-
ಪ್ಯಾಲೆಸ್ಟೈನ್ ನೊಂದಿಗೆ ಸೌಹಾರ್ದತೆಯ ದೇಶವ್ಯಾಪಿ ಅಭಿಯಾನ
-
ಯುಎಸ್‍ಗೆ ಬಿಜೆಪಿ ನೇತೃತ್ವದ ಸರಕಾರದ ಶರಣಾಗತಿಯನ್ನು ಬಯಲಿಗೆಳೆಯಲು ಸಿಪಿಐ(ಎಂ) ಕೇಂದ್ರ ಸಮಿತಿ ನಿರ್ಧಾರ
ಸೆಪ್ಟೆಂಬರ್ ಕೊನೆಯ ವಾರದಲ್ಲಿ ಟ್ರಂಪ್ ಅವರ ಸುಂಕ ಭಯೋತ್ಪಾದನೆಯ ವಿರುದ್ಧ ವ್ಯಾಪಕ ಅಭಿಯಾನ ನಡೆಸಿ ಅಮೆರಿಕನ್ ಸರಕಾರದ ಎದುರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಶರಣಾಗತಿಯನ್ನು ಬಯಲಿಗೆಳೆಯಲು ಸಿಪಿಐ(ಎಂ) ಕೇಂದ್ರ ಸಮಿತಿ ನಿರ್ಧರಿಸಿದೆ. ಇದಲ್ಲದೆ, ದೇಶಾದ್ಯಂತ ವ್ಯಾಪಕ ಚಟುವಟಿಕೆಗಳ ಮೂಲಕ ಪ್ಯಾಲೆಸ್ಟೈನ್ನೊಂದಿಗೆ ಸೌಹಾರ್ದದ ಅಭಿಯಾನವನ್ನು ನಡೆಸಲು ಮತ್ತು ಇದರಲ್ಲಿ ಬಿಜೆಪಿ ಸರ್ಕಾರದ ಇಸ್ರೇಲ್ ಪರ ನೀತಿಯನ್ನು ಬಯಲು ಮಾಡಲು ಎಲ್ಲಾ ರಾಜ್ಯ ರಾಜಧಾನಿಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು, ಕಲಾವಿದರು ಮತ್ತು ವ್ಯಕ್ತಿಗಳನ್ನು ಒಳಗೊಂಡ ದೊಡ್ಡ ಸಾರ್ವಜನಿಕ ಸಭೆಗಳನ್ನು ಆಯೋಜಿಸಲಾಗುವುದು ಎಂದು ಕೇಂದ್ರ ಸಮಿತಿ ಹೇಳಿದೆ. ಸುಂಕ
ಪಕ್ಷದ ಎಲ್ಲಾ ರಾಜ್ಯ ಸಮಿತಿಗಳು ಜನರ ಜೀವನೋಪಾಯದ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುತ್ತವೆ ಮತ್ತು ಆಂದೋಲನಗಳು ಮತ್ತು ಹೋರಾಟಗಳನ್ನು ನಡೆಸುತ್ತವೆ ಎಂದೂ ಅದು ಹೇಳಿದೆ. ಸುಂಕ
ಸೆಪ್ಟೆಂಬರ್ 13 ರಿಂದ 15ರ ವರೆಗೆ ನವದೆಹಲಿಯ ಸುರ್ಜೀತ್ ಭವನದಲ್ಲಿ ನಡೆದ ಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆಯ ನಂತರ ಬಿಡುಗಡೆ ಮಾಡಿರುವ ಕೇಂದ್ರ ಸಮಿತಿಯ ಪ್ರಕಟಣೆಯ ಪೂರ್ಣಪಾಟವನ್ನು ಈ ಮುಂದೆ ಕೊಡಲಾಗಿದೆ: ಸುಂಕ
ಇದನ್ನೂ ಓದಿ: ಯಾದಗಿರಿ | ಗ್ರಾಮ ಪಂಚಾಯಿತಿಗಳ ಹೊರಗುತ್ತಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸಬೇಕು 9ನೇ ರಾಜ್ಯ ಸಮ್ಮೇಳನದಲ್ಲಿ ನಿರ್ಣಯ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ದೇಶವನ್ನು ಬಿಕ್ಕಟ್ಟಿಗೆ ತಳ್ಳುತ್ತಲೇ ಇವೆ. ಜನರು ಬೆಲೆ ಏರಿಕೆ, ನಿರುದ್ಯೋಗ, ಮತ್ತು ಹೆಚ್ಚುತ್ತಿರುವ ಅಸಮಾನತೆಗಳಿಂದ ಬಳಲುತ್ತಿದ್ದಾರೆ. ವಿಶೇಷವಾಗಿ ಯುಎಸ್ ಸುಂಕಗಳನ್ನು ಹೇರಿದ ನಂತರ ನಿರುದ್ಯೋಗ ಹೆಚ್ಚುತ್ತಿದೆ. ಸುಂಕ
ಜುಲೈ 9 ರ ಸಾರ್ವತ್ರಿಕ ಮುಷ್ಕರವನ್ನು ಅದ್ಭುತವಾಗಿ ಯಶಸ್ವಿಗೊಳಿಸಿದ್ದಕ್ಕಾಗಿ ನಮ್ಮ ದೇಶದ ಕಾರ್ಮಿಕ ವರ್ಗಕ್ಕೆ ಕೇಂದ್ರ ಸಮಿತಿಯು ವಂದನೆ ಸಲ್ಲಿಸಿತು. ಮುಷ್ಕರಕ್ಕೆ ಸೌಹಾರ್ದತೆ ವ್ಯಕ್ತಪಡಿಸಿ ಬೆಂಬಲಕ್ಕೆ ನಿಂತ ರೈತರು, ಕೃಷಿ ಕಾರ್ಮಿಕರು ಮತ್ತು ಸಮಾಜದ ಇತರ ವಿಭಾಗಗಳನ್ನು ಸಹ ಅದು ಅಭಿನಂದಿಸಿತು. ಸಾರ್ವತ್ರಿಕ ಮುಷ್ಕರದ ಯಶಸ್ಸು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಹೆಚ್ಚುತ್ತಿರುವ ಅಸಮಾಧಾನವನ್ನು ಪ್ರತಿಬಿಂಬಿಸುತ್ತದೆ. ಸರ್ಕಾರದ ಜನವಿರೋಧಿ ಕ್ರಮಗಳ ವಿರುದ್ಧದ ಹೋರಾಟಗಳನ್ನು ಬೆಂಬಲಿಸುವುದನ್ನು ಸಿಪಿಐ(ಎಂ) ಮುಂದುವರಿಸುತ್ತದೆ. ಸುಂಕ
ಯುಎಸ್ ಅಧ್ಯಕ್ಷ ಟ್ರಂಪ್ ರ ಸುಂಕ ಭಯೋತ್ಪಾದನೆ: ಭಾರತದ ಮೇಲೆ ಅಮೆರಿಕ ಶೇ. 50 ಸುಂಕಗಳನ್ನು ಪ್ರಕಟಿಸಿದೆ – ವ್ಯಾಪಾರ ಒಪ್ಪಂದವನ್ನು ತಲುಪಲು ವಿಫಲವಾದ್ದಕ್ಕೆ ಶೇ. 25 ಮತ್ತು ರಷ್ಯಾದಿಂದ ತೈಲ ಮತ್ತು ಅನಿಲ ಖರೀದಿಗೆ ಶೇ. 25. ಈ ಕ್ರಮವು ಭಾರತದ ಕೃಷಿ, ಮೀನುಗಾರಿಕೆ, ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳು ಮತ್ತು ವಿಶೇಷವಾಗಿ ಜವಳಿ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಲಿದೆ. ನಮ್ಮ ದೇಶದ ಮೇಲೆ ಒತ್ತಡ ಹೇರಲು ಅಮೆರಿಕದ ವ್ಯಾಪಾರ ಪ್ರತಿನಿಧಿಗಳು ಭಾರತದಲ್ಲಿದ್ದಾರೆ. ಬಿಜೆಪಿ ಸರ್ಕಾರ ಅಮೆರಿಕದ ಒತ್ತಡಕ್ಕೆ ಮಣಿಯಬಾರದು. ಅದು ನಮ್ಮ ರೈತರು, ಕಾರ್ಮಿಕರು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ಹಿತಾಸಕ್ತಿಗಳ ಬೆಂಬಲಕ್ಕೆ ನಿಲ್ಲಬೇಕು. ಸುಂಕ
ಮುಕ್ತ ವ್ಯಾಪಾರ ಒಪ್ಪಂದಗಳು/ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳು (ಎಫ್‌ಟಿಎ/ಬಿಟಿಎ): ಎಫ್‌ಟಿಎ ಸಹಿಗಳ ಓಟವನ್ನು ಪ್ರಾರಂಭಿಸುವ ಮೊದಲು ಸರ್ಕಾರವು ವಿವಿಧ ಪಾಲುದಾರರೊಂದಿಗೆ ಸಮಾಲೋಚಿಸಬೇಕು ಮತ್ತು ಜನರಿಗೆ ಅವು ಎಷ್ಟು ಪ್ರಯೋಜನಕಾರಿ ಎಂದು ಎಚ್ಚರಿಕೆಯಿಂದ ಅಂದಾಜು ಮಾಡಬೇಕು. ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವಲ್ಲಿ ತೋರುವ ಆತುರದ ಫಲಿತಾಂಶವಾಗಿ ಹೈನು, ಕೃಷಿ, ರಕ್ಷಣೆ, ಔಷಧಗಳು ಮತ್ತು ಹಣಕಾಸಿನಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಹಿತಾಸಕ್ತಿಗಳನ್ನು ಬಿಟ್ಟುಕೊಡುವಂತಾಗುತ್ತದೆ. ಸುಂಕ
ಕಾರ್ಪೊರೇಟ್‌ಗಳಿಗೆ ರಿಯಾಯಿತಿಗಳು: ಅರ್ಥವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವ ಒಂದು ವ್ಯರ್ಥ ಪ್ರಯತ್ನವಾಗಿ ಕೇಂದ್ರ ಸಚಿವ ಸಂಪುಟವು ಭಾರತೀಯ ಕಾರ್ಪೊರೇಟ್‍ಗಳಿಗೆ ಹಲವಾರು ರಿಯಾಯಿತಿಗಳನ್ನು ಮಂಜೂರು ಮಾಡಿದೆ. ವಿವಿಧ ಹೆಸರುಗಳಲ್ಲಿ ಸುಮಾರು 1,50,000 ಕೋಟಿ ರೂ. ಮೌಲ್ಯದ ಪ್ರೋತ್ಸಾಹಕಗಳನ್ನು ಪ್ರಕಟಿಸಿದೆ. ಕರಡು ರಾಷ್ಟ್ರೀಯ ದೂರಸಂಪರ್ಕ ನೀತಿ (ಎನ್‌ಟಿಪಿ) 2025ರಲ್ಲಿ ಖಾಸಗಿ ಕಂಪನಿಗಳಿಗೆ ಪ್ರೋತ್ಸಾಹಕಗಳ ಪ್ರಸ್ತಾಪವಿದೆ, ಆದರೆ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿಗಳ ಭವಿಷ್ಯದ ಪ್ರಶ್ನೆಯ ಬಗ್ಗೆ ಅದು ಏನೂ ಹೇಳುವುದಿಲ್ಲ. ಬಿಜೆಪಿ ನೇತೃತ್ವದ ಸರ್ಕಾರವು ಸಾರ್ವಜನಿಕ ಸಂಪನ್ಮೂಲಗಳನ್ನು ಖಾಸಗಿ ಕಾರ್ಪೊರೇಟ್‍ಗಳಿಗೆ ವರ್ಗಾಯಿಸುತ್ತಿದೆ ಮತ್ತು ಹಿಂದುತ್ವ ಕೋಮುವಾದಿ-ಕಾರ್ಪೊರೇಟ್ ನಂಟನ್ನು ಬಲಪಡಿಸುತ್ತಿದೆ ಎಂಬ ಅಂಶವನ್ನು ಈ ಯೋಜನೆಗಳು ಪುನಃ ಸ್ಥಾಪಿಸುತ್ತವೆ. ಸುಂಕ
ಕಾರ್ಮಿಕರ ಹಕ್ಕುಗಳ ಮೇಲೆ ದಾಳಿ: ಕೇಂದ್ರ ಸರ್ಕಾರವು ಕಾರ್ಪೊರೇಟ್ ಲೂಟಿಗೆ ಅನುಕೂಲ ಮಾಡಿಕೊಡಲು ಕಾರ್ಮಿಕರನ್ನು ಮಾತ್ರವಲ್ಲದೆ ಪರಿಸರವನ್ನೂ ರಕ್ಷಿಸುವ ವಿವಿಧ ನಿಯಂತ್ರಣಗಳನ್ನು ಮತ್ತು ಪಾಲಿಸಬೇಕಾದ ಅಂಶಗಳನ್ನು ದುರ್ಬಲಗೊಳಿಸುತ್ತಿದೆ. ಪ್ರಧಾನ ಮಂತ್ರಿ ಮೋದಿಯವರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ನಂತರ ಮತ್ತು ಅವರ ಆಕ್ರಮಣಕಾರಿ ನವ ಉದಾರವಾದಿ ನೀತಿಗಳಿಗೆ ಅನುಗುಣವಾಗಿ, ಕೂಡಲೇ ನೀತಿ ಆಯೋಗವು ಈಗ ಅಪರಾಧಗಳೆಂದು ಪರಿಗಣಿಸಲಾಗುವ ನಿಯಂತ್ರಣದ ಮತ್ತು ಪಾಲಿಸಬೇಕಾದ ಅಂಶಗಳ ಉಲ್ಲಂಘನೆಗಳನ್ನು ಅಪರಾಧ- ಮುಕ್ತಗೊಳಿಸಲು ಎರಡು ಉನ್ನತ ಮಟ್ಟದ ಸಮಿತಿಗಳನ್ನು ರಚಿಸುವುದಾಗಿ ಪ್ರಕಟಿಸಿತು. ಇದು ಕಾರ್ಮಿಕ ವರ್ಗದ ಹಕ್ಕುಗಳಿಗೆ ಒಂದು ಗಂಭೀರ ಹೊಡೆತವಾಗಿದೆ.
