ಔರಂಗಾಬಾದ್ : ಮಾನವೀಯತೆ ಮತ್ತು ಪ್ರಜಾಪ್ರಭುತ್ವವನ್ನು ನಾಚಿಸುವಂತಹ ಘಟನೆಯೊಂದು ಬಿಹಾರದಲ್ಲಿ ಬೆಳಕಿಗೆ ಬಂದಿದೆ. ಚುನಾವಣೆಯಲ್ಲಿ ಸೋತ ಅಭ್ಯರ್ಥಿಯೊಬ್ಬ ಮತದಾರರ ಮೇಲೆ ದೌರ್ಜನ್ಯವೆಸಗಿದ್ದಾರೆ, ಸಮಾಧಾನವಾಗದಿದ್ದಾಗ ನಡುರಸ್ತೆಯಲ್ಲೇ ತಾನು ಉಗುಳಿದ್ದನ್ನು ತಿನ್ನುವಂತೆ ಒತ್ತಾಯಿಸಿದ್ದಾನೆ.
ಈ ನಾಚಿಕೆಗೇಡಿನ ಘಟನೆ ನಡೆದದ್ದು ಔರಂಗಾಬಾದ್ ಜಿಲ್ಲೆಯ ಕುಟುಂಬ ಬ್ಲಾಕ್‌ನಲ್ಲಿ. ಬಿಹಾರದ ಔರಂಗಾಬಾದ್ ಜಿಲ್ಲೆಯ ಪಂಚಾಯತ್ ಮುಖ್ಯಸ್ಥ ಹುದ್ದೆಯ ಚುನಾವಣೆಯಲ್ಲಿ ಮುಖ್ಯ ಅಭ್ಯರ್ಥಿ ಬಲವಂತ್ ಕುಮಾರ್ ಅವರು ಸೋಲಿನ ಬಳಿಕ ಇಬ್ಬರು ದಲಿತ ಯುವಕರಾದ ಅನಿಲ್ ಕುಮಾರ್ ಮತ್ತು ಮಂಜೀತ್ ಅವರ ಮುಂದೆ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದಾರೆ. ಇದಾದ ಬಳಿಕ ಯುವಕನೊಬ್ಬನಿಗೆ ತಾನು ಉಗುಳಿದ್ದನ್ನು ತಿನ್ನಿಸಿದ್ದಾನೆ. ರಸ್ತೆಯಲ್ಲೇ ಬಸ್ಕಿ ಹೊಡೆಸಿ ಅಮಾನವೀಯವಾಗಿ ನಡೆದುಕೊಂಡಿದ್ದಾನೆ. ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋ ಖರಂತಿ ತೊಲೆ ಭೂಯಾನ್ ಬಿಘಾ ಗ್ರಾಮದಲ್ಲಿ ನಡೆದ ಘಟನೆಯದ್ದೆನ್ನಲಾಗಿದೆ.
ವಿಡಿಯೋ ವೈರಲ್ ಆದ ತಕ್ಷಣ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದು ಔರಂಗಾಬಾದ್ ಎಸ್ಪಿ ಕಾಂತೇಶ್ ಕುಮಾರ್ ಮಿಶ್ರಾ ಸೂಚನೆ ಮೇರೆಗೆ ಅಂಬಾ ಪೊಲೀಸರು ಆರೋಪಿ ಬಲ್ವಂತ್ ಸಿಂಗ್ ನನ್ನು ಬಂಧಿಸಿದ್ದಾರೆ. ಇದೇ ವೇಳೆ ಸಂತ್ರಸ್ತ ಯುವಕರ ವಿಚಾರಣೆ ನಡೆಸಲಾಗುತ್ತಿದೆ.
ವೋಟ್ ಹಾಕುವುದು ಪ್ರತಿಯೊಬ್ ಪ್ರಜೆಯ ಹಕ್ಕು. ಅಂತೆಯೇ ನಮಗಿಷ್ಟ ಬಂದವರಿಗೆ ವೋಟ್ ಮಾಡಿ ಸರಿಯಾದ ಜನನಾಯಕನ ಆಯ್ಕೆ ಮಾಡಿಕೊಳ್ಳುವ ಹಕ್ಕನ್ನ ನಮ್ಮ ಸಂವಿಧಾನ ನಮಗೆ ಕೊಟ್ಟಿದೆ. ಆದರೆ ಮತದಾರರನ್ನು ಹೆದರಿಸಿ, ಬೆದರಿಸಿ ಮತ ಪಡೆಯುವು ಎಷ್ಟು ಸರಿ. ಇಂತವರಿಗೆ ಕಾನೂನಿನಲ್ಲಿ ಸರಿಯಾದ ಶಿಕ್ಷೆ ಆಗಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.