ಮುಡಿಪು: ನಾಲ್ಕೈದು ಖಾಸಗಿ ಮೆಡಿಕಲ್ ಕಾಲೇಜುಗಳಿರುವ ಉಳ್ಳಾಲ ತಾಲೂಕಲ್ಲಿ ವೈದ್ಯಕೀಯ ಅಧಿನಿಯಮದ ಪ್ರಕಾರ ಒಂದು ಸರಕಾರಿ ತಾಲೂಕು ಆಸ್ಪತ್ರೆ ನಿರ್ಮಿಸಲು ಸಾಧ್ಯವಾಗದಿರೋದು ಸ್ಥಳೀಯ ಶಾಸಕರ ಇಚ್ಛಾಶಕ್ತಿಯ ಕೊರತೆ. ಜನಪ್ರತಿನಿಧಿಯ ಬೇಜವಾಬ್ದಾರಿ ನಡೆಯಿಂದ ತಾಲೂಕಿನ ಜನತೆ ಸರಕಾರಿ ಆಸ್ಪತ್ರೆಗಳಿಂದ ವಂಚಿತರಾಗಿದ್ದಾರೆ. ಉಳ್ಳಾಲದಲ್ಲಿ ಸರಕಾರಿ ತಾಲೂಕು ಆಸ್ಪತ್ರೆ ನಿರ್ಮಿಸಲು ಇನ್ನೆಷ್ಟು ಸಮಯ ಬೇಕೆಂದು ಶಾಸಕರು ಉತ್ತರಿಸಲಿ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಡಿವೈಎಫ್ಐ ಮುಡಿಪು ವಲಯ ಸಮಿತಿ ನೇತೃತ್ವದಲ್ಲಿ ಉಳ್ಳಾಲದಲ್ಲಿ 100 ಬೆಡ್ ಗಳ ತಾಲೂಕು ಆಸ್ಪತ್ರೆಗಳ ಸಹಿತ ಮುಡಿಪುಗೆ ಸಮುದಾಯ ಆಸ್ಪತ್ರೆ ಸಹಿತ ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಗೂ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು, ಕಿದ್ವಾಯಿ, ಜಯದೇವ ಸರಕಾರಿ ಆಸ್ಪತ್ರೆಗಳ ಘಟಕಗಳನ್ನು ಸ್ಥಾಪಿಸಲು ಆಗ್ರಹಿಸಿದರು.
ಸರಕಾರಿ ಆಸ್ಪತ್ರೆಯ ಕಡೆಗಣನೆಯಿಂದ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಯ ಹೆಸರಲ್ಲಿ ಜನಸಾಮಾನ್ಯರ ಸುಲಿಗೆ ನಡೆಸುತ್ತಿದೆ. ಸಣ್ಣ ಪುಟ್ಟ ರೋಗಗಳಿಗೂ ಅನಗತ್ಯ ಪರೀಕ್ಷೆ ನಡೆಸುವುದಲ್ಲದೇ ಒಂದೇ ಬಗೆಯ ಚಿಕಿತ್ಸೆಗೆ ನಗರದ ಖಾಸಗೀ ಆಸ್ಪತ್ರೆಗಳೆಲ್ಲವೂ ವಿಧ ವಿಧ ದರಗಳನ್ನು ವಿಧಿಸುತ್ತಿರುವುದು ಸರಕಾರದ ವೈದ್ಯಕೀಯ ಅಧಿನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ. ಜಿಲ್ಲೆಯಲ್ಲಿ ಆರೋಗ್ಯ ಸೇವಾ ನಿಯಂತ್ರಣ ಪ್ರಾಧಿಕಾರವನ್ನು ಜಿಲ್ಲಾಡಳಿತ ಈವೆರೆಗೂ ರಚಿಸಿಲ್ಲ ಅಲ್ಲದೇ ಒಂದೇ ಒಂದು ಸಭೆ ಕರೆಯದೆ ಖಾಸಗೀ ಆಸ್ಪತ್ರೆಗಳ ಪರವಾದ ನೀತಿಯನ್ನು ಅನುಸರಿಸಿರೋದು ಡಿವೈಎಫ್ಐ ಖಂಡಿಸುತ್ತದೆ ಎಂದರು.
