ಮಂಗಳೂರು : ಎಮ್ಎಸ್ಇಝಡ್ ನ ಶ್ರೀ ಉಲ್ಕಾ ಮೀನು ಸಂಸ್ಕರಣಾ ಘಟಕದಲ್ಲಿ ದುರಂತ ನಡೆಯಲು ಸತತವಾಗಿ ನಡೆಯುತ್ತಿರುವ ನಿರ್ಲಕ್ಷ್ಯವೆ ಕಾರಣ. ವಲಸೆ ಕಾರ್ಮಿಕರ ನಿರ್ಲಜ್ಜ ಶೋಷಣೆ, ಎಸ್ಇಝಡ್ ಅಧಿಕಾರಿಗಳು, ಹಾಗೂ ಜಿಲ್ಲಾಡಳಿತದ ಸತತ ನಿರ್ಲಕ್ಷ್ಯಗಳಿದಾಗಿ ಇಂದು ಐದು ಬಡ ಕಾರ್ಮಿಕರು ಪ್ರಾಣಕಳೆದುಕೊಳ್ಳುವಂತಾಗಿದೆ. ಬಲಿಪಶು ಕುಟುಂಬಗಳಿಗೆ ತಲಾ ಐವತ್ತು ಲಕ್ಷ ಪರಿಹಾರ ಒದಗಿಸಬೇಕು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಸಮಗ್ರ ತನಿಖೆ ನಡೆಸಬೇಕು ಹಾಗೂ ಸತತ ದೂರುಗಳ ಹೊರತಾಗಿಯೂ ಕ್ರಮ ಕೈಗೊಳ್ಳದ ಜಿಲ್ಲಾಡಳಿತ, ಜನಪ್ರತಿನಿಧಿಗಳು ದುರಂತದ ಹೊಣೆ ಹೊತ್ತುಕೊಳ್ಳಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
ಸ್ಥಳೀಯ ಯುವಜನರಿಗೆ ಉದ್ಯೋಗದ ಭರವಸೆಯೊಂದಿಗೆ ನೆಲೆಯೂರಿದ ಮಂಗಳೂರು ಎಸ್ಇಝಡ್ ದುಡಿಸಿದ್ದು ಮಾತ್ರ ಉತ್ತರ ಭಾರತ, ಈಶಾನ್ಯ ಭಾರತದ ಅಗ್ಗದ ಕಾರ್ಮಿಕರನ್ನು. ಯಾವುದೇ ರೀತಿಯ ಉದ್ಯೋಗ ಭದ್ರತೆ, ಸವಲತ್ತುಗಳನ್ನು ಒದಗಿಸದೆ, ಗುತ್ತಿಗೆದಾರರ ಮೂಲಕ ದೂರದ ರಾಜ್ಯದ ಕಾರ್ಮಿಕರನ್ನು ಕರೆತರುವುದು, ಖಾಸಗಿ ಕಟ್ಟಡಗಳಲ್ಲಿ ಕೂಡಿ ಹಾಕಿ ಅವರ ಸ್ವಾತಂತ್ರ್ಯ ಕಸಿದು ಜೀತದಾಳುಗಳಂತೆ ದುಡಿಸುವುದು ಇಲ್ಲಿನ ಉದ್ಯಮಗಳಲ್ಲಿ ಮಾಮೂಲಿ. ಎಷ್ಟೋ ಸಂದರ್ಭದಲ್ಲಿ ದುಡಿಮೆ ಮುಗಿದ ಮೇಲೆ ಕಾರ್ಮಿಕರಿಗೆ ಗುತ್ತಿಗೆದಾರರು ವೇತನ ಪಾವತಿಸದೆ ಬರಿಗೈಯಲ್ಲಿ ಊರಿಗೆ ಮರಳಿಸಿದ ದೂರುಗಳೂ ಇವೆ. ಸ್ಥಳೀಯ ಯುವಜನರಿಗೆ ಉದ್ಯೋಗ ಒದಗಿಸಿದರೆ ನಿರ್ಲಕ್ಷ್ಯ, ಕಡಿಮೆ ವೇತನ, ವಂಚನೆಗಳು ಬಯಲಾಗುವುದರಿಂದ ಸ್ಥಳೀಯರನ್ನು ಉದ್ದೇಶಪೂರ್ವಕವಾಗಿ ಹೊರಗಿಡಲಾಗುತ್ತಿದೆ.
ಇಷ್ಟಲ್ಲದೆ ಸುರಕ್ಷತೆ, ಮಾಲಿನ್ಯ ನಿಯಂತ್ರಣದ ಕ್ರಮಗಳನ್ನು ಎಸ್ ಇಝಡ್, ಎಮ್ಆರ್ ಪಿಎಲ್ ನಂತಹ ಕಂಪೆನಿಗಳು ಪೂರ್ತಿಗಾಳಿಗೆ ತೂರಿವೆ. ಇತ್ತೀಚೆಗೆ ಮಂಗಳೂರು ನಗರ ಪೂರ್ತಿ ಹಬ್ಬಿದ್ದ ಅನಿಲ ಸೋರಿಕೆಯ ಆತಂಕದ ವಾತಾವರಣ ಎಸ್ಇಝಡ್, ಎಮ್ಆರ್ ಪಿಎಲ್ ಸುತ್ತಮುತ್ತ ಪ್ರತಿ ದಿನ ಅನುಭವಕ್ಕೆ ಬರುತ್ತದೆ. ಈ ಕುರಿತು ಸತತ ದೂರುಗಳ ಹೊರತಾಗಿಯೂ ಯಾವುದೇ ಕ್ರಮಗಳು ಜಾರಿಯಾಗಿಲ್ಲ. ಎಸ್ಇಝಡ್ ಗೆ ಸಂಬಂಧ ಪಟ್ಟ ವಿಶೇಷ ಡೆಪ್ಯೂಟಿ ಕಮೀಷನರ್ (ಡಿಸಿ), ಕಾರ್ಮಿಕ ಅಧಿಕಾರಿಗಳು, ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ, ಫ್ಯಾಕ್ಟರಿ ಹಾಗು ಬಾಯ್ಲರ್ ಇಲಾಖೆಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಉದ್ದೇಶ ಪೂರ್ವಕ ನಿರ್ಲಕ್ಷ್ಯ ವಹಿಸಿರುವುದು ಇಂದಿನ ದುರಂತ ಹಾಗೂ ಐದು ಜನ ವಲಸೆ ಕಾರ್ಮಿಕರ ದಾರುಣ ಸಾವಿಗೆ ಕಾರಣ. ಜಿಲ್ಲಾಡಳಿತ, ಜನಪ್ರತಿನಿಧಿಗಳು ಈ ಕುರಿತಾದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ್ದರೆ ಇಂತಹ ಅವಘಡಗಳನ್ನು ತಪ್ಪಿಸಬಹುದಿತ್ತು. ಈಗ ಆಗಿರುವ ಅನಾಹುತದಿಂದ ಎಚ್ಚೆತ್ತುಕೊಂಡು ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಜಿಲ್ಲೆಯಲ್ಲಿ ಭೋಪಾಲ್ ಮಾದರಿಯ ದುರಂತ ನಡೆದರೂ ಅಚ್ಚರಿ ಇಲ್ಲ ಎಂದು ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.