ಜಿಎಸ್‌ಟಿ ದರ ಪರಿಷ್ಕರಣೆ: ಸರ್ಕಾರವು ಜಿಎಸ್‌ಟಿ ಮಂಡಳಿಯನ್ನು ಕರೆದು ಜಿಎಸ್‌ಟಿ ಶ್ರೇಣಿ಼(ಸ್ಲ್ಯಾಬ್)ಗಳನ್ನು ಮರುವ್ಯವಸ್ಥೆ ಮಾಡುವುದರೊಂದಿಗೆ ಕೆಲವು ಸರಕುಗಳ ಮೇಲಿನ ಜಿಎಸ್‌ಟಿ ದರಗಳಲ್ಲಿ ಕಡಿತವನ್ನು ಪ್ರಕಟಿಸಿತು. ಬಡವರು ಮತ್ತು ಸಾಮಾನ್ಯ ಜನರು ಬಳಸುವ ಸರಕು ಮತ್ತು ಸೇವೆಗಳ ಮೇಲಿನ ಕಡಿತವು ಸ್ವಾಗತಾರ್ಹ ಹೆಜ್ಜೆಯಾಗಿದೆ. ಈ ಕಡಿತದ ಪ್ರಯೋಜನಗಳು ಕಾರ್ಪೊರೇಟ್‍ಗಳ ಬದಲು ಗ್ರಾಹಕರನ್ನು ತಲುಪುವಂತೆ ಸರ್ಕಾರ ಖಚಿತಪಡಿಸಬೇಕು. ಹೆಚ್ಚುವರಿಯಾಗಿ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ಉಂಟಾಗುವ ಯಾವುದೇ ಆದಾಯ ನಷ್ಟವನ್ನು ಸರಿದೂಗಿಸಬೇಕು. ಜನರ ಕುಂದುಕೊರತೆಗಳನ್ನು ಪರಿಹರಿಸುವ ಬದಲು ಸರ್ಕಾರವು ಸಾಂವಿಧಾನಿಕ ಸಂಸ್ಥೆಗಳ ಮೇಲಿನ ತನ್ನ ನಿಯಂತ್ರಣವನ್ನು ಪ್ರಜಾಪ್ರಭುತ್ವ ಹಕ್ಕುಗಳನ್ನು ಮೊಟಕುಗೊಳಿಸಲು ಬಳಸುತ್ತಿದೆ.
ಸರ್ವಾಧಿಕಾರಶಾಹಿಯನ್ನು ಬಲಪಡಿಸುವ ಕ್ರಮಗಳು
ಎಸ್‍ಐಆರ್: ಬಿಹಾರದಲ್ಲಿ ಚುನಾವಣಾ ಆಯೋಗವು ಆದೇಶಿಸಿದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್) ಉಲ್ಲಂಘನೆಗಳಿಂದ ತುಂಬಿದ್ದು, ಇದರ ಪರಿಣಾಮವಾಗಿ ಅನೇಕ ನಾಗರಿಕರ ಸಾಂವಿಧಾನಿಕವಾಗಿ ಖಾತರಿಪಡಿಸಿದ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಈಗ ಈ ಪ್ರಕ್ರಿಯೆಯನ್ನು ದೇಶಾದ್ಯಂತ ವಿಸ್ತರಿಸಲು ಚುನಾವಣಾ ಆಯೋಗ ಪ್ರಯತ್ನಿಸುತ್ತಿದೆ. ಬಿಜೆಪಿ ನೇತೃತ್ವದ ಸರ್ಕಾರದ ಪರವಾಗಿ ನಿರಂತರವಾಗಿ ಕಾರ್ಯನಿರ್ವಹಿಸಿದ ಚುನಾವಣಾ ಆಯೋಗ ಈಗ ಆರೆಸ್ಸೆಸ್/ಸಂಘ ಪರಿವಾರದ ಕಾರ್ಯಸೂಚಿಯನ್ನು ಮುನ್ನಡೆಸುವಲ್ಲಿ ಶಾಮೀಲಾಗಿದೆ.
ಮತದಾರರ ನೋಂದಣಿಗೆ ಆಧಾರ್ ಕಾರ್ಡ್ ಅನ್ನು ಒಂದು ಊರ್ಜಿತ ದಾಖಲೆಯಾಗಿ ಪರಿಗಣಿಸಲು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಈ ನಿರ್ದೇಶನವನ್ನು ಜಾರಿಗೆ ತರುವಂತೆ ಮತ್ತು ಯಾವುದೇ ಅರ್ಹ ಮತದಾರರು ಹಕ್ಕು-ವಂಚಿತರಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾವು ಜಾಗರೂಕರಾಗಿರಬೇಕು.
