ಉಕ್ರೇನ್ ಯುದ್ಧದ ಕುರಿತ ಪ್ರಶ್ನೆ- 3. ಉಕ್ರೇನ್ ಬಿಕ್ಕಟ್ಟು ಯುದ್ಧಕ್ಕೆ ಎಡೆ ಮಾಡಿಕೊಟ್ಟ ತಕ್ಷಣದ ಕಾರಣಗಳೇನು?

ಉಕ್ರೇನಿನಲ್ಲಿ ರಷ್ಯಾದ  ಅನಿರೀಕ್ಷಿತ ಮಿಲಿಟರಿ ದಾಳಿಯ ನಂತರ ಹಲವು ಪ್ರಶ್ನೆಗಳು ಎದ್ದಿವೆ. ದಾಳಿಯ ನಂತರ ಉಕ್ರೇನಿನಲ್ಲಿ ಸ್ಥಿತಿ ಏನಿದೆ? ಉಕ್ರೇನ್ ಬಿಕ್ಕಟ್ಟಿನ ಚಾರಿತ್ರಿಕ, ರಾಜಕೀಯ ಹಿನ್ನೆಲೆ ಏನು? ಬಿಕ್ಕಟ್ಟು ಯುದ್ಧಕ್ಕೆ ಎಡೆ ಮಾಡಿಕೊಟ್ಟ ತಕ್ಷಣದ ಕಾರಣಗಳೇನು? ಬಿಕ್ಕಟ್ಟಿಗೆ ರಾಜತಾಂತ್ರಿಕ ಪರಿಹಾರಗಳು ಇರಲಿಲ್ಲವೇ? ? ನಾಟೋ ಕೂಟದ ಸದಸ್ಯತ್ವದ ಪ್ರಶ್ನೆ ಯಾಕೆ ಇಷ್ಟು ವಿವಾದಾಸ್ಪದವಾಗಿದೆ ? ಈ ಯುದ್ಧದ ಕುರಿತು ಭಾರತ ಸರಕಾರದ ನಿಲುವು ಸರಿಯೆ? ಯುದ್ಧಕ್ಕೆ ಎಂತಹ ಅಂತರ್ರಾಷ್ಟ್ರೀಯ  ಪ್ರತಿಕ್ರಿಯೆ ಬಂದಿದೆ ? ಯುದ್ಧದ ತಕ್ಷಣದ ಪರಿಣಾಮಗಳೇನು ? ಯುದ್ಧ ನಿಲ್ಲಿಸಲು ನಡೆದಿರುವ ಅಂತರ್ರಾಷ್ಟ್ರೀಯ ಪ್ರಯತ್ನಗಳೇನು ? ಯುದ್ಧ ಇನ್ನೂ ಮುಂದುವರೆದರೆ ಭಾರತದ ಮತ್ತು ಅಂತರ್ರಾಷ್ಟ್ರೀಯ ಪರಿಸ್ಥಿತಿ ಮೇಲೆ ಯಾವ ದೂರಗಾಮಿ ಪರಿಣಾಮ ಬೀರಬಹುದು ? – ಈ  ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಸರಣಿಯಲ್ಲಿ ಕೊಡಲಾಗುವುದು.

ವಸಂತರಾಜ ಎನ್.ಕೆ

  1. ಉಕ್ರೇನ್ ಬಿಕ್ಕಟ್ಟು ಯುದ್ಧಕ್ಕೆ ಎಡೆ ಮಾಡಿಕೊಟ್ಟ ತಕ್ಷಣದ ಕಾರಣಗಳೇನು?

