ಸಾಮ್ರಾಜ್ಯಶಾಹಿ ಪ್ರಾಬಲ್ಯದ ಮರುಹೇರಿಕೆಗೆ ಎರಡು ಅಸ್ತ್ರಗಳು: ನವ-ಉದಾರವಾದಿ ಆಳ್ವಿಕೆಯ ಹೇರಿಕೆ ಮತ್ತು ಯುದ್ಧಗಳಿಗೆ ಉತ್ತೇಜನೆ-ಸಮರ್ಥನೆ

-ಪ್ರೊ. ಪ್ರಭಾತ್ ಪಟ್ನಾಯಕ್
-ಅನು:ಕೆ.ಎಂ,ನಾಗರಾಜ್

ಈಗ ಪರಸ್ಪರ ಸ್ಪರ್ಧಿಸದೆ ಒಂದಾಗಿರುವ ಸಾಮ್ರಾಜ್ಯಶಾಹಿಗಳು ತಮ್ಮ ಹಿಡಿತದಿಂದ ಕಳಚಿಕೊಂಡ ಪ್ರದೇಶಗಳ ಮೇಲೆ ಪುನಃ ಹಿಡಿತ ಸ್ಥಾಪಿಸುವ ಉದ್ದೇಶಕ್ಕಾಗಿ ಬಳಸುವ ಎರಡು ಅಸ್ತ್ರಗಳೆಂದರೆ: ನಿರ್ವಸಾಹತೀಕರಣದ ಸಾರವನ್ನೇ ತಿರಸ್ಕರಿಸುವ ನವ-ಉದಾರವಾದಿ ಆಳ್ವಿಕೆಯನ್ನು ವಿಶ್ವದ ಮೇಲೆ ಹೇರುವುದು ಮತ್ತು ಈ ಅಸ್ತ್ರವು ಒಂದು ವೇಳೆ ಸಾಕಾಗುವುದಿಲ್ಲ ಎಂದಾದರೆ, ಯುದ್ಧಗಳನ್ನು ಆಶ್ರಯಿಸುವುದು. ಇವುಗಳಲ್ಲಿ ಮೊದಲನೆಯದು ಎಲ್ಲೆಡೆಗಳಲ್ಲೂ ಜನರಿಗೆ ತೀವ್ರ ಸಂಕಟವನ್ನು ತರುತ್ತಿದೆ ಮತ್ತು ಕೊನೆಗೆ ಒಂದು ನವ- ಫ್ಯಾಸಿಸ್ಟ್ ಆಳ್ವಿಕೆಯನ್ನು ಹೇರುತ್ತಿದೆ. ಮತ್ತೊಂದು ಮನುಕುಲವನ್ನು ವಿನಾಶದತ್ತ ತಳ್ಳುತ್ತಿದೆ. ಪ್ರಸ್ತುತ ನಡೆಯುತ್ತಿರುವ ಎರಡೂ ಯುದ್ಧಗಳು ಸಾಮ್ರಾಜ್ಯಶಾಹಿಯ ಉತ್ತೇಜನೆಯಿಂದ ಮತ್ತು ಸಮರ್ಥನೆಯಿಂದಲೇ ನಡೆಯುತ್ತಿದ್ದು ಇವುಗಳಲ್ಲಿ ಪರಮಾಣು ಅಸ್ತ್ರಗಳ ಬಳಕೆಯ ಅಪಾಯಕಾರಿ ಸಂಭಾವ್ಯತೆಯೂ ಇದೆ.

ಹಣಕಾಸು ಬಂಡವಾಳವು ತಾನು ಪ್ರಭಾವ ಹೊಂದಿರುವ ವಲಯಗಳನ್ನು ಮತ್ತು ತಾನು ಹೊಂದಿರುವ ಭೂ-ಪ್ರದೇಶವನ್ನು ವಿಸ್ತರಿಸುವ ಪ್ರಯತ್ನವನ್ನು ತಪ್ಪದೆ ಮಾಡುತ್ತದೆ ಎಂಬುದನ್ನು ಲೆನಿನ್ ತಮ್ಮ ʼಸಾಮ್ರಾಜ್ಯಶಾಹಿʼ ಎಂಬ ಕೃತಿಯಲ್ಲಿ ಬರೆದಿದ್ದಾರೆ. ಇದನ್ನು ಅವರು ಬರೆದ ಕಾಲಘಟ್ಟದಲ್ಲಿ ಸಾಮ್ರಾಜ್ಯಶಾಹಿ ದೇಶಗಳ ನಡುವೆ ಯುದ್ಧಗಳು ನಡೆಯುತ್ತಿದ್ದವು. ಮಾರುಕಟ್ಟೆಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವುದಕ್ಕಾಗಿ ಸಾಮ್ರಾಜ್ಯಶಾಹಿ ದೇಶವೊಂದರ ಹಣಕಾಸು ಬಂಡವಾಳವು ಮತ್ತೊಂದು ಸಾಮ್ರಾಜ್ಯಶಾಹಿ ದೇಶದ ಹಣಕಾಸು ಬಂಡವಾಳದೊಂದಿಗೆ ಜಿದ್ದಿಗೆ ಇಳಿಯುತ್ತಿದ್ದ ಕಾರಣದಿಂದಾಗಿ ಈ ಯುದ್ಧಗಳು ಸಂಭವಿಸುತ್ತಿದ್ದವು ಮತ್ತು ಅವು ಇಡೀ ವಿಶ್ವವನ್ನು ಪೂರ್ಣವಾಗಿ ಮತ್ತು ವೇಗವಾಗಿ ವಿಭಜಿಸುವಲ್ಲಿ ಪರಿಣಮಿಸಿದವು.

ತದನಂತರ ಯಾವುದೇ “ಖಾಲಿ ಸ್ಥಳ” ಉಳಿದಿರಲಿಲ್ಲ, ಪ್ರತಿಸ್ಪರ್ಧಿ ಹಣಕಾಸು – ಕೂಟಮಂದಿಯ ರಾಜ್ಯಭಾರಗಳ (oligopolies) ನಡುವಿನ ಯುದ್ಧಗಳ ಮೂಲಕ ವಿಶ್ವವನ್ನು ಪುನರ್ವಿಭಜಿಸುವುದು ಮಾತ್ರ ಸಾಧ್ಯವಿತ್ತು. ಆದರೆ ವಾಸ್ತವವಾಗಿಯೂ ಹರಿಯಬಿಟ್ಟ ಈ ಯುದ್ಧಗಳಿಂದಾಗಿ ಸಾಮ್ರಾಜ್ಯಶಾಹಿಯು ದುರ್ಬಲಗೊಳ್ಳುವಂತಾಯಿತು ಮತ್ತು ಅದರ ಹಿಡಿತದಲ್ಲಿದ್ದ ಕೆಲವು ಪ್ರದೇಶಗಳು ಸಮಾಜವಾದಿ ಕ್ರಾಂತಿಗಳಿಂದಾಗಿ ಮತ್ತು ಸಮಾಜವಾದದ ಸಹಾಯದಿಂದ ನಡೆದ ನಿರ್ವಸಾಹತೀಕರಣ ಪ್ರಕ್ರಿಯೆಯ ಮೂಲಕ ಅದರಿಂದ ಸಿಡಿದು ಅದರ ಹಿಡಿತದಿಂದ ತಪ್ಪಿಸಿಕೊಂಡವು.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ನಿಂದ 87 ಸಾವಿರ ಹಣ ಅಪರಿಚಿತರ ಮಾಯ: ವಿಮಾನ ಹತ್ತುವ ಮೊದಲು ಲಾಂಜ್‌ಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ವಂಚನೆ

ಬಂಡವಾಳದ ಕೇಂದ್ರೀಕರಣ ಮತ್ತಷ್ಟು ಹೆಚ್ಚಿ, ಅದರಿಂದಾಗಿ ಹೆಚ್ಚು ಹೆಚ್ಚು ಕ್ರೋಢೀಕರಣಗೊಂಡುದು, ಒಂದೆಡೆಯಲ್ಲಿ, ಸಾಮ್ರಾಜ್ಯಶಾಹಿ ಶಕ್ತಿಗಳ ನಡುವಿನ ಪೈಪೋಟಿಯನ್ನು ಹಿನ್ನೆಲೆಗೆ ಸರಿಸುತ್ತದೆ. ಏಕೆಂದರೆ, ಈಗ ಬಂಡವಾಳ ಎಲ್ಲಿಗೆ ಬೇಕೋ ಅಲ್ಲಿಗೆ ಹರಿದಾಡಲು ಇಡೀ ಜಗತ್ತನ್ನು ತನ್ನ ಕಾರ್ಯಕ್ಷೇತ್ರವಾಗಿ ಆವರಿಸಲು ಬಯಸುತ್ತದೆಯೇ ವಿನಃ ಪ್ರತಿಸ್ಪರ್ಧಿ ಶಕ್ತಿಗಳ ಪ್ರಭಾವದ ವಲಯಗಳಾಗಿ ವಿಭಜನೆಯಾಗುವುದನ್ನಲ್ಲ. ಅದು ಮತ್ತೊಂದೆಡೆಯಲ್ಲಿ, ಈಗ ಒಂದಾಗಿರುವ ಸಾಮ್ರಾಜ್ಯಶಾಹಿಯು ತನ್ನ ಹಿಡಿತದಿಂದ ಕಳಚಿಕೊಂಡ ಪ್ರದೇಶಗಳ ಮೇಲೆ ಪುನಃ ಹಿಡಿತ ಸ್ಥಾಪಿಸುವ ಪ್ರಯತ್ನದಲ್ಲಿ ತೊಡಗುವಂತೆ ಮಾಡಿದೆ. ಈ ಉದ್ದೇಶಕ್ಕಾಗಿ
ಸಾಮ್ರಾಜ್ಯಶಾಹಿಯು ಬಳಸುವ ಎರಡು ಅಸ್ತ್ರಗಳೆಂದರೆ: ನಿರ್ವಸಾಹತೀಕರಣದ ಪರಿಣಾಮಗಳ ಸಾರವನ್ನೇ ತಿರಸ್ಕರಿಸುವ ನವ-ಉದಾರವಾದಿ ಆಳ್ವಿಕೆಯನ್ನು ವಿಶ್ವದ ಮೇಲೆ ಹೇರುವುದು ಮತ್ತು ಈ ಅಸ್ತ್ರವು (ನವ-ಉದಾರವಾದಿ ಆಳ್ವಿಕೆಯು) ಒಂದು ವೇಳೆ ಸಾಕಾಗುವುದಿಲ್ಲ ಎಂದಾದರೆ, ಯುದ್ಧಗಳನ್ನು ಆಶ್ರಯಿಸುವುದು.
ನವ-ಉದಾರವಾದಿ ಆಳ್ವಿಕೆಯು ಕಾರ್ಮಿಕ ವರ್ಗವನ್ನು ಎಲ್ಲ ದೇಶಗಳಲ್ಲೂ ದುರ್ಬಲಗೊಳಿಸಿದೆ.

