ಬೆಂಗಳೂರು: ಬನಶಂಕರಿ ಠಾಣೆ ಪೊಲೀಸರು ಸರಕು ಮತ್ತು ಸೇವಾ ತೆರಿಗೆಗಳ ಇಲಾಖೆ (GST) ಅಧಿಕಾರಿಗಳ ಸೋಗಿನಲ್ಲಿ ನಕಲಿ ಐಡಿ ಕಾರ್ಡ್ ತೋರಿಸಿ ವ್ಯಾಪಾರಿಯನ್ನ ಬೆದರಿಸಿ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.
ಬನಶಂಕರಿಯಲ್ಲಿರುವ ಸರಕು ಮತ್ತು ಸೇವಾ ತೆರಿಗೆಗಳ ಇಲಾಖೆಯ ಪ್ರಧಾನ ಆಯುಕ್ತರ ಕಚೇರಿಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ನಾಗರಾಜ್ ಹಾಗೂ ದಾದಾಪೀರ್ ಬಂಧಿತ ಆರೋಪಿಗಳು. ಆರೋಪಿಗಳು ಗುಟ್ಕಾ ವ್ಯಾಪಾರಿಯಿಂದ 5 ಲಕ್ಷ ರೂಪಾಯಿ ದೋಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಭದ್ರತಾ ಸಿಬ್ಬಂದಿ; ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ಎಬಿವಿಪಿ ಗೂಂಡಾಗಳನ್ನು ಬಂಧಿಸಿ: ಎಸ್‌ಎಫ್‌ಐ
ಬನಶಂಕರಿಯಲ್ಲಿರುವ ಜಿಎಸ್‌ಟಿ ಇಲಾಖೆಯ ಪ್ರಧಾನ ಆಯುಕ್ತರ ಕಚೇರಿಯಲ್ಲಿ ಇಬ್ಬರೂ ಆರೋಪಿಗಳು ಹೊರಗುತ್ತಿಗೆ ಆಧಾರದಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಸಿಎಲ್‌ಟಿಎಸ್ ಹಾಗೂ ಇಂಟಲಿಜೆನ್ಸ್ ಅಧಿಕಾರಿಗಳಂತೆ ನಕಲಿ ಐಡಿ ಕಾರ್ಡ್‌ಗಳನ್ನ ಮಾಡಿಸಿಕೊಂಡಿದ್ದ ಆರೋಪಿಗಳು, ಜನವರಿ 10ರಂದು ಪೀಣ್ಯದಲ್ಲಿ ಓರ್ವ ಗುಟ್ಕಾ ವ್ಯಾಪಾರಿಯನ್ನ ಬೆದರಿಸಿ 5 ಲಕ್ಷ ವಸೂಲಿ ಮಾಡಿದ್ದರು.
ಆರೋಪಿತರ ಕಾರ್ಯವೈಖರಿ ಬಗ್ಗೆ ಅನುಮಾನಗೊಂಡ ಕಚೇರಿ ಅಧಿಕಾರಿಗಳು ಫೆಬ್ರವರಿ 17ರಂದು ಅವರು ವಾಸವಿದ್ದ ಕಚೇರಿಯ ಕೊಠಡಿಯಲ್ಲಿ ತಪಾಸಣೆ ನಡೆಸಿದ್ದರು. ಪರಿಶೀಲನೆ ಸಂದರ್ಭದಲ್ಲಿ ನಕಲಿ ಐಡಿ ಕಾರ್ಡ್‌ಗಳು, ಸರ್ಚ್ ವಾರೆಂಟ್ ಪ್ರತಿಗಳು ಪತ್ತೆಯಾಗಿವೆ. ಕೂಡಲೇ ಜಿಎಸ್‌ಟಿ ಅಧಿಕಾರಿಗಳು ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಜಿಎಸ್‌ಟಿ ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ ಇಬ್ಬರನ್ನೂ ಬಂಧಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ನೋಡಿ: ಪಿಚ್ಚರ್ ಪಯಣ 167 |ಪಿಚ್ಚರ್ ಪಯಣ 167 | “Dry Leaf : ಆಟದ ಮಾಟ ಬದುಕಿನ ಪಾಠ”| Janashakthi Media
