ಸರ್ಕಾರಿ ಕೆಲಸದ ಆಮಿಷ, ಒಂದೇ ಊರಿನ 8 ವಿದ್ಯಾರ್ಥಿಗಳಿಗೆ 1.5 ಕೋಟಿ ರೂ. ವಂಚನೆ

ಬೆಂಗಳೂರು : ಬೆಂಗಳೂರು ಉತ್ತರ ತಾಲೂಕಿನ ತರಹುಣಸೆ ಗ್ರಾಮದಲ್ಲಿ ಏಳು ವಿದ್ಯಾರ್ಥಿಗಳಿಂದ ಬರೋಬ್ಬರಿ ಒಂದೂವರೆ ಕೋಟಿ ಹಣ ಪಡೆದು ಮಹಾಮೋಸ ಮಾಡಿರುವ ಘಟನೆ ನಡೆದಿದೆ.

ಐಪಿಎಸ್ ಅಧಿಕಾರಿಗಳು, ಶಾಸಕರು, ಸಂಸದರು ಪರಿಚಯವಿರುವುದಾಗಿ ಹೇಳಿ ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ಒಂದೂವರೆ ಕೋಟಿ ರೂಪಾಯಿ ವಂಚಿಸಿದ ಇಬ್ಬರನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.

ಕುಣಿಗಲ್ ತಾಲೂಕಿನ ಪ್ರಕಾಶ್(35) ಮತ್ತು ಹೊಸಕೋಟೆಯ ನಾರಾಯಣಪ್ಪ (45) ಬಂಧಿತರು. ಮತ್ತೊಬ್ಬ ಆರೋಪಿ ಪಾಟೀಲ್ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳು ಒಂದೇ ಗ್ರಾಮದ ಪ್ರಿಯಾಂಕ, ಪಶುಪತಿ, ಅಭಿಷೇಕ್, ಧನುಷ್ ಕುಮಾರ್, ಸಂದೀಪ್, ಹೇಮಂತ್, ಮನೋಜ್ ಕುಮಾರ್, ಗುತ್ತಿಗೆದಾರ ಮುನಿರಾಜು ಎಂಬವರಿಗೆ ವಂಚಿಸಿದ್ದಾರೆ.

ಆರೋಪಿಗಳ ವಿರುದ್ಧ ಮುನಿರಾಜು ಚಿಕ್ಕಜಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪದವೀಧರ ಯುವಕರನ್ನೇ ಟಾರ್ಗೆಟ್ ಮಾಡಿ ವಂಚಿಸುತ್ತಿರುವುದು ತನಿಖೆಯಿಂದ ಗೊತ್ತಾಗಿದೆ.

ಆರೋಪಿಗಳಾದ ನಾರಾಯಣಪ್ಪ ಮತ್ತು ಪ್ರಕಾಶ್ ಕೂಡ ಗುತ್ತಿಗೆದಾರರಾಗಿದ್ದಾರೆ. ಪಾಟೀಲ್ ವಿಧಾನಸೌಧದಲ್ಲಿ ಉದ್ಯೋಗದಲ್ಲಿದ್ದಾನೆ. ದೂರುದಾರರ ಪೈಕಿ ಮುನಿರಾಜು ಕೂಡ ಗುತ್ತಿಗೆದಾರನಾಗಿದ್ದು, ನಾರಾಯಣಪ್ಪ ಮತ್ತು ಪ್ರಕಾಶ್ ಪರಿಚಯವಾಗಿದೆ. ಈ ವೇಳೆ ಆರೋಪಿಗಳ ಪೈಕಿ ಪ್ರಕಾಶ್, ಬೆಳಗಾವಿ ಪೊಲೀಸ್ ಆಯುಕ್ತ ಬೋರಲಿಂಗಯ್ಯ ತನ್ನ ಚಿಕ್ಕಪ್ಪನಾಗಿದ್ದು, ಕುಣಿಗಲ್ ಕ್ಷೇತ್ರದ ಶಾಸಕ ರಂಗನಾಥ್, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಪರಿಚಯವಿದ್ದಾರೆ ಎಂದು ಹೇಳಿದ್ದಾನೆ. ತನ್ನ ತಂದೆ ಚಿಕ್ಕನರಸಿಂಹಯ್ಯ ಜಲಮಂಡಳಿಯಲ್ಲಿ ಎಇಇ ಆಗಿದ್ದಾರೆ. ಪೊಲೀಸ್ ಮತ್ತು ಜಲಮಂಡಳಿಯ ಎಲ್ಲ ಹಂತದ ಅಧಿಕಾರಿಗಳು ಗೊತ್ತು. ಈ ಎರಡು ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆ. ಮುನಿರಾಜು ಪುತ್ರ ಪಶುಪತಿಗೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುವೆ ಎಂದು 15 ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ತಿಳಿದುಬಂದಿದೆ.

ಪ್ರಿಯಾಂಕಗೆ ಜಲಮಂಡಳಿಯಲ್ಲಿ ಎಒಆರ್ ಉದ್ಯೋಗ ಕೊಡಿಸುತ್ತೇನೆ ಎಂದು 48 ಲಕ್ಷ ರೂ., ಅಭಿಷೇಕ್‌ಗೆ ಸೂಪರಿಂಟೆಂಡೆಂಟ್ ಎಂಜಿನಿಯರ್‌ಗಾಗಿ 52 ಲಕ್ಷ ರೂ., ಸಂದೀಪ್‌ಗೆ ಜೂನಿಯರ್ ಅಕೌಂಟೆಂಟ್‌ಗಾಗಿ 12 ಲಕ್ಷ ರೂ., ಮನೋಜ್ ಕುಮಾರ್‌ಗೆ ಆಡಿಟರ್ ಉದ್ಯೋಗಕ್ಕಾಗಿ 12 ಲಕ್ಷ ರೂ., ಹೇಮಂತ್‌ಗೆ ಮೀಟರ್ ರೀಡರ್ ಕೆಲಸ ಕೊಡಿಸಲು 12 ಲಕ್ಷ ರೂ., ಧನುಷ್ ಕುಮಾರ್‌ಗೆ ಚಾಲಕ ಹುದ್ದೆಗೆ 3 ಲಕ್ಷ ರೂ. ಹೀಗೆ ಎಂಟು ಮಂದಿಗೆ ಕೆಲಸ ಕೊಡಿಸುತ್ತೇನೆ ಎಂದು 1.53 ಕೋಟಿ ರೂ. ಪಡೆದು ವಂಚಿಸಿದ್ದಾರೆ.

ಆರೋಪಿಗಳಿಗೆ ಯಾವುದೇ ರಾಜಕೀಯ ವ್ಯಕ್ತಿಗಳಾಗಲಿ, ಪೊಲೀಸ್ ಅಧಿಕಾರಿಗಳಾಗಲಿ ಪರಿಚಯವಿಲ್ಲ. ಹಣ ಮಾಡುವ ಉದ್ದೇಶದಿಂದ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *