ಶಿಗ್ಗಾಂವಿ: ಬಸವಾದಿ ಶರಣರ ಹಾಗೂ ಕುವೆಂಪುರವರ ಆಶಯದಂತೆ ಸಮಾಜದಲ್ಲಿ ಪ್ರಗತಿಪರ ಮೌಲ್ಯಗಳನ್ನು ಹೆಚ್ಚೆಚ್ಚು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕ ಪ್ರಗತಿಪರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮೀಜಿಯವರು ಹೇಳಿದರು.
ತಾಲೂಕಿನ ಪ್ರಖ್ಯಾತ ಪ್ರವಾಸಿ ತಾಣ ಬಾಡ ದ ಕನಕ ಸಭಾಭವನದಲ್ಲಿ ಭಾನುವಾರ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ), ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್‌ಐ) ಹಾಗೂ ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟ ಆಯೋಜಿಸಿದ್ದ ಸುಭಾಸ್ ಎಂ ಮತ್ತು ಸಂಧ್ಯಾ ಅವರ ಸರಳ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಧು-ವರರಿಗೆ ಶುಭ ಹಾರೈಸಿ ಮಾತನಾಡಿದರು.
ಅದ್ದೂರಿಯಾಗಿ ಮದುವೆಯಾಗಿ ಆರ್ಥಿಕ ಸಂಕಷ್ಟ ಎದುರಿಸುವುದಕ್ಕಿಂತ ಬದುಕಿನಲ್ಲಿ ಉದಾತ್ತ ಚಿಂತನೆಗಳನ್ನು ಅಳವಡಿಸಿಕೊಂಡು ಜೀವನ ನಡೆಸುವಂತಾಗಬೇಕು. ಈ ನಿಟ್ಟಿನಲ್ಲಿ ಇವತ್ತು ಮದುವೆಯಾಗುತ್ತಿರುವ ಈ ಜೋಡಿ ಯುವ ಸಮೂಹಕ್ಕೆ ಮಾದರಿ. ಇಂತಹ ಸರಳ ಮದುವೆಗಳು ಹೆಚ್ಚಾಗಲಿ ಎಂದು ಆಶಿಸಿದರು.
ಮನುಷ್ಯನ ಹಸಿವು ನೀಗಿಸುವ ತಿನ್ನುವ ಅನ್ನವನ್ನು ಮೈ ಮೇಲೆ ಹಾಕಿ ನಂತರ ತುಳಿದಾಡುವ ಬದಲು ಹೂ ಹಾಕಿ ಹಾರೈಸುವುದು ಉತ್ತಮವಾದ ಕ್ರಮವಾಗಿದೆ. ಮುಹೂರ್ತ, ಗಳಿಗೆ ಎಂಬುದಕ್ಕಿಂತ ಎಲ್ಲ ಸಮಯವೂ ಕೂಡ ಒಳ್ಳೆಯದೇ ಆಗಿದೆ. ಬಸವಾದಿ ಶರಣರು ಇಂತಹ ಕಂಧಾಚಾರವನ್ನು ತೊಡೆದುಹಾಕಿ ನಮಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದು, ಆ ದಾರಿಯಲ್ಲಿ ಎಲ್ಲರೂ ನಡೆಯಬೇಕು ಎಂದು ಆಶಿಸಿದರು.
ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ್ ಮಾತನಾಡಿ ʻಸಂಪ್ರದಾಯದ ಹೆಸರಲ್ಲಿ ಸಮಾಜದಲ್ಲಿ ಬೇರು ಬಿಟ್ಟಿರುವ ವರದಕ್ಷಿಣೆ, ಅದ್ದೂರಿತನ ಸಮಾಜ ಕಂಟಕ ಪಿಡುಗನ್ನು ಹೋಗಲಾಡಿಸಬೇಕಿದೆ. ಅದಕ್ಕೆ ಯುವಕರು ದೃಢ ನಿರ್ಧಾರ ತಳೆಯಬೇಕಿದೆʼ ಎಂದರು.
ಮಾನವರೆಲ್ಲರೂ ಸಮಾನರೆಂಬುದನ್ನು ಬುದ್ಧ, ಬಸವಣ್ಣ, ಕನಕದಾಸರು ಒತ್ತಿ ಹೇಳಿದ್ದಾರೆ. ಅವರ ಆಶಯದಂತೆ ಅಂತರಜಾತಿ ಮದುವೆಯಾಗುವ ಯುವಕರಿಗೆ ಪೋಷಕರು ಹಿಂಜರಿಯದೆ ಬೆಂಬಲಿಸಬೇಕು. ಅಂತಹ ಮದುವೆಯಾಗುವ ಯುವಕ ಯುವತಿಯರಿಗೆ ಎಲ್ಲ ರೀತಿಯ ಸಹಕಾರ ಹಾಗೂ ಪ್ರೋತ್ಸಾಹವನ್ನು ಡಿವೈಎಫ್‌ಐ, ಎಸ್‌ಎಫ್‌ಐ ಸಂಘಟನೆ ನೀಡುತ್ತದೆ. ಯುವಕರು ನಿರ್ಭಯವಾಗಿ ಪ್ರೀತಿಸಿ, ಹೊಣೆಗಾರಿಕೆಯಿಂದ ವರ್ತಿಸಿ ಎಂದು ಕರೆ ನೀಡಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಮಾತನಾಡಿ ʻಮದುವೆ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದಾರೆ ಅನಿಸುತ್ತದೆ. ಬಾಜ ಭಜಂತ್ರಿ ಇಲ್ಲ ಎನಿಸಬಹುದು. ಇಲ್ಲಿ ಜೀವಪರ ಮೌಲ್ಯಗಳಿವೆ. ಈ ಪ್ರಗತಿಪರ ಆಶಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಶೋಷಣೆ ಮುಕ್ತ ಸಮಾಜಕ್ಕಾಗಿ ಶ್ರಮಿಸಲಿʼ ಎಂದು ಹಾರೈಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘಟನೆ ರಾಜ್ಯ ಅಧ್ಯಕ್ಷರಾದ ನಿತ್ಯಾನಂದಸ್ವಾಮಿ ವಧು-ವರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ವಧು ವರರಿಗೆ ಮಂತ್ರಾಕ್ಷತೆ ಬದಲು ಹೂ ಹಾಕಿ ಹಾರೈಸಿದ್ದು ವಿಶೇಷವಾಗಿತ್ತು.
ವೇದಿಕೆ ಮೇಲೆ ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಎಸ್‌ಎಫ್‌ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಬೋವಿ, ವಧು-ವರರ ಪೋಷಕರಾದ ಅಡಿವೆಪ್ಪ ಹರಿಜನ, ಶೇಖಪ್ಪ ಹರಿಜನ, ಬಸಪ್ಪ ಕೆಂಚಪ್ಪನವರ, ಹಾಲಮ್ಮ ಉಪಸ್ಥಿತರಿದ್ದರು. ರೇಣುಕಾ ಕಹಾರ ಕಾರ್ಯಕ್ರಮ ನಿರ್ವಹಿಸಿದರು. ಅಭಿಷೇಕ ಹಾಡುಗಳನ್ನು ಹಾಡುವ ಮೂಲಕ ಮೆರಗು ನೀಡಿದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಭಾಸ್ ಮತ್ತು ಸಂಧ್ಯಾ ಅವರು ವಂದಿಸಿದರು.