ಎಸ್‍ಐಆರ್ ಅನ್ನು ವಿರೋಧಿಸಲು ಮತ್ತು ಜನರ ಮತದಾನದ ಹಕ್ಕನ್ನು ರಕ್ಷಿಸಲು ಎಲ್ಲಾ ವಿರೋಧ ಪಕ್ಷಗಳು ಒಟ್ಟುಗೂಡಿರುವುದು ಸ್ವಾಗತಾರ್ಹ. ಸಿಪಿಐ(ಎಂ) ಇತರ ವಿರೋಧ ಪಕ್ಷಗಳೊಂದಿಗೆ ಸಂಯೋಜಿಸುವಲ್ಲಿ ಮತ್ತು ನಾಗರಿಕರ ಮತದಾನದ ಹಕ್ಕನ್ನು ನಿರ್ಬಂಧಿಸುವ ಇಂತಹ ಪ್ರಯತ್ನಗಳನ್ನು ಪ್ರತಿರೋಧಿಸುವಲ್ಲಿ ಸಕ್ರಿಯ ಪಾತ್ರ ವಹಿಸುತ್ತದೆ. ಅದು ಪ್ರಜಾಪ್ರಭುತ್ವ ಹಕ್ಕುಗಳ ರಕ್ಷಣೆಗಾಗಿ ತನ್ನ ಹೋರಾಟವನ್ನು ಮುಂದುವರಿಸುತ್ತದೆ.
ಸಾರ್ವಜನಿಕ ಭದ್ರತೆ ಕುರಿತ ಮಹಾರಾಷ್ಟ್ರ ಮಸೂದೆ: ಬಿಜೆಪಿ ಸರ್ಕಾರ ಅಂಗೀಕರಿಸಿದ ಮಹಾರಾಷ್ಟ್ರ ಸಾರ್ವಜನಿಕ ಭದ್ರತಾ ಮಸೂದೆಯು ಜನರ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ಒಂದು ಗಂಭೀರ ದಾಳಿಯಾಗಿದೆ. ತಥಾಕಥಿತ “ತೀವ್ರ ಎಡಪಂಥೀಯ ಶಕ್ತಿಗಳ”ನ್ನು ಎದುರಿಸುವ ನೆಪದಲ್ಲಿ, ಮಸೂದೆಯು ಎಲ್ಲಾ ಭಿನ್ನಾಭಿಪ್ರಾಯದ ಧ್ವನಿಗಳನ್ನು ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆಗಳಾಗಿ ಬಿಂಬಿಸಲು ಪ್ರಯತ್ನಿಸುತ್ತದೆ. “ತೀವ್ರ ಎಡಪಂಥೀಯ ಶಕ್ತಿಗಳು” ಮತ್ತು ಅಂತಹ ಸಂಘಟನೆಗಳು ಎಂದರೇನು ಎಂಬುದರ ವ್ಯಾಖ್ಯೆಗಳನ್ನು ಉದ್ದೇಶಪೂರ್ವಕವಾಗಿಯೇ ಅಸ್ಪಷ್ಟವಾಗಿ ಬಿಟ್ಟು, ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ವ್ಯಾಪಕ ಅವಕಾಶವನ್ನು ಸೃಷ್ಟಿಸಲಾಗಿದೆ. ಭಿನ್ನಾಭಿಪ್ರಾಯವನ್ನು ನಿಗ್ರಹಿಸಲು ಮತ್ತು ವಿರೋಧದ ಬಾಯಿ ಮುಚ್ಚಿಸಲು ಮಸೂದೆಯ ಕಠಿಣ ನಿಬಂಧನೆಗಳನ್ನು ದುರುಪಯೋಗಪಡಿಸಿಕೊಳ್ಳುವ ಗಂಭೀರ ಅಪಾಯವಿದೆ.
ಪ್ರಜಾಪ್ರಭುತ್ವ ವಿರೋಧಿ ಮಸೂದೆಗಳು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 30 ದಿನಗಳ ಬಂಧನದ ನಂತರ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು ಮತ್ತು ಇತರ ಮಂತ್ರಿಗಳನ್ನು ತೆಗೆದುಹಾಕಲು ಅವಕಾಶ ನೀಡುವ ಮೂರು ಮಸೂದೆಗಳನ್ನು ಮಂಡಿಸಿದೆ. ಈ ಮಸೂದೆಗಳು ಸ್ಥಾಪಿತ ಕಾನೂನು ಕಾರ್ಯವಿಧಾನಗಳನ್ನು ಬದಿಗೊತ್ತುವ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತವೆ. ಪ್ರಸ್ತುತ ಸರ್ಕಾರದ ನವ-ಫ್ಯಾಸಿಸ್ಟ್ ಪ್ರವೃತ್ತಿಗಳನ್ನು ಗಮನಿಸಿದರೆ, ಅಂತಹ ನಿಬಂಧನೆಗಳನ್ನು ವಿಪಕ್ಷಗಳ ನೇತೃತ್ವದ ರಾಜ್ಯ ಸರ್ಕಾರಗಳ ವಿರುದ್ಧ ಅಸ್ತ್ರವಾಗಿ ಬಳಸುವುದು ಖಚಿತ. ಈ ನಡೆ ಯಾವುದೇ ಪ್ರಜಾಪ್ರಭುತ್ವಕ್ಕೆ ಅಗತ್ಯವಾದ ಅಡೆ-ತಡೆಗಳ ವ್ಯವಸ್ಥೆಯ ಮೇಲೆಯೇ ಪ್ರಹಾರ ಮಾಡುತ್ತದೆ.