ಮುಂದುವರಿದ ದೇಶಗಳಲ್ಲಿ, ಕಾರ್ಖಾನೆಗಳನ್ನು ಕಡಿಮೆ-ವೇತನ ಹೊಂದಿದ ಮೂರನೇ ಜಗತ್ತಿನ ದೇಶಗಳಿಗೆ ಸ್ಥಳಾಂತರಿಸುವ ಬೆದರಿಕೆಯನ್ನು ಕಾರ್ಮಿಕರ ಮುಂದೆ ಇರಿಸಿದೆ. ಅವರ ವೇತನಗಳು ಕಾರ್ಖಾನೆಗಳ ಸ್ಥಳಾಂತರದಿಂದಾಗಿ ಸ್ಥಗಿತಗೊಂಡಿವೆ. ಮೂರನೇ ಜಗತ್ತಿನ ದೇಶಗಳಲ್ಲಿ, ಇಂತಹ ಸ್ಥಳಾಂತರವು ಶ್ರಮ ಮೀಸಲುಗಳ (ನಿರುದ್ಯೋಗದ) ಸಾಪೇಕ್ಷ ಗಾತ್ರವನ್ನು ಕಡಿಮೆ ಮಾಡಿಲ್ಲ. ಶ್ರಮ ಮೀಸಲುಗಳು ಇಳಿಕೆಯಾಗದ ಕಾರಣದಿಂದಾಗಿ ಇಲ್ಲಿಯೂ ನಿಜ ವೇತನಗಳು ಸ್ಥಗಿತಗೊಂಡಿವೆ. ವಿಶ್ವಾದ್ಯಂತ ನಿರ್ದಿಷ್ಟ ನಿಜ ವೇತನವು ಸ್ಥಗಿತಗೊಂಡಿದ್ದರೂ ಸಹ, ಕಾರ್ಮಿಕ ಉತ್ಪಾದಕತೆಗಳು (ಇದು ಮೂರನೇ ಜಗತ್ತಿನ ನಿರುದ್ಯೋಗದ ಗಾತ್ರವು ಕಡಿಮೆಯಾಗದಿರಲು ಕಾರಣವಾಗಿದೆ) ಎಲ್ಲೆಡೆಯೂ ಹೆಚ್ಚಿವೆ. ಉತ್ಪಾದಕತೆ ವೃದ್ಧಿಸಿರುವುದರಿಂದಾಗಿ ಇಡೀ ವಿಶ್ವ ಅರ್ಥವ್ಯವಸ್ಥೆಯಲ್ಲಿ ಮತ್ತು ಒಂದೊAದೂ ದೇಶದಲ್ಲೂ ಆರ್ಥಿಕ ಮಿಗುತಾಯದ ಪಾಲು ಹೆಚ್ಚುತ್ತಿದೆ.

ಮಿಗುತಾಯದ ಹೆಚ್ಚಳವು ಆರ್ಥಿಕ ಅಸಮಾನತೆಯಲ್ಲಿ (ಮೂರನೇ ಜಗತ್ತಿನ ಬಹುತೇಕ ದೇಶಗಳಲ್ಲಿ ಪೌಷ್ಟಿಕಾಂಶದ ಅಭಾವದಿಂದ ಬಳಲುತ್ತಿರುವವರ ಅನುಪಾತವು ಹೆಚ್ಚಿದೆ) ತೀಕ್ಷ್ಣವಾದ ಏರಿಕೆಯನ್ನು ಮಾತ್ರ ತಂದಿಲ್ಲ, ನಿಖರವಾಗಿ ಈ ಕಾರಣದಿಂದಾಗಿಯೇ, ಅದು ಅತಿ-ಉತ್ಪಾದನೆಯ (ದುಡಿಯುವ ಜನರು, ಮಿಗುತಾಯದ ಮೇಲೆ ಬದುಕುವವರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಆದಾಯದ ಬಳಕೆ ಮಾಡುತ್ತಾರೆ) ಪ್ರವೃತ್ತಿಯನ್ನೂ ತಂದಿದೆ.

ನವ-ಫ್ಯಾಸಿಸ್ಟ್ ಆಳ್ವಿಕೆಯತ್ತ

ಅತಿ-ಉತ್ಪಾದನೆಯ ಸಮಸ್ಯೆಗೆ ಕೀನ್ಸ್ ಸೂಚಿಸಿದ ರೂಢಿಗತ ಪರಿಹಾರವೆಂದರೆ, ಸರ್ಕಾರದ ಬೃಹತ್ ವೆಚ್ಚಗಳ ಮೂಲಕ ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುವುದು. ಆದರೆ, ನವ-ಉದಾರವಾದಿ ಆಳ್ವಿಕೆಯ ಅಡಿಯಲ್ಲಿ ಕೀನ್ಸ್ ಸೂಚಿಸಿದ ಪರಿಹಾರವು ಕೆಲಸ ಮಾಡದು. ಏಕೆಂದರೆ, ಅಂತಹ ವೆಚ್ಚಗಳಿಗಾಗಿ ಬೃಹತ್ ವಿತ್ತೀಯ ಕೊರತೆಯ ಮೂಲಕ ಅಥವಾ ಶ್ರೀಮಂತರ ಮೇಲೆ ವಿಧಿಸುವ ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಹಣ ಒದಗಿಸಿಕೊಳ್ಳಬೇಕಾಗುತ್ತದೆ. ಆದರೆ ಈ ಎರಡೂ ವಿಧಾನಗಳೆಂದರೇ ನವ-ಉದಾರವಾದಿ ಆಳ್ವಿಕೆಗೆ ಹೇವರಿಕೆ.

ಏಕೆಂದರೆ, ಈ ಎರಡೂ ವಿಧಾನಗಳನ್ನೂ ಹಣಕಾಸು ಬಂಡವಾಳವು ಸಹಿಸುವುದಿಲ್ಲ. ಈ ಸನ್ನಿವೇಶದಲ್ಲಿ ಒಂದು ದೇಶದ ವ್ಯಾಪ್ತಿಗೆ ಸೀಮಿತವಾದ ರಾಷ್ಟ್ರ-ಪ್ರಭುತ್ವವು ಜಾಗತೀಕರಣಗೊಂಡ ಹಣಕಾಸು ಬಂಡವಾಳವನ್ನು ಎದುರುಹಾಕಿಕೊಂಡರೆ, ಅದು ಕ್ಷಣಾರ್ಧದಲ್ಲಿ ತನ್ನ ಹೂಡಿಕೆಯನ್ನು (ಬಂಡವಾಳವನ್ನು) ಹಿಂತೆಗೆದು ದೇಶದಿಂದ ಹೊರಕ್ಕೆ ಹಾರಿ ಹೋಗಿ ಬಿಡಬಹುದು. ಹಾಗಾಗಿ, ಹಣಕಾಸು ಬಂಡವಾಳದ ಅಪೇಕ್ಷೆಯನ್ನು ಗೌರವಿಸುವುದು ಅದಕ್ಕೆ ಅನಿವಾರ್ಯವಾಗುತ್ತದೆ. ನವ-ಉದಾರವಾದಿ ಬಂಡವಾಳಶಾಹಿಯಲ್ಲಿ ಅಂತರ್ಗತವಾಗಿರುವ ಅತಿ-ಉತ್ಪಾದನೆಯ ಪ್ರವೃತ್ತಿಯು ವಿಶ್ವ ಅರ್ಥವ್ಯವಸ್ಥೆಯನ್ನು
ಸ್ಥಗಿತತೆಯತ್ತ ತಳ್ಳುತ್ತಿರುವ ಸನ್ನಿವೇಶದಲ್ಲಿ ನವ-ಫ್ಯಾಸಿಸಂ ತಲೆ ಎತ್ತುತ್ತಿದೆ. ಈ ಪರಿಸ್ಥಿತಿಯಲ್ಲಿ ಕಾರ್ಪೊರೇಟ್ ಬಂಡವಾಳವು ಒಂದು ದಿಕ್ಕು ತಪ್ಪಿಸುವ ಸಂಕಥನವನ್ನು ಒದಗಿಸುವ ನವ-ಫ್ಯಾಸಿಸ್ಟ್ಟರೊಂದಿಗೆ ಮೈತ್ರಿ ಮಾಡಿಕೊಂಡಿದೆ. ಈ ಸಂಕಥನದಲ್ಲಿ ಜನರ ಲೌಕಿಕ ಜೀವನದ ದಿನ ನಿತ್ಯದ ಸಮಸ್ಯೆಗಳ ಬಗ್ಗೆ ಕಾಳಜಿಯಿರುವುದಿಲ್ಲ.

ಇದನ್ನೂ ನೋಡಿ: ಸ್ವತಂತ್ರ ಡಿಜಿಟಲ್ ಮಾಧ್ಯಮದ ಮುಂದಿರುವ ಸವಾಲುಗಳು” – ಬಿ.ಎಂ. ಹನೀಫ್ Janashakthi Media

ಅದು ಅನ್ಯ ಎಂದು ಬಿಂಬಿಸಲಾದ ಕೆಲವು ದುರದೃಷ್ಟಕರ ಧಾರ್ಮಿಕ ಅಥವಾ ಜನಾಂಗೀಯ ಅಲ್ಪಸಂಖ್ಯಾತರ ವಿರುದ್ಧ ದ್ವೇಷವನ್ನು ಉಂಟುಮಾಡುವ ವಿಷಯಕ್ಕೆ ಸಂಬಂಧಿಸಿರುತ್ತದೆ. ಆದಾಗ್ಯೂ, ಈ ನವ- ಫ್ಯಾಸಿಸ್ಟರು ಕೆಲವು ದೇಶಗಳಲ್ಲಿ ಅಧಿಕಾರವನ್ನು ಹಿಡಿದಿದ್ದಾರೆ ಮತ್ತು ಇನ್ನೂ ಕೆಲವು ದೇಶಗಳಲ್ಲಿ ನೇಪಥ್ಯದಲ್ಲಿ ಕಾಯುತ್ತಿದ್ದಾರೆ. ಅಷ್ಟಾಗಿಯೂ ಒಂದು ಉದಾರ ಧ್ಯೇಯದ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ವಶಪಡಿಸಿಕೊಳ್ಳುವ ಅಧಿಕಾರದಿಂದ ಒಂದು ಫ್ಯಾಸಿಸ್ಟ್
ಪ್ರಭುತ್ವವನ್ನು ನಿರ್ಮಿಸುವ ಪ್ರಯಾಣವು ಹೆಚ್ಚು-ಕಡಿಮೆ ಸುದೀರ್ಘವೇ ಆಗಿರುತ್ತದೆ. ಮತ್ತು, ಅಧಿಕಾರ ಹಿಡಿವ ನವ-ಫ್ಯಾಸಿಸ್ಟರಿಗೂ ಸಹ ಈ ಅತಿ-ಉತ್ಪಾದನೆಯ ಪ್ರವೃತ್ತಿಯನ್ನು ತಡೆಯುವುದು ಸಾಧ್ಯವಿಲ್ಲ: ಜಾಗತಿಕವಾಗಿ ಹರಿದಾಡುವ ಹಣಕಾಸು ಬಂಡವಾಳವನ್ನು ಎದುರಿಸುತ್ತಿರುವ ಪ್ರಭುತ್ವವು ಒಂದು ರಾಷ್ಟ್ರ-ಪ್ರಭುತ್ವವಾಗಿಯೇ ಉಳಿದಿರುವುದರಿಂದ, ನವ-ಫ್ಯಾಸಿಸ್ಟ್ ಸರ್ಕಾರವೂ ಸಹ ನವ- ಉದಾರವಾದಿ ಆಳ್ವಿಕೆಯ ಅಡಿಯಲ್ಲಿ ಶ್ರೀಮಂತರ ಮೇಲೆ ವಿಧಿಸುವ ತೆರಿಗೆಗಳನ್ನು ಹೆಚ್ಚಿಸುವ ಮೂಲಕವಾಗಲಿ ಅಥವಾ ಬೃಹತ್ ವಿತ್ತೀಯ ಕೊರತೆಯ ಮೂಲಕವಾಗಲಿ ಹಣ ಒದಗಿಸಿಕೊಂಡು ಒಟ್ಟು ಬೇಡಿಕೆಯನ್ನು ಹೆಚ್ಚಿಸುವಲ್ಲಿ, ಈ ಮೊದಲಿನಂತೆಯೇ ಅಸಮರ್ಥವಾಗಿಯೇ ಇರುತ್ತದೆ,.

ಒಂದು ಪ್ರಶ್ನೆಯನ್ನು ಕೇಳಬಹುದು: ಸ್ಥಗಿತತೆಯ ಪ್ರವೃತ್ತಿಯನ್ನು ಎದುರಿಸುವಲ್ಲಿ ರಾಷ್ಟ್ರ-ಪ್ರಭುತ್ವವು ಹೊಂದಿರುವ ಈ ಅಸಮರ್ಥತೆಯ ಮತ್ತು ಅದರ ಕಾರಣದಿಂದಾಗಿ ನವ-ಫ್ಯಾಸಿಸಂ ಮೇಲುಗೈ ಪಡೆಯುತ್ತಿರುವುದರ ಹೊಣೆಯನ್ನು ಸಾಮ್ರಾಜ್ಯಶಾಹಿಯ ಮೇಲೆ ಏಕೆ ಹೊರಿಸಬೇಕು? ಸರಳವಾದ ಉತ್ತರವೆಂದರೆ, ಜಾಗತಿಕರಣಗೊಂಡ ಹಣಕಾಸು ಬಂಡವಾಳದ ಸುಳಿಯಿಂದ ತನ್ನನ್ನು ಬಿಡಿಸಿಕೊಳ್ಳುವ ಯಾವುದೇ ದೇಶದ ಪ್ರಯತ್ನವು ಮತ್ತು ಬೇಡಿಕೆಯನ್ನು ಹೆಚ್ಚಿಸುವ ಸಲುವಾಗಿ ಪ್ರಭುತ್ವವನ್ನು ಬಳಸಿಕೊಳ್ಳುವ ಯಾವುದೇ ದೇಶದ ಪ್ರಯತ್ನವು ಯುಎಸ್ ನೇತೃತ್ವದ ಸಾಮ್ರಾಜ್ಯಶಾಹಿ ದೇಶಗಳ ಕೂಟವು ವಿಧಿಸುವ ಆರ್ಥಿಕ ನಿರ್ಬಂಧಗಳಿಗೆ ಗುರಿಯಾಗುತ್ತದೆ. ಸಾಮ್ರಾಜ್ಯಶಾಹಿಯು ತನ್ನ ಪ್ರಾಬಲ್ಯವನ್ನು ಪುನಃ ದೃಢಪಡಿಸಿಕೊಳ್ಳಲು ಬಳಸುವ ಮೊದಲ ಅಸ್ತ್ರವು, ಸಂಕ್ಷಿಪ್ತವಾಗಿ ಹೇಳುವುದಾದರೆ, ಎಲ್ಲೆಡೆಗಳಲ್ಲೂ ಜನರಿಗೆ ತೀವ್ರ ಸಂಕಟವನ್ನು ತರುತ್ತದೆ ಮತ್ತು ಕೊನೆಗೆ ಒಂದು ನವ-ಫ್ಯಾಸಿಸ್ಟ್ ಆಳ್ವಿಕೆಯನ್ನು ಹೇರುತ್ತದೆ.

