ಬೆಂಗಳೂರು: ಕೋರಮಂಗಲದಲ್ಲಿ ನಡೆದ ಕಾರು ಅಪಘಾತ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಕಾರು ಚಾಲಕನ ಅತಿವೇಗ ಹಾಗೂ ನಿರ್ಲಕ್ಷದಿಂದಾಗಿ ಬೈಕ್ ಸವಾರರಿಬ್ಬರು ಫ್ಲೈಓವರ್ ಮೇಲಿಂದ ಕೆಳಗಡೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಈ ದುರ್ಘಟನೆ ನಡೆದಿದ್ದು ಕಾರು ಚಾಲಕನ ಓವರ್ ಸ್ಪೀಡ್ ಅಪಘಾತಕ್ಕೆ ಮೂಲ ಕಾರಣ ಎನ್ನಲಾಗಿದೆ.
ನಿನ್ನೆ ರಾತ್ರಿ 9 ಗಂಟೆ 15 ನಿಮಿಷದ ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿಯ ಫ್ಲೈ ಓವರ್ ಮೇಲೆ ಈ ಅಪಘಾತ ಸಂಭವಿಸಿದ್ದು, ವೇಗವಾಗಿ ಕಾರು ಗುದ್ದಿದ ಪರಿಣಾಮ ತಮಿಳುನಾಡು ಮೂಲದ ಯುವಕ ಯುವತಿ ಇಬ್ಬರೂ ಮೇಲಿನಿಂದ ಬಿದ್ದು ಕೊನೆಯುಸಿರೆಳೆದಿದ್ದಾರೆ. ಘಟನೆಯ ಭೀಕರತೆ ಎಷ್ಟಿತ್ತೆಂದರೆ, ಸುಮಾರು ನೂರರಿಂದ ನೂರಿಪ್ಪತ್ತು ಕಿ.ಮೀ ವೇಗದಲ್ಲಿ ಬಂದ ಬಲೇನೋ ಕಾರು ಆ ಯುವಕ ಯುವತಿಗೆ ಗುದ್ದಿದಾಗ ಅವರು ಸುಮಾರು 150ಕ್ಕೂ ಹೆಚ್ಚು ಅಡಿ ದೂರಕ್ಕೆ ಹಾರಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸುಮಾರು 10 ಕಿ.ಮೀಟರ್ ಉದ್ದವಿರುವ ಎಲಿವೇಟೆಡ್ ಪ್ಲೈ ಓವರ್ ರಸ್ತೆಯಲ್ಲಿ ಸಿಲ್ಕ್ ಬೋರ್ಡ್ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿಯತ್ತ ಬರುವ ಮಾರ್ಗದಲ್ಲಿ ಚಲಿಸುತ್ತಿದ್ದ KA-01-MR-2802 ಬಲೇನೋ ಕಾರು ಹಾಗೂ ತಮಿಳು ನಾಡಿನ ನಂಬರ್ ಪ್ಲೇಟ್ ಹೊಂದಿರುವ (TN 01-BD-9218) ಬೈಕ್ ನಡುವೆ ಈ ಅಪಘಾತ ನಡೆದಿದೆ. ಸದ್ಯ ಈ ಜೋಡಿಯ ಗುರುತು ಪತ್ತೆ ಹಚ್ಚಲು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪರಿಶೀಲನೆ ಮಾಡುತ್ತಿದ್ದು, ಕಾರು ಚಾಲಕ ಹೆಬ್ಬಗೋಡಿಯ ನಿತೇಶ್ ಮೇಲೆ 279, 304 ಎ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರ ಮೃತದೇಹಗಳನ್ನು ಸೆಂಟ್ ಜಾನ್ಸ್ ಆಸ್ಪತ್ರೆಗ ರವಾನೆ ಮಾಡಿದ್ದಾರೆ. ಆದ್ರೆ ಸಾವನ್ನಪ್ಪಿದ್ದೋರು ಯಾರು ಅವರ ಹಿನ್ನೆಲೆ, ಹೆಸರು, ಎಲ್ಲಿಗೆ ಹೋಗುತ್ತಿದ್ದರು, ದುರ್ಘಟನೆಗೆ ನಿಖರ ಕಾರಣವೇನು ? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಹಿಂದೆಯೂ ರಸ್ತೆ ಅಪಘಾತ: ಎರಡು ವರ್ಷಗಳ ಹಿಂದೆಯೂ ಈ ಮೇಲ್ಸೇತುವೆಯಲ್ಲಿ ಇದೇ ಮಾದರಿಯಲ್ಲಿ ಸ್ಕೂಟರ್ ಸಮೇತ ಸವಾರರು ಬಿದ್ದಿದ್ದರು. ಇತ್ತೀಚೆಗೆ ಕೋರಮಂಗಲದಲ್ಲಿ 7 ಮಂದಿಯನ್ನು ಬಲಿ ಪಡೆದ ರಸ್ತೆ ಅಪಘಾತ ಪ್ರಕರಣ ಮಾಸುವ ಮುನ್ನವೇ ಅದೇ ಪ್ರದೇಶದ ಆಸು-ಪಾಸಿನಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ.