7.11 ಕೋಟಿ ದರೋಡೆ ಪ್ರಕರಣ: ಮತ್ತಿಬ್ಬರ ಬಂಧನ; ಬಂಧಿತರ ಸಂಖ್ಯೆ 9ಕ್ಕೆ ಏರಿಕೆ

ಬೆಂಗಳೂರು: ನಗರದಲ್ಲಿ ನವೆಂಬರ್.19 ರಂದು 7.11 ಕೋಟಿ ಹಣವನ್ನು ದರೋಡೆ ಮಾಡಿ ಪರಾರಿಯಾಗಿದ್ದ ಮತ್ತಿಬ್ಬರು ದರೋಡೆಕೋರರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಜಿತೇಶ್‌ ಹಾಗೂ ದಿನೇಶ್‌ ಎಂಬುವವರನ್ನು ಬಂಧಿಸಲಾಗಿದ್ದು, ಇದೀಗ ಬಂಧಿತರ ಸಂಖ್ಯೆ 9ಕ್ಕೆ ಏರಿದೆ.

ವಿಶೇಷ ಪೊಲೀಸ್‌‍ ತಂಡಗಳು ಹಗಲು-ರಾತ್ರಿ ಎನ್ನದೇ ಕಾರ್ಯಾಚರಣೆ ಕೈಗೊಂಡು 6.29 ಕೋಟಿ ಹಣವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದು, ಉಳಿದ 82 ಲಕ್ಷ ಹಣಕ್ಕಾಗಿ ಶೋಧ ನಡೆಸುತ್ತಿವೆ. ಈ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ವಿಶೇಷ ತಂಡಗಳು ಕಾರ್ಯಾಚರಣೆ ಮುಂದುವರೆಸಿದ್ದು, ಆಂಧ್ರಪ್ರದೇಶ, ಚೆನ್ನೈ, ತೆಲಂಗಾಣದಲ್ಲಿ ಕಾರ್ಯಾಚರಣೆ ಕೈಗೊಂಡಿವೆ.

ಎಟಿಎಂಗೆ ಹಣ ತುಂಬುವ ಸಿಎಂಎಸ್‌‍ ಸಂಸ್ಥೆ ವಾಹನದಲ್ಲಿನ ಹಣವನ್ನು ದೋಚಲು ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಹೋಗಿದ್ದ ಆರೋಪಿ ರಾಕೇಶ್‌ಎಂಬಾತ ತಾನು ಸಿಕ್ಕಿ ಬೀಳುವ ಭಯದಲ್ಲಿ ರಾತ್ರೋರಾತ್ರಿ ಸಿದ್ದಾಪುರ ಪೊಲೀಸ್‌‍ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಇದನ್ನೂ ಓದಿ: ಬೆಂಗಳೂರು| 7 ಕೋಟಿ ದರೋಡೆ ಪ್ರಕರಣ: ಎಲ್ಲಾ ಆರೋಪಿಗಳು ಅರೆಸ್ಟ್

ದರೋಡೆಗೆ ಸಂಚು ರೂಪಿಸಿ, ಅದರಂತೆ ಅಂದು ಮಧ್ಯಾಹ್ನ ಹಾಡಹಗಲೇ ಸಾರ್ವಜನಿಕರು ಸಂಚರಿಸುತ್ತಿದ್ದಾಗಲೇ ಆರೋಪಿಗಳ ಪೈಕಿ ಕ್ಸೇವಿಯರ್‌ ಬಾಡಿಗೆಗೆ ಪಡೆದಿದ್ದ ಇನೋವಾ ಕಾರಿನಲ್ಲಿ ಹಣ ದರೋಡೆ ಮಾಡಿ ಸಹಚರರೊಂದಿಗೆ ಪರಾರಿಯಾಗಿದ್ದನು. ಈ ದರೋಡೆ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಕಾರಿನ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈ ಕಾರಿನಲ್ಲಿ ಜಿಪಿಎಸ್‌‍ ಅಳವಡಿಸಿದ್ದರಿಂದ ಎಲ್ಲೆಲ್ಲಿ ಕಾರು ಹೋಗುತ್ತಿದೆ ಎಂಬುವುದರ ಬಗ್ಗೆ ಮಾಲೀಕರು ಮಾಹಿತಿ ನೀಡಿದ್ದರಿಂದ ಅತೀ ಕಡಿಮೆ ಅವಧಿಯಲ್ಲಿ ಆರೋಪಿಗಳ ಎಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತರಾಗಿರುವ ದರೋಡೆಕೋರರು ಆರ್ಥಿಕ ಮುಗ್ಗಟ್ಟಿನಿಂದ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದರಿಂದ ಆ ಹಣವನ್ನು ತೀರಿಸಲು ಅಡ್ಡದಾರಿ ಹಿಡಿದು ಇದೀಗ ಪೊಲೀಸರ ಅಥಿತಿಯಾಗಿದ್ದಾರೆ.

