ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಐದು ವರ್ಷಗಳಿಗೂ ಹೆಚ್ಚು ಕಾಲ ವಿಚಾರಣೆ ಅಥವಾ ಶಿಕ್ಷೆಯಿಲ್ಲದೆ ಜೈಲಿನಲ್ಲಿರಿಸಲ್ಪಟ್ಟಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿರುವುದನ್ನು ಸಿಪಿಐ(ಎಂ) ತೀವ್ರವಾಗಿ ಟೀಕಿಸಿದೆ. ಈ ನಿರ್ಧಾರವನ್ನು ಸಹಜ ನ್ಯಾಯದ ಉಲ್ಲಂಘನೆ ಮತ್ತು ಸ್ವಾತಂತ್ರ್ಯದ ಸಾಂವಿಧಾನಿಕ ಖಾತರಿಗಳು ಮತ್ತು ತ್ವರಿತ ವಿಚಾರಣೆಗೆ ಗಂಭೀರ ಹೊಡೆತ ಎಂದು ಅದು ವರ್ಣಿಸಿದೆ.
ಯುಎಪಿಎಯಂತಹ “ಕರಾಳ” ಕಾನೂನಿನಡಿಯಲ್ಲಿ ವಿಚಾರಣೆಗೆ ಮುಂಚಿನ ದೀರ್ಘಕಾಲದ ಸೆರೆವಾಸವು ‘ಜಾಮೀನು ನಿಯಮ ಮತ್ತು ಜೈಲು ಅಪವಾದ’ ಎಂಬ ಮೂಲಭೂತ ಕಾನೂನು ತತ್ವವನ್ನು ದುರ್ಬಲಗೊಳಿಸುತ್ತದೆ ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ. ಭಿನ್ನಾಭಿಪ್ರಾಯದ ಧ್ವನಿಗಳ ವಿರುದ್ಧ ಯುಎಪಿಎಯನ್ನು ನಿರಂತರವಾಗಿ ಬಳಸುವುದು ದಬ್ಬಾಳಿಕೆ ಮತ್ತು ಆಯ್ದ ಕೆಲವರಿಗಷ್ಟೇ ನ್ಯಾಯದ ಕಳವಳಕಾರಿ ವಿಧಾನವನ್ನು ಬಿಂಬಿಸುತ್ತದೆ ಎಂದು ಆರೋಪಿಸಿಸುತ್ತ ಎಲ್ಲಾ ರಾಜಕೀಯ ಕೈದಿಗಳ ಬಿಡುಗಡೆ ಮಾಡಬೇಕೆಂಬ ತನ್ನ ಬೇಡಿಕೆಯನ್ನು ಅದು ಪುನರುಚ್ಚರಿಸಿದೆ.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂಎ ಬೇಬಿ ಈ ತೀರ್ಪನ್ನು ತೀವ್ರವಾಗಿ ಟೀಕಿಸುತ್ತ ಇದು “ಆಘಾತಕಾರಿ” ಮತ್ತು “ನ್ಯಾಯದ ಅಣಕ” ಎಂದು ಬಣ್ಣಿಸಿದ್ದಾರೆ. ಬಂಧನವನ್ನು ಮುಂದುವರೆಸುತ್ತಲೇ ಇರುವುದು, ಅದಕ್ಕೆ ಸಂವಿಧಾನದಲ್ಲಿ ಅನುಮತಿಯಿಲ್ಲ ಎಂಬುದನ್ನು ದಾಟಿಲ್ಲ ಎಂಬ ನ್ಯಾಯಾಲಯದ ಅಭಿಪ್ರಾಯವನ್ನು ಉಲ್ಲೇಖಿಸಿದ ಬೇಬಿ, ವಿಚಾರಣೆಯ ಯಾವುದೇ ನಿರೀಕ್ಷೆಯಿಲ್ಲದೆ ಐದು ವರ್ಷಗಳ ಕಾಲ ಜೈಲಿನಲ್ಲಿ ಕೊಳೆಯುವುದನ್ನು ಸಾಂವಿಧಾನಿಕವೆಂದು ಪರಿಗಣಿಸಬಹುದೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು | ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳ ತೆರವು ಕೇಸ್ – ಜ.22ಕ್ಕೆ ವಿಚಾರಣೆ
ಭಿನ್ನಾಭಿಪ್ರಾಯದ ದನಿಗಳನ್ನು ಅಡಗಿಸುವ ಗುರಿಯನ್ನು ಹೊಂದಿರುವ ಬಿಜೆಪಿ ಸರ್ಕಾರದ ದಮನಕಾರಿ ತಂತ್ರಗಳಿಗೆ ಈ ತೀರ್ಪು ಅವಕಾಶ ಮಾಡಿಕೊಡುವಂತದ್ದಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.
ಇದಕ್ಕೆ ವ್ಯತಿರಿಕ್ತತೆವಾಗಿ, ಶಿಕ್ಷೆಗೊಳಗಾದ ಅತ್ಯಾಚಾರಿ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಅದೇ ದಿನ ಮತ್ತೊಮ್ಮೆ ಪೆರೋಲ್ ನೀಡಲಾಗಿದೆ ಎಂಬ ಸುದ್ದಿಯತ್ತ ಗಮನಸೆಳೆದರು. 2017 ರಲ್ಲಿ ಶಿಕ್ಷೆಗೊಳಗಾದ ನಂತರ ಆತ ಅದೇ ದಿನ 15 ನೇ ಬಾರಿ ಪೆರೋಲ್‌ನಲ್ಲಿ ಇಂದು ಜೈಲಿನಿಂದ ಹೊರಬಂದಿರುವುದು ನಾಚಿಕೆಗೇಡಿನ ಸಂಗತಿ ,ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಬೇಬಿ ಹೇಳಿದರು.
ದಿಲ್ಲಿ ಗಲಭೆಗಳಲ್ಲಿ ಆರೋಪಿಗಳೆಂದು ಜೈಲಿನಲ್ಲಿರುವ ಐವರು ಕಾರ್ಯಕರ್ತರಿಗೆ ಜಾಮೀನು ನೀಡಿರುವುದು ಸ್ವಾಗತಾರ್ಹ , ಇದನ್ನು ಈ ಹಿಂದೆಯೇ ಮಾಡಬೇಕಿತ್ತು ಎಂದು ಹಿರಿಯ ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಪಿಟಿಐನೊಂದಿಗೆ ಮಾತನಾಡುತ್ತ ಹೇಳಿದ್ದಾರೆ. ಆದರೆ ಉಳಿದ ಇಬ್ಬರಿಗೆ ಜಾಮೀನು ನಿರಾಕರಿಸಿರುವುದು ದುರದೃಷ್ಟಕರ ಮತ್ತು ನಿರಾಶಾದಾಯಕ ಸಂಗತಿ ಎಂದು ಅವರು ಖೇದ ವ್ಯಕ್ತಪಡಿಸಿದ್ದಾರೆ. ಅವರನ್ನು ಬೇರೆಯೇ ದರ್ಜೆಗೆ ಸೇರಿಸಿ ಜಾಮೀನು ನಿರಾಕರಿಸಿರುವುದು ಸಕ್ರಿಯ ಕಾರ್ಯಕರ್ತರನ್ನು ರಕ್ಕಸರೆಂಬಂತೆ ತೋರಿಸಿದಂತಾಗುತ್ತದೆ, ಸರ್ವೋಚ್ಚ ನ್ಯಾಯಾಲಯದಿಂದ ಇದಕ್ಕಿಂತ ಉತ್ತಮವಾದುದನ್ನು ನಾವು ನಿರೀಕ್ಷಿಸಿದ್ದೆವು ಎಂದು ಅವರು ಹೇಳಿದ್ದಾರೆ.
ಇದನ್ನೂ ನೋಡಿ: ವೆನೆಜುವೇಲಾದ ಮೇಲೆ ಯುದ್ದ ಹೂಡಿದರೆ ,ಯು.ಎಸ್ ಗೆ ಅದು ಇನ್ನೊಂದು ವಿಯೇಟ್ನಾಂ ಆಗುತ್ತದೆ! ಇರಾಕ್, ಲಿಬ್ಯ ಅಲ್ಲ !