ಉಕ್ರೇನಿನಲ್ಲಿ ಯು.ಎಸ್ ಕೈಗೊಂಬೆ ಸರಕಾರ ಸ್ಥಾಪಿಸಿ ರಶ್ಯಾವನ್ನು ನಾಟೋ ಮಿಲಿಟರಿ ಕೂಟದ ದೇಶಗಳಿಂದ ಸುತ್ತುವರೆಯುವಿಕೆಯನ್ನು ಪೂರ್ಣಗೊಳಿಸುವ ಹುನ್ನಾರವನ್ನು ಮೊದಲಿನಿಂದಲೂ ಮಾಡಿದೆ. ಇದಕ್ಕಾಗಿ ಹಿಂದೆ ಹಲವು ಪ್ರಯತ್ನಗಳನ್ನು ನಡೆಸಿತ್ತು. ಉಕ್ರೇನ್ ಮತ್ತು ರಶ್ಯಾ ನಡುವೆ ಘನಿಷ್ಟ ಸಂಬಂಧವಿದ್ದು 2014 ರ ವರೆಗೆ ಯು.ಎಸ್ ಗೆ ಕೈಗೊಂಬೆ ಸರಕಾರ ಸ್ಥಾಪಿಸುವುದು ಸಾಧ‍್ಯವಾಗಲಿಲ್ಲ. 2014ರ ಹೊತ್ತಿಗೆ ಯುಕ್ರೇನ್ ಗೆ ಆರ್ಥಿಕ ನೆರವು ಬೇಕಿದ್ದು, ಅದನ್ನು ಯುರೋ ಕೂಟ ದ ಮೂಲಕ ಐ.ಎಂ.ಎಫ್ ನಿಂದ ಪಡೆಯುವುದೇ ಅಥವಾ ರಶ್ಯಾದಿಂದ ಪಡೆಯುವುದೇ ಎಂಬುದು ವಿವಾದಾಸ್ಪದ ವಿಷಯವಾಗಿತ್ತು.

ಆಗ ಉಕ್ರೇನಿನ ಚುನಾಯಿತ ಅಧ‍್ಯಕ್ಷನಾಗಿದ್ದ ಯಾಕುನೆವಿಚ್ ಸರಕಾರ ರಶ್ಯನ್ ನೆರವು ಪಡೆಯಲು ನಿರ್ಧರಿಸಿದಾಗ ಅದರ ವಿರುದ್ಧ ಚಳುವಳಿಯನ್ನು ಯು.ಎಸ್ ಬೆಂಬಲಿತ ಎನ್.ಜಿ.ಒ ಗಳ ನೆರವಿನಿಂದ ಸಂಘಟಿಸಲಾಯಿತು. ಈ ಚಳುವಳಿಯನ್ನು ಮುಂದಿಟ್ಟುಕೊಂಡು ತೀವ್ರ ಹಿಂಸಾತ್ಮಕ ಸಂಘರ್ಷಗಳನ್ನು ನವ-ನಾಜಿ ಸಂಘಟನೆಗಳು ಯು.ಎಸ್ ಕುಮ್ಮಕ್ಕಿನೊಂದಿಗೆ ನಡೆಸಿದವು. ಕೊನೆಗೂ ಚುನಾಯಿತ ಯಾಕುನೆವಿಚ್ ಸರಕಾರವನ್ನು ಕ್ಷಿಪ್ರಕ್ರಾಂತಿ ಮೂಲಕ ಉರುಳಿಸಿ ಬಲಪಂಥೀಯ ಉಗ್ರರಾಷ್ಟ್ರವಾದಿಗಳು ಮತ್ತು ನವ-ನಾಜಿ ಗುಂಪುಗಳನ್ನು ಅಧಿಕಾರಕ್ಕೆ ತರಲಾಯಿತು.

ಇದನ್ನೂ ಓದಿ : ಉಕ್ರೇನ್ ಯುದ್ಧದ ಕುರಿತ ಪ್ರಶ್ನೆಗಳು -1 ಉಕ್ರೇನಿನಲ್ಲಿ ರಷ್ಯಾ ಮಿಲಿಟರಿ ದಾಳಿಯ ನಂತರ ಸ್ಥಿತಿ ಏನಿದೆ?

