ತುಮಕೂರು : ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರ ಬರ್ಬರ ಹತ್ಯೆ ಪ್ರಕರಣದಲ್ಲಿ 21 ಮಂದಿ ಅಪರಾಧಿಗಳಿಗೆ ಜಿಲ್ಲಾ ಮೂರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಇಂದು (ನ21) ಜೀವಾವಧಿ ಶಿಕ್ಷೆ ವಿಧಿಸಿದೆ.
ಒಟ್ಟು 27 ಆರೋಪಿಗಳಲ್ಲಿ 6 ಮಂದಿ ಈಗಾಗಲೇ ಸಾವನ್ನಪ್ಪಿದ್ದು, ಉಳಿದ 21 ಮಂದಿ ಅಪರಾಧಿಗಳು ಎಂದು ಕೋರ್ಟ್ ಆದೇಶಿಸಿದೆ. ಐಪಿಸಿ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿ ಜೀವಾವಧಿ ಶಿಕ್ಷೆಯನ್ನು ನ್ಯಾಯಾಧೀಶರು ಪ್ರಕಟಿಸಿದ್ದಾರೆ. 2010ರಲ್ಲಿ ನಡೆದ ಈ ಕೊಲೆ ಸಂಬಂಧ ಭಾರತೀಯ ದಂಡ ಸಂಹಿತೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈಗ 2024ರಲ್ಲಿ ತೀರ್ಪು ಪ್ರಕಟಗೊಂಡಿದೆ.
ರಂಗನಾಥ, ಮಂಜುಳ, ತಿಮ್ಮರಾಜು, ರಾಜು (ದೇವರಾಜು), ಶ್ರೀನಿವಾಸ್, ಆನಂದ (ಆನಂದಸ್ವಾಮಿ), ವೆಂಕಟಸ್ವಾಮಿ, ವೆಂಕಟೇಶ್, ನಾಗರಾಜು, ರಾಜಪ್ಪ, ಮೀಸೆ ಹನುಮಂತಯ್ಯ, ಗಂಗಾಧರ (ಗಂಗಣ್ಣ), ನಂಜುಂಡಯ್ಯ (ಪರಿಶಿಷ್ಟ ಜಾತಿ), ಸತ್ಯಪ್ಪ– ಸತೀಶ (ಪರಿಶಿಷ್ಟ ಜಾತಿ), ಚಂದ್ರಶೇಖರ (ಚಂದ್ರಯ್ಯ), ರಂಗಯ್ಯ (ರಾಮಯ್ಯ), ಉಮೇಶ್, ಚನ್ನಮ್ಮ, ಮಂಜಣ್ಣ, ಮಂಜು, ಸ್ವಾಮಿ (ಮೋಹನ್ ಕುಮಾರ್) ಅಪರಾಧಿಗಳು ಎಂದು ಜೀವಾವಧಿ ಶಿಕ್ಷೆ ನೀಡಲಾಗಿದೆ. ಹನುಮಂತಯ್ಯ (ಪರಿಶಿಷ್ಟ ಜಾತಿ), ವೆಂಕಟೇಶ್, ರಾಮಯ್ಯ, ರಾಮಯ್ಯ, ದಾಸಪ್ಪ, ಬುಳ್ಳೆ ಹನುಮಂತಯ್ಯ ಈಗಾಗಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ : ಮರಕುಂಬಿ ದಲಿತರ ಮನೆಗೆ ಬೆಂಕಿ ಹಚ್ಚಿದ ಪ್ರಕರಣ – 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಪ್ರಕರಣದ ಹಿನ್ನೆಲೆ :ಚಿಕ್ಕನಾಯಕನಹಳ್ಳಿ ತಾಲ್ಲೂಕು ಹಂದನಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಾಲಪುರ ಗ್ರಾಮದಲ್ಲಿ 2010ರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಹೊನ್ನಮ್ಮ ಕೊಲೆ ನಡೆದಿತ್ತು. ಸುದೀರ್ಘ ಒಂದೂವರೆ ದಶಕಗಳ ಕಾಲ ವಿಚಾರಣೆ ನಡೆದು, ಇದೀಗ ಅಪರಾಧ ಸಾಬೀತಾಗಿದೆ ಎಂದು ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ.ಎಸ್.ಜ್ಯೋತಿ ತಿಳಿಸಿದರು.
ಗೋಪಾಲಪುರದ ಹೊನ್ನಮ್ಮ ಡಾಬಾ ನಡೆಸುತ್ತಿದ್ದು, ಗ್ರಾಮದಲ್ಲಿ ದೇವಸ್ಥಾನ ನಿರ್ಮಿಸಲು ಮರದ ತುಂಡು ಸಂಗ್ರಹಿಸಿ ಇಟ್ಟಿದ್ದರು. ಮರದ ತುಂಡುಗಳನ್ನು ಗ್ರಾಮದ ಕೆಲವರು ಕಳವು ಮಾಡಿದ್ದರು. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರಿಂದಾಗಿ ಗ್ರಾಮದ ಜನರು ಹಾಗೂ ಹೊನ್ನಮ್ಮನ ಮಧ್ಯೆ ದ್ವೇಷ ಉಂಟಾಗಿತ್ತು. ಸದಾ ಒಂದಲ್ಲೊಂದು ರೀತಿಯಲ್ಲಿ ಜಗಳ ನಡೆಯುತಿತ್ತು. ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮುಂದುವರಿದಿತ್ತು. ಕೊನೆಗೆ ಹೊನ್ನಮ್ಮ ಅವರನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು.
ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಮರಕುಂಬಿಯಲ್ಲಿ ದಲಿತರ ಮನೆಗಳಿಗೆ ಬೆಂಕಿ ಹಚ್ಚಿ, ದೌರ್ಜನ್ಯ ನಡೆಸಿದ 98 ಜನ ಅಪರಾಧಿಗಳಿಗೆ ಕೊಪ್ಪಳ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆಯ ತೀರ್ಪು ನೀಡಿದ ಬೆನ್ನಲ್ಲೇ, ತುಮಕೂರು ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.