ಬಂಧಿತರ ಪೈಕಿ ರವಿ ಹಾಗೂ ರಾಕೇಶ್‌ ಸಹೋದರರು. ದರೋಡೆಗೆ ಇವರೇ ಪ್ರಮುಖ ಸೂತ್ರದಾರರು ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ದರೋಡೆ ಹೇಗೆ ಮಾಡಬೇಕೆಂಬ ಬಗ್ಗೆ ಯೋಜನೆ ರೂಪಿಸಲು ಕಾನ್ಸ್ ಟೇಬಲ್‌ ಅಣ್ಣಪ್ಪನಾಯಕ್‌,ಕ್ಸೇವಿಯರ್‌, ಗೋಪಿ,ರವಿ ಹಾಗೂ ರಾಕೇಶ್‌ ಜೊತೆ ಇತರರು ಬಾರ್‌ನಲ್ಲಿ ಸೇರಿಕೊಂಡು ಚರ್ಚೆ ನಡೆಸಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್‌ಬಿಟ್ಟಿದ್ದಾರೆ.

ಮೂರು ತಿಂಗಳಿನಿಂದ ದರೋಡೆಗೆ ಯೋಜನೆ ರೂಪಿಸಿದ್ದ ಈ ಖತರ್ನಾಕ್‌ ತಂಡ ತದ ನಂತರ ಹದಿನೈದು ದಿನಗಳಿಂದ ಸಿಎಂಎಸ್‌‍ ವಾಹನವನ್ನು ಹಿಂಬಾಲಿಸಿ ಯಾವ ಮಾರ್ಗಗಳಲ್ಲಿ ಹೋಗುತ್ತದೆ ಎಂಬುವುದನ್ನು ಗಮನಿಸಿ ಸಿಸಿ ಕ್ಯಾಮೆರಾ ಇಲ್ಲದ ಕಡೆ ವಾಹನ ತಡೆದು ದರೋಡೆ ಮಾಡಬಹುದೆಂದು ಜಾಗವನ್ನು ಗುರುತಿಸಿಕೊಂಡಿದ್ದರು.

ಕಡಲೆಕಾಯಿ ಪರಿಷೆ ದಿನವೇ ದರೋಡೆಗೆ ದಿನಾಂಕ ನಿಗಧಿ ಮಾಡಿಕೊಂಡಿದ್ದರು. ಅಂದು (ನ.19) ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಬಸವನಗುಡಿಯಲ್ಲಿ ಬಂದೋಬಸ್ತ್‌ ಕರ್ತವ್ಯಕ್ಕೆ ಹೋಗುತ್ತಾರೆ. ಹಾಗಾಗಿ ಸಂಚಾರಿ ಪೊಲೀಸರು ತಾವು ಹೋಗುವ ಮಾರ್ಗದಲ್ಲಿ ಇರುವುದಿಲ್ಲವೆಂದು ಅರಿತುಕೊಂಡೇ ಖತರ್ನಾಕ್‌ ಪ್ಲಾನ್‌ ಮಾಡಿಕೊಂಡು ಅಂದು ಕೋಟ್ಯಾಂತರ ರೂ. ದರೋಡೆ ಮಾಡಿರುವುದಾಗಿ ಸುದೀರ್ಘ ವಿಚಾರಣೆ ವೇಳೆ ಆರೋಪಿಗಳು ಹೇಳಿದ್ದಾರೆ.

ಒಟ್ಟಾರೆ ಈ ದರೋಡೆ ಪ್ರಕರಣವನ್ನು ದಕ್ಷಿಣ ವಿಭಾಗದ ಪೊಲೀಸರು ಸವಾಲಾಗಿ ಸ್ವೀಕರಿಸಿ ಮಾಸ್ಟರ್‌ಮೈಂಡ್‌ ಕಾನ್‌್ಸಟೇಬಲ್‌ ಸೇರಿದಂತೆ 9 ಮಂದಿ ದರೋಡೆಕೋರರ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ನೋಡಿ: ನಾಟಕ| ಸಂಪತ್ತಿಗೆ ಸವಾಲ್‌ | ಮೀಡಿಯಾ ಕ್ಲಬ್‌ ಕೊಪ್ಪಳ |ಪಿ.ಬಿ. ಧುತ್ತರಗಿ Janashakthi Media

Donate Janashakthi Media

Leave a Reply

Your email address will not be published. Required fields are marked *