ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ಅರಿಶಿಣ – ಕುಂಕುಮ; ಜನಪರ ಹೋರಾಟಗಾರರ ವಿರೋಧ

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ದಿನ ಮುಜರಾಯಿ ದೇವಸ್ಥಾನಗಳಿಗೆ ಬರುವ ಮಹಿಳೆಯರಿಗೆ ಅರಿಶಿಣ, ಕುಂಕುಮ, ಕಸ್ತೂರಿ ಹಾಗೂ ಹಸಿರು ಬಳೆಗಳನ್ನು ನೀಡಬೇಕು ಎಂದು ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಮಹಿಳಾ ಹಕ್ಕುಗಳ ಹೋರಾಟಗಾರ್ತಿಯರು ಸರ್ಕಾರದ ಸುತ್ತೋಲೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದು, “ಸರ್ಕಾರವೇ ದೇವಸ್ಥಾನಕ್ಕೆ ಬರುವ ಮಹಿಳೆಯರಲ್ಲಿ, ‘ಕಿಶೋರಿ, ಪರಿತ್ಯಕ್ತೆ, ಗಂಡ ಇಲ್ಲದವರು, ಗಂಡ ಅಗಲಿದವರು’ ಎಂದೆಲ್ಲಾ ವಿಭಾಗಿಕರಣ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ನಿರ್ಧಾರವು ಸಂವಿದಾನದ ಜಾತ್ಯತೀತ ಮೌಲ್ಯಗಳಿಗೆ ವಿರುದ್ದ ಮತ್ತು ವೈಜ್ಞಾನಿಕ ಮನೋಭಾವದ ವಿರುದ್ಧವಾಗಿದೆ ಎಂದು ಹೇಳಿರುವ ಮಹಿಳಾ ಸಂಘಟನೆ, ಆದೇಶವನ್ನು ರದ್ದುಗೊಳಿಸ ಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡುವುದಾಗಿ ಹೇಳಿದೆ.

ಆಗಸ್ಟ್‌ 21ರ ಸೋಮವಾರದಂದು ಸುತ್ತೋಲೆ ಹೊರಡಿಸಿದ್ದ ಧಾರ್ಮಿಕ ದತ್ತಿ ಇಲಾಖೆ, “ವರಮಹಾಲಕ್ಷ್ಮಿ ಹಬ್ಬದ ದಿನ ಮುಜರಾಯಿ ದೇವಸ್ಥಾನಗಳಿಗೆ ಬರುವ ಮಹಿಳೆಯರಿಗೆ ಅರಿಶಿಣ, ಕುಂಕುಮ, ಕಸ್ತೂರಿ ಹಾಗೂ ಹಸಿರು ಬಳೆಗಳನ್ನು ನೀಡಬೇಕು” ಎಂದು ಹೇಳಿತ್ತು. ಈ ಸಂಪ್ರದಾಯವನ್ನು ಕಳೆದ ವರ್ಷ ಬಿಜೆಪಿ ಸರ್ಕಾರ ಪ್ರಾರಂಭಿಸಿದ್ದು, ಕಾಂಗ್ರೆಸ್ ಸರ್ಕಾರ ಅದನ್ನು ಮುಂದುವರೆಸಿದೆ.

ಇದನ್ನೂಓದಿ: ಶಾಲೆ ತುಂಬಾ ಮಕ್ಕಳು, ಆದರೆ ಶಿಕ್ಷಕರಿಲ್ಲ; ಸ್ಪೀಕರ್ ಯು.ಟಿ. ಖಾದರ್ ಊರಿನ ಸರ್ಕಾರಿ ಶಾಲೆಯ ಕತೆಯಿದು!