ಜಮ್ಮು ಮತ್ತು ಕಾಶ್ಮೀರ: ಉಪರಾಜ್ಯಪಾಲರು ಚುನಾಯಿತ ರಾಜ್ಯ ಸರ್ಕಾರದ ಕಾರ್ಯನಿರ್ವಹಣೆಯನ್ನು ದುರ್ಬಲಗೊಳಿಸುತ್ತಿದ್ದಾರೆ. ಚುನಾಯಿತ ರಾಜ್ಯ ಸರ್ಕಾರವನ್ನು ಸಂಪೂರ್ಣವಾಗಿ ಬದಿಗೆ ಸರಿಸಲಾಗುತ್ತಿದೆ ಮತ್ತು ಅದರ ಕಾರ್ಯಗಳನ್ನು ನಿರ್ವಹಿಸಲು ಅವಕಾಶ ನೀಡುತ್ತಿಲ್ಲ. ಜಮ್ಮು ಮತ್ತು ಕಾಶ್ಮೀರದ ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ. ಜಮ್ಮು, ಕಾಶ್ಮೀರ ಮತ್ತು ಲಡಾಖ್ – ಎಲ್ಲಾ ಪ್ರದೇಶಗಳಲ್ಲಿ ವ್ಯಾಪಕ ಅಸಮಾಧಾನ ಮತ್ತು ಕೋಪವಿದೆ. ಜನರ ವಿಶ್ವಾಸ ಗಳಿಸುವ ಏಕೈಕ ಮಾರ್ಗವೆಂದರೆ ಜಮ್ಮು ಮತ್ತು ಕಾಶ್ಮೀರದ ರಾಜ್ಯ ದರ್ಜೆಯನ್ನು ತಕ್ಷಣವೇ ಪುನಃಸ್ಥಾಪಿಸುವುದು.
ಬಂಗಾಳಿಗಳನ್ನು ಗಡೀಪಾರು ಮಾಡುತ್ತಿರುವುದು: ‘ಆಪರೇಷನ್ ಸಿಂಧೂರ್’ ನಂತರ ಬಂಗಾಳಿ ಮಾತನಾಡುವ ಜನರ ಮೇಲೆ, ವಿಶೇಷವಾಗಿ ಬಂಗಾಳಿ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ದಾಳಿಗಳನ್ನು ಅನೇಕ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ನಡೆಸಲಾಗುತ್ತಿದೆ. ಬಂಗಾಳಿಗಳನ್ನು ಗುರುತಿಸಿ ಅವರು ಬಾಂಗ್ಲಾದೇಶಿಗಳು ಎಂದು ದಾಖಲೆಗಳ ಸರಿಯಾದ ಪರಿಶೀಲನೆ ಅಥವಾ ಸೂಕ್ತ ಪ್ರಕ್ರಿಯೆಯನ್ನು ಪಾಲಿಸದೆ ಹಣೆಪಟ್ಟಿ ಹಚ್ಚಲಾಗುತ್ತಿದೆ. ಹಲವರನ್ನು ಪೊಲೀಸರು ಬಂಧಿಸುತ್ತಿದ್ದಾರೆ ಮತ್ತು ಅಮಾನವೀಯ ನಿಂದನೆ ಮತ್ತು ಚಿತ್ರಹಿಂಸೆಗೆ ಒಳಪಡಿಸುತ್ತಿದ್ದಾರೆ. ಭಾರತೀಯ ನಾಗರಿಕರು ಸೇರಿದಂತೆ ಜನರನ್ನು ಬಲವಂತವಾಗಿ ಬಾಂಗ್ಲಾದೇಶಕ್ಕೆ ನೆಲ ಮತ್ತು ಸಮುದ್ರ ಎರಡರ ಮೂಲಕವೂ ಹಿಂದಕ್ಕೆ ತಳ್ಳಿದ ನಿದರ್ಶನಗಳೂ ಇವೆ. ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಬಂಗಾಳಿ ನಾಗರಿಕರ ಮೇಲೆ ನಡೆಸಲಾಗುವ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು. ಅನೇಕ ಸ್ಥಳಗಳಲ್ಲಿ, ಬಂಗಾಳಿಗಳ ಮೇಲೆ ಈ ಗುರಿಯಿಟ್ಟು ಮಾಡಿದ ದಾಳಿಗಳನ್ನು ವಿರೋಧಿಸಲು ಸಿಪಿಐ(ಎಂ) ಮಧ್ಯಪ್ರವೇಶಿಸಿದೆ ಮತ್ತು ಅದನ್ನು ಮುಂದುವರಿಸುತ್ತದೆ.
ಅಸ್ಸಾಂನಲ್ಲಿ ಒಕ್ಕಲೆಬ್ಬಿಸುವಿಕೆ: ಅಸ್ಸಾಂ ರಾಜ್ಯ ಸರ್ಕಾರವು ಹೆಚ್ಚಿನ ಸಂಖ್ಯೆಯ ಜನರನ್ನು ಅವರ ಹಕ್ಕಿನ ಭೂಮಿಯಿಂದ ಒಕ್ಕಲೆಬ್ಬಿಸುತ್ತಿದೆ. ಮುಖ್ಯಮಂತ್ರಿಗಳು ಇದನ್ನು ಕೋಮು ಧ್ರುವೀಕರಣಕ್ಕಾಗಿ ಬಳಸುತ್ತಿದ್ದಾರೆ. ಈ ರೀತಿ ಒಕ್ಕಲೆಬ್ಬಿಸುವುದರ ಹಿಂದಿನ ಮತ್ತೊಂದು ಪ್ರಮುಖ ಉದ್ದೇಶವೆಂದರೆ ಆ ಭೂಮಿಗಳ ಕೆಳಗೆ ಶ್ರೀಮಂತ ಖನಿಜ ಸಂಪನ್ಮೂಲಗಳಿರುವುದು ಮತ್ತು ಅವುಗಳನ್ನು ಖಾಸಗಿ ಕಂಪನಿಗಳು ಬಳಸಿಕೊಳ್ಳಲು ಅವಕಾಶ ಒದಗಿಸುವ ಸರ್ಕಾರದ ಆತುರತೆ. ಸರ್ಕಾರವು ಈ ಅಕ್ರಮ ಒಕ್ಕಲೆಬ್ಬಿಸುವಿಕೆಗಳನ್ನು ತಕ್ಷಣವೇ ನಿಲ್ಲಿಸಬೇಕು.