ಆ ನಂತರದ ಅವಧಿಯಲ್ಲಿ ರಶ್ಯನ್ ಅಲ್ಪಸಂಖ‍್ಯಾತರ, ಅವರ ಹಕ್ಕುಗಳ ಮೇಲೆ ತೀವ್ರ ದಾಳಿಗಳು ನಡೆದವು. ಅಲ್ಪಸಂಖ್ಯಾತರ ಭಾಷೆಯ ಶಿಕ್ಷಣ ಸಂಸ್ಥೆಗಳು, ಮಾಧ್ಯಮಗಳನ್ನು ಮುಚ್ಚಲಾಯಿತು. ಕಮ್ಯುನಿಸ್ಟ್ ಮತ್ತಿತರ ಪ್ರಜಾಸತ್ತಾತ್ಮಕ ವಿರೋಧ ಪಕ್ಷಗಳನ್ನು ದಮನ ಮಾಡಲಾಯಿತು. ರಶ್ಯನ್ ಅಲ್ಪಸಂಖ‍್ಯಾತರು ದಾಳಿ ತಡೆಯಲಾರದೆ ರಶ್ಯ ಕಡೆ ನಿರಾಶ್ರಿತರಾಗಿ ಓಡಲು ಆರಂಭಿಸಿದರು. ಈ ಕಾರಣ ಮುಂದಿಟ್ಟು ರಶ್ಯನ್ ಪಡೆಗಳು ಕ್ರಿಮಿಯ ವನ್ನು ‘ವಿಮೋಚನೆ’ಗೊಳಿಸಿದವು. ದೊಂಬಾಸ್ ಪ್ರದೇಶದಲ್ಲಿ ಸ್ಥಳೀಯ ರಶ್ಯನ್ ಗೆರಿಲ್ಲಾ ಪಡೆಗಳ ಉಕ್ರೇನ್ ಸೈನ್ಯದ ವಿರುದ್ಧದ ಹೋರಾಟದಲ್ಲಿ ನೆರವು ನೀಡಿದವು.

ಆ ನಂತರ ಫ್ರಾನ್ಸ್, ಜರ್ಮನಿ, ರಶ್ಯಾ, ಉಕ್ರೇನ್ ಗಳ ಶೃಂಗಸಭೆ ಬೆಲೊರಸ್ ರಾಜಧಾನಿ ಮಿನ್ಸ್ಕ್ ನಲ್ಲಿ ನಡೆದು ಕದನ ನಿಲುಗಡೆಯಾಯಿತು. ಇದನ್ನು ಮಿನ್ಸ್ಕ್ ಒಪ್ಪಂದ ಎಂದು ಕರೆಯಲಾಗುತ್ತದೆ. ಈ ಒಪ್ಪಂದದ ಪ್ರಕಾರ ರಶ್ಯನ್ ಮತ್ತಿತರ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ, ಪೂರ್ವ ಉಕ್ರೇನಿನ ಪ್ರಾಂತಗಳಿಗೆ ಸ್ವಾಯತ್ತ ಅಧಿಕಾರ ಇತ್ಯಾದಿ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು. ಆದರೆ ಈ ಒಪ್ಪಂದವನ್ನು ಜಾರಿ ಮಾಡಲು ಉಕ್ರೇನ್ ಸರಕಾರ ಯಾವುದೇ ಆಸಕ್ತಿ ತೋರಿಸಲಿಲ್ಲ. ಈಗಿನ ಝೆಲೆನ್ಸ್ಕಿ ಸರಕಾರವಂತೂ ಮಿನ್ಸ್ಕ್ ಒಪ್ಪಂದಕ್ಕೂ ತನಗೂ ಸಂಬಂಧವೇ ಇಲ್ಲವೋ ಎಂಬಂತೆ ನಡೆದುಕೊಂಡಿತು. ಇದರ ಜಾರಿಗೆ ಒತ್ತಡ ಹಾಕಬೇಕಿದ್ದ ಫ್ರಾನ್ಸ್, ಜರ್ಮನಿ, ಕಿರುಬೆರಳನ್ನೂ ಎತ್ತಲಿಲ್ಲ. ಪೂರ್ವ ಪ್ರಾಂತಗಳಲ್ಲಿರುವ  ರಶ್ಯನ್ ಅಲ್ಪಸಂಖ್ಯಾತರ ಮೇಲೆ ಮಿಲಿಟರಿ ಮತ್ತು ನವನಾಜಿ ಪಡೆಗಳ ದಾಳಿಗಳು ಮುಂದುವರೆದವು. 2014ರಿಂದಲೇ ಮಿಲಿಟರಿ ಸೇರಿದಂತೆ ಎಲ್ಲ ವಿಷಯಗಳಲ್ಲಿ ಸಲಹೆಗಾರರ ರೂಪದಲ್ಲಿ ಯು.ಎಸ್, ಮೂಗು ತೂರಿಸುತ್ತಿದೆ. ಉಕ್ರೇನ್ ನಾಟೋದ ಭಾಗವಾಗಿ ಅತ್ಯಾಧುನಿಕ ಕ್ಷಿಪಣಿಗಳನ್ನು ರಶ್ಯಾ ಗಡಿಗಳಲ್ಲಿ ಸ್ಥಾಪಿಸಿದರೆ, ಮಾಸ್ಕೋ ವನ್ನು ಕ್ಷಿಪಣಿಗಳು ಕೇವಲ 5 ನಿಮಿಷದಲ್ಲಿ ಮುಟ್ಟಬಹುದು. ಇಷ್ಟು ಕಡಿಮೆ ಸಮಯದಲ್ಲಿ ಯಾವುದೇ ಪ್ರತಿದಾಳಿ ಅಥವಾ ರಕ್ಷಣೆ ಸಾಧ್ಯವಿಲ್ಲ. ಹಾಗಾಗಿ ಇದು ದೇಶದ ಭದ್ರತೆಯ ಪ್ರಶ್ನೆ. ಇದನ್ನು ಆಗಗೊಡುವುದಿಲ್ಲವೆಂಬುದು ರಶ್ಯಾದ ದೃಢ ನಿರ್ಧಾರ. ಇದನ್ನು ರಶ್ಯಾ ಪುನರುಚ್ಚರಿಸುತ್ತಾ ಬಂದಿದೆ, ನಾಟೋ ಅದನ್ನು ನಿರ್ಲಕ್ಷದಿಂದ ಕಾಣುತ್ತಾ ಬಂದಿದೆ.

ಇದನ್ನೂ ಓದಿ : ಉಕ್ರೇನ್ ಯುದ್ಧದ ಕುರಿತ ಪ್ರಶ್ನೆ- 2 : ಉಕ್ರೇನ್ ಬಿಕ್ಕಟ್ಟಿನ ಚಾರಿತ್ರಿಕ, ರಾಜಕೀಯ ಹಿನ್ನೆಲೆ ಏನು?

ರಶ್ಯಾವನ್ನು ಮಿಲಿಟರಿಯಾಗಿ ಸುತ್ತುವರಿಯಲು ಉಕ್ರೇನನ್ನು ಏನ ಕೇನ ಪ್ರಕಾರೇಣ ನಾಟೊ ಗೆ ಸೇರಿಸಿಕೊಳ್ಳುವ ಯು.ಎಸ್ ನ ಧೋರಣೆ ಬಿಕ್ಕಟ್ಟಿಗೆ  ಮೂಲಕಾರಣ. ಈಗಿನ ಉಕ್ರೇನ್ ಸರಕಾರ ಯು.ಎಸ್ ಪರವಿದ್ದು ಈಗ ಅದನ್ನು ಜಾರಿ ಮಾಡಲು ತೀವ್ರಗತಿಯಲ್ಲಿ ಪ್ರಯತ್ನ ನಡೆದಿದೆ ಎಂಬ ರಶ್ಯಾದ ಆತಂಕ ಯುದ್ಧಕ್ಕೆ ಎಡೆಮಾಡಿಕೊಟ್ಟಿದೆ. ಉಕ್ರೇನ್ ಮಾತ್ರವಲ್ಲ, ಜಾರ್ಜಿಯ, ಮೊಲ್ಡಾವಿಯ ಮುಂತಾದ ರಶ್ಯಾದ ಗಡಿಯಲ್ಲಿರುವ ದೇಶಗಳನ್ನು ನಾಟೋ ಕೂಟಕ್ಕೆ ಸೇರಿಸಿಕೊಂಡು ರಶ್ಯಾಗೆ ಅನಗತ್ಯವಾಗಿ ಆತಂಕವುಂಟು ಮಾಡುವುದು ಪ್ರಮುಖ ಯುರೋ ದೇಶಗಳಾದ ಜರ್ಮನಿ, ಫ್ರಾನ್ಸ್ ಸೇರಿದಂತೆ ಹೆಚ್ಚಿನ ಯುರೋ ಕೂಟದ ದೇಶಗಳಿಗೂ ಇಷ್ಟವಿಲ್ಲ. ರಶ್ಯದ ನಾರ್ಡ್ -1 ಗ್ಯಾಸ್ ಮೇಲೆ ಜರ್ಮನಿ ಮತ್ತು ಕೆಲವು ದೇಶಗಳು ನಿರ್ಣಾಯಕವಾಗಿ ಅವಲಂಬಿಸಿದ್ದು ರಶ್ಯ ದ ವಿರುದ್ಧ ತೀರಾ ಅತಿರೇಕ ಮಾಡಿದರೆ ಗ್ಯಾಸ್ ನಿಲ್ಲಿಸಬಹುದೆಂಬ ಆತಂಕವಿದೆ. ಅದರ ಬದಲು ತಾನು ಗ್ಯಾಸ್ ಪೂರೈಸುತ್ತೇನೆ ಎಂದು ಯು.ಎಸ್ ಹೇಳುತ್ತದೆ. ಆದರೆ ಅದು ಬಹಳ ದುಬಾರಿಯೆಂದು ಯುರೋ ದೇಶಗಳಿಗೆ ಗೊತ್ತಿದೆ. ನಾರ್ಡ್ -1 ಗ್ಯಾಸ್ ಪೈಪ್ ಲೈನ್ ಉಕ್ರೇನಿನ ಮೂಲಕ ಹೋಗುತ್ತಿದ್ದು, ಉಕ್ರೇನಿಗೆ ಇದರಿಂದ ಬಹಳ ಆದಾಯವಿದೆ. ಆದರೆ ಉಕ್ರೇನಿನ ಈ ಆಯಕಟ್ಟಿನ ಪಾತ್ರ ದುರ್ಬಳಕೆ ಮಾಡಿ ನಾರ್ಡ್ -1 ಗ್ಯಾಸ್ ನಿಲ್ಲಿಸಲು ಯು.ಎಸ್ ಸಹ ಹವಣಿಸುತ್ತಿದೆ. ಇದು ಉಕ್ರೇನ್ ಸೇರಿದಂತೆ ಯುರೋ ದೇಶಗಳಿಗೆ ಇಷ್ಟವಿಲ್ಲ.

ಯು.ಎಸ್ ನ ಈ ಹುನ್ನಾರವನ್ನು ಅರಿತ ರಶ್ಯಾ ನಾರ್ಡ್ -2 ಗ್ಯಾಸ್ ಪೈಪ್ ಲೈನ್ ಪ್ರಾಜೆಕ್ಟನ್ನು (ಉಕ್ರೇನ್ ಹಾದಿ ಬಿಟ್ಟು) ಸಾಗರ ಹಾದಿಗಳ ಮೂಲಕ ಮುಗಿಸಿದ್ದು, ಪೂರೈಕೆಗೆ ರೆಡಿ ಮಾಡುತ್ತಿದೆ. ಜರ್ಮನಿಯ ತಾಂತ್ರಿಕ ಚೆಕ್-ಅಪ್ ಮತ್ತು ಸರ್ಟಿಫಕೇಶನ್ ಮಾತ್ರ ಬಾಕಿಯಿದೆ. ಇದೂ ಯು.ಎಸ್ ಮತ್ತು ಯುರೋ ದೇಶಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ಯು.ಎಸ್ ಮಿಲಿಟರಿ (ವಿಶೇಷವಾಗಿ ಅಣ್ವಸ್ತ್ರಗಳ) ಭದ್ರತೆಯ ‘ಕೊಡೆ’ಯನ್ನು ಅವು ಬಿಟ್ಟುಕೊಡಲು ಸಿದ್ಧವಿಲ್ಲದಿದ್ದರೂ, ಉಕ್ರೇನಿನಲ್ಲಿ ರಶ್ಯಾವನ್ನು ಯುದ್ಧಕ್ಕೆ ಪ್ರಚೋದಿಸಬಲ್ಲ ಯು.ಎಸ್ ನ ಅತಿರೇಕಗಳಿಗೆ ಅವುಗಳ ಬೆಂಬಲವಿಲ್ಲ. ವಿಶೇಷವಾಗಿ ಫ್ರಾನ್ಸ್, ಜರ್ಮನಿ ಅದನ್ನು ಬಲವಾಗಿ ಪ್ರತಿರೋಧಿಸಿದವು. ಈಗಾಗಲೇ ಯುದ್ಧಕ್ಕೆ ಮೊದಲೇ ತೈಲ, ಗ್ಯಾಸ್ ಬೆಲೆ ಏರುತ್ತಿದ್ದು ಯುರೋಪಿನಲ್ಲಿ ಆತಂಕಕ್ಕೆ ಕಾರಣವಾಗಿದೆ.

ಯುರೋ ಮತ್ತು ರಶ್ಯಾದ ನಡುವಿನ ಘನಿಷ್ಠ ಆರ್ಥಿಕ ಸಂಬಂಧಗಳನ್ನು (ಪ್ರಮುಖ ವಾಗಿ ತೈಲ ಮತ್ತು ಪ್ರಾಕೃತಿಕ ಗ್ಯಾಸ್ ರಫ್ತು ಗಳನ್ನು) ಹದಗೆಡಿಸುವುದು, ಯುರೋ ಕೂಟದ ದೇಶಗಳು ತನ್ನ ತೈಲ, ಗ್ಯಾಸ್ ಖರೀದಿ ಮಾಡುವಂತೆ ಮಾಡುವುದು ಯು.ಎಸ್ ಉದ್ದೇಶ. ಇದಕ್ಕಾಗಿ ಯು.ಎಸ್ ಉಕ್ರೇನ್ ಸರಕಾರವನ್ನು ಬಳಸಿ ರಶ್ಯಾವನ್ನು ಕಳೆದ ಹಲವು ವರ್ಷಗಳಿಂದ ಪ್ರಚೋದಿಸುತ್ತಾ ಬಂದಿದೆ. ಕಳೆದ ಕೆಲವು ವಾರಗಳಲ್ಲಿ ರಶ್ಯಾ ತನ್ನ ಭದ್ರತಾ ಆತಂಕಗಳನ್ನು ಮುಂದಿಟ್ಟು ಈ ಕುರಿತು ಲಿಖಿತ ಭರವಸೆ ಕೊಡಬೇಕು ಎಂದಾಗ ಯುರೋ ಕೂಟದ ದೇಶಗಳು (ಫ್ರಮುಖವಾಗಿ ಫ್ರಾನ್ಸ್, ಜರ್ಮನಿ) ಈ ಕುರಿತು ಮಾತುಕತೆ ಮಾಡಿ ಒಪ್ಪಬೇಕೆಂದು ಮಾಡಿದ ಪ್ರಯತ್ನಗಳಿಗೆ ತಣ್ಣೀರೆರಚಿತು. ಬದಲಿಗೆ ಯು.ಎಸ್ ಪ್ರಚೋದನಾಕಾರಿ ಮಿಲಿಟರಿ ಎಚ್ಚರಿಕೆಗಳನ್ನು ಕೊಟ್ಟು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು. ಇವು ಯುದ್ಧಕ್ಕೆ ಕಾರಣವಾದ ತಕ್ಷಣದ ಕಾರಣಗಳು.

Donate Janashakthi Media

Leave a Reply

Your email address will not be published. Required fields are marked *