ಸುತ್ತೋಲೆಯಲ್ಲಿ, “ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಮಹತ್ವಪೂರ್ಣ ಸ್ಥಾನವನ್ನು ನೀಡಿ ಗೌರವಿಸಲಾಗುತ್ತಿದೆ. ಸ್ವರ್ಣಗೌರಿ, ನವರಾತ್ರಿಗಳಲ್ಲಿ ಸ್ತ್ರೀದೇವತೆಗಳನ್ನು ಪೂಜಿಸುವಂತೆ ಶ್ರಾವಣಮಾಸದಲ್ಲಿ ವರಮಹಾಲಕ್ಷ್ಮಿ ಪೂಜಿಸುವುದು ಸಂಪ್ರದಾಯವಾಗಿದೆ. ಹಬ್ಬದ ದಿನ ದೇವಿಯನ್ನು ಅಲಂಕಾರ ಮಾಡಿ, ವಿಶೇಷವಾಗಿ ಪೂಜಿಸಲಾಗುತ್ತದೆ. ಮಹಿಳೆಯರು ಮನೆಯಲ್ಲಿ ದೇವಿಯನ್ನು ಪೂಜಿಸಿದ ನಂತರ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಹೀಗೆ ದೇವಸ್ಥಾನಕ್ಕೆ ಬರುವವರಿಗೆ ಉತ್ತಮ ಗುಣಮಟ್ಟದ ಅರಿಶಿಣ, ಕುಂಕುಮ, ಬಳೆ ನೀಡಬೇಕು” ಎಂದು ಸೂಚಿಸಿತ್ತು.

“ದೇವರ ಮುಂದೆ ಇಟ್ಟು ಇವೆಲ್ಲವನ್ನೂ ಪೂಜಿಸಿದ ನಂತರ ಸರ್ಕಾರದ ಲಾಂಛನ, ದೇವಸ್ಥಾನದ ಹೆಸರು ಒಳಗೊಂಡ ಲಕೋಟೆಯಲ್ಲಿ ಹಾಕಿ ಗೌರವ ಸೂಚಕವಾಗಿ ಕೊಡಬೇಕು” ಎಂದು ಸುತ್ತೋಲೆ ಹೇಳಿದೆ. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಆಯಾ ದೇವಸ್ಥಾನಗಳೇ ವೆಚ್ಚವನ್ನು ಭರಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ ಎಂದು ಪ್ರಜಾವಾಣಿ ವರದಿ ಹೇಳಿದೆ.

ಈ ಬಗ್ಗೆ ಮಹಿಳಾ ಹೋರಾಟಗಾರ್ತಿಯರು ಆಕ್ಷೇಪ ವ್ಯಕ್ತಪಡಿಸಿದ್ದು, “ಸರ್ಕಾರವೆ ಮಹಿಳೆಯರಲ್ಲಿ ಕೀಳರಿಮೆ ಮೂಡಿಸುತ್ತಿದೆ” ಎಂದು ಹೇಳಿದ್ದಾರೆ. ಮಹಿಳಾ ಮತ್ತು ಕಾರ್ಮಿಕ ಹಕ್ಕುಗಳ ಹೋರಾಟಗಾರ್ತಿ ಯಮುನಾ ಗಾಂವ್ಕರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ವರಮಹಾಲಕ್ಷ್ಮಿ ಹಬ್ಬದಂದು ದೇವಸ್ಥಾನಕ್ಕೆ ಬರುವ ಮಹಿಳೆಯರಿಗೆ ಹಸಿರು ಬಳೆ, ಅರಿಶಿನ ಕುಂಕುಮ ಕೊಟ್ಟು ಎಲ್ಲಾ ಮಹಿಳೆಯರನ್ನು ಗೌರವಿಸಬೇಕೆಂದು ಸರ್ಕಾರ ಹೇಳಿದೆ. ಹಾಗಾದರೆ ಕಿಶೋರಿ, ಪರಿತ್ಯಕ್ತೆ, ಗಂಡ ಇಲ್ಲದವರು, ಗಂಡ ಅಗಲಿದವರು ಹೀಗೆಲ್ಲ ವಿಭಾಗಿಕರಣ ಆಯಾ ದೇವಸ್ಥಾನ ಮಾಡುತ್ತಿದೆ ಎಂದಾಯ್ತು. ಅಂತೂ ಸರ್ಕಾರ ಬದಲಾದರೂ ಸಹ ಅದರ ನೀತಿ ಬದಲಾಗದು” ಎಂದು ಹೇಳಿದ್ದಾರೆ.