ವಿಶ್ವದ ಕೆಲವು ಪ್ರದೇಶಗಳ ಮೇಲೆ ಸಾಮ್ರಾಜ್ಯಶಾಹಿಯು ತನ್ನ ಪ್ರಾಬಲ್ಯವನ್ನು ಪುನಃ ದೃಢಪಡಿಸಿಕೊಳ್ಳುವ ಎರಡನೆಯ ಮಾರ್ಗವೆಂದರೆ ಅದು ಯುದ್ಧಗಳ ಮೂಲಕವೇ. ಯುದ್ಧಗಳು ಈಗ ವಿಶ್ವವನ್ನು ವಿನಾಶದತ್ತ ತಳ್ಳುತ್ತಿವೆ. ಪ್ರಸ್ತುತ ನಡೆಯುತ್ತಿರುವ ಎರಡೂ ಯುದ್ಧಗಳು ಸಾಮ್ರಾಜ್ಯಶಾಹಿಯ ಉತ್ತೇಜನೆಯಿಂದ ಮತ್ತು ಸಮರ್ಥನೆಯಿಂದಲೇ ನಡೆಯುತ್ತಿವೆ. ಇವುಗಳಲ್ಲಿ ಪರಮಾಣು ಅಸ್ತ್ರಗಳ ಬಳಕೆಯ ಸಂಭಾವ್ಯತೆಯೂ ಇದೆ. ಮೊದಲು ಉಕ್ರೇನ್ ಯುದ್ಧವನ್ನು ತೆಗೆದುಕೊಳ್ಳಿ. ಸೋವಿಯತ್ ಒಕ್ಕೂಟವು ಪತನಗೊಂಡಾಗ, ಮಿಖಾಯಿಲ್ ಗೋರ್ಬಚೇವ್ ಅವರಿಗೆ ನ್ಯಾಟೋ (ಯುಎಸ್ ನೇತೃತ್ವದ ಮಿಲಿಟರಿ ಕೂಟ) ವ್ಯಾಪ್ತಿಯನ್ನು ಪೂರ್ವ ದಿಕ್ಕಿನಲ್ಲಿ ರಷ್ಯಾದತ್ತ ವಿಸ್ತರಿಸುವುದಿಲ್ಲ ಎಂದು ಭರವಸೆ ನೀಡಲಾಗಿತ್ತು. ಆದರೆ, ನ್ಯಾಟೋವನ್ನು ಪೂರ್ವದ ಉಕ್ರೇನಿನವರೆಗೂ ವಿಸ್ತರಿಸಲಾಯಿತು. ಸ್ವತಃ ಉಕ್ರೇನ್‌ಗೆ ನ್ಯಾಟೋ ಸೇರುವ ಇಷ್ಟವಿರಲಿಲ್ಲ.

ನ್ಯಾಟೋ ಸೇರುವ ಕಲ್ಪನೆಯನ್ನು ವಿರೋಧಿಸಿದ ಉಕ್ರೇನಿನ ವಿದ್ಯುಕ್ತ ಚುನಾಯಿತ ಅಧ್ಯಕ್ಷರಾದ ವಿಕ್ಟರ್ ಯಾನುಕೋವಿಚ್ ಅವರನ್ನು ಒಂದು ದಂಗೆಯ ಮೂಲಕ ಅಧಿಕಾರದಿಂದ ಇಳಿಸಲಾಯಿತು. ಈ ದಂಗೆಯು ಯುಎಸ್ ಅಧಿಕಾರಿ ವಿಕ್ಟೋರಿಯಾ ನುಲ್ಯಾಂಡ್ ಅವರ ಮೇಲ್ವಿಚಾರಣೆಯಲ್ಲಿ ವಿನ್ಯಾಸಗೊಳಿಸಲ್ಪಟ್ಟಿತ್ತು. ಎರಡನೇ ಮಹಾಯುದ್ಧದ ಸಮಯದಲ್ಲಿ ಹಿಟ್ಲರನ ಸೈನ್ಯದೊಂದಿಗೆ ಸಹಕರಿಸಿದ ಸ್ಟೆಪನ್ ಬಂಡೇರಾ ಅವರ ಬೆಂಬಲಿಗರನ್ನು ಸರ್ಕಾರದಲ್ಲಿ ಕುಳ್ಳಿರಿಸಲಾಯಿತು. ಈ
ಹೊಸ ಸರ್ಕಾರವು ನ್ಯಾಟೋ ಸೇರುವ ಬಯಕೆಯನ್ನು ವ್ಯಕ್ತಪಡಿಸಿದ್ದು ಮಾತ್ರವಲ್ಲದೆ ರಷಿಯನ್ ಭಾಷೆ ಮಾತನಾಡುವ ಡೊನ್ಬಾಸ್ ಪ್ರದೇಶದೊಂದಿಗೆ ಸಂಘರ್ಷವನ್ನು ಆರಂಭಿಸಿತು. ಈ ಸಂಘರ್ಷವು ರಷ್ಯಾ ಮಧ್ಯಪ್ರವೇಶಿಸುವ ಮುನ್ನವೇ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿತು.

ಶಾಂತಿಯ ಮಾರ್ಗದಲ್ಲಿ ಅಡ್ಡ ನಿಂತಿರುವವರು ಯಾರು?

ಈ ವಿಷಯಗಳ ಬಗ್ಗೆ ಒಂದು ಅಗ್ನಿ ಪರೀಕ್ಷೆಯ (ಟiಣmus ಣesಣ)** ಪ್ರಶ್ನೆಯನ್ನು ನಾವು ಕೇಳೋಣ: ಉಕ್ರೇನ್ ಯುದ್ಧದಲ್ಲಿ ಯಾರು ಶಾಂತಿ ಸ್ಥಾಪನೆಯ ಪರ ಇದ್ದಾರೆ ಮತ್ತು ಯಾರು ಅದನ್ನು ವಿರೋಧಿಸುತ್ತಾರೆ? ಫ್ರಾನ್ಸ್ ಮತ್ತು ಜರ್ಮನಿಯ ಸಹಾಯದಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆದ ಮಿನ್ಸ್ಕ್ ಒಪ್ಪಂದವನ್ನು ಯುಎಸ್ ಮತ್ತು ಬ್ರಿಟನ್ ತಲೆಕೆಳಗೆ ಮಾಡಿ ಬಿಟ್ಟವು. ಬ್ರಿಟಿಷ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಈ ಒಪ್ಪಂದವನ್ನು ಸ್ವೀಕರಿಸದಂತೆ ಉಕ್ರೇನನ್ನು ತಡೆಯಲು ಕೀವ್‌ಗೆ ಹಾರಿ ಹೋದರು. ಬೇರೆ ಬೇರೆ ಸಾಮ್ರಾಜ್ಯಶಾಹಿ ಶಕ್ತಿಗಳು ಬೇರೆ ಬೇರೆ ಧ್ವನಿಯಲ್ಲಿ ಮಾತನಾಡುತ್ತಿವೆ ಎಂದು ಭಾವಿಸಲಾಗದು.

ಏಕೆಂದರೆ, ಮಿನ್ಸ್ಕ್ ಒಪ್ಪಂದವು ಯುಕ್ರೇನ್ ಯುದ್ಧಕ್ಕೆ ತಯಾರಿ ಮಾಡಿಕೊಳ್ಳುವ ವರೆಗೆ ಸಮಯಾವಕಾಶವನ್ನು ಪಡೆಯುವ ತಂತ್ರವಾಗಿತ್ತು ಎಂಬುದನ್ನು ಅಂದಿನ ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಈಗ ಒಪ್ಪಿಕೊಂಡಿದ್ದಾರೆ. ನಿಸ್ಸಂದೇಹವಾಗಿ ಎದ್ದುಕಾಣುವ ಒಂದು ಸಂಗತಿಯೆಂದರೆ, ಉಕ್ರೇನ್ ಯುದ್ಧವು ಮೂಲತಃ
ರಷ್ಯಾವನ್ನು ಸಾಮ್ರಾಜ್ಯಶಾಹಿಯ ಪ್ರಾಬಲ್ಯದೊಳಗೆ ತರುವ ಒಂದು ಸಾಧನವಾಗಿದೆ ಮತ್ತು ಇದು ಸೋವಿಯತ್ ಒಕ್ಕೂಟದ ಪತನದ ನಂತರ ಸಾಮ್ರಾಜ್ಯಶಾಹಿಯ ಒಂದು ಯೋಜನೆಯಾಗಿತ್ತು ಕೂಡ. ಇದನ್ನು ಬೋರಿಸ್ ಯೆಲ್ಟ್ಸಿನ್ ಅಧ್ಯಕ್ಷತೆಯ ಅವಧಿಯಲ್ಲೇ ಬಹುಪಾಲು ಸಾಧಿಸಲಾಗಿತ್ತು.

ಇದನ್ನೂ ಓದಿ: ಎಡೆಬಿಡದೇ ಸುರಿಯುತ್ತಿರುವ ಮಳೆಗೆ ನಾಳೆಯೂ ಶಾಲೆಗಳಿಗೆ ರಜೆ: ಕಾಲೇಜುಗಳಿಗೆ ರಜೆ ಘೋಷಿಸಲಾಗಿಲ್ಲ

ಈಗ ಇನ್ನೊಂದು ಯುದ್ಧವನ್ನು ತೆಗೆದುಕೊಳ್ಳಿ. ಪ್ಯಾಲೇಸ್ಟಿನಿಯನ್ ಜನರ ವಿರುದ್ಧ ಮತ್ತು ಈಗ ಲೆಬನಾನ್ ವಿರುದ್ಧ ದಿಗ್ಭ್ರಮೆಗೊಳಿಸುವ ಕ್ರೌರ್ಯ ಮತ್ತು ನಿರ್ದಯತೆಯೊಂದಿಗೆ ಇಸ್ರೇಲ್ ಯುದ್ಧದಲ್ಲಿ ತೊಡಗಿದೆ. ಯುಎಸ್ ಸಾಮ್ರಾಜ್ಯಶಾಹಿಯಿಂದ ಇಸ್ರೇಲ್‌ಗೆ ದೊರೆತ ಸಂಪೂರ್ಣ ಬೆಂಬಲವು ಮೇಲು ನೋಟದಲ್ಲಿ ಯಾವುದೇ ಸಾಮ್ರಾಜ್ಯಶಾಹಿ ಯೋಜನೆಗಳಿಗಿಂತ ಹೆಚ್ಚಾಗಿ ಅಮೆರಿಕಾದ ರಾಜಕೀಯದಲ್ಲಿ ಝಿಯಾನಿಸ್ಟ್ ಲಾಬಿಯ ಬಲದ ಪ್ರತಿಬಿಂಬವಾಗಿದೆ ಎಂದು ತೋರುತ್ತದೆ. ಆದರೆ, ಇದು ಒಂದು ತಪ್ಪು ಅನಿಸಿಕೆ. ಸಾಮ್ರಾಜ್ಯಶಾಹಿಯು ಇಸ್ರೇಲಿನ ನೆಲಸಿಗ ವಸಾಹತುಶಾಹಿ ಯೋಜನೆಯನ್ನು ಕಾರ್ಯಗತಗೊಳಿಸಲು ಇಸ್ರೇಲ್ ಇಂದು ನಡೆಸುತ್ತಿರುವನನರಮೇಧವನ್ನು ಮತ್ತು ನಾಳೆಯ ಸಾಮೂಹಿಕ ಜನಾಂಗೀಯ ಶುದ್ಧೀಕರಣವನ್ನು ಉತ್ತೇಜಿಸುವಷ್ಟಕ್ಕೆ ಮಾತ್ರವೇ ಶಾಮೀಲಾಗಿಲ್ಲ;
ಇಸ್ರೇಲ್ ಮೂಲಕ ಇಡೀ ಪ್ರದೇಶವನ್ನು ನಿಯಂತ್ರಿಸುವುದು ಅದರ ಯೋಜನೆಯಾಗಿದೆ.

