ಸೆಲೆಬ್ರಿಟಿಗಳ ಖಾತೆಗಳಿಗೆ ಮತ್ತೆ ದೃಢೀಕೃತ ಬ್ಲೂಟಿಕ್‌ ಮುದ್ರೆ ಒತ್ತಿದ ಟ್ವಿಟ್ಟರ್‌

ಹೊಸದಿಲ್ಲಿ : ಸಿನಿಮಾ ಜಗತ್ತಿನ ಅತಿರಥ ಮಹಾರಥರಾದ ಅಮಿತಾಬ್‌ ಬಚ್ಚನ್‌, ರಜನಿಕಾಂತ್‌ ಅವರಿಂದ ಹಿಡಿದು ರಾಜಕೀಯ ಮುಖಂಡ ರಾಹುಲ್‌ ಗಾಂಧಿವರೆಗೆ ಅನೇಕ ಸೆಲೆಬ್ರಿಟಿಗಳಿಗೆ ಟ್ವಿಟ್ಟರ್‌ ಸಂಸ್ಥಾಪಕ ಎಲಾನ್‌ ಮಸ್ಕ್‌ ಅಚ್ಚರಿ ನೀಡಿದ್ದರು. ಟ್ವಿಟ್ಟರ್‌ ಖಾತೆಯ ನೀಲಿ ಗುರುತು ತೆಗೆದು ಹಾಕಿದ್ದ ಕಂಪೆನಿಯು ಮತ್ತೆ ದೃಢೀಕೃತ ಖಾತೆಗಳಿಗೆ ನೀಲಿ ಮುದ್ರೆ ಒತ್ತಿದೆ.

ಭಾರತದ ಅನೇಕ ಪ್ರಮುಖ ರಾಜಕಾರಣಿಗಳು, ಕ್ರಿಕೆಟಿಗರು, ಉದ್ಯಮಿಗಳು, ಪತ್ರಕರ್ತರು ಹಾಗೂ ಗಣ್ಯರ ಅಧಿಕೃತ ಖಾತೆಗಳ ಗುರುತುಗಳನ್ನು ತೆಗೆದು ಹಾಕಿದ್ದುದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಟ್ವಿಟ್ಟರ್‌ ಮುಖ್ಯಸ್ಥ ಎಲಾನ್‌ ಮಸ್ಕ್‌ ಜಾರಿಗೆ ತಂದಿದ್ದ ಹೊಸ ನಿಯಮದ ಅನುಸಾರ ಚಂದಾದಾರ ಶುಲ್ಕವನ್ನು ಭರಿಸದೇ ಇರುವ ಖಾತೆಗಳ ನೀಲಿ ‘ಸರಿ’ (ರೈಟ್‌) ಗುರುತನ್ನು ತೆಗೆದು ಹಾಕುವ ಕಾರ್ಯವನ್ನು ಕಂಪನಿ ಕಳೆದ ವಾರವಷ್ಟೇ ಆರಂಭಿಸಿತ್ತು. ಆದರೆ ಇದ್ದಕ್ಕಿದ್ದಂತೆ ಒಂದೇ ದಿನದಲ್ಲಿ ಎಲ್ಲಾ ಸೆಲೆಬ್ರಿಟಿಗಳ ಖಾತೆಗಳಿಗೆ ಮತ್ತೆ ನೀಲಿ ಗುರುತು ಅಳವಡಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಪ್ರಸಿದ್ಧ ಕ್ರಿಕೆಟಿಗರಾದ ಸಚಿನ್‌ ತೆಂಡೂಲ್ಕರ್‌, ವಿರಾಟ್‌ ಕೊಹ್ಲಿ ಅವರ ಖಾತೆಗಳಿಗೂ ಕೂಡ ತೆಗೆದು ಹಾಕಲಾಗಿದ್ದ ನೀಲಿ ಸರಿ ಗುರುತುಗಳನ್ನು ಮತ್ತೆ ಮರು ಸ್ಥಾಪಿಸಲಾಗಿದೆ. ಆದರೆ ಚಂದಾದಾರ ಶುಲ್ಕವನ್ನು ಭರಿಸಿದ ಕಾರಣಕ್ಕಾಗಿ ಇಂತಹ ಗುರುತುಗಳನ್ನು ಮರು ಸ್ಥಾಪನೆ ಮಾಡಲಾಗಿದೆಯೇ ಎಂಬುದರ ಬಗೆಗೆ ಖಚಿತವಾಗಿಲ್ಲ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾಅವರ ಖಾತೆಯಿಂದ ಅಳಿಸಿ ಹಾಕಲಾಗಿದ್ದ ನೀಲಿ ಗುರುತು ಮತ್ತೆ ಅಳವಡಿಕೆಯಾದ ಬಗೆಗೆ ಸ್ವತಃ ಟ್ವೀಟ್‌ ಮಾಡಿ, ತಾವು ಯಾವುದೇ ಶುಲ್ಕ ಭರಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. “ನನಗೂ ಶುಲ್ಕ ಭರಿಸುವಂತೆ ಕೋರಲಾಗಿತ್ತು. ಆದರೆ ನಾನು ಯಾವುದೇ ಹಣ ಪಾವತಿಸಿಲ್ಲ, ಬಹುಶಃ ನನ್ನ ಹಣವನ್ನು ಮಸ್ಕ್‌ ಭರಿಸಿದರೇ?” ಎಂದು ಅಬ್ದುಲ್ಲಾ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ : ಖ್ಯಾತನಾಮರ ಖಾತೆಗಳ ‘ಬ್ಲೂಟಿಕ್‌’ ತೆಗೆಯಲು ಮುಂದಾದ ಟ್ವಿಟರ್

