ದೆಹಲಿ ಗಲಭೆ ಪ್ರಕರಣ: ಉಮರ್​ ಖಾಲಿದ್​ಗೆ ಜಾಮೀನು ನಿರಾಕರಣೆ

ದೆಹಲಿ: ದೆಹಲಿ ಗಲಭೆಗೆ ಸಂಬಂಧಿಸಿದಂತೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಉಮರ್ ಖಾಲಿದ್ ವಿರುದ್ಧ ದಾಖಲಾಗಿರುವ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (ಯುಎಪಿಎ) ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಕರ್ಕರ್ಡೂಮಾ ಹೆಚ್ಚುವರಿ ಸೆಷನ್ಸ್ ನ್ಯಾಯಲಯ ಇಂದು(ಮಾ.24) ಜಾಮೀನು ನಿರಾಕರಿಸಿದೆ.

ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯನ್ನು ಬುಧವಾರ(ಮಾ.23) ವಿಚಾರಣೆ ನಡೆಸಲಾಯಿತು, ನಂತರ ನಿರ್ಧಾರವನ್ನು ಗುರುವಾರ(ಮಾ.24)ಕ್ಕೆ ಮುಂದೂಡಲಾಗಿತ್ತು. ಇದೀಗ ನ್ಯಾಯಾಲಯ ಜಾಮೀನು ಅರ್ಜಿಯನ್ನು ನಿರಾಕರಿಸಿ ಆದೇಶ ನೀಡಿದೆ.

ಫೆಬ್ರವರಿ 2020ರ ಸಮಯದಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ರೂವಾರಿ ಎಂದು ಉಮರ್‌ ಖಾಲಿದ್‌ ಮೇಲೆ ಆರೋಪಿಸಲಾಗಿದೆ. ಜಾಮೀನು ಪ್ರಕರಣದ ವಿಚಾರಣೆ ಸುಮಾರು ಎಂಟು ತಿಂಗಳುಗಳ ಕಾಲ ನಡೆದಿತ್ತು. ಹಿರಿಯ ನ್ಯಾಯವಾದಿ ತ್ರಿದೀಪ್ ಪೈಸ್ ಮತ್ತು ರಾಜ್ಯದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್ ಅವರ ಕೆಲವು ಆಸಕ್ತಿದಾಯಕ ವಾದಗಳಿಗೆ ಪ್ರಕರಣ ಸಾಕ್ಷಿಯಾಗಿತ್ತು.

ಇದನ್ನು ಓದಿ: ದೆಹಲಿ ಗಲಭೆ ಪ್ರಕರಣ; ಜೆಎನ್‌ಯು ವಿದ್ಯಾರ್ಥಿ ಮಾಜಿ ಮುಖಂಡ ಉಮರ್‌ ಖಾಲಿದ್‌ ಬಂಧನ

ಉಮರ್​​ ಖಾಲಿದ್​ರನ್ನು 2020ರ ಸೆಪ್ಟೆಂಬರ್ 14ರಂದು ಬಂಧಿಸಲಾಗಿತ್ತು. ಪ್ರಸ್ತುತ ಅವರು ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಕರ್ಕರ್ಡೂಮಾ ಹೆಚ್ಚುವರಿ ಸೆಷನ್ಸ್ ನ್ಯಾಯಲಯದ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಪ್ರಕರಣದ ವಾದವನ್ನು ಆಲಿಸಿದ ನಂತರ ಆದೇಶವನ್ನು ಕಾಯ್ದಿರಿಸಿದ್ದರು. ವಿಚಾರಣೆಯ ವೇಳೆ ಆರೋಪಿಯು ತಮ್ಮ ವಿರುದ್ಧದ ಪ್ರಕರಣವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ಗೆ ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ ಇದೀಗ ನ್ಯಾಯಾಲಯ ಖಾಲಿದ್​ಗೆ ಜಾಮೀನು ನಿರಾಕರಿಸಿದೆ.

ಉಮರ್ ಖಾಲಿದ್ ಪರ ವಾದ ಮಂಡಿಸಿದ ಹಿರಿಯ ವಕೀಲ ತ್ರಿದೀಪ್ ಪೈಸ್ ಪ್ರಕರಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಹಲವಾರು ವ್ಯಕ್ತಿಗಳು ಪ್ರತಿಭಟಿಸಿದ್ದರು. ಪ್ರತಿಭಟನೆ ಜಾತ್ಯತೀತ ಸ್ವರೂಪದ್ದಾಗಿತ್ತು, ಆದರೆ ಆರೋಪಪಟ್ಟಿಯು ಮತೀಯವಾಗಿದೆ. ಅಲ್ಲದೇ ಖಾಲಿದ್ ಭಾಷಣದ ತುಣುಕುಗಳನ್ನು ಕತ್ತರಿಸಿ ತಿರುಚಲಾಗಿದೆ ಎಂದು ಅವರು ಹೇಳಿದ್ದಾರೆ. ಎಂದು ವಾದಿಸಿದ್ದರು. ಆದರೆ ಇದನ್ನು ನಿರಾಕರಿಸಿದ್ದ ರಾಜ್ಯದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್ ಪ್ರಕರಣದಲ್ಲಿ ಮೊದಲು ಶಿಕ್ಷೆಗೊಳಗಾದ ವ್ಯಕ್ತಿ ಹಿಂದೂವೇ ಆಗಿದ್ದಾರೆ ಎಂದು ವಾದಿಸಿದ್ದರು.

ದೆಹಲಿ ಗಲಭೆಯಲ್ಲಿ 53 ಜನರು ಮೃತಪಟ್ಟಿದ್ದರು. ಮತ್ತು 700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ದೆಹಲಿ ಗಲಭೆಗೆ ಪಿತೂರಿ ನಡೆಸಿದ ಪ್ರಕರಣದಲ್ಲಿ 18 ಜನರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಉಮರ್ ಖಾಲಿದ್ ಜತೆಗೆ ಖಾಲಿದ್ ಸೈಫಿ, ಜೆಎನ್‌ಯು ವಿದ್ಯಾರ್ಥಿಗಳಾದ ನತಾಶಾ ನರ್ವಾಲ್ ಮತ್ತು ದೇವಾಂಗನಾ ಕಲಿತಾ, ಜಾಮಿಯಾ ಸಮನ್ವಯ ಸಮಿತಿ ಸದಸ್ಯರಾದ ಸಫೂರ ಜರ್ಗರ್, ಎಎಪಿ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ಮತ್ತು ಹಲವರ ವಿರುದ್ಧವೂ ಕಠಿಣ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದುವರೆಗೆ ಈ ಆರೋಪಿಗಳಲ್ಲಿ 6 ಜನರು ಜಾಮೀನು ಪಡೆದು ಹೊರಬಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *