ರಾಜ್ಯ ಶಿಕ್ಷಣ ನೀತಿ ಬಂದ ತಕ್ಷಣ ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆ ನಿಲ್ಲುವುದಿಲ್ಲ: ಬಿ. ಶ್ರೀಪಾದ ಭಟ್

ರಾಜ್ಯ ಸರ್ಕಾರ ಹೊಸ ನಿರ್ವಹಣಾ ವ್ಯವಸ್ಥೆ ರೂಪಿಸಲು ಹೊರಟಿದೆಯೆ ಹೊರತು, ಶಿಕ್ಷಣದ ಮುಖ್ಯ ಉದ್ದೇಶಗಳ ಈಡೇರಿಕಾಗಿ ಕೆಲಸ ಮಾಡುತ್ತಿಲ್ಲ ಎಂದು ಚಿಂತಕ ಕೆ.ವಿ. ನಾರಾಯಣ ಹೇಳಿದರು ರಾಜ್ಯ ಶಿಕ್ಷಣ ನೀತಿ

ಬೆಂಗಳೂರು: ಸರ್ಕಾರ ಬದಲಾಗಿ ಎನ್‌ಇಪಿ ಬದಲಿಗೆ ರಾಜ್ಯ ಶಿಕ್ಷಣ ನೀತಿ ರೂಪಿಸಿದ ತಕ್ಷಣವೆ ಕ್ಯಾಂಪಸ್ ಡೆಮಾಕ್ರಸಿ ಬರುವುದಿಲ್ಲ, ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ನಿಲ್ಲುವುದಿಲ್ಲ ಎಂದು ಶಿಕ್ಷಣ ತಜ್ಞ ಬಿ. ಶ್ರೀಪಾದ ಭಟ್‌ ಬುಧವಾರ ಹೇಳಿದರು. ನಗರದ ಅಂಬೇಡ್ಕರ್ ವೀದಿಯಲ್ಲಿರುವ ಸರ್ಕಾರಿ ಕಲಾ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ಬಯಲು ಬಳಗ ಆಯೋಜಿಸಿದ್ದ ”ರಾಜ್ಯ ಶಿಕ್ಷಣ ನೀತಿ; ಆಗಬೇಕಾದುದೇನು?” ಮಾತುಕತೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಸರ್ಕಾರಿ ಕಲಾ ಕಾಲೇಜಿನ ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಪಾದ ಭಟ್ ಅವರು, “ರಾಜ್ಯ ಶಿಕ್ಷಣ ನೀತಿಯ ಹೆಸರಿನಲ್ಲಿ ವಿದ್ಯಾರ್ಥಿಗಳು ಬೆಂಕಿಯಿಂದ ಬಾಣಲೆಗೆ ಬೀಳುವಂತೆ ರಾಜ್ಯ ಸರ್ಕಾರ ಮಾಡದೆ ಇರಲಿ. ಯಾವುದೆ ಮುಂದಾಲೋಚನೆ ಇಲ್ಲದೆ ಶಿಕ್ಷಣವನ್ನು ನಿಯಂತ್ರಿಸುವುದಕ್ಕಾಗಿ ಸರ್ಕಾರ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸುತ್ತೇವೆ ಎಂದು ಹೊರಟಿದ್ದರೆ ಅದೊಂದು ದೊಡ್ಡ ದುರಂತಕ್ಕೆ ಮುನ್ನುಡಿ ಬರೆದಂತೆ” ಎಂದು ಎಚ್ಚರಿಸಿದರು.

ಇದನ್ನೂ ಓದಿ: ಅಂಕಿ-ಅಂಶಗಳ ಸಂದೇಶವನ್ನು ಗಮನಿಸುವ ಬದಲು, ಅಂಕಿ-ಅಂಶಗಳನ್ನೇ ಬುಡಮೇಲು ಮಾಡುವ ರಾಜಕೀಯ

“ದ್ರಾವಿಡ ಮಾದರಿ ಎಂದು ಹೇಳಿಕೊಳ್ಳುವ ತಮಿಳುನಾಡು ಸರ್ಕಾರ ಕೂಡಾ ರಾಜ್ಯ ಶಿಕ್ಷಣ ನೀತಿಯನ್ನು ಮಾಡಲು ಹೊರಟಿದೆ. ಆದರೆ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಬೇಕಾದರ ಸಮಿತಿಯ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ಶಿಕ್ಷಣ ನೀತಿ ರೂಪಿಸಲು ಹೊರಟಿರುವ ನಮ್ಮಲ್ಲಿ ಶಿಕ್ಷಣ ಶಾಸ್ತ್ರವೇ ಇಲ್ಲ. ರಾಜ್ಯ ಶಿಕ್ಷಣ ನೀತಿಯಲ್ಲಿ ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣದ ಬಗ್ಗೆ ಮಾತನಾಡುತ್ತಾರೆಯೆ ಎಂಬ ಬಗ್ಗೆ ಪ್ರಶ್ನೆ ಹಾಕಬೇಕಿದೆ” ಎಂದು ಹೇಳಿದರು.