ನೋಬೆಲ್‌ ಪ್ರಶಸ್ತಿ ಪುರಸ್ಕೃತ ಮಲಾಲಾ ಯೂಸುಫ್‌ಜಾಯ್‌ ಕೂಡ ತಮ್ಮ ಖಾತೆಯ ನೀಲಿ ಗುರುತು ವಾಪಸ್‌ ಬಂದಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. “ಏನಾಗಿದೆ ಎಂಬುದು ಗೊತ್ತಿಲ್ಲ. ನೀಲಿ ಗುರುತು ವಾಪಸ್‌ ಬಂದಿದೆ, ಹೀಗಾಗಿ ನಾನೇ ಮಲಾಲಾ ಎಂಬುದು ಎಲ್ಲರಿಗೂ ಗೊತ್ತಾಗಿದೆ,” ಚಟಾಕಿ ಹಾರಿಸಿದ್ದಾರೆ. ಆದರೆ ಇಡೀ ಬೆಳವಣಿಗೆ ಕುರಿತಂತೆ ಟ್ವಿಟ್ಟರ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೂಲಗಳ ಪ್ರಕಾರ, ಪ್ರಮುಖ ವ್ಯಕ್ತಿಗಳು ಮತ್ತು ಸಂಘಟನೆಗಳು ಖಾತೆಗಳ ಅಧಿಕೃತ ಖಾತೆಗಳನ್ನು ಪತ್ತೆ ಮಾಡಿ, ಅವುಗಳಿಗೆ ನೀಲಿ ಗುರುತು ನೀಡುವ ಪ್ರಕ್ರಿಯೆಯಲ್ಲಿ ಕಂಪನಿ ನಿರತವಾಗಿದೆ ಎಂದು ಹೇಳಲಾಗಿದೆ.

ಸೋಜಿಗದ ಸಂಗತಿ ಎಂದರೆ, ಈಗಾಗಲೇ ನಿಧನ ಹೊಂದಿದ ಜಾಗತಿಕ ಗಣ್ಯ ವ್ಯಕ್ತಿಗಳಾದ ಅಮೆರಿಕದ ಖ್ಯಾತ ನಟ ಚಾಡ್ವಿಕ್‌ ಬೋಸ್‌ಮನ್‌, ಖ್ಯಾತ ಬಾಸ್ಕೆಟ್‌ ಬಾಲ್‌ ಆಟಗಾರ ಅಮೆರಿಕದ ಕೊಬೆ ಬ್ರ್ಯಾಂಟ್‌ ಮತ್ತು ಗಾಯಕ ಮತ್ತು ಡಾನ್ಸರ್‌ ಮೈಕೆಲ್‌ ಜಾಕ್ಸನ್‌ ಅವರ ಖಾತೆಗಳಿಗೂ ಮತ್ತೆ ನೀಲಿ ಗುರುತು ಅಳವಡಿಸಲಾಗಿದೆ.
ಶುಲ್ಕ ಭರಿಸದೇ ಇರುವ ಖಾತೆಗಳ ನೀಲಿ ಗುರುತು ತೆಗೆದು ಹಾಕುವ ಪ್ರಕ್ರಿಯೆಯನ್ನು ಟ್ವಿಟ್ಟರ್‌ ಏಪ್ರಿಲ್‌ 20ರಿಂದ ಆರಂಭಿಸಿತ್ತು. ಅಮೆರಿಕದ ಬರಹಗಾರ ಸ್ಪೀಫನ್‌ ಕಿಂಗ್‌, ಖ್ಯಾತ ಬಾಸ್ಕೆಟ್‌ ಬಾಲ್‌ ಆಟಗಾರ ಲೆಬಾರ್ನ್‌ ಜೇಮ್ಸ್‌ ಮತ್ತು ಪ್ರಸಿದ್ಧ ನಟ ವಿಲಿಯಂ ಶಾಟ್ನರ್‌ ಅವರ ಖಾತೆಗಳ ನೀಲಿ ಗುರುತು ಉಳಿಸಲು ಸ್ವತಃ ಎಲಾನ್‌ ಮಸ್ಕ್‌ ಶುಲ್ಕ ಭರಿಸುವುದಾಗಿ ಘೋಷಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *