ಉದಯಪುರ: ಮುಸ್ಲಿಂ ಮತಾಂಧರಿಂದ ಬರ್ಬರವಾಗಿ ಹತ್ಯೆಗೀಡಾದ ಕನ್ಹಯ್ಯ ಲಾಲ್ ಅವರ ಮನೆಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭೇಟಿ ನೀಡಿ ಕನ್ಹಯ್ಯಾ ಲಾಲ್ ಕುಟುಂಬ ಸದಸ್ಯರು ಮತ್ತು ಸಂಬಂಧಿಕರೊಂದಿಗೆ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡ ಗೋವಿಂದ್ ಸಿಂಗ್ ದೋತಾಸ್ರಾ, ಕಂದಾಯ ಸಚಿವ ರಾಮಲಾಲ್ ಜಾಟ್, ಡಿಜಿಪಿ ಎಂಎಲ್ ಲಾಥರ್ ಮತ್ತು ಇತರ ನಾಯಕರು ಉಪಸ್ಥಿತರಿದ್ದರು.
ಇಲ್ಲಿನ ಸೆಕ್ಟರ್ 14 ರಲ್ಲಿ ಕನ್ಹಯ್ಯ ಲಾಲ್ ಕುಟುಂಬದವರನ್ನು ಭೇಟಿ ಮಾಡಿದ ಬಳಿಕ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಉದಯ್‌ಪುರ ಕೊಲೆ ಪ್ರಕರಣವನ್ನು ಕಾಲಮಿತಿಯಲ್ಲಿ ತನಿಖೆ ನಡೆಸಬೇಕು ಮತ್ತು ವಿಚಾರಣೆಯನ್ನು ತ್ವರಿತ ನ್ಯಾಯಾಲಯದಲ್ಲಿ ನಡೆಸಬೇಕು. ಘಟನಾ ಪ್ರದೇಶದಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ಘಟನೆಗೆ ಸಂಬಧಿಸಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ತನಿಖೆ ನಡೆಸುತ್ತಿದೆ. ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಮತ್ತು ರಾಜಸ್ಥಾನ ಪೊಲೀಸ್ ಇಲಾಖೆಯ ವಿಶೇಷ ತಂಡ (ಎಸ್‍ಒಜಿ)ವು ಎನ್‌ಐಎ ಜೊತೆ ಸಹಕರಿಸಲಿದೆ ಎಂದರು.
ರೂ. 50 ಲಕ್ಷ ಪರಿಹಾರ
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕನ್ಹಯ್ಯ ಅವರ ಕುಟುಂಬಕ್ಕೆ ರೂ.50 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ.
ಗೆಹ್ಲೋಟ್ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಿನ್ನೆ(ಜೂನ್ 29) ನಡೆದಿದ್ದು, ಸಭೆಯಲ್ಲಿ ಇದೊಂದು ಭಯೋತ್ಪಾದನೆ ಕೃತ್ಯವಾಗಿದೆ. ಅಂತರರಾಷ್ಟ್ರೀಯ ಉಗ್ರ ಸಂಘಟನೆಗಳ ಜೊತೆಗೆ ಹಂತಕರಿಗಿರುವ ಸಂಬಂಧದ ಬಗ್ಗೆಯೂ ತನಿಖೆ ನಡೆಸಬೇಕು. ವಿಳಂಬ ಮಾಡದೇ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಲಾಗಿದೆ.
ಕನ್ಹಯ್ಯ ಲಾಲ್ ಕೊಲೆ ಬಳಿಕ ಉದಯಪುರದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದವು. ಇಂದು (ಜೂನ್ 30) ಸಹ ಲಾಲ್ ಅವರ ಭೀಕರ ಹತ್ಯೆಯ ವಿರುದ್ಧ ಪ್ರತಿಭಟನಾ ರ‍್ಯಾಲಿಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಹಿಂದೂ ಸಂಘಟನೆಗಳಿಂದ ‘ಸರ್ವ ಹಿಂದೂ ಸಮಾಜ’ ಮೆರವಣಿಗೆ ನಡೆಸಲು ಕರೆ ನೀಡಿದ್ದರು. ಜಿಲ್ಲಾಡಳಿತದ ಅನುಮತಿಯೊಂದಿಗೆ ಟೌನ್‌ಹಾಲ್ ನಿಂದ ಕಲೆಕ್ಟರೇಟ್ ವರೆಗೆ ಶಾಂತಿಯುತವಾಗಿ ಮೆರವಣಿಗೆ ನಡೆಯಿತು. ನಗರದ ಏಳು ಪೊಲೀಸ್ ಠಾಣೆ ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ.
ಕೊಲೆ ಘಟನೆ ಖಂಡಿಸಿ ಖಾತಿಪುರ, ವೈಶಾಲಿ ನಗರ, ರಾಜಪಾರ್ಕ್, ಟೋಂಕ್ ರಸ್ತೆ, ಬಜಾಜ್ ನಗರ, ಮಾಳವೀಯ ನಗರ, ಸಂಗನೇರ್ ಸೇರಿದಂತೆ ಇತರ ಪ್ರದೇಶಗಳಲ್ಲಿನ ಮಾರುಕಟ್ಟೆಗಳನ್ನು ಮುಚ್ಚಲಾಗಿದೆ. ಹೆಚ್ಚುವರಿ ಡಿಸಿಪಿ ಉತ್ತರ ಧರ್ಮೇಂದ್ರ ಸಾಗರ್ ಮಾತನಾಡಿ ಎಲ್ಲಾ ಅಧಿಕಾರಿಗಳು ಕ್ಷೇತ್ರದಲ್ಲಿದ್ದು ಪರಿಸ್ಥಿತಿ ನಿಗಾವಹಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಾರುಕಟ್ಟೆಗಳು ಮುಚ್ಚಲ್ಪಟ್ಟಿವೆ ಮತ್ತು ಪರಿಸ್ಥಿತಿ ಶಾಂತಿಯುತವಾಗಿದೆ. ಬಂದ್ ಹಿನ್ನೆಲೆಯಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ತುರ್ತು ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದರು.
ಕಾನೂನು ಸುವ್ಯವಸ್ಥೆ ಕಾಪಾಡಲು ಉದಯಪುರದಲ್ಲಿ ಇಬ್ಬರು ಹೆಚ್ಚುವರಿ ಮಹಾನಿರ್ದೇಶಕರು, ಒಬ್ಬರು ಉಪ ಐಜಿ ಮತ್ತು ಇತರ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಪಕ್ಷದ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕಾಗಿ ಕನ್ಹಯ್ಯಾ ಲಾಲ್ ಅವರನ್ನು ಜೂನ್ 28ರಂದು ಇಬ್ಬರು ಶಿರಚ್ಛೇದನ ಮಾಡಿ ಹತ್ಯೆ ನಡೆಸಿದ್ದರು. ಮಾತ್ರವಲ್ಲದೇ ಕೊಲೆಯನ್ನು ವಿಡಿಯೋ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಇದೇ ರೀತಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಬೆದರಿಕೆ ಕುರಿತು ಪೊಲೀಸರಿಗೆ ತಿಳಿಸಿದ್ದರೂ ಕ್ರಮ ಕೈಗೊಂಡಿರಲಿಲ್ಲ
ನಮ್ಮ ತಂದೆಯವರಿಗೆ ಕಳೆದ ಕೆಲವು ದಿನಗಳಿಂದಲೇ ಬೆದರಿಕೆ ಕರೆಗಳು ಬರುತ್ತಿದ್ದವು. ಪೊಲೀಸರಿಗೆ ದೂರು ನೀಡಿದ್ದರೂ ಸಹ ಅವರು ಯಾವುದೇ ಕ್ರಮಕೈಗೊಂಡಿರಲಿಲ್ಲ ಎಂದು ಕನ್ಹಯ್ಯ ಲಾಲ್ ಪುತ್ರರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ತಂದೆಯನ್ನು ಕೊಲೆ ಮಾಡಿರುವವರನ್ನು ಎನ್‌ಕೌಂಟರ್ ಮಾಡಬೇಕು ಎಂದು ಪುತ್ರರಾದ ಯಶ್ ಹಾಗೂ ತರುಣ್ ಒತ್ತಾಯಿಸಿದ್ದಾರೆ.
ತಮ್ಮ ತಂದೆಗೆ ಕೆಲಸದ ಜಾಗದಲ್ಲೇ ಒಬ್ಬ ಬೆದರಿಕೆ ಒಡ್ಡಿದ್ದ. ಈ ಹಿನ್ನೆಲೆ 5-6 ದಿನಗಳ ಕಾಲ ಅಂಗಡಿಯನ್ನೂ ಮುಚ್ಚಿದ್ದರು. ಪೊಲೀಸರು ಸರಿಯಾದ ಸಮಯದಲ್ಲಿ ಕ್ರಮ ಕೈಗೊಂಡಿದ್ದರೆ. ಇಂದು ನಮ್ಮ ತಂದೆ ಬದುಕಿರುತ್ತಿದ್ದರು. ನಾವಿಬ್ಬರೂ ವಿದ್ಯಾರ್ಥಿಗಳಾಗಿದ್ದು, ನಮ್ಮ ಮನೆಯಲ್ಲಿ ತಂದೆ ಮಾತ್ರವೇ ದುಡಿಯುತ್ತಿದ್ದರು ಎಂದಿದ್ದಾರೆ.