ಬೆಂಗಳೂರು: ರೈತ ಕೃಷಿ ಮಾಡುವುದಕ್ಕಾಗಿ ನೀರನ್ನು ಕೇಳಿದ, ಸರಕಾರ ನೀರನ್ನು ಕೊಡದೆ, ಬೋರ್ವೆಲ್ ಹಾಕಿಸಿ ನಿಮಗೆ ವಿದ್ಯುತ್ ಕೊಡುತ್ತೇವೆ ಎಂದು ಸರಕಾರಗಳು ರೈತರ ಆಶಯಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿವೆ ಎಂದು ಅಖಿಲ ಕರ್ನಾಟಕ ವಿದ್ಯುಚ್ಛಕ್ತಿ ನೌಕರರ ಫೆಡರೇಷನ್ನಿನ ಉಪ ಪ್ರಧಾನ ಕಾರ್ಯದರ್ಶಿ ಮೊಹಮದ್ ಸಮೀಉಲ್ಲಾ ಹೇಳಿದರು.
ಸಂಯುಕ್ತ ಹೋರಾಟ-ಕರ್ನಾಟಕ ಆಯೋಜಿಸಿದ್ದ “ವಿದ್ಯುತ್ (ತಿದ್ದುಪಡಿ) ಮಸೂದೆ 2022ʼʼ ಕುರಿತು ನಡೆದ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ವಿಷಯ ಮಂಡಿಸಿದರು. ಮುಂದಯವರಿದು ಮಾತನಾಡಿದ ಅವರು, ರೈತನಿಗೆ ಉಚಿತ ವಿದ್ಯುತ್ ಕೊಡುತ್ತೇವೆ ಎಂದು ಬಿಂಬಿಸಲಾಗುತ್ತಿದೆ. ಆದರೆ ರೈತನಿಗೆ ಮುಖ್ಯವಾಗಿ ಬೇಕಾಗಿರುವುದು ನೀರು. ಸರಕಾರ ನೀರನ್ನು ಕೊಡುವ ಕೆಲಸ ಮಾಡಿದರೆ ರೈತರ ಭೂಮಿಗೆ ವಿದ್ಯುತ್ ಅಗತ್ಯವಿಲ್ಲ ಎಂದರು.
ಇದನ್ನು ಓದಿ: ವಿದ್ಯುತ್ ಮಸೂದೆ: ಜನತೆಯನ್ನು ಮತ್ತಷ್ಟು ದುಸ್ತರಗೊಳಿಸುವ ಹುನ್ನಾರ
ಆದರೆ ವಿದ್ಯುತ್ ಅನ್ನು ಅನಿವಾರ್ಯವಾಗಿಸಿದ ಸರಕಾರ ಅದನ್ನು ಉಚಿತವಾಗಿ ಕೊಡುವ ಬದಲು ಮೀಟರ್ ಅಳವಡಿಕೆ, ಅದು-ಇದು ಎಂದೆಲ್ಲ ರೈತರನ್ನು ಸುಲಿಗೆ ಮಾಡಲು ಮುಂದಾಗುತ್ತಿವೆ. ಖಾಸಗೀಕರದಿಂದ ರೈತರು ವಿದ್ಯುತ್ ಅಭಾವವನ್ನು ಎದುರಿಸುತ್ತಿದ್ದಾರೆ. ಈ ಮಸೂದೆ ಜಾರಿ ಆದರೆ, ರೈತರಿಗೆ ಒಂದೊಂದೇ ಸಂಕಷ್ಟಗಳು ಎದುರಾಗಲಿವೆ. ತಿಂಗಳಿಗೆ 10 ಸಾವಿರ ರೂ. ಶುಲ್ಕ ಬಂದರೆ ಅದನ್ನು ಕಟ್ಟಲು ಸಾಧ್ಯವೆ? ರೈತನ ಬಳಿ ಅಷ್ಟೊಂದು ಹಣ ಇರುತ್ತಾ? ಕಟ್ಟಲು ಸಾಧ್ಯಾವಾಗದೆ ಇದ್ದರೆ ಕೊನಗೆ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಾರೆ. ಆಗ ರೈತನ ಬೆಳೆಯ ಕಥೆ ಏನು? ಈ ಹೊಡೆತದಿಂದ ರೈತ ಹೊರಗಡೆ ಬರಲು ಸಾಧ್ಯವೆ ಎಂದು ಮಸೂದೆಯ ಅಪಾಯಗಳನ್ನು ವಿವರಿಸಿದರು.
ಖಾಸಗೀಕರಣದಿಂದಾಗಿ ಗ್ರಿಡ್ ಗಳು ಹಾಳಾಗಬಹುದು ಆಗ ರಾಷ್ಟವೇ ಕತ್ತಲಲ್ಲಿ ಇರಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಈ ಕಾಯ್ದೆಯ ಪರಿಣಾಮಗಳನ್ನು ಓಡಿಸ್ಸಾದ ರೈತರು ಎದುರಿಸುತ್ತಿದ್ದಾರೆ. ನಿತ್ಯ ನೋವುಗಳನ್ನು ಅನುಭವಿಸುತ್ತಿದ್ದಾರೆ. ವಿದ್ಯುತ್ ಕೊಡುವುದು ಸರಕಾರದ ಜವಾಬ್ದಾರಿ ಹಾಗೂ ಪಡೆಯುವುದು ನಮ್ಮ ಕರ್ತವ್ಯ. ಇದಕ್ಕೆ ಚ್ಯುತಿ ಬರುವ ಕೆಲಸ ಮಾಡದೆ ರೈತರ ಹಿತವನ್ನು ಸರಕಾರಗಳು ಕಾಪಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಜೆ.ಎಂ. ವೀರಸಂಗಯ್ಯ ಅವರ ಸಂಪಾದಕತ್ವದ ಕರ್ನಾಟಕ ರಾಜ್ಯ ರೈತ ಸಂಘ, ರಾಜ್ಯ ಸಮಿತಿ ಪ್ರಕಟಣೆಯ ಮೀಟರ್ ಅಳವಡಿಕೆ ಹೊರೆ…! ರೈತರಿಗೆ ಬರೆ…! ಸರ್ಕಾರದ ನಿಲುವು – ರೈತರ ತೀರ್ಮಾನ ಎಂಬ ಪುಸ್ತಕ ಬಿಡುಗಡೆಯಾಯಿತು.
ಇದನ್ನು ಓದಿ: ವಿದ್ಯುತ್ ತಿದ್ದುಪಡಿ ಮಸೂದೆ ಮಂಡಿಸಿದ ದಿನ 15 ಲಕ್ಷ ಸಿಬ್ಬಂದಿಯ ಮುಷ್ಕರ – ವಿದ್ಯುತ್ ಇಂಜಿನಿಯರುಗಳ ಒಕ್ಕೂಟ
ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ, ಕರ್ನಾಟಕ ಪ್ರಾಂತ ರೈತ ಸಂಘದ ಯು. ಬಸವರಾಜ, ಅಖಿಲ ಭಾರತ ಕಿಸಾನ್ ಸಭಾ, ಕರ್ನಾಟಕ ಡಾ. ಸಿದ್ದನಗೌಡ ಪಾಟೀಲ್, ಎಐಕೆಕೆಎಂಎಸ್ ವತಿಯಿಂದ ಹೆಚ್.ವಿ. ದಿವಾಕರ್, ದಲಿತ ಸಂಘಟನೆಗಳು ಸಮನ್ವಯ ಸಮಿತಿಯ ಮಾವಳ್ಳಿ ಶಂಕರ್, ಕರ್ನಾಟಕ ರೈತ ಸಂಘದ ಡಿ.ಹೆಚ್. ಪೂಜಾರ್, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಚಂದ್ರಪ್ಪ ಹೊಸ್ಕೇರಾ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ದೇವಿ, ಎಐಸಿಸಿಟಿಯು ಸಂಘಟನೆಯ ಪಿ ಆರ್ ಎಸ್ ಮಣಿ ಅವರುಗಳು ತಮ್ಮ ವಿಚಾರಗಳನ್ನು ಮಂಡಿಸಿ ಪ್ರತಿಕ್ರಿಯೆ ನೀಡಿದರು.
ವಿಚಾರ ಸಂಕಿರಣದ ಅಧ್ಯಕ್ಷೀಯ ಮಂಡಳಿಯಲ್ಲಿ ಕೆ.ವಿ.ಭಟ್, ಜೆ.ಎಂ. ವೀರಸಂಗಯ್ಯ, ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಕುಮಾರ್ ಸಮತಲ ನಡೆಸಿಕೊಟ್ಟಿದ್ದಾರೆ. ಪ್ರಾಸ್ತಾವಿಕ ಮಾತುಗಳನ್ನು ಕರ್ನಾಟಕ ಪ್ರಾಂತ ರೈತ ಸಂಘದ ಟಿ ಯಶವಂತ ಆಡಿದರು. ಎಐಕೆಕೆಂಎಸ್‌ಎಸ್ ನ ಹೆಚ್ ಪಿ ಶಿವಪ್ರಕಾಶ್ ವಂದನಾರ್ಪಣೆ ಮಾಡಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