ಎಮ್‌ಆರ್‌ಪಿಎಲ್ ಕಂಪೆನಿಯು 233 ಹುದ್ದೆಗಳ ನೇಮಕಾತಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳು ಸೇರಿದಂತೆ ಕರ್ನಾಟಕ ರಾಜ್ಯದ ಅರ್ಹ ಉದ್ಯೋಕಾಂಕ್ಷಿಗಳನ್ನು ಹೊರಗಿಟ್ಟು ಮಾಡಿರುವ ವಂಚನೆಯ ವಿರುದ್ದ ನಾಡಿನ ಜನತೆ ಒಕ್ಕೊರಲ ವಿರೋಧ ದಾಖಲಿಸಿದ್ದರು. ಪಕ್ಷ ರಾಜಕಾರಣದ ಮಿತಿಗಳನ್ನು ದಾಟಿ ತುಳುನಾಡಿನ ಜನತೆ ನಡೆಸಿದ ವ್ಯಾಪಕ ಪ್ರತಿರೋಧ ಸತತವಾಗಿ ಚುನಾವಣೆಯಲ್ಲಿ ಗೆಲ್ಲುತ್ತಾ, ಬರೀ ಭರವಸೆಯಲ್ಲೇ ಕಾಲ ತಳ್ಳುತ್ತಾ ಬಂದಿರುವ ಆಳುವವರ ನಿದ್ದೆಗೆಡಿಸುವಲ್ಲಿ ಯಶಸ್ವಿಯಾಗಿತ್ತು.
ಈ ಹಿನ್ನಲೆಯಲ್ಲಿ ಎಂಆರ್‌ಪಿಎಲ್‌ನಲ್ಲಿ ನಡೆದಿರುವ ನೇಮಕಾತಿ ರದ್ದುಗೊಳಿಸಬೇಕೆಂದು ಜೂನ್ 5, 2021ರಂದು ತುಳುನಾಡು ಜಿಲ್ಲೆಗಳಲ್ಲಿ “ಸ್ಥಳೀಯರ ಉದ್ಯೋಗದ ಹಕ್ಕಿಗಾಗಿ” ಧ್ವನಿ ಎತ್ತಲು ಬಯಸುವ ಸಮಾನ ಮನಸ್ಕ ಸಂಘಟನೆಗಳೆಲ್ಲ ಜೊತೆ ಸೇರಿ ಪ್ರತಿಭಟನೆಗೆ ಕರೆ ನೀಡಿದೆ.
ಉದ್ಯೋಗದ ಹಕ್ಕಿನ ಧ್ವನಿಯನ್ನು ಕುಗ್ಗಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಸರಕಾರದ ಭಾಗ(ತುಳುನಾಡಿಗೆ ಇವರೇ ಸರಕಾರ)ವಾಗಿರುವ ಸಂಸದರು, ಉಸ್ತುವಾರಿ ಸಚಿವರು, ಶಾಸಕರುಗಳು ಕಂಪೆನಿಯ ಆಡಳಿತದ ಪ್ರಮುಖರ ಜೊತೆ ಮಾತುಕತೆಯ ನಾಟಕ ನಡೆಸಿ ʻನೇಮಕಾತಿ ಪ್ರಕ್ರಿಯೆಗೆ ತಡೆ ಹೇರಲಾಗಿದೆ, ಹೊಸ ಪ್ರಕ್ರಿಯೆ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಡೆಯಲಿದೆʼ ಎಂದು ಪ್ರಕಟಿಸಿದರು. (ಕಂಪೆನಿಯು ಇವರ ಪ್ರಕಟನೆಯನ್ನು ಪರೋಕ್ಷವಾಗಿ, ಆದರೆ ಸ್ಪಷ್ಟವಾಗಿ ನಿರಾಕರಿಸಿತು.) ಅದರೆ, ಸಚಿವರು, ಸಂಸದ, ಶಾಸಕರ ಪ್ರಕಟನೆ ಹೊರಟು ಇದೀಗ ಹತ್ತು ದಿನಗಳು ಕಳೆದಿವೆ. ಕಂಪೆನಿಯ ಒಳಗಡೆ ನೇಮಕಾತಿಗೊಂಡ ಹೊರ ರಾಜ್ಯದವರು ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಅಂತಿಮ ಹಂತದ ಪ್ರಕ್ರಿಯೆ ಭರದಿಂದ ಮುಂದುವರಿದಿದೆ. ಭರವಸೆ ನೀಡಿದ್ದ ಜನಪ್ರತಿನಿಧಿಗಳ ತಮ್ಮ ಮಾತುಗಳನ್ನೇ ಮರೆತು ಈಗ ಮೌನಕ್ಕೆ ಶರಣಾಗಿದ್ದಾರೆ.
