ನವದೆಹಲಿ : ರಷ್ಯಾ ಮತ್ತು ಉಕ್ರೇನ್ ನಡುವಿನ ಸಶಸ್ತ್ರ ಘರ್ಷಣೆಯ ಬಗ್ಗೆ ಸಿಪಿಐ(ಎಂ) ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ. ಉಕ್ರೇನ್ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆ ಕೈಗೊಂಡಿರುವುದು ದುರದೃಷ್ಟಕರ. ಸಶಸ್ತ್ರ ವೈಷಮ್ಯಗಳು ತಕ್ಷಣವೇ ನಿಲ್ಲಬೇಕು ಮತ್ತು ಶಾಂತಿ ಸ್ಥಾಪನೆಯಾಗಬೇಕು ಎಂದು ಅದು ಹೇಳಿದೆ.
ಸೋವಿಯತ್ ಒಕ್ಕೂಟದ ವಿಸರ್ಜನೆಯ ನಂತರ, ಅಮೆರಿಕ ಸಂಯುಕ್ತ ಸಂಸ್ಥಾನ ನೇತೃತ್ವದ ನಾಟೋ ರಷ್ಯಾಕ್ಕೆ ನೀಡಿದ ಭರವಸೆಗೆ ವ್ಯತಿರಿಕ್ತವಾಗಿ ಪೂರ್ವದತ್ತ ವಿಸ್ತರಿಸುತ್ತಿದೆ. ಉಕ್ರೇನ್ ನಾಟೋ ಸೇರುವಂತೆ ಮಾಡುವ ಪ್ರಯತ್ನಗಳು ರಷ್ಯಾದ ಭದ್ರತೆಗೆ ನೇರ ಬೆದರಿಕೆಯನ್ನುಂಟುಮಾಡುತ್ತವೆ. ಪೂರ್ವ ಯುರೋಪಿನ ತನ್ನ ಗಡಿಗಳಲ್ಲಿ ನಾಟೋ ಪಡೆಗಳು ಮತ್ತು ಕ್ಷಿಪಣಿಗಳ ಉಪಸ್ಥಿತಿಯಿಂದ ಉಂಟಾಗುವ ಬೆದರಿಕೆಯಿಂದಾಗಿಯೂ ರಷ್ಯಾ ತನ್ನ ಭದ್ರತೆಯ ಬಗ್ಗೆ ಕಳವಳಗೊಂಡಿದೆ. ಆದ್ದರಿಂದ ಉಕ್ರೇನ್ ನಾಟೋಗೆ ಸೇರದಿರುವುದು ಸೇರಿದಂತೆ ಭದ್ರತಾ ಖಾತರಿಗಳನ್ನು ರಷ್ಯಾ ಆಗ್ರಹಿಸುತ್ತಿರುವುದು ನ್ಯಾಯಸಮ್ಮತವಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಅಭಿಪ್ರಾಯ ಪಟ್ಟಿದೆ.
ರಷ್ಯಾದ ಭದ್ರತಾ ಅಗತ್ಯಗಳನ್ನು ಪೂರೈಸಲು ಅಮೆರಿಕ ಮತ್ತು ನಾಟೋದ ನಿರಾಕರಣೆ ಮತ್ತು ಈ ಪ್ರದೇಶಕ್ಕೆ ಸೈನ್ಯವನ್ನು ಕಳುಹಿಸುವ ಅಮೆರಿಕದ ಯುದ್ಧಕೋರತನ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಶಾಂತಿಯನ್ನು ಸ್ಥಾಪಿಸಬೇಕಾದರೆ, ಪೂರ್ವ ಉಕ್ರೇನ್‌ನಲ್ಲಿರುವ ಡಾನ್‌ಬಾಸ್ ಪ್ರದೇಶ ಸೇರಿದಂತೆ ಎಲ್ಲಾ ಜನಗಳ ನೈಜ ಆತಂಕಗಳನ್ನು ಪರಿಗಣಿಸಬೇಕಾಗುತ್ತದೆ. ಮಾತುಕತೆಗಳ ಪ್ರಕ್ರಿಯೆಯನ್ನು ಪುನರಾರಂಭಿಸಬೇಕು ಮತ್ತು ಎರಡೂ ಪಕ್ಷಗಳು ಮಾಡಿಕೊಂಡಿರುವ ಹಿಂದಿನ ಒಪ್ಪಂದಗಳಿಗೆ ಬದ್ಧವಾಗಿರಬೇಕು ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ, ಉಕ್ರೇನಿನಲ್ಲಿ ಸಿಲುಕಿಕೊಂಡಿರುವ ಸಾವಿರಾರು ಭಾರತೀಯ ನಾಗರಿಕರ, ಮುಖ್ಯವಾಗಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಲು ತಕ್ಷಣವೇ ಕ್ರಮಗಳನ್ನು ಮತ್ತು ಎಲ್ಲಾ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಭಾರತ ಸರಕಾರವನ್ನು ಆಗ್ರಹಿಸಿದೆ.