ರಾಜ್ಯ ಸರ್ಕಾರವನ್ನು ರಾಜ್ಯಪಾಲರ ಮೂಲಕ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ: ದಲಿತ ಸಂಘರ್ಷ ಸಮಿತಿ ಸದಸ್ಯರ ಪ್ರತಿಭಟನೆ

ಬೆಂಗಳೂರು: ಮಂಗಳವಾರ, 3 ಸೆಪ್ಟೆಂಬರ್‌ ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರವನ್ನು ಬಿಜೆಪಿ ಮತ್ತು ಜೆಡಿಎಸ್‌ ಪಕ್ಷದವರು ರಾಜ್ಯಪಾಲರ ಮೂಲಕ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿಯ ಸದಸ್ಯರು ಪ್ರತಿಭಟನೆ ನಡೆಸಿದರು. ಸರ್ಕಾರ

‘ರಾಜ್ಯಪಾಲರ ಹಠಾವೋ ರಾಜ್ಯ ಬಚಾವೋ’, ‘ಕೋಮುವಾದಿ ಬಿಜೆಪಿ–ಜೆಡಿಎಸ್‌ ಪಕ್ಷಗಳಿಗೆ ಧಿಕ್ಕಾರ’ ಎಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಪ್ರತಿಭಟನಕಾರರು ಘೋಷಣೆ ಕೂಗಿದರು. ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ‘ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್‌ ಎಂಬ ಕೋಮುವಾದಿ ಪಕ್ಷಗಳು ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿವೆ. ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡುತ್ತಿವೆ’ ಎಂದು ದೂರಿದರು.

ಸಮಿತಿ ಮುಖಂಡ ಇಂದೂಧರ ಹೊನ್ನಾಪುರ ಮಾತನಾಡಿ, ‘ಸಿದ್ದರಾಮಯ್ಯ ಅವರು ಮಾಡದ ತಪ್ಪನ್ನು ಅವರ ಮೇಲೆ ಹೊರಿಸಲಾಗುತ್ತಿದೆ. ಮುಡಾ ಪ್ರಕರಣದಲ್ಲಿ ಶ್ರೀಸಾಮಾನ್ಯರಿಗೆ ಇರುವಷ್ಟು ಜ್ಞಾನ ನಮ್ಮ ರಾಜ್ಯಪಾಲರಿಗಿಲ್ಲ. ರಾಜ್ಯಪಾಲರು ಕೇಂದ್ರ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಇದನ್ನೂ ಓದಿ:  ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆ: ಬಸವರಾಜ ಬೊಮ್ಮಾಯಿ

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ‘ಶೋಷಿತ ಸಮುದಾಯಗಳಿಗೆ ಅಧಿಕಾರ ಸಿಕ್ಕರೆ ಮೇಲ್ಜಾತಿಯವರ ಹೊಟ್ಟೆಯಲ್ಲಿ ಬೆಂಕಿ ಬೀಳುತ್ತದೆ. ಸಿದ್ದರಾಮಯ್ಯ ಅವರನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ರಾಜ್ಯಪಾಲರು ಯಾವುದೇ ತನಿಖೆ ನಡೆಸದೇ ಮುಖ್ಯಮಂತ್ರಿಯವರ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ’ ಎಂದರು.

‘ಜಾತಿವಾದಿ ಜನತಾ ದಳ ಎಂಬ ನಾಯಿ ಹಸಿದುಕೊಂಡು ಕೋಮುವಾದಿ ಬಿಜೆಪಿಯೊಂದಿಗೆ ಕೈ ಜೋಡಿಸಿದೆ. ಬ್ರಾಹ್ಮಣರು, ಲಿಂಗಾಯತರು ಮತ್ತು ಒಕ್ಕಲಿಗ ಸಮುದಾಯದವರು ಹಲವು ಬಾರಿ ಮುಖ್ಯಮಂತ್ರಿ ಹುದ್ದೆಗೇರಿದ್ದಾರೆ. ಆದರೆ, ಹಿಂದುಳಿದ ವರ್ಗದವರು ಮುಖ್ಯಮಂತ್ರಿಯಾದರೆ ಇವರಿಗೆ ಎಲ್ಲಿಲ್ಲದ ಸಂಕಟ. ದಲಿತರು ಮುಖ್ಯಮಂತ್ರಿ ಆಗಬೇಕು. ಅದಕ್ಕಾಗಿ ಸಂದರ್ಭ ಕೂಡಿ ಬರಬೇಕಿದೆ’ ಎಂದು ಹೇಳಿದರು.

ಯಾರಿಗಾಗಿ ಕಾಂಗ್ರೆಸ್‌ ಹಠಾವೋ ಚಳವಳಿ?

‘ಕೆಲವರು ‘ಕಾಂಗ್ರೆಸ್‌ ಹಠಾವೋ ದಲಿತ ಬಚಾವೋ’ ಎಂಬ ಚಳವಳಿ ನಡೆಸುತ್ತಿದ್ದಾರೆ. ಅವರು ಯಾರಿಗಾಗಿ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷವನ್ನು ಕೆಳಗೆ ಇಳಿಸುವಂತೆ ಹೇಳುತ್ತಿರುವ ನೀವು ಯಾರ ಪರ ನಿಲ್ಲುತ್ತಿದ್ದೀರಾ? ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳಿಗೆ ಈ ಚಳವಳಿಯ ಲಾಭವನ್ನು ಕೊಡುವುದಕ್ಕೆ ಹೋಗುತ್ತಿದ್ದೀರಾ? ನಾವು ಕಾಂಗ್ರೆಸ್‌ ಪಕ್ಷದವರಲ್ಲ ಕಾಂಗ್ರೆಸ್‌ ಸಂವಿಧಾನಾತ್ಮಕವಾಗಿ ನಡೆದುಕೊಳ್ಳತ್ತದೆ ಎಂಬ ನಂಬಿಕೆಯಿಂದ ಅದರ ಪರವಾಗಿದ್ದೇವೆ’ ಎಂದು ಗುರುಪ್ರಸಾದ್ ಕೆರಗೋಡು ಹೇಳಿದರು.

ಇದನ್ನೂ ನೋಡಿ: ಸಮರಧೀರ ಹೋರಾಟ ರೂಪಿಸಲು ಕಾಮ್ರೇಡ್ ಸೂರಿ ಮಾದರಿ – ಮೀನಾಕ್ಷಿಸುಂದರಂ Janashakthi Media

Donate Janashakthi Media

Leave a Reply

Your email address will not be published. Required fields are marked *