“ಇಷ್ಟಕ್ಕೆ ಇಲಾಖೆಯ ಆಯುಕ್ತರ ಸುತ್ತೋಲೆ ನಿಲ್ಲುವುದಿಲ್ಲ. ಈ ಆದೇಶವೇ ಹೆಣ್ಮಕ್ಕಳ ಸಬಲಿಕರಣಕ್ಕೆ ವರವೆ? ಇದೇನಾ ದಾರಿ” ಎಂದು ಯಮುನಾ ಪ್ರಶ್ನಿಸಿದ್ದಾರೆ.

ಇದನ್ನೂಓದಿ: ವಿಶ್ವ ಹಿಂದೂ ಪರಿಷತ್‌ ಯಾತ್ರೆಗೆ ಅನುಮತಿ ನಿರಾಕರಿಸಿದ ನೂಹ್‌ ಜಿಲ್ಲಾಡಳಿತ

“ಉತ್ತರಾಖಂಡ್ ರಾಜ್ಯದಲ್ಲಿ ಬೇಟಿ ಬಚಾವೋ ಮಾಡಬೇಕೆಂದರೆ ಅಂಗನವಾಡಿ ನೌಕರರು ಶಿವಾಲಯಕ್ಕೆ ಹೋಗಿ ಜಲಾಭಿಶೇಕ ಮಾಡಿ ಎಂಬ ಆದೇಶ ಮಾಡಿತ್ತು. ನಂತರ ತೀವ್ರ ಖಂಡನೆ ಹೋರಾಟ ನಂತರ ವಾಪಸು ಮಾಡಿಸಿದ್ದೆವು. ಅಲ್ಲಿ ಬಿಜೆಪಿ ಸರ್ಕಾರ ಇತ್ತು. ಕಾಂಗ್ರೆಸ್ ಅದರ ‘ಬಿ ಟೀಮ್’ ಆಗುವುದು ಬೇಡವಾಗಿತ್ತು. ಜನರ ಮೌಢ್ಯವನ್ನು ಹೀಗೆ ಪ್ರಭುತ್ವವೇ ಉತ್ತೇಜಿಸುತ್ತದೆ. ಮುಖ್ಯ ಸಮಸ್ಯೆಯಿಂದ ಆಚೆ ಕೊಂಡೊಯ್ಯಲು ಎಷ್ಟೊಂದು ಕಸರತ್ತು ಮಾಡುತ್ತಿದೆ. ಧನ ಧಾನ್ಯಾದಿ ಸಕಲ ಸೌಲಭ್ಯಗಳು, ಅಷ್ಟೈಶ್ವರ್ಯ, ಚತುರ್ವಿಧ ಫಲಗಳು ಲಭಿಸುತ್ತದೆವೆಂದರೆ ರೇಶನ್ ಏಕೆ, ಶಕ್ತಿ ಯೋಜನೆ ಪಾಸ್ ಏಕೆ, ಗೃಹಲಕ್ಷ್ಮಿ ಇತರ ಭಾಗ್ಯಗಳೇಕೆ? ದೇವರನ್ನು ದೈವವನ್ನು ಪೂಜಿಸಿ ವ್ರತಾಚರಣೆ ಮಾಡಿಸುತ್ತಾ ಕೂತಿರಿ. ಸರ್ಕಾರ ಏಕೆ ಬೇಕು ಅಲ್ಲವೆ?” ಎಂದು ಯಮುನಾ ಕೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿಂತಕಿ ಮೀನಾಕ್ಷಿ ಬಾಳಿ, ಮುಜರಾಯಿ ಇಲಾಖೆ ಮಹಿಳೆಯರಿಗೆ ದೇವಸ್ಥಾನಗಳಲ್ಲಿ ಬಳೆ ಕುಂಕುಮ ಕೊಟ್ಟು ಸಬಲೀಕರಣ ಮಾಡಲು ಹೊರಟಿದೆ. ಇದ್ಯಾವ ಸೀಮೆಯ ಸಂಸ್ಕೃತಿ ಎಂಬುದನ್ನು ಬಲ್ಲವರು ಹೇಳಲಿ ಕಿಡಿ ಕಾರಿದ್ದಾರೆ.