ಇದನ್ನೂ ಓದಿ : ಆನೇಕಲ್| ರಸ್ತೆ ಗುಂಡಿಗಳನ್ನು ಮುಚ್ಚಬೇಕೆಂದು ಒತ್ತಾಯಿಸಿ ಪ್ರತಿಭಟನೆ
ಜಿಲ್ಲೆಯಲ್ಲಿರುವ ಸರಕಾರಿ ಆಸ್ಪತ್ರೆಗಳು ನುರಿತ ವೈದ್ಯರ ಸಹಿತ ಎಲ್ಲಾ ಬಗೆಯ ಮೂಲಭೂತ ಸೌಕರ್ಯಗಳಿಂದ ವಂಚನೆಗೊಳಗಾಗಿದೆ. ಒಮ್ಮೆ ಅಂಕೆಸಂಖ್ಯೆಗಳನ್ನು ಗಮನಿಸಿದರೆ ಒಟ್ಟು ಜಿಲ್ಲೆಯಲ್ಲಿ 541 ಸರಕಾರಿ ಆಸ್ಪತ್ರೆಗಳಿವೆ ಅವುಗಳಲ್ಲಿ ಪ್ರಾಥಮಿಕ ಆರೋಗ್ಯ ಉಪಕೇಂದ್ರಗಳಿಂದ ಹಿಡಿದು ಜಿಲ್ಲಾಸ್ಪತ್ರೆಗಳ ವರೆಗೂ ಸೇರಿವೆ. ಇಷ್ಟು ಆಸ್ಪತ್ರೆಗಳಲ್ಲಿ ಸರಕಾರಿ ವೈದ್ಯರಿರೋದು ಕೇವಲ 141 ಅಷ್ಟೇ. ಇಷ್ಟೊಂದು ಅಗಾಧ ಪ್ರಮಾಣದಲ್ಲಿ ವೈದ್ಯರ ಕೊರತೆಗಳು ಸರಕಾರಿ ಆಸ್ಪತ್ರೆಗಳಲ್ಲಿವೆ ಅದೂ ಕೂಡ ಪ್ರತೀ ವರುಷ 12864 ವೈದ್ಯರನ್ನು ಸೃಷ್ಟಿ ಮಾಡುವ ಜಿಲ್ಲೆಯಲ್ಲಿ ಎಂತಹ ದುರಂತ ಅಲ್ಲವೇ ಎಂದರು. ಆಳುವ ಸರಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಜಿಲ್ಲೆಯಲ್ಲಿ ಹೆಚ್ಚೆಚ್ಚು ಸರಕಾರಿ ಆಸ್ಪತ್ರೆಗಳನ್ನು ಸ್ಥಾಪಿಸಿ ಇರುವ ಆಸ್ಪತ್ರೆಗಳಿಗೆ ಮೂಲಭೂತ ಸೌಕರ್ಯಗಳ ಒದಗಿಸಿಕೊಡಬೇಕು. ಪಿಪಿಪಿ ಮಾದರಿಯನ್ನು ಕೈಬಿಡಬೇಕೆಂದು ಆಗ್ರಹಿಸಿದರು.
ದ.ಕ ಜಿಲ್ಲೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸರಕಾರಿ ಆಸ್ಪತ್ರೆಗಳು ಸ್ಥಾಪನೆಗೊಳ್ಳಲೇ ಬೇಕು. ಪ್ರತೀ ತಾಲೂಕಿಗೆ ತಾಲೂಕು ಆಸ್ಪತ್ರೆ ಸಹಿತ ಸರಕಾರ ಕ್ಯಾನ್ಸರ್ ಚಿಕಿತ್ಸೆಗೆ ಕಿದ್ವಾಯಿ, ಹೃದ್ರೋಗ ಕಾಯಿಲೆಗೆ ಜಯದೇವ ಆಸ್ಪತ್ರೆ ಘಟಕಗಳನ್ನು ಈ ಜಿಲ್ಲೆಯಲ್ಲೂ ಕೂಡಲೇ ಸ್ಥಾಪಿಸಲು ಕ್ರಮಕೈಗೊಳ್ಳಬೇಕು ಹಾಗು ಸರಕಾರಿ ಮೆಡಿಕಲ್ ಕಾಲೇಜು ಪ್ರಾರಂಭಿಸಬೇಕೆಂದು ಡಿವೈಎಫ್ಐ ಒತ್ತಾಯಿಸುತ್ತದೆ ಎಂದು ತಿಳಿಸಿದರು.
ಡಿವೈಎಫ್ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಜ್ವಾನ್ ಹರೇಕಳ ಮಾತನಾಡಿ ಬಡವರ ಮನೆಯ ಮಕ್ಕಳಿಗೆ ವೈದ್ಯರಾಗಲು ಕನಿಷ್ಟ ಸರಕಾರಿ ಮೆಡಿಕಲ್ ಕಾಲೇಜು ಪ್ರಾರಂಭಿಸಲು ಈವರೆಗೂ ಸಾಧ್ಯವಾಗಿಲ್ಲ. ಉಳ್ಳಾಲದಲ್ಲಿ ಸರಕಾರಿ ತಾಲೂಕು ಆಸ್ಪತ್ರೆ ಆಗುವವರೆಗೂ ಡಿವೈಎಫ್ಐ ಚಳುವಳಿ ತೀವೃಗೊಳ್ಳಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಉಳ್ಳಾಲ ತಾಲೂಕು ಉಪಾಧ್ಯಕ್ಷ ಅಶ್ರಫ್ ಹರೇಕಳ,ಮುಖಂಡರಾದ ರಫೀಕ್ ಹರೇಕಳ,ಬಶೀರ್ ಲಚ್ಚಿಲ್,ಇಬ್ರಾಹಿಂ ಮದಕ,ನೌಶಾದ್ ಕುರ್ನಾಡು,ಇರ್ಫಾನ್ ಇರಾ,ಫಾರೂಕ್ ಕೊಣಾಜೆ, ರಝಾಕ್ ಮುಡಿಪು ಅಬೂಬಕರ್ ಜಲ್ಲಿ ಭಾಗವಹಿಸಿದರು.
ಇದನ್ನೂ ನೋಡಿ : ಸರಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸರಕಾರ | ತಳ ಸಮುದಾಯಕ್ಕೆ ಎಸಗುತ್ತಿರುವ ದ್ರೋಹ Janashakthi Media