ಇದನ್ನು ಓದಿ: ಎಂಆರ್‌ಪಿಎಲ್ ನೇಮಕಾತಿ ವಿವಾದ- ಕರಾವಳಿಗರಿಗೆ ಆದ್ಯತೆ ನೀಡಿ
ಮೂರು ದಶಕಗಳಲ್ಲಿ ಮೊದಲ ಬಾರಿಗೆ ತುಳುನಾಡು ತನಗಾಗುತ್ತಿರುವ ವಂಚನೆಯ ವಿರುದ್ದ ಧ್ವನಿ ಎತ್ತಿದೆ. ಅಭಿವೃದ್ದಿಯಲ್ಲಿ ತನಗೆ ಸಿಕ್ಕಿರುವ ಪಾಲೇನು? ಎಂದು ಚರ್ಚೆಗಿಳಿದಿದೆ. ಜಾಗೃತಿಗೊಂಡಿದೆ. ಇದು ವ್ಯರ್ಥವಾಗಲು ಬಿಡಬಾರದು. ಈ ಬಾರಿ ನಾವು ಸೋತರೆ, ಮುಂದೆ ಮತ್ತಷ್ಟು ವಂಚನೆಗಳು ನಡೆಯಲಿದೆ. ಕೈಗಾರಿಕೆಗಳ ಪಾಲಿನ ಹಿರಿಯಣ್ಣ ಎಮ್‌ಆರ್‌ಪಿಎಲ್ ಸ್ಥಳೀಯರಿಗೆ ಉದ್ಯೋಗ ನೀಡದಿದ್ದಲ್ಲಿ, ಉಳಿದ ಕಂಪೆನಿಗಳು ಅದನ್ನೆ ಅನುಸರಿಸಲಿದೆ. ಈ ಹಿನ್ನಲೆಯಲ್ಲಿ ನಮ್ಮ ಧ್ವನಿಯನ್ನು ಮತ್ತಷ್ಟು ಎತ್ತರಿಸಬೇಕಿದೆ ಎಂದು ಪ್ರಟಿಭಟನೆ ಹಮ್ಮಿಕೊಳ್ಳಲು ಮುಂದಾಗಿದ್ದಾರೆ.
“ತುಳುನಾಡ ಅಭಿವೃದ್ಧಿಡ್ ತುಳುವಪ್ಪೆ ಜೋಕುಲೆಗ್ ಮಲ್ಲಪಾಲ್” ಎಂದು ಜೋರು ಧ್ವನಿಯಲ್ಲಿ ಹೇಳುವ ಮೂಲಕ ತುಳುನಾಡಿನ ನೆಲ ಜಲ ಬಳಸಿ ಸಾಮ್ರಾಜ್ಯ ಸ್ಥಾಪಿಸಿರುವ, ವಿಸ್ತರಿಸುತ್ತಿರುವ, ಸ್ಥಾಪಿಸಲಿರುವ ಕೈಗಾರಿಗೆಗಳ ಉದ್ಯೋಗವಕಾಶಗಳಲ್ಲಿ ತುಳುನಾಡಿಗೆ ನ್ಯಾಯಯುತ ಪಾಲನ್ನು ದೊರಕಿಸಿಕೊಡಬೇಕೆಂದು ಪ್ರತಿಭಟನೆಯ ಮೂಲಕ ಆಗ್ರಹಿಸಲು ಮುಂದಾಗಿದ್ದಾರೆ.
ಎಂಆರ್‌ಪಿಎಲ್ ಈಗ ನಡೆದಿರುವ ನೇಮಕಾತಿಯನ್ನು ರದ್ದುಗೊಳಿಸಬೇಕು, ಸಂಸದರು, ಶಾಸಕರುಗಳು ತಮ್ಮ ಮಾತನ್ನು ಉಳಿಸಿಕೊಳ್ಳಬೇಕು, ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳ ಅಧಾರದಲ್ಲಿ ಸ್ಥಳೀಯರಿಗೆ ಉದ್ಯೋಗಗಳನ್ನು ಒದಗಿಸಿಕೊಡಬೇಕು, ಎಲ್ಲಾ ಕೈಗಾರಿಕೆ, ಉದ್ದಿಮೆಗಳಲ್ಲಿ ಸ್ಥಳೀಯರಿಗೆ ನೇಮಕಾತಿಯಲ್ಲಿ ಪ್ರಾಧಾನ್ಯತೆ, ಸಿಂಹಪಾಲು ದೊರಕಬೇಕು ಎಂದು ಒತ್ತಾಯಿಸಿ “ಮನೆ ಮನೆ ಪ್ರತಿಭಟನೆ”ಯನ್ನು ಆಯೋಜಿಸಿದ್ದಾರೆ.