“ಸರ್ಕಾರ ಬದಲಾಗಿ ಎನ್‌ಇಪಿ ಬದಲಿಗೆ ರಾಜ್ಯ ಶಿಕ್ಷಣ ನೀತಿ ರೂಪಿಸಿದ ತಕ್ಷಣವೆ ಕ್ಯಾಂಪಸ್ ಡೆಮಾಕ್ರಸಿ ಬರುವುದಿಲ್ಲ, ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ನಿಲ್ಲುವುದಿಲ್ಲ. ಐಐಟಿಗಳಲ್ಲಿ ಅಥವಾ ವೈದ್ಯಕೀಯ ಕಾಲೇಜಿನಲ್ಲಿ ದಲಿತ ವಿದ್ಯಾರ್ಥಿಗಳು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬುವುದನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಯಾವುದೆ ಪಠ್ಯಕ್ರಮ ರೂಪಿಸದೆ ಕೇವಲ 10-20 ದಿನಗಳಲ್ಲಿ ಒಂದು ಪಠ್ಯ ಪುಸ್ತಕ ರಚಿಸಿದ್ದಾರೆ. ಇದರಿಂದ ಪ್ರಯೋಜನವೇನು. ಸಾರ್ವಜನಿಕ ಶಿಕ್ಷಣವನ್ನು ಮುಖ್ಯಮಂತ್ರಿ ಹಂತದಲ್ಲಿ ಮೇಲ್ವಿಚಾರಣೆ ಮಾಡಬೇಕಿದೆ. ಇಲ್ಲವೆಂದರೆ ಶಿಕ್ಷಣ ಕ್ಷೇತ್ರವನ್ನು ಈಗಿನ ಸ್ಥಿತಿಗಿಂತ ಚೂರು ಕೂಡಾ ಬದಲಾಯಿಸಲು ಸಾಧ್ಯವಿಲ್ಲ” ಎಂದು ಶ್ರೀಪಾದ ಭಟ್ ಅವರು ಹೇಳಿದರು.

ವಿಮರ್ಶಕ, ಸಂಸ್ಕೃತಿ ಚಿಂತಕ ಕೆ.ವಿ. ನಾರಾಯಣ ಅವರು ಮಾತನಾಡಿ, ” ಕೊಠಾರಿ ಆಯೋಗದ ಮೊದಲ ಮಾತು ‘ಭಾರತದ ಭವಿಷ್ಯ ತರಗತಿ ಕೋಣೆಯಲ್ಲಿ ರೂಪುಗೊಳ್ಳುತ್ತಿದೆ’ ಎಂಬ ಈಗ ವ್ಯಂಗ್ಯವಾಗಿ ಬದಲಾಗಿದೆ. ಕರ್ನಾಟಕದಲ್ಲಿ ಸಾಮಾನ್ಯ ಮತ್ತು ಉನ್ನತ ಶಿಕ್ಷಣ ಎಷ್ಟು ಅಧಃಪತನಕ್ಕೆ ಹೋಗಿದೆ. ಶಿಕ್ಷಣದ ಮೂಲಭೂತ ಉದ್ದೇಶದ ಬಗ್ಗೆ ಕಾಯ್ದೆಯಲ್ಲಿ ಸೂಚನೆಗಳೇ ಇಲ್ಲ. ಶಿಕ್ಷಣ ಇಷ್ಟೊಂದು ಅಧಃಪತನಕ್ಕೆ ಹೋಗಿರುವುದಕ್ಕೆ ಮೂಲ ಕಾರಣ ಅನುದಾನ ರಹಿತ ಶಾಲೆಗಳಾಗಿವೆ. ಈ ಅನುದಾನ ರಹಿತ ಶಾಲೆಗಳು ಕಲ್ಪನೆ ಹುಟ್ಟಿರುವುದು ಕರ್ನಾಟಕದಲ್ಲಿ. ಅನುದಾನ ರಹಿತ ಶಾಲೆಗಳು ಇರಲೇ ಬಾರದು” ಎಂದು ಹೇಳಿದರು.

ಇದನ್ನೂ ಓದಿ: ಖಾಸಗಿಯವರಿಗೆ ಸರಕಾರಿ ಶಾಲೆಗಳ ದತ್ತು : ಅಪಾಯಕಾರಿ ನಡೆ

“ಶಿಕ್ಷಣ ಕಾಯ್ದೆ ಇದೆ ಎನ್ನುವುದು ನಮ್ಮ ರಾಜಕಾರಣಿಗಳಿಗಾಗಲಿ, ಶಿಕ್ಷಣ ಕ್ಷೇತ್ರದ ಅಧಿಕಾರಿಗಳಾಗಲಿ ತಿಳಿದೆ ಇಲ್ಲ. ಸರ್ಕಾರಕ್ಕೆ ಕೂಡಾ ಶಿಕ್ಷಣ ಹೀಗೆಯೇ ಇರಬೇಕು ಎಂಬ ಉದ್ದೇಶ ಇದೆ. ಶಿಕ್ಷಣದ ಮುಖ್ಯ ಉದ್ದೇಶ ಸಾಮಾಜೀಕರಣವಾಗಿದೆ. ಆದರೆ ಸಿಬಿಎಸ್ಇ ಮತ್ತು ಐಸಿಎಸ್‌ಇ ಶಾಲೆಗಳಿಂದಾಗಿ ವಿದ್ಯಾರ್ಥಿಗಳನ್ನು ಸಾಮಾಜೀಕರಣದಿಂದ ದೂರ ಸರಿಯುತ್ತಿದ್ದಾರೆ.‌ ದುರಂತ ಏನೆಂದರೆ ಸರ್ಕಾರ ಕೂಡಾ ಸಿಬಿಎಸ್ಇ ಮತ್ತು ಐಸಿಎಸ್‌ಇ ಶಾಲೆಗಳನ್ನೆ ಮಾದರಿಯನ್ನಾಗಿ ತೆಗೆದುಕೊಳ್ಳುತ್ತಿದೆ. ಆದರೆ ವಿದ್ಯಾರ್ಥಿಗಳು ಅತ್ಯಂತ ಹೆಚ್ಚಾಗಿ ಸಾಮಾಜೀಕರಣಗೊಳ್ಳುತ್ತಿರುವುದು ಸರ್ಕಾರಿ ಶಾಲೆಗಳಲ್ಲಾಗಿದೆ” ಎಂದು ಹೇಳಿದರು.

“ಸರ್ಕಾರಗಳಿಗೆ ದುಡಿಯುವ ವಯಸ್ಸನ್ನು ಮುಂದೂಡುವ ಹಿಡನ್ ಅಜೆಂಡಾ ಕೂಡಾ ಇವೆ. ಅವಕಾಶಗಳನ್ನು ಸೃಷ್ಟಿ ಮಾಡದೆ ಸಾಮರ್ಥ್ಯವನ್ನು ಸೃಷ್ಟಿ ಮಾಡುವುದು ಸರಿಯಲ್ಲ. ಶಿಕ್ಷಣ ಅನ್ನುವುದು ಸರ್ಕಾರದ ಹೊಣೆಗಾರಿಕೆಯಾಗಿದೆ. ಶಿಕ್ಷಣ ಹೇಗೆ ಇರಬೇಕು ಎನ್ನುವುದು ಸರ್ಕಾರ ನಿರ್ವಹಣೆ ಮಾಡಬೇಕಿದೆ. ಎಲ್ಲವನ್ನೂ ಖಾಸಗಿಯವರಿಗೆ ನೀಡಬಾರದು” ಎಂದು ಕೆ.ವಿ. ನಾರಾಯಣ ಅವರು ಹೇಳಿದರು.

“ಕೇಂದ್ರೀಕೃತ ವ್ಯವಸ್ಥೆಗೆ ನಾವೆಷ್ಟು ಬಲಿಯಾಗುತ್ತಿದ್ದೇವೆ ಎಂದರೆ ನೀಟ್ ಪರೀಕ್ಷೆ ಬಗ್ಗೆ ತಮಿಳು ನಾಡು ಸರ್ಕಾರ ಬಿಟ್ಟರೆ ಯಾರೂ ಪ್ರಶ್ನಿಸುತ್ತಿಲ್ಲ. ಶಿಕ್ಷಣಕ್ಕೆ ಪ್ರವೇಶ ಪಡೆಯುವಾಗಲೆ ಪರೀಕ್ಷೆ ನಡೆಸುವುದು ಜನವಿರೋಧಿ ವ್ಯವಸ್ಥೆಯಾಗಿದೆ. ಇದನ್ನು ವಿರೋಧಿಸಬೇಕಿದೆ. ಈಗಾಗಲೇ ರಾಜ್ಯದ ಶಿಕ್ಷಣದ ಕಾಯ್ದೆ ತನ್ನ ಮಹತ್ವ ಕಳೆದುಕೊಂಡಿದೆ. ಅದರ ಜೊತೆಗೆ ಮತ್ತೆ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ರಾಜ್ಯ ಸರ್ಕಾರ ಹೊರಟಿದೆ. ಸರ್ಕಾರ ಹೊಸ ನಿರ್ವಹಣಾ ವ್ಯವಸ್ಥೆ ರೂಪಿಸಲು ಹೊರಟಿದೆಯೆ ಹೊರತು, ಶಿಕ್ಷಣದ ಮುಖ್ಯ ಉದ್ದೇಶಗಳ ಸಾಫಲ್ಯಕ್ಕಾಗಿ ಅಲ್ಲ” ಎಂದು ಹೇಳಿದರು.

ವಿಡಿಯೊ ನೋಡಿ: ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿದ್ದು ಸರಕಾರಿ ಶಾಲೆಗಳನ್ನು ಮುಚ್ಚಲಿಕ್ಕಾಗಿಯೇ?

Donate Janashakthi Media

Leave a Reply

Your email address will not be published. Required fields are marked *