“ಸ್ತ್ರೀ ವಿರೋಧಿ ನಿಲುವುಗಳನ್ನು ಸರ್ಕಾರವೇ ಮುಂದಾಗಿ ಪೋಷಿಸುವುದು ಎಂತಹ ವಿಪರ್ಯಾಸ? ಬಳೆ, ಕುಂಕುಮ, ಅರಿಶಿಣ ಎಲ್ಲವೂ ಮುತ್ತೈದೆತನದ ಸಂಕೇತ, ಗಂಡನುಳ್ಳ ಬಾಲೆಗೆ ಇವೆಲ್ಲ ಶುಭ ಸಂಕೇತ ಎಂಬುದು ಸಮಾಜದ ರೂಢಿಗತ ನಂಬಿಕೆ. ಅಂದರೆ ಗಂಡ ಸತ್ತ ಮಹಿಳೆಯರಿಂದ ಇವನ್ನೆಲ್ಲ ಕಿತ್ತುಕೊಳ್ಳಲಾಗುತ್ತದೆ. ಅಷ್ಟೇ ಅಲ್ಲ, ಇಂಥ ಸಂಕೇತಗಳನ್ನು ಇಟ್ಟುಕೊಂಡೇ ಅವರನ್ನು ಅಪಮಾನಿಸಲಾಗುತ್ತದೆ. ಒಟ್ಟಾರೆ ಈ ಎಲ್ಲ ವಸ್ತುಗಳು ಗಂಡ ಸತ್ತವಳನ್ನು ಗುರುತಿಸಿ ಅಪಮಾನಿಸಲು ದಾರಿ ಮಾಡಿಕೊಡುತ್ತವೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ದೀರ್ಘ ಮಹಿಳಾ ಚಳವಳಿಯ ಕಾರಣವಾಗಿ ಈಗೀಗ ಮಹಿಳೆಯರು ಗಂಡ ಸತ್ತರೂ ಕುಂಕುಮ, ಅರಿಶಿಣ, ಹೂ ಧರಿಸುವ ಧೈರ್ಯ ತೋರುತ್ತಿದ್ದಾರೆ. ಮನೆಯ ಹೊರಗಿನ ದುಡಿಮೆ ಅನಿವಾರ್ಯವಾದ ಕಾರಣಕ್ಕಾಗಿಯೂ ಸ್ವಾಭಿಮಾನಿ ಬದುಕಿಗಾಗಿಯೂ ಒಂದಷ್ಟು ಕಂದಾಚಾರಗಳನ್ನು ಧಿಕ್ಕರಿಸುತ್ತಿದ್ದಾರೆ. ಆದರೆ ಗಂಡನನ್ನು ಕಳೆದುಕೊಂಡ ಎಷ್ಟು ಜನ ಮಹಿಳೆಯರು ಅದೂ ದೇವಸ್ಥಾನಗಳಲ್ಲಿ ಇವುಗಳನ್ನು ಪಡೆದುಕೊಳ್ಳಲು ಮುಂದೆ ಬಂದಾರು? ಇವತ್ತಿಗೂ ಲಕ್ಷಾಂತರ ಹಳ್ಳಿಗಳಲ್ಲಿ ಮಹಿಳೆಯರಿಗೆ ಶೌಚಾಲಯಗಳಿಲ್ಲ. ವರದಕ್ಷಿಣೆ ಪಿಡುಗು ನಿಂತಿಲ್ಲ. ಬಾಲ್ಯವಿವಾಹಗಳು ಹೆಚ್ಚುತ್ತಿವೆ. ಹೆಣ್ಣು ಭ್ರೂಣ ಹತ್ಯೆಯಂತೂ ಎಗ್ಗಿಲ್ಲದೆ ನಡೆಯುತ್ತಿದೆ. ರಾಜ್ಯದಲ್ಲಿ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಗಾಬರಿ ಹುಟ್ಟಿಸುವಷ್ಟು ಏರುಗತಿಯಲ್ಲಿವೆ. ಇಂಥ ಎಲ್ಲ ಅನಿಷ್ಟಗಳ ಬಗೆಗೆ ಚಿಂತನೆ ಮಾಡುವುದನ್ನು ಬಿಟ್ಟು, ಸನಾತನಿಗಳು ಹುಟ್ಟುಹಾಕಿದ ಅಪಮೌಲ್ಯಗಳಿಗೆ ಆತುಕೊಳ್ಳುವುದು ಸರ್ಕಾರದ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ” ಎಂದು ಅವರು ಹೇಳಿದ್ದಾರೆ.

ಇದನ್ನೂಓದಿ: “ಮುಸ್ಲಿಂ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ಸತತ ಕರೆ” ಗಳ ವಿರುದ್ಧ ಸುಪ್ರಿಂ ಕೋರ್ಟಿಗೆ ಬೃಂದಾ ಕಾರಟ್‍ ಅರ್ಜಿ

“ದರ್ಗಾಗಳಿಗೆ ಹೋಗುವ ಮುಸ್ಲಿಂ ಮಹಿಳೆಯರು, ಚರ್ಚ್‌ಗಳಿಗೆ ಹೋಗುವ ಕ್ರೈಸ್ತ ಮಹಿಳೆಯರು, ಕೆಳವರ್ಗದ ದೇವಸ್ಥಾನಗಳಿಗೆ ಹೋಗುವ ದಲಿತ, ಆದಿವಾಸಿ ಮಹಿಳೆಯರು ಇದ್ದಾರಲ್ಲ. ಅವರಿಗೂ ಅವರವರ ನಂಬಿಕೆಗಳ ಅನುಸಾರ ಏನು ಕೊಡುತ್ತೀರಿ? ಧರ್ಮಾಧಾರಿತವಾದ ಇಂತಹ ನಡೆಯಿಂದ ಒಟ್ಟು ಮಹಿಳೆಯರಲ್ಲಿ ತರತಮ ಎಸಗಿದಂತೆ ಆಗುವುದಿಲ್ಲವೇ? ಯಾವುದೇ ಜಾತಿ, ಧರ್ಮಗಳ ಕಂದಾಚಾರಗಳಿಂದ ಮಹಿಳೆಯರ ಸಬಲೀಕರಣವಾಗದು ಎಂಬ ಕನಿಷ್ಠ ತಿಳಿವಳಿಕೆ ಆಳುವವರಿಗೆ ಇರಬೇಕು” ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮೀನಾಕ್ಷಿ ಬಾಳಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಈ ಹಿಂದೆ ಆಡಳಿತ ನಡೆಸಿದವರ ಸನಾತನ ನಂಬಿಕೆಗಳನ್ನು ತುಷ್ಟೀಕರಿಸುವ ಹುಚ್ಚುತನಕ್ಕೆ ಈಗಿನ ಸರ್ಕಾರ ಇಳಿಯದಿರಲಿ. ನಮ್ಮ ಸಂವಿಧಾನದಲ್ಲಿ ಹೇಳಿದ ವೈಜ್ಞಾನಿಕ ನಡೆ ನಮ್ಮದಾಗಲಿ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ‘ಗೃಹಲಕ್ಷ್ಮಿ’ ಭಾಗ್ಯ ನೀಡಿದ್ದು ಎಷ್ಟು ಸ್ವಾಗತಾರ್ಹವೋ ಬಳೆ ಕುಂಕುಮ ನೀಡುವುದು ಅಷ್ಟೇ ಖಂಡನಾರ್ಹ” ಎಂದು ಬಾಳಿ ಅವರು ಹೇಳಿದ್ದಾರೆ.

ವಿಡಿಯೊ ನೋಡಿ: ಚೇಳುಗಳ ಜಾತ್ರೆ : ಚೇಳುಗಳ ಜೊತೆ ಜನರ ಸಂಭ್ರಮ, ಉಳಿಯಬೇಕಿದೆ ಚೇಳಿನ ಸಂತತಿ Janashakthi Media

Donate Janashakthi Media

Leave a Reply

Your email address will not be published. Required fields are marked *