ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡಾಗಿನಿಂದ ಯುಎಸ್ ಏಡ್ (USAID) ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ.
ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (USAID) ಯುನೈಟೆಡ್ ಸ್ಟೇಟ್ಸ್ ಸರ್ಕಾರದ ಸ್ವತಂತ್ರ ಸಂಸ್ಥೆಯಾಗಿದ್ದು, ನಾಗರಿಕ ವಿದೇಶಿ ನೆರವು ಮತ್ತು ಅಭಿವೃದ್ಧಿ ಸಹಾಯವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ. ಹಲವಾರು ವಿದೇಶಿ ನೆರವು ಸಂಸ್ಥೆಗಳು ಮತ್ತು ಕಾರ್ಯಕ್ರಮಗಳನ್ನು ಒಂದೇ ಸಂಸ್ಥೆಯ ಅಡಿಯಲ್ಲಿ ಒಗ್ಗೂಡಿಸಲು ಅಧ್ಯಕ್ಷ ಜಾನ್ ಎಫ್. ಕೆನಡಿ 1961 ರಲ್ಲಿ USAID ನ್ನು ಸ್ಥಾಪಿಸಿದ್ದರು.
ಇದನ್ನು ಓದಿ:ನವದೆಹಲಿ| ಇಂಟರ್ನೆಟ್ ಬೆಲೆ ನಿಯಂತ್ರಿಸುವ ಮನವಿ ನಿರಾಕರಿಸಿದ ಸುಪ್ರೀಂ ಕೋರ್ಟ್
ಈಗ ಈ ಸಂಸ್ಥೆಯ ನಾಮಾವಶೇಷಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ DOGE ನೇತೃತ್ವ ವಹಿಸಿರುವ ಎಲಾನ್ ಮಸ್ಕ್ ಮುಂದಾಗಿದ್ದಾರೆ. ಇದರ ಭಾಗವಾಗಿ ಇಂದಿನಿಂದ ಜಾರಿಗೆ ಬರುವಂತೆ ಜಾಗತಿಕವಾಗಿ ಇರುವ ಸಿಬ್ಬಂದಿಗಳ ಒಂದು ಭಾಗಕ್ಕೆ ರಜೆ ಪಡೆಯುವಂತೆ ಸರ್ಕಾರ ಸೂಚನೆ ನೀಡಿದೆ. ಇದಷ್ಟೇ ಅಲ್ಲದೇ, ಅಮೆರಿಕದಲ್ಲಿ ನೆಲೆಸಿರುವ ಕನಿಷ್ಠ 1,600 ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಲಾಗುತ್ತಿದೆ ಎಂದು ತಿಳಿಸಿದೆ.
ಫೆಡರಲ್ ಸರ್ಕಾರದ ಗಾತ್ರವನ್ನು ತಗ್ಗಿಸುವುದಕ್ಕಾಗಿ 6 ದಶಕಗಳ ಈ ಸಂಸ್ಥೆಯನ್ನು ಮುಚ್ಚಿಸುವುದು ತಮ್ಮ ಗುರಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಸರ್ಕಾರಿ ವೆಚ್ಚ ಕಡಿತದ ಜವಾಬ್ದಾರಿ ಹೊತ್ತಿರುವ ಎಲಾನ್ ಮಸ್ಕ್ ಹೇಳುವುದಕ್ಕೆ ಪೂರಕವಾಗಿ ಅಲ್ಲಿನ ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಮೆರಿಕ ಮತ್ತು ಪ್ರಪಂಚದಾದ್ಯಂತ ಸಾವಿರಾರು USAID ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕುವ ಯೋಜನೆಯನ್ನು ಮುಂದುವರಿಸಲು ಆಡಳಿತಕ್ಕೆ ಫೆಡರಲ್ ನ್ಯಾಯಾಧೀಶರು ಅನುಮತಿ ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಯೋಜನೆಯನ್ನು ತಾತ್ಕಾಲಿಕವಾಗಿ ತಡೆಯುವಂತೆ ನೌಕರರು ಸಲ್ಲಿಸಿದ ಮೊಕದ್ದಮೆಯಲ್ಲಿ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಕಾರ್ಲ್ ನಿಕೋಲ್ಸ್ ಮನವಿಯನ್ನು ತಿರಸ್ಕರಿಸಿದ್ದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆರವು ನೀಡುವ ಸೋಗಿನಲ್ಲಿ ವಿವಿಧ ದೇಶಗಳ ಸರ್ಕಾರಗಳನ್ನು ಉರುಳಿಸುವುದಕ್ಕೆ ಹಾಗೂ ತನಗೆ ಬೇಕಾದ ನಾಯಕತ್ವವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅಮೆರಿಕಾ USAIDನ್ನು ಬಳಕೆ ಮಾಡಿಕೊಳ್ಳುತ್ತಿತ್ತು ಎಂಬ ಆರೋಪವಿದೆ.
ಇತ್ತೀಚೆಗೆ ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, USAID ನಿಂದ ಭಾರತ, ಬಾಂಗ್ಲಾಗಳಿಗೆ 20 ಮಿಲಿಯನ್ ಡಾಲರ್ ಗೂ ಹೆಚ್ಚಿನ ಹಣವನ್ನು ಕಳುಹಿಸಲಾಗಿತ್ತು. ಅವರ ಬಳಿಯೇ ಸಾಕಷ್ಟು ಹಣ ಇರುವಾಗ ಅಲ್ಲಿ ಮತದಾನದ ಪ್ರಮಾಣ ಹೆಚ್ಚಳಕ್ಕೆ ನಮ್ಮ ತೆರಿಗೆ ಹಣವನ್ನು ಏಕೆ ನಾವು ನೀಡಬೇಕು ಎಂದು ಪ್ರಶ್ನಿಸಿದ್ದರು.
ಈಗ ಯುಎಸ್ ಏಡ್ ಸಂಸ್ಥೆ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿರುವುದರಿಂದ ಭಾರತದಲ್ಲಿ ಸರ್ಕಾರ ಪಲ್ಲಟ ಮಾಡಲು ಚುನಾವಣೆಗಳಲ್ಲಿ ವಿದೇಶಿ ಲಾಬಿಗಳ ಹಸ್ತಕ್ಷೇಪಕ್ಕೆ ಕಡಿವಾಣ ಬೀಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನು ಓದಿ:ಮುಂದಿನ ಬಜೆಟ್ ಅಧಿವೇಶನದಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಮಂಡನೆ