ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ದೇರಳಕಟ್ಟೆ ಸಮೀಪದ ಮೊಂಟೆಪದವು ಕೋಡಿ ಮತ್ತು ಕಾನಕೆರೆ ಪ್ರದೇಶಗಳಲ್ಲಿ ಭಾರೀ ಮಳೆಯಿಂದ ಗುಡ್ಡ ಕುಸಿದ ಪರಿಣಾಮ, ಇಬ್ಬರು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಇದನ್ನು ಓದಿ :-ಐಪಿಎಲ್ 2025: ಫೈನಲ್ಸ್ ತಲುಪಿದ ಆರ್‌ಸಿಬಿ ತಂಡ
ಮೊಂಟೆಪದವು ಕೋಡಿಯಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ಕಾಂತಪ್ಪ ಪೂಜಾರಿ ಎಂಬುವವರ ಮನೆ ಮೇಲೆ ಬಿದ್ದಿದೆ. ಈ ವೇಳೆ ಮನೆಯಲ್ಲಿದ್ದ ಒಂದೇ ಕುಟುಂಬದ ಐವರು ಸಿಲುಕಿಕೊಂಡಿದ್ದು, ಈ ಪೈಕಿ ಪ್ರೇಮ ಪೂಜಾರಿ (60) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಕಾಂತಪ್ಪ ಪೂಜಾರಿ (65) ಅವರನ್ನು ರಕ್ಷಣೆ ಮಾಡಲಾಗಿದ್ದು, ಅಶ್ವಿನಿ (31), ಆರ್ಯನ್ (2.5) ಮತ್ತು ಆರುಶ್ (1) ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ ತಾಯಿ-ಮಕ್ಕಳಿಗೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ತಾಯಿಯ ತೋಳನ್ನು ಬಿಗಿದಪ್ಪಿಕೊಂಡಿದೆ.
ಇನ್ನೊಂದು ಘಟನೆ ಕಾನಕೆರೆ ಎಂಬಲ್ಲಿ ಸಂಭವಿಸಿದೆ. ನೌಶಾದ್ ಎಂಬುವವರ ಮನೆಯ ಹಿಂಬದಿಯ ಕಾಂಪೌಂಡ್ ಧಾರಾಕಾರ ಮಳೆಯಿಂದ ಕುಸಿದು ಮನೆ ಮೇಲೆ ಮಣ್ಣು ಬಿದ್ದಿದೆ. ಈ ವೇಳೆ ನಯೀಮ (10) ಎಂಬ ಬಾಲಕಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸಲ್ಪಟ್ಟರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಇದನ್ನು ಓದಿ :-ಬೆಂಗಳೂರು| ಎ-ಖಾತಾ – ಬಿ-ಖಾತಾ ಎರಡರ ನಡುವಿನ ವ್ಯತ್ಯಾಸವೇನು?
ಈ ದುರ್ಘಟನೆಗಳು ಮಳೆಗಾಲದ ಆರಂಭದಲ್ಲಿಯೇ ಸಂಭವಿಸಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ.
