ವಾಷಿಂಗ್ಟನ್, ಜ 8: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ತೀವ್ರ ಘರ್ಷಣೆಗೆ ಎಡೆಮಾಡಿಕೊಡುವ ಸಾಧ್ಯತೆ ಇದೆ. ಅಧಿಕಾರ ತ್ಯಜಿಸಲು ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೂ ಡೊನಾಲ್ಡ್ ಟ್ರಂಪ್ ಸೋಲೊಪ್ಪಿಕೊಳ್ಳಲು ಸಿದ್ಧರಾಗಿಲ್ಲ. ಈ ನಡುವೆ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಬುಧವಾರ ಪ್ರತಿಭಟನೆ ಆರಂಭಿಸಿದ್ದು, ಕೋಲಾಹಲ ಸೃಷ್ಟಿಯಾಗಿದೆ. ಟ್ರಂಪ್ ಸೋಲಿಗೆ ಆಕ್ರೋಶ ವ್ಯಕ್ತಪಡಿಸಿ ಯುಎಸ್ ಕ್ಯಾಪಿಟಲ್ ಕಟ್ಟಡಕ್ಕೆ ನುಗ್ಗಿ ಗದ್ದಲ ಸೃಷ್ಟಿಸುವ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಹಿಳೆಯೊಬ್ಬರ ಮೇಲೆ ಗುಂಡು ಹಾರಿಸಿದ ಬಳಿಕ ಆಕೆ ನೆಲದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವ ವಿಡಿಯೋ ಹರಿದಾಡುತ್ತಿದೆ. ಗುಂಡೇಟಿನಿಂದ ಮೃತಪಟ್ಟ ಒಬ್ಬ ಸಂತ್ರಸ್ತೆಯನ್ನು ಕ್ಯಾಪಿಟಲ್‌ನಿಂದ ಸ್ಥಳಾಂತರಿಸಲಾಗಿದೆ. ಕೆಲವರು ಗಾಯಗೊಂಡಿದ್ದಾರೆ ಎಂದು ತುರ್ತು ಪರಿಸ್ಥಿತಿ ನಿರ್ವಹಣಾ ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.
ಭದ್ರತಾ ತಡೆಗಳನ್ನು ಭೇದಿಸಿ ಒಳನುಗ್ಗಿದ ಪ್ರತಿಭಟನಾಕಾರರು ಗದ್ದಲ ಸೃಷ್ಟಿಸಿದರು. ಚುನಾವಣೆಯಲ್ಲಿ ಟ್ರಂಪ್ ಅವರೇ ಗೆದ್ದಿದ್ದಾರೆ ಎಂದು ಕೂಗಿದರು. ಈ ಘಟನೆ ನೋಡಿದರೆ ಟ್ರಂಪ್ ಹೆದರಿಸಿ, ಬೆದರಿಸಿ, ಹಿಂಸಾಚಾರದ ಮೂಲಕ ಆಡಳಿತ ಹಿಡಿಯಲು ಪ್ರಯತ್ನ ನಡೆಸಿದ್ದಾರೆ ಎನ್ನಬಹುದು.
ಡೊನಾಲ್ಡ್ ಟ್ರಂಪ್ ಬೆಂಬಲಿಗರಿಂದ ಕ್ಯಾಪಿಟಲ್ ನಲ್ಲಿ ಹಿಂಸಾಚಾರ ಸಂಭವಿಸಿದ ಬಳಿಕ ಅಮೆರಿಕಾದ ಮೊದಲ ಮಹಿಳೆ ಮೆಲಾನಿಯಾ ಟ್ರಂಪ್ ಅವರ ಚೀಪ್ ಆಫ್ ಸ್ಟಾಪ್ ಸ್ಟೆಫನಿ ಗ್ರಿಶಮ್ ಮತ್ತು ಶ್ವೇತ ಭವನದ ಡೆಪ್ಯೂಟಿ ಪ್ರೆಸ್ ಸೆಕ್ರಟರಿ ಸಾರಾ ಮ್ಯಾಥ್ಯೂಸ್ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಗ್ರಿಶಮ್ ಈ ಹಿಂದೆ ಶ್ವೇತ ಭವನದ ಪ್ರೆಸ್ ಸೆಕ್ರಟರಿ ಆಗಿ ಕಾರ್ಯನಿರ್ವಹಿಸಿದ್ದರು.
