ಮತ್ತೆ ಇಬ್ಬರು ಸಂಸದರು ಅಮಾನತು; ಸಂಖ್ಯೆ 143ಕ್ಕೆ ಏರಿಕೆ!

ನವದೆಹಲಿ: ಲೋಕಸಭೆಯ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಇಂದು(ಬುಧವಾರ) ಮತ್ತೆ ಇಬ್ಬರು ವಿಪಕ್ಷದ ಸಂಸದರನ್ನು ಚಳಿಗಾಲದ ವಿಶೇಷ ಅಧಿವೇಶನದವರೆಗೆ ಅಮಾನತು ಮಾಡಲಾಗಿದೆ. ಈ ಮೂಲಕ ಒಂದು ವಾರದಲ್ಲಿ ಉಭಯ ಸದನಗಳಿಂದ 143 ಸಂಸದರನ್ನು ಅಮಾನತು ಮಾಡಿದಂತಾಗಿದೆ. ಇದರೊಂದಿಗೆ ಲೋಕಸಭೆಯಿಂದ ಅಮಾನತುಗೊಂಡ ಸಂಸದರ ಸಂಖ್ಯೆ 97ಕ್ಕೆ ಏರಿಕೆಯಾಗಿದೆ. 46 ಸದಸ್ಯರು ರಾಜ್ಯಸಭೆಯಿಂದ ಡಿಸೆಂಬರ್ 14 ರಿಂದ ಅಮಾನತುಗೊಂಡಿದ್ದಾರೆ.

ಇಂದು ಕೇರಳದ ಸಂಸದರಾದ ಕೆಸಿ(ಎಂ) ಸಂಸದ ಥಾಮಸ್ ಚಳಿಕಂಡನ್ ಹಾಗೂ ಸಿಪಿಐ(ಎಂ) ಸಂಸದ ಎ.ಎಂ. ಆರೀಫ್ ಅವರನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು ಅಮಾನತು ಪ್ರಸ್ತಾವನೆ ಮಂಡಿಸಿದ್ದು, ಸದನ ಅದನ್ನು ಅಂಗೀಕರಿಸಿದ ಬಳಿಕ ಅಮಾನತು ಮಾಡಲಾಗಿದೆ.

ಇದನ್ನೂ ಓದಿ:  ಸಂಸತ್ ಭವನ ಅಲ್ಲ, ‘ಸಸ್ಪೆಂಡ್ ಭವನ’ | ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಂಗ್ಯ 

ಸಂಸತ್ತಿನಲ್ಲಿ ನಡೆದ ಭದ್ರತಾ ಲೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡಬೇಕೆಂದು ಆಗ್ರಹಿಸಿದ್ದ ಪ್ರತಿಪಕ್ಷಗಳ ಒಟ್ಟು 141 ಸದಸ್ಯರನ್ನು ಲೋಕಸಭೆ ಮತ್ತು ರಾಜ್ಯ ಸಭೆಗಳಿಂದ ಅಮಾನತು ಮಾಡಲಾಗಿತ್ತು. ಇಂದು ಇನ್ನಿಬ್ಬರು ಸಂಸದರ ಅಮಾನತಿನ ಬಳಿಕ ಈ ಸಂಖ್ಯೆ 143ಕ್ಕೆ ಏರಿಕೆಯಾಗಿದೆ. ಇನ್ನೂ ಎರಡು ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿದೆ.

ಸಂಸತ್ತಿನಲ್ಲಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ವಿಪಕ್ಷಗಳು ಸರ್ಕಾರದ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದು, ಯಾವುದೇ ಚರ್ಚೆಯಿಲ್ಲದೆ ಪ್ರಮುಖ ಕಾನೂನುಗಳನ್ನು ಅಂಗೀಕರಿಸುತ್ತಿರುವುದು “ಪ್ರಜಾಪ್ರಭುತ್ವದ ಅಪಹಾಸ್ಯ” ಎಂದು ಕರೆದಿದೆ. ಹೊಸದಾಗಿ ಉಧ್ಘಾಟನೆಯಾಗಿದ್ದು ಸಂಸತ್ ಭವನ ಅಲ್ಲ, “ಸಸ್ಪೆಂಡ್ ಭವನ” ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ವ್ಯಂಗ್ಯವಾಡಿದ್ದಾರೆ.

ಲೋಕಸಭೆಯಲ್ಲಿನ 142 ಪ್ರತಿಪಕ್ಷಗಳ ಸಂಸದರಲ್ಲಿ ಈಗಾಗಲೆ 97 ಮಂದಿಯನ್ನು ಈಗಗಲೇ ಅಮಾನತುಗೊಳಿಸಲಾಗಿದ್ದು, ಒಟ್ಟು 68% ಕ್ಕಿಂತ ಹೆಚ್ಚು ವಿಪಕ್ಷಗಳ ಸಂಸದರನ್ನು ಅಮಾನತು ಮಾಡಲಾಗಿದೆ. ಸಂಸತ್ತಿನ ಅಧಿವೇಶನದ ವೇಳೆ ಈ ವರೆಗೆ ನಡೆದ ಅತೀ ದೊಡ್ಡ ಅಮಾನತು ಪ್ರಕ್ರಿಯೆ ಇದಾಗಿದೆ ಎಂದು ವರದಿಗಳು ಉಲ್ಲೇಖಿದೆ.

ಇದನ್ನೂ ಓದಿ: ಆದಾಯ ತೆರಿಗೆ ಇಲಾಖೆಯಿಂದ ಬ್ಯಾಂಕ್ ಖಾತೆಯ ಹಠಾತ್ ಸ್ಥಗಿತ : ಇನ್ನೊಂದು “ಅನ್ಯಾಯದ ಮತ್ತು ಕ್ರೂರವಾದ  ಕ್ರಮ”- ನ್ಯೂಸ್‍ ಕ್ಲಿಕ್‍

ಲೋಕಸಭೆ ಸೆಕ್ರೆಟರಿಯೇಟ್ ಇತ್ತೀಚೆಗೆ ಅಮಾನತುಗೊಂಡಿರುವ 49 ವಿಪಕ್ಷದ ಸಂಸದರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿರುವ ಸುತ್ತೋಲೆಯನ್ನು ಹೊರಡಿಸಿದ್ದು, “ಅವರ ಅಮಾನತು ಅವಧಿಯಲ್ಲಿ ಅವರು ಮಂಡಿಸಿದ ಯಾವುದೇ ಸೂಚನೆ ಸ್ವೀಕಾರಾರ್ಹವಲ್ಲ. ಅವರನ್ನು ಅಮಾನತುಗೊಳಿಸಿದ ಅವಧಿಯಲ್ಲಿ ನಡೆದ ಸಮಿತಿಗಳ ಚುನಾವಣೆಯಲ್ಲಿ ಅವರು ಮತ ಚಲಾಯಿಸುವಂತಿಲ್ಲ,’’ ಎಂದು ಹೇಳಲಾಗಿದೆ.

ಅಮಾನತುಗೊಂಡ ಸದಸ್ಯರು ಈಗ ಸಂಸತ್ತಿನ ಚೇಂಬರ್, ಅದರ ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಈ ನಿರ್ಬಂಧವು ಅವರು ಸದಸ್ಯತ್ವ ಹೊಂದಿರುವ ಸಂಸದೀಯ ಸಮಿತಿಗಳ ಸಭೆಗಳಲ್ಲಿ ಭಾಗವಹಿಸುವುದನ್ನು ಕೂಡಾ ನಿರ್ಭಂಧಿಸಿದೆ. “ಅಮಾನತು ಅವಧಿಯವರೆಗೆ ಸಂಸದರು ತಮ್ಮ ದೈನಂದಿನ ಭತ್ಯೆಯನ್ನು ನೀಡುವುದಿಲ್ಲ. ಅವರ ಹೆಸರುಗಳ ಅಡಿಯಲ್ಲಿ ಪಟ್ಟಿ ಮಾಡಲಾದ ಯಾವುದೇ ವ್ಯವಹಾರ ಅಥವಾ ಅವರು ಮಂಡಿಸಿದ ಸೂಚನೆಗಳನ್ನು ಅಮಾನತು ಅವಧಿಯಲ್ಲಿ ಪರಿಗಣಿಸಲಾಗುವುದಿಲ್ಲ” ಎಂದು ಸುತ್ತೋಲೆ ಹೇಳಿದೆ

ಡಿಸೆಂಬರ್ 13 ರಂದು ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಂದ ಪಾಸ್ ಪಡೆದಿದ್ದ ಇಬ್ಬರು ಶಂಕಿತ ಭಯೋತ್ಪಾದಕರು ಸದನ ನಡೆಯುತ್ತಿರುವಾಗ ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಗೆ ಜಿಗಿದು ಕಲರ್ ಬಾಂಬ್‌ಗಳನ್ನು ಎಸೆದಿದಿದ್ದರು. ಈ ಗಂಭೀರ ಭದ್ರತಾ ಉಲ್ಲಂಘನೆಯ ಬಗ್ಗೆ ಚರ್ಚೆ ಮಾಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.

ವಿಡಿಯೊ ನೋಡಿ: ಜನಸಾಮಾನ್ಯರ ನಡಿಗೆ ಅಭಿವೃದ್ಧಿಯ ಕಡೆಗೆ : ತುಳುನಾಡಿನ ದುಸ್ಥಿತಿಗೆ 3 ದಶಕಗಳ ಬಿಜೆಪಿಯ ದುರಾಡಳಿತವೇ ಕಾರಣ

Donate Janashakthi Media

Leave a Reply

Your email address will not be published. Required fields are marked *