ಆರ್‌ಎಸ್‌ಎಸ್ ಮುಖ್ಯಸ್ಥರ ಉರಿಹಚ್ಚುವ ಟಿಪ್ಪಣಿಗಳು: ದೆಹಲಿಯಲ್ಲಿ ಆಯ್ದ ಪ್ರೇಕ್ಷಕರ ಮುಂದೆ ಮೂರು ದಿನಗಳ ಭಾಷಣದಲ್ಲಿ, ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಮಥುರಾ ಮತ್ತು ಕಾಶಿ ವಿವಾದಗಳನ್ನು ಮತ್ತೆ ಪ್ರಚೋದಿಸಲು ಪ್ರಯತ್ನಿಸಿದರು. ‘ಸಹೋದರತ್ವ’ಕ್ಕೆ ಪೂರ್ವಷರತ್ತಾಗಿ ಮುಸ್ಲಿಮರು ಈ ಎರಡು ಸ್ಥಳಗಳಲ್ಲಿನ ಮಸೀದಿಗಳನ್ನು ‘ಬಿಟ್ಟುಕೊಡಬೇಕು’ ಎಂದು ಅವರು ಆಗ್ರಹಿಸಿದರು. ಇಂತಹ ಆಗ್ರಹಗಳು ಕೋಮು ಭಾವನೆಗಳನ್ನು ಕೆರಳಿಸಲು ಮತ್ತು ಸಮಾಜವನ್ನು ಮತೀಯ ಆಧಾರದ ಮೇಲೆ ಧ್ರುವೀಕರಿಸುವ ಹುನ್ನಾರ ಹೊಂದಿವೆ. ಭಾಗವತ್ ಅವರ ಹೇಳಿಕೆಗಳು ಭಾರತೀಯ ಸಂವಿಧಾನದ ಬಗ್ಗೆ ಆರ್‌ಎಸ್‌ಎಸ್‌ನ ತಿರಸ್ಕಾರ ಮತ್ತು ನಾಡಿನ ಕಾನೂನಿನ ಉಲ್ಲಂಘನೆಯನ್ನು ಬಿಂಬಿಸುತ್ತವೆ. ಈ ಟಿಪ್ಪಣಿಗಳು ಹಿಂದೂರಾಷ್ಟ್ರ ಸ್ಥಾಪನೆಯತ್ತ ಸಾಗುವ ಆರ್‌ಎಸ್‌ಎಸ್‌ನ ಸಂಕಲ್ಪ ಮತ್ತು ಉದ್ದೇಶವನ್ನು ಮತ್ತು ಜಾತ್ಯತೀತ ಪ್ರಭುತ್ವವನ್ನು ಕೆಡಹುವ ಗುರಿಯನ್ನು ಪ್ರದರ್ಶಿಸುತ್ತವೆ.
ಮಹಿಳೆಯರು, ದಲಿತರು ಮತ್ತು ಆದಿವಾಸಿಗಳ ಮೇಲಿನ ದಾಳಿಗಳು: ದೇಶದ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಬಿಜೆಪಿ ಆಳ್ವಿಕೆಯಿರುವ ರಾಜ್ಯಗಳಲ್ಲಿ ಮಹಿಳೆಯರು, ದಲಿತರು ಮತ್ತು ಆದಿವಾಸಿಗಳ ಮೇಲೆ ಹೆಚ್ಚುತ್ತಿರುವ ದಾಳಿಗಳ ಕುರಿತು ಕೇಂದ್ರ ಸಮಿತಿಯು ಚರ್ಚಿಸಿತು. ಮುಂಬರುವ ದಿನಗಳಲ್ಲಿ ಮಹಿಳೆಯರು, ದಲಿತರು ಮತ್ತು ಆದಿವಾಸಿಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಿಂಸಾಚಾರದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲಾಗುವುದು. ಪಶ್ಚಿಮ ಬಂಗಾಳದ ಆರ್‌ಜಿ ಕಾರ್ ಮತ್ತು ಕೋಲ್ಕತ್ತಾ ಕಾನೂನು ಕಾಲೇಜು ಘಟನೆಗಳ ಸಂತ್ರಸ್ಥರಿಗೆ ಹಾಗೂ ಕರ್ನಾಟಕದ ಧರ್ಮಸ್ಥಳದ ಸಂತ್ರಸ್ಥರಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ನಡೆಯುತ್ತಿರುವ ಹೋರಾಟಗಳಿಗೆ ಕೇಂದ್ರ ಸಮಿತಿಯು ತನ್ನ ಬೆಂಬಲವನ್ನು ವ್ಯಕ್ತಪಡಿಸಿತು.
ಸಂಸತ್ ಅಧಿವೇಶನ: ಸಂಸತ್ತಿನ ಮಳೆಗಾಲದ ಅಧಿವೇಶನವು ಎಲ್ಲಾ ವಿರೋಧ ಪಕ್ಷಗಳಿಂದ ತೀವ್ರ ಪ್ರತಿಭಟನೆಗಳನ್ನು ಕಂಡಿತು. ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್) ಕುರಿತು ಯಾವುದೇ ಚರ್ಚೆಗೆ ಅವಕಾಶ ನೀಡಲು ಸರ್ಕಾರ ನಿರಾಕರಿಸಿತು. ಈ ಪ್ರತಿಭಟನೆಗಳ ನಡುವೆ, ಕೇಂದ್ರ ಸರ್ಕಾರವು ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ ಮತ್ತು ರಾಜ್ಯ ಸರ್ಕಾರಗಳ ಹಕ್ಕುಗಳನ್ನು ಉಲ್ಲಂಘಿಸುವ ಕ್ರೀಡಾ ಮಸೂದೆ ಸೇರಿದಂತೆ ಹಲವಾರು ಮಸೂದೆಗಳನ್ನು ಮಂಡಿಸಿತು.
ಗಣಿ ಮತ್ತು ಖನಿಜ ಕಾಯ್ದೆಗೆ ತಿದ್ದುಪಡಿ ಖಾಸಗಿ ಮತ್ತು ವಿದೇಶಿ ಪಾಲುದಾರರು ದೇಶದ ಬಹು ಮಹತ್ವದ ಖನಿಜ ಸಂಪನ್ಮೂಲಗಳನ್ನು ಸೂರೆಗೊಳ್ಳಲು ಅವಕಾಶ ನೀಡುತ್ತದೆ, ಇದು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅತ್ಯಂತ ಹಾನಿಕಾರಕವಾಗಿದೆ. ಸಂವಿಧಾನದ ಆರನೇ ಶೆಡ್ಯೂಲಿನಲ್ಲಿ ರಕ್ಷಿಸಲ್ಪಟ್ಟ ನೂರಾರು ಎಕರೆ ಬುಡಕಟ್ಟು ಭೂಮಿಯನ್ನು ಖಾಸಗಿ ಕಾರ್ಪೊರೇಟ್ ಶೋಷಣೆಗೆ ಬಿಟ್ಟುಕೊಡಲಾಗುತ್ತಿದೆ, ಇದನ್ನು ಪ್ರತಿರೋಧಿಸಬೇಕಾಗಿದೆ.