ಅಮೆರಿಕದ ಘಟನೆಗೆ ಜಗತ್ತಿನ ಅನೇಕ ಮುಖಂಡರು ಖಂಡನೆ ವ್ಯಕ್ತಪಡಿಸಿದ್ದಾರೆ. ‘ಅಮೆರಿಕ ಕಾಂಗ್ರೆಸ್‌ನಲ್ಲಿ ಅವಮಾನಕಾರಿ ಘಟನೆ ನಡೆದಿದೆ. ಅಮೆರಿಕವು ಜಗತ್ತಿನಾದ್ಯಂತ ಪ್ರಜಾಪ್ರಭುತ್ವದ ನೆಲೆಯಾಗಿದೆ. ಅಲ್ಲಿ ಶಾಂತಿಯುತ ಮತ್ತು ಸುವ್ಯವಸ್ಥಿತ ಅಧಿಕಾರ ಹಸ್ತಾಂತರ ನಡೆಯುವುದು ಮುಖ್ಯ’ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ನಮ್ಮ ನಿಕಟವರ್ತಿ ಮತ್ತು ನೆರೆಯ ದೇಶ ಅಮೆರಿಕದ ಪ್ರಜಾಪ್ರಭುತ್ವದ ಮೇಲೆ ನಡೆದ ದಾಳಿಯಿಂದ ಕೆನಡಿಯನ್ನರು ತೀವ್ರ ಬೇಸರಪಟ್ಟುಕೊಂಡಿದ್ದಾರೆ. ಹಿಂಸೆಯು ಜನರ ಇಚ್ಛಾಶಕ್ತಿಯನ್ನು ಬದಲಿಸುವಲ್ಲಿ ಸಫಲವಾಗುವುದಿಲ್ಲ. ಅಮೆರಿಕದಲ್ಲಿನ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಬೇಕು. ಅದು ನಡೆಯಲಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಟ್ವೀಟ್ ಮಾಡಿದ್ದಾರೆ.
ಅಮೆರಿಕ ಕಾಂಗ್ರೆಸ್ ಮೇಲೆ ಬುಧವಾರ ನಡೆದ ದಾಳಿಗೆ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಿಪಬ್ಲಿಕನ್ನರು ಕಾರಣ ಎಂದು ಮಾಜಿ ಅಧ್ಯಕ್ಷ ಬರಾಕ್ ಒಬಾಮ ಆರೋಪಿಸಿದ್ದಾರೆ. ‘ಈ ಘಟನೆಯು ನಮ್ಮ ದೇಶಕ್ಕೆ ಅತಿ ದೊಡ್ಡ ಅಗೌರವ ಹಾಗೂ ನಾಚಿಕೆಗೇಡಿನ ಸಂಗತಿ’ ಎಂದು ಅವರು ಕಿಡಿಕಾರಿದ್ದಾರೆ.
‘ನಾವು ಇದನ್ನು ಸಂಪೂರ್ಣ ಅಚ್ಚರಿ ಎಂದು ಪರಿಗಣಿಸಿದರೆ ನಮ್ಮನ್ನು ನಾವೇ ತಮಾಷೆ ಮಾಡಿಕೊಂಡಂತೆ’ ಎಂದಿರುವ ಒಬಾಮ, ‘ಕಾನೂನು ಬದ್ಧ ಚುನಾವಣೆಯಿಂದ ಹೊರಬಂದ ಫಲಿತಾಂಶದ ವಿರುದ್ಧ ಆಧಾರರಹಿತ ಸುಳ್ಳುಗಳನ್ನು ಆರೋಪಿಸುವುದನ್ನು ಮುಂದುವರಿಸಿರುವ