ಇದನ್ನು ಓದಿ: ಎಂಆರ್‌ಪಿಎಲ್ ನೇಮಕಾತಿ ಪ್ರಕ್ರಿಯೆ ತಡೆಹಿಡಿಯಬೇಕು: ಡಿ ಕೆ ಶಿವಕುಮಾರ್
ಜೂನ್ 5ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ತುಳುನಾಡಿನ ಜನತೆ ಬೇಡಿಕೆಗಳ ಫಲಕಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ತಮ್ಮ ಮನೆಗಳ ಮುಂಭಾಗ ಏಕಾಂಗಿಯಾಗಿ/ ಕುಟುಂಬ ಸಮೇತರಾಗಿ ಹಿಡಿದು ಪ್ರತಿಭಟನೆ ನಡೆಸಲು ಕರೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಆನ್‌ಲೈನ್ ಪ್ರತಿಭಟನೆಗೆ ಸಂಘಟನೆಗಳು ಮುಂದಾಗಿವೆ.
ಅದೇ ರೀತಿಯಲ್ಲಿ ಎಲ್ಲಿಯೂ ಕೋವಿಡ್ ಮಾರ್ಗ ಸೂಚಿ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬೇಕು. ಆ ಮೂಲಕ ತುಳುನಾಡಿನಾದ್ಯಂತ ಇದು ಒಕ್ಕೊರಲಿನ ಹಕ್ಕಿನ ಧ್ವನಿಯಾಗಿ, ಸ್ವಾಭಿಮಾನದ ಕೂಗಾಗಿ ಮಾರ್ಪಾಡಾಗುವಂತೆ, ಅಭಿವೃದ್ದಿಯಲ್ಲಿ ನಮ್ಮ ನ್ಯಾಯಯುತ ಪಾಲು ಮುಂದೆ ಯಾವತ್ತೂ ನಿರಾರಣೆಯಾಗದಂತೆ ಪ್ರಬಲ ಕಾಯ್ದೆ ರಚನೆಗೆ ಇದು ನಾಂದಿಯಾಗಲು ಜೊತೆಗೂಡಬೇಕು ಎಂದು ಮನವಿ ಮಾಡಿದ್ದಾರೆ.
ಹೋರಾಟದ ಅತ್ಯಂತ ಪ್ರಮುಖ ಬೇಡಿಕೆಗಳು
- ತುಳುನಾಡ ಅಭಿವೃದ್ದಿಡ್ ತುಳುವಪ್ಪೆ ಜೋಕುಲೆಗ್ ಮಲ್ಲ ಪಾಲ್
- ಮಹಿಷಿ ವರದಿ ಶಿಫಾರಸ್ಸುಗಳು ಕಾಯ್ದೆಯಾಗಲಿ
- ನಮ್ಮ ಪಾಲು ನಮಗೆ ದೊರಕಲಿ, ಎಂಆರ್‌ಪಿಎಲ್ ನೇಮಕಾತಿ ರದ್ದಾಗಲಿ
- ಸಂಸದರೆ, ಶಾಸಕರುಗಳೇ…. ಎಂಆರ್‌ಪಿಎಲ್ ಉದ್ಯೋಗಗಳು ಸ್ಥಳೀಯರ ಹಕ್ಕು, ಭರವಸೆ ಸಾಕು, ಉದ್ಯೋಗ ಬೇಕು
- ಹಲೋ ಸಂಸದ ನಳಿನ್ ಕುಮಾರ್… ಎಂಆರ್‌ಪಿಎಲ್ ಉದ್ಯೋಗ ನೇಮಕಾತಿ ರದ್ದುಗೊಳಿಸಿ, ಆಗದಿದ್ದಲ್ಲಿ ರಾಜೀನಾಮೆ ಕೊಡಿ
- ನೆಲ ನಮ್ಮದು, ಜಲ ನಮ್ಮದು, ಉದ್ಯೋಗವೂ ನಮ್ಮದೆ, ಎಂಆರ್‌ಪಿಎಲ್ ಉದ್ಯೋಗ ಭಿಕ್ಷೆಯಲ್ಲ, ನಮ್ಮ ಹಕ್ಕು
- ನೆಲ ನಮ್ಮದು, ಜಲ ನಮ್ಮದು, ಉದ್ಯೋಗವೂ ನಮ್ಮದೇ…
- ಸ್ಥಳೀಯರಿಗೆ ಉದ್ಯೋಗ ನಿರಾಕರಿಸುವ ಕಂಪೆನಿಗಳಿಗೆ ಬೀಗ ಜಡಿಯಿರಿ
- ಮಣ್ಣಿನ ಮಕ್ಕಳಿಗೆ ಉದ್ಯೋಗ ಒದಗಿಸದ ಎಂಆರ್‌ಪಿಎಲ್ ವಿಸ್ತರಣೆಗೆ ಭೂ ಸ್ವಾಧೀನ ತಕ್ಷಣ ಸ್ಥಗಿತಗೊಳ್ಳಲಿ