ಗಂಭೀರ ವಿಷಯಗಳ ಕುರಿತು ಚರ್ಚೆಗೆ ಅವಕಾಶ ನೀಡಲು ಸರ್ಕಾರ ಹಠತೊಟ್ಟು ನಿರಾಕರಿಸುವುದು ಅದರ ಸರ್ವಾಧಿಕಾರಶಾಹಿ ಸ್ವಭಾವವನ್ನು ಪ್ರತಿಬಿಂಬಿಸುತ್ತದೆ. ಪರಿಣಾಮವಾಗಿ, ಸಂಸತ್ತಿನಲ್ಲಿ ಜನರನ್ನು ನೇರವಾಗಿ ತಟ್ಟುವ ಅನೇಕ ವಿಷಯಗಳ ಮೇಲೆ ಸರಿಯಾದ ಚರ್ಚೆಗಳಾಗುವುದಿಲ್ಲ. ಪ್ರಧಾನ ವಿರೋಧ ಪಕ್ಷವಾಗಿ ಕಾಂಗ್ರೆಸ್ ಪಕ್ಷ ಕೂಡ ಜನರ ಜೀವನೋಪಾಯದ ಕಾಳಜಿಗಳನ್ನು ಸಂಸತ್ತಿನಲ್ಲಿ ಚರ್ಚಿಸುವುದನ್ನು ಖಚಿತಪಡಿಸುವಲ್ಲಿ ಪಾತ್ರವಹಿಸಬೇಕಾಗಿದೆ.
ಉಪರಾಷ್ಟ್ರಪತಿ ಚುನಾವಣೆ: ಉಪರಾಷ್ಟ್ರಪತಿ ಜಗದೀಪ್ ಧಂಕರ್ ಅವರ ಹಠಾತ್ ರಾಜೀನಾಮೆಯ ನಂತರ, ಉಪರಾಷ್ಟ್ರಪತಿ ಚುನಾವಣೆಯಲ್ಲಿ, ಇಂಡಿಯಾ ಬಣ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಅವರನ್ನು ಕಣಕ್ಕಿಳಿಸಿತು. ಈ ಸ್ಪರ್ಧೆಯು ಬಿಜೆಪಿ/ಆರ್‌ಎಸ್‌ಎಸ್‌ನ ಹಿಂದುತ್ವ ಕೋಮುವಾದಿ ಸಿದ್ಧಾಂತ ಮತ್ತು ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಮಾನತೆಯಂತಹ ಸಾಂವಿಧಾನಿಕ ತತ್ವಗಳ ಮೇಲಿನ ಅವರ ದಾಳಿಯ ವಿರುದ್ಧ ಬಲವಾದ ಸಂದೇಶವನ್ನು ಕಳುಹಿಸಿತು. ಇಂಡಿಯಾ ಬಣದ ಪಕ್ಷಗಳು ತಮ್ಮ ಎಲ್ಲಾ ಮತಗಳನ್ನು ತಮ್ಮ ಉಪರಾಷ್ಟ್ರಪತಿ ಅಭ್ಯರ್ಥಿಗೆ ಚಲಾಯಿಸಲಾಗಿದೆಯೇ ಎಂದು ನೋಡಬೇಕು.
ನೇಪಾಳದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ: ನೇಪಾಳವನ್ನು ನಡುಗಿಸಿದ ಬಹುಪಾಲು ಯುವಕರ (ಜೆನ್ ಝೀ) ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಗಳ ಮೇಲೆ ನಡೆಸಿದ ಪೊಲಿಸ್ ಗೋಲೀಬಾರಿನಲ್ಲಿ ಸಾವನ್ನಪ್ಪಿದ ಸುಮಾರು 70 ಯುವಜನರ ಸಾವಿಗೆ ಸಿಪಿಐ(ಎಂ) ಸಂತಾಪ ಸೂಚಿಸಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಷೇಧಿಸುವ ಸರ್ಕಾರದ ನಿರ್ಧಾರವು ತಕ್ಷಣದ ಪ್ರಚೋದನೆಯಾಗಿದ್ದರೂ, ವರ್ಷಗಳಿಂದ ಜನರಲ್ಲಿ ಆಳವಾಗಿ ಬೇರೂರಿರುವ ಅಸಮಾಧಾನವು ಕುದಿಯುತ್ತಿತ್ತು. ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸತತ ಸರ್ಕಾರಗಳ ವೈಫಲ್ಯ, ವ್ಯಾಪಕ ಭ್ರಷ್ಟಾಚಾರ ಮತ್ತು ಉದ್ಯೋಗಾವಕಾಶಗಳ ಕೊರತೆ ಸಾರ್ವಜನಿಕ ಹತಾಶೆಗೆ ತುಪ್ಪ ಸುರಿದವು.
