ಉಡುಪಿ : ಕೊರಗ ಜನಾಂಗದ ಮದುವೆ ಕಾರ್ಯಕ್ರಮದಲ್ಲಿ ನಿಯಮ ಉಲ್ಲಂಘಿಸಿದರು ಎನ್ನುವ ಕಾರಣಕ್ಕೆ ಪೊಲೀಸರು ಹಿಗ್ಗಾಮುಗ್ಗಾ ಲಾಠಿ ಬೀಸಿ ದೌರ್ಜನ್ಯ ನಡೆಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಉಡುಪಿ ಜಿಲ್ಲೆಯ ಅತ್ಯಂತ ಹಿಂದುಳಿದ ಜನಾಂಗ ಇದು. ಮದುವೆಯ ಮುನ್ನ ನಡೆಯುವ ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸರು ದಾಳಿ ಮಾಡಿ ಯಾವುದೇ ಕಾರಣವಿಲ್ಲದೆ ಮದುಮಗ, ಮಹಿಳೆಯರು, ಮುದುಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಡಿ ದರ್ಜೆ ನೌಕರರಾಗಿರುವ ರಾಜೇಶ್ ಕೊರಗ ಎಂಬವರಿಗೆ ಬುಧವಾರ ಮದುವೆ ನಿಶ್ಚಯವಾಗಿತ್ತು. ಮದುವೆಯ ಮುನ್ನ ನಡೆಯುವ ಮೆಹಂದಿ ಕಾರ್ಯಕ್ರಮದಲ್ಲಿ ಸೋಮವಾರ ರಾತ್ರಿ ಪೊಲೀಸರಿಂದ ಅನುಮತಿ ಪಡೆದು ಡಿಜೆ ಅಳವಡಿಸಲಾಗಿತ್ತು. ರಾತ್ರಿ 11 ಗಂಟೆಯವರೆಗೆ ಮೆಹಂದಿ ಕಾರ್ಯಕ್ರಮ ನಡೆಸಲು ಅವಕಾಶವೂ ಸಿಕ್ಕಿತು. ಆದರೆ ಇದ್ದಕ್ಕಿದ್ದಂತೆ ಪೊಲೀಸರು ಯಾರೋ ಮೌಖಿಕ ದೂರು ನೀಡಿದ್ದಾರೆ ಎಂಬ ಕಾರಣಕ್ಕೆ ಡಿಜೆ ಸೌಂಡ್ ಕಡಿಮೆ ಮಾಡುವಂತೆ ಮನೆಯವರಿಗೆ ಸೂಚಿಸಿದರು. ಅವರು ಸೌಂಡ್ ಕಡಿಮೆ ಮಾಡಿದ್ದರು. ಇದಾಗಿ ಕೆಲವೇ ನಿಮಿಷಗಳಲ್ಲಿ ಏಳೆಂಟು ಪೊಲೀಸರ ಜೊತೆ ಕೋಟ ಎಸ್‌ಐ ಸಂತೋಷ್ ಸಿಬ್ಬಂದಿ ಸಹಿತ ಮದುವೆ ಮನೆಗೆ ಬಂದು ನೆರೆದಿದ್ದವರಿಗೆ ಊಟವನ್ನೂ ಮಾಡಲು ಬಿಡದೆ ಹಲ್ಲೆ ನಡೆಸಿದರು. ಕಾಲು ಹಿಡಿದು ಕೇಳಿಕೊಳ್ಳಲು ಹೋದ ವೃದ್ಧೆಯೊಬ್ಬರ ಮೇಲೆಯೂ ಹಲ್ಲೆ ಮಾಡಿದ್ದಾರೆ. ಕರುಣೆ ಇಲ್ಲದೆ ನಡೆದ ದಾಳಿಯಿಂದ ಮದುವೆ ಮನೆ ರಣಾಂಗಣವಾಗಿದೆ. ದಯವಿಟ್ಟು ಹೊಡೆಯಬೇಡಿ ಎಂದು ಮನೆಯಲ್ಲಿದ್ದವರು ಅಂಗಲಾಚಿದರೂ ಕೇಳದೆ ಎಸ್‌ಐ ಸಂತೋಷ್ ದರ್ಪ ಮೆರೆದಿದ್ದಾರೆ. ತಂಡದಲ್ಲಿ ಒಬ್ಬೇ ಒಬ್ಬ ಮಹಿಳಾ ಸಿಬ್ಬಂದಿ ಇಲ್ಲದಿದ್ದರೂ, ಮಹಿಳೆಯರ ಮೈಮುಟ್ಟಿ ತಳ್ಳಿದ್ದಾರೆ. ಘಟನೆಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಘಟನೆ ನಡೆದಿರುವುದು ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ. ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮನೆಯೂ ಸಮೀಪದಲ್ಲಿಯೇ ಇದೆ. ಈ ಬಗ್ಗೆ ದೂರು ದಾಖಲಿಸಲು ಹೋದರೆ ಕೋಟ ಪೊಲೀಸರು ಸೂಕ್ತಕ್ರಮ ಕೈಗೊಂಡಿಲ್ಲ. ಮದುವೆ ಮನೆಯಿಂದ ನಾಲ್ವರನ್ನು ಕರೆದೊಯ್ದು ಬಟ್ಟೆ ಬಿಚ್ಚಿ ಪೊಲೀಸ್ ಠಾಣೆಯಲ್ಲಿ ಮತ್ತೊಮ್ಮೆ ಹಲ್ಲೆ ನಡೆಸಿದ್ದಾರೆ. ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಲೂ ಅವಕಾಶ ಕೊಟ್ಟಿಲ್ಲ. ಕೊರಗ ಸಮುದಾಯಕ್ಕೆ ಸೇರಿದ ಈ ಕುಟುಂಬಕ್ಕೆ ಹೋರಾಟ ನಡೆಸುವ ಶಕ್ತಿಯೂ ಇಲ್ಲ. ಇದನ್ನು ಅರಿತಿರುವ ಪೊಲೀಸರು, ರಾಜಿ ನಡೆಸಿ ಪ್ರಕರಣ ಮುಚ್ಚಿ ಹಾಕಲು ಮುಂದಾಗಿದ್ದಾರೆ. ಆದರೆ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆಗೆ ಮುಂದಾಗಿದ್ದಾರೆ. ಕೊರಗ ಸಮುದಾಯದವರಿಂದ ಮಾಹಿತಿ ಪಡೆಯಲಾಗಿದೆ. ಈ ಬಗ್ಗೆ ಮಾತನಾಡಿದರೆ ಬುಧವಾರ ಮದುವೆ ನಡೆಸಲು ಬಿಡುವುದಿಲ್ಲ ಎಂದೂ ಕೆಲವರು ಬೆದರಿಕೆ ಹಾಕಿರುವ ಮಾತುಗಳೂ ಕೇಳಿ ಬಂದಿವೆ.
ಈ ಘಟನೆಯನ್ನು ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷ ಖಂಡಿಸಿದ್ದು, ಕೋಟ ತಟ್ಟು ಕೊರಗ ಸಮುದಾಯದವರ ಮನೆಯಲ್ಲಿ ನಡೆದ ಮೆಹಂಧಿ ಕಾರ್ಯಕ್ರಮದಲ್ಲಿ ಏಕಾಏಕೀ ನುಗ್ಗಿ ಹೆಣ್ಣು ಮಕ್ಕಳಿಗೆ , ಮಧುಮಗನಿಗೆ , ಮತ್ತು ಇತರ ಕೊರಗ ಸಮುದಾಯದ ನೆರೆದ ಬಂಧುಗಳಿಗೆ ಲಾಠಿ ಚಾರ್ಜ್ ಮಾಡೀ ಬೆಧರಿಸಿ ಅವಾಚ್ಯ ಶಭ್ದಗಳಿಂದ ಭೈದ ಕೋಟಾ ಠಾಣಾಧಿಕಾರಿ ಸಂತೋಷ್ ಮತ್ತು ಅವರೊಂದಿಗೆ ಲಾಠಿ ಚಾರ್ಜ್ ಮಾಡಿದ ಕೋಟ ಠಾಣಾ ಸಿಬಂಧ್ಧಿಗಳ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾ ಸಿಪಿಐಎಂ ಕಾರ್ಯದರ್ಶಿ ಬಾಲಕ್ರಷ್ಣ ಶೆಟ್ಟಿ ಆಗ್ರಹಿಸಿದ್ದಾರೆ.
ಅವರು ನಿಯಮ ಉಲ್ಲಂಘಿಸಿದ್ದರೆ, ಅವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕಿತ್ತು, ಅದು ಬಿಟ್ಟು ಈ ರೀತಿ ದೌರ್ಜನ್ಯ ನಡೆಸಿರುವುದು ಪೊಲೀಸರಲ್ಲಿ ಮಾನವೀಯತೆ ಇಲ್ಲ ಎಂಬುದನ್ನು ತೋರಿಸುತ್ತದೆ. ಸಾವಿರಾರು ಮಂದು ಸಭೆ ಸೇರಿ ಚುನಾವಣೆ, ಉತ್ಸವ ಅಂತೆಲ್ಲ ಮಾಡುವಾಗ ಸುಮ್ಮನಿರುವ ಪೊಲೀಸರು ತಳ ಸಮುದಾಯದವರಿಗೆ ಇವೆಲ್ಲ ಯಾಕೆ ಬೇಕು ಎಂಬ ದ್ರುಷ್ಟ ಬುದ್ದಿ ಹೊಂದಿದವರಂತೆ ಕಾಣುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.