ಇಲ್ಲಿ ಮತ್ತೊಮ್ಮೆ ಅಗ್ನಿ ಪರೀಕ್ಷೆ: ಶಾಂತಿಯ ದಾರಿಯಲ್ಲಿ ಇಂದು ಅಡ್ಡ ನಿಂತಿರುವವರು ಯಾರು? ಯುಎಸ್ ಔಪಚಾರಿಕವಾಗಿ ಎರಡು- ಪ್ರಭುತ್ವ ಪರಿಹಾರವನ್ನು ಅಂಗೀಕರಿಸುತ್ತದೆ. ಆದರೆ, ಪ್ಯಾಲೆಸ್ಟೈನ್ ನನ್ನು ವಿಶ್ವಸಂಸ್ಥೆಯ 194ನೇ ಸದಸ್ಯ-ರಾಷ್ಟ್ರವಾಗಿ ಸ್ವೀಕರಿಸುವ ಪ್ರಸ್ತಾಪವು – ಇದು ಎರಡು-ಪ್ರಭುತ್ವ ಪರಿಹಾರವನ್ನು ಕಾರ್ಯಗತಗೊಳಿಸುವ ಮೊದಲ ಹೆಜ್ಜೆಯಾಗಿದೆ – ಪ್ರತಿ ಬಾರಿ ಜನರಲ್ ಅಸೆಂಬ್ಲಿಯ ಮುಂದೆ ಬಂದಾಗಲೂ ಯುಎಸ್ ಅದರ ವಿರುದ್ಧ ಮತ ಹಾಕಿದೆ. ಮತ್ತು, ಭದ್ರತಾ ಮಂಡಳಿಯಲ್ಲಿ ಅಂತಹ ಕ್ರಮವನ್ನು ವೀಟೋ ಮಾಡುತ್ತದೆ. ನೈಜವಾದ ಎರಡು-ಪ್ರಭುತ್ವ ಪರಿಹಾರಕ್ಕಾಗಿ ಅದರ ಬೆಂಬಲವು ಕೇವಲ ಒಂದು ಕಪಟವಷ್ಟೇ.. ಅದಕ್ಕಿಂತಲೂ ಹೆಚ್ಚಾಗಿ, ಇಸ್ರೇಲ್ ಮತ್ತು ಅದರ ವಿರೋಧಿಗಳ ನಡುವಿನ ಒಪ್ಪಂದದ ಮಾತುಕತೆಗಳಲ್ಲಿ ಕೆಲವು ಅಂಶಗಳ ಬಗ್ಗೆ ಒಂದು ನಿರ್ಣಾಯಕ ಹಂತವನ್ನು ತಲುಪಿದಾಗ, ಇಸ್ಮಾಯೆಲ್ ಹನೀಹ್ ಅಥವಾ ಹಸನ್ ನಸ್ರಲ್ಲಾ ಈ ನಾಯಕರು ಇಸ್ರೇಲಿನಿಂದ ಹತ್ಯೆಯಾಗುತ್ತಾರೆ.

ಇಸ್ರೇಲ್‌ಗೆ ಸಂಬಂಧಿಸಿದಂತೆ ಸಂಕ್ಷಿಪ್ತವಾಗಿ ಹೇಳುವುದಾದರೆ, ಕದನ ವಿರಾಮದ ಮಾತುಕತೆಗಳು ಕೇವಲ ಒಂದು ಕಪಟಾಚರಣೆಯಷ್ಟೇ. ಯುಎಸ್
ಸಾಮ್ರಾಜ್ಯಶಾಹಿಯು ಈ ಕಪಟ ನಾಟಕದಲ್ಲಿ ಪಾಲುದಾರನಾಗಿದೆ ಎಂಬುದು ಸ್ಪಷ್ಟವಾಗಿದೆ. ಇಸ್ರೇಲ್‌ನ ನೆಲಸಿಗ ವಸಾಹತುಶಾಹಿಯು ತನಗೆ ಯುಎಸ್ ಸಾಮ್ರಾಜ್ಯಶಾಹಿಯು ಮೀಸಲಿಟ್ಟ ಸ್ಥಳೀಯ ಮಿಲಿಟರಿ ಸಿಪಾಯಿಯ ಪಾತ್ರವನ್ನು ತನ್ಮಯತೆಯಿಂದ ವಹಿಸುತ್ತಿದೆ. ಹಾಗಾಗಿ, ಯುದ್ಧವು ಉಲ್ಬಣಗೊಳ್ಳುವುದರೊಂದಿಗೆ, ಒಂದು ಪರಮಾಣು ಮುಖಾಮುಖಿಯ ಅಪಾಯವು ಪ್ರತಿದಿನವೂ ಹೆಚ್ಚುತ್ತಿದೆ. ನವ-ಉದಾರವಾದಿ ಆರ್ಥಿಕ ವ್ಯವಸ್ಥೆಯನ್ನು ಹೇರುವುದು ಮತ್ತು ಯುದ್ಧಗಳಲ್ಲಿ ತೊಡಗಿಸಿಕೊಳ್ಳುವುದು ಇವು ಈಗ ಸಂಯುಕ್ತಗೊಂಡಿರುವ ಸಾಮ್ರಾಜ್ಯಶಾಹಿಯು ತನ್ನ ಪ್ರಾಬಲ್ಯವನ್ನು ಪುನಃ ಸ್ಥಾಪಿಸಲು ಬಳಸಿಕೊಳ್ಳುವ ಎರಡು ಅಸ್ತ್ರಗಳಾಗಿವೆ ಎಂಬುದನ್ನು ನಾನು ಹೇಳಿರುವೆ. ಇವುಗಳಲ್ಲಿ ಒಂದು ನವ-ಫ್ಯಾಸಿಸಂನತ್ತ ಕೊಂಡೊಯ್ಯತ್ತಿದ್ದರೆ, ಮತ್ತೊಂದು ಮನುಕುಲವನ್ನುನ ವಿನಾಶದತ್ತ ತಳ್ಳುತ್ತಿದೆ.

Donate Janashakthi Media

Leave a Reply

Your email address will not be published. Required fields are marked *