ಬಲಪಂಥೀಯ ಶಕ್ತಿಗಳು, ವಿಶೇಷವಾಗಿ ರಾಜಪ್ರಭುತ್ವ ಪರ, ರಾಜಪ್ರಭುತ್ವವಾದಿಗಳು ಮತ್ತು ಹಿಂದುತ್ವ ಶಕ್ತಿಗಳಿಗೆ ಸಂಬಂಧಿಸಿದ ಗುಂಪುಗಳು ಈ ಅಸಮಾಧಾನದ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿವೆ. ರಾಜಪ್ರಭುತ್ವದ ವಿರುದ್ಧ ದೀರ್ಘ ಮತ್ತು ಕಠಿಣ ಹೋರಾಟದ ಮೂಲಕ ಸಾಧಿಸಲಾದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಳಜಿ ವಹಿಸಬೇಕು. ಸುಂಕ
ಇಸ್ರೇಲ್‌ನ ಆಕ್ರಮಣವನ್ನು ಖಂಡಿಸಿ: ಇಸ್ರೇಲ್ ನಿರಂತರವಾಗಿ ಗಾಜಾದ ಮೇಲೆ ಬಾಂಬ್ ದಾಳಿ ಮಾಡುತ್ತಿದೆ ಮತ್ತು ಇಸ್ರೇಲಿ ವಸಾಹತುಗಾರರಿಗೆ ಪಶ್ಚಿಮ ದಂಡೆಯಲ್ಲಿರುವ ಪ್ಯಾಲೆಸ್ಟೀನಿಯನ್ನರ ಮೇಲೆ ದಾಳಿ ಮಾಡಲು ಮತ್ತು ಅವರ ಭೂಮಿಯನ್ನು ವಶಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡುತ್ತಿದೆ. ಎಲ್ಲಾ ರೀತಿಯ ಮಾನವೀಯ ನೆರವು ಹಸಿವು ವ್ಯಾಪಕವಾಗಿ ಹರಡಿರುವ ಗಾಜಾಗೆ ಪ್ರವೇಶಿಸದಂತೆ ಅದು ತಡೆಯುತ್ತಿದೆ, ಮಕ್ಕಳು ಮತ್ತು ವೃದ್ಧರು ಹಸಿವಿನಿಂದ ಸಾಯುತ್ತಿದ್ದಾರೆ ಎಂಬ ದೈನಂದಿನ ವರದಿಗಳು ಬರುತ್ತಿವೆ. ಬುಡಮಟ್ಟದಿಂದ ವರದಿ ಮಾಡುವ ಪತ್ರಕರ್ತರ ಮೇಲಿನ ದಾಳಿಗಳು ತೀವ್ರಗೊಂಡಿವೆ ಮತ್ತು ಆಸ್ಪತ್ರೆಗಳ ಮೇಲೆ ಸಹ ಬಾಂಬ್ ದಾಳಿ ಮಾಡಲಾಗುತ್ತಿದೆ. ಇಡೀ ಗಾಜಾ ನಗರವನ್ನು ಒಂದು ಅವಶೇಷದ ಮಟ್ಟಕ್ಕೆ ಇಳಿಸಲಾಗಿದೆ. ಸುಂಕ
ಅಂತರರಾಷ್ಟ್ರೀಯ ಕಾನೂನುಗಳು ಮತ್ತು ರಾಜತಾಂತ್ರಿಕ ನಿಯಮಗಳನ್ನು ಉಲ್ಲಂಘಿಸಿ, ಇಸ್ರೇಲ್ ಕದನ ವಿರಾಮ ಮಾತುಕತೆಗಳನ್ನು ಆಯೋಜಿಸುತ್ತಿರುವ ಕತಾರ್ ಮೇಲೆ ದಾಳಿ ಮಾಡಿತು. ಇದು ಮತ್ತೊಮ್ಮೆ ಇಸ್ರೇಲ್ ಈ ಪ್ರದೇಶದಲ್ಲಿ ಶಾಂತಿಯನ್ನು ವಿರೋಧಿಸುವ ಮತ್ತು ಯಾವುದೇ ಕದನ ವಿರಾಮ ಪ್ರಸ್ತಾಪಗಳನ್ನು ಸ್ವೀಕರಿಸಲು ಸಿದ್ಧವಿಲ್ಲದ ಪುಂಡ ರಾಷ್ಟ್ರವಾಗಿ ವರ್ತಿಸುತ್ತಿದೆ ಎಂಬುದನ್ನು ತೋರಿಸುತ್ತದೆ. ಅಂತರರಾಷ್ಟ್ರೀಯ ಸಮುದಾಯವು ಒಗ್ಗೂಡಿ ಇಸ್ರೇಲ್ ವಿರುದ್ಧ ಕ್ರಮ ಕೈಗೊಳ್ಳುವ ಸಮಯವಿದು. ಸುಂಕ
ಕೇಂದ್ರ ಸಮಿತಿ ಕರೆಗಳು
ಸಿಪಿಐ(ಎಂ) ಕೇಂದ್ರ ಸಮಿತಿಯು ಮುಂಬರುವ ದಿನಗಳಲ್ಲಿ ಈ ಕೆಳಗಿನವುಗಳನ್ನು ಕೈಗೊಳ್ಳಲು ನಿರ್ಧರಿಸಿತು:
1. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಟ್ರಂಪ್ ಅವರ ಸುಂಕ ಭಯೋತ್ಪಾದನೆಯ ವಿರುದ್ಧ ವ್ಯಾಪಕ ಅಭಿಯಾನ, ಅಮೆರಿಕನ್ ಸರಕಾರದ ಎದುರುಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಶರಣಾಗತಿಯನ್ನು ಬಯಲಿಗೆಳೆಯುವುದು.
2. ದೇಶಾದ್ಯಂತ ವ್ಯಾಪಕ ಚಟುವಟಿಕೆಗಳ ಮೂಲಕ ಪ್ಯಾಲೆಸ್ಟೈನ್ನೊಂದಿಗೆ ಸೌಹಾರ್ದದಅಭಿಯಾನವನ್ನು ನಡೆಸಲಾಗುವುದು. ಬಿಜೆಪಿ ಸರ್ಕಾರದ ಇಸ್ರೇಲ್ ಪರ ನೀತಿಯನ್ನು ಬಯಲು ಮಾಡಲುಎಲ್ಲಾ ರಾಜ್ಯ ರಾಜಧಾನಿಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು, ಕಲಾವಿದರು ಮತ್ತು ವ್ಯಕ್ತಿಗಳನ್ನು ಒಳಗೊಂಡ ದೊಡ್ಡ ಸಾರ್ವಜನಿಕ ಸಭೆಗಳನ್ನು ಆಯೋಜಿಸಲಾಗುವುದು.
3. ಎಲ್ಲಾ ರಾಜ್ಯ ಸಮಿತಿಗಳು ಜನರ ಜೀವನೋಪಾಯದಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುತ್ತವೆ ಮತ್ತು ಆಂದೋಲನಗಳು ಮತ್ತು ಹೋರಾಟಗಳನ್ನು ನಡೆಸುತ್ತವೆ.
ಇದನ್ನೂ ನೋಡಿ: ಪ್ಯಾರಡೈಸ್ | ಸಾಮಾಜಿಕ ಹಾಗೂ ಆರ್ಥಿಕ ಆಯಾಮಗಳ ಸಿನಿಮಾ – ಪಿಚ್ಚರ್ ಪಯಣ |ಮ. ಶ್ರೀ. ಮುರಳಿಕೃಷ್ಣ
