸುತ್ತೇವೆ ಮತ್ತು ಸುದ್ದಿಯನ್ನು ವರದಿ ಮಾಡುವಾಗ ವಿವೇಕಯುತ ಮನೋಭಾವವನ್ನು ಹೊಂದಿರುತ್ತೇವೆ ಎಂಬ ಒಪ್ಪಂದದ ಜೊತೆಗೆ ಸಂಪಾದಕರು ಬೇಷರತ್ ಕ್ಷಮೆ ಯಾಚಿಸಿದ ನಂತರ ನ್ಯಾಯಾಲಯವು ವಿಚಾರಣೆಯನ್ನು ರದ್ದುಗೊಳಿಸಿತು. ಹೊಸ ದಿಗಂತ 

2012 ರಲ್ಲಿ ಬೆಂಗಳೂರು ನಗರ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಸಂಕೀರ್ಣದ  ಆವರಣದಲ್ಲಿ ವಕೀಲರು, ಮಾಧ್ಯಮ ಸಿಬ್ಬಂದಿ ಮತ್ತು ಪೊಲೀಸರ ನಡುವಿನ ಘರ್ಷಣೆ ಉಂಟಾಗಿತ್ತು. ಈ ವೇಳೆ ನಡೆದ ಹಿಂಸಾಚಾರದ ಕುರಿತು ಶಾಸಕರೊಬ್ಬರು ನೀಡಿದ ಹೇಳಿಕೆಯನ್ನು ಪತ್ರಿಕೆಗಳು ವರದಿ ಮಾಡಿದ್ದವು. ಆದರೆ ವರದಿ ಮಾಡುವಾಗ ಅವಹೇಳನಕಾರಿ ಹೇಳಿಕೆಗಳನ್ನು ಪ್ರಕಟಿಸಿದ ನಾಲ್ಕು ಪತ್ರಿಕೆಗಳ ವಿರುದ್ಧ ಗದಗ ಮೂಲದ ವಕೀಲ ದಾವಲಸಾಬ್ ನದಾಫ್ ಅವರು ಗದಗದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಹೀಗಾಗಿ ಪತ್ರಿಕೆಗಳ ಸಂಪಾದಕರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ವಿಚಾರಣೆಯ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪ:ತನಿಖೆಗೆ ಸಮಿತಿ ರಚನೆ

ಪತ್ರಕರ್ತರು, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಸಾರ್ವಜನಿಕರ ಅಗತ್ಯಗಳನ್ನು ಪೂರೈಸುತ್ತವೆ ಮತ್ತು ಅವರು ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವ ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ಹೈಕೋರ್ಟ್ ಹೇಳಿದೆ. ಜೊತೆಗೆ ಮಾಧ್ಯಮಗಳಲ್ಲಿ ಪ್ರಕಟವಾಗುವ ವರದಿಗಳು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (PCI) ಹೊರಡಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಹೇಳಿದೆ. ಹೊಸ ದಿಗಂತ 

“ನಾಲ್ಕು ಪತ್ರಿಕೆಗಳು ತಮ್ಮ ವರದಿಗಳಲ್ಲಿ ಬಳಸಿರುವ ಪ್ರತಿ ಪದಗಳು ಅಸಹನೀಯವಾಗಿದ್ದು, ಪಿಸಿಐ ಹೊರಡಿಸಿದ ಮಾರ್ಗಸೂಚಿಗಳ ವ್ಯಾಪ್ತಿಯನ್ನು ಮೀರಿವೆ. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಅಥವಾ ಪತ್ರಕರ್ತರು ಪ್ರಜಾಪ್ರಭುತ್ವದ ಫೋರ್ತ್ ಪಿಲ್ಲರ್ ಅನ್ನು ರೂಪಿಸುತ್ತಾರೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಈ ನಿಟ್ಟಿನಲ್ಲಿ ಮಾಧ್ಯಮ ಅತ್ಯಂತ ಕಾಳಜಿ ಮತ್ತು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಪದಗಳನ್ನು ಬಳಸುವಾಗ ಅತ್ಯಂತ ಸಂಯಮವನ್ನು ತೋರಿಸಿ” ಎಂದು ಹೈಕೋರ್ಟ್ ಹೇಳಿದೆ.

ವಿಡಿಯೊ ನೋಡಿ: ವಿರೇಂದ್ರ ಹೆಗ್ಗಡೆ ಪರ ಹೋರಾಟದಲ್ಲಿ” ಸೌಜನ್ಯಳಿಗೆ ನ್ಯಾಯ ಕೊಡಿಸಿ” ಪ್ಲೇಕಾರ್ಡ್‌ ಹಿಡಿದ ಸೌಜನ್ಯ ಕುಟುಂಬದ ಮೇಲೆ ಹಲ್ಲೆ

Donate Janashakthi Media

Leave a Reply

Your email address will not be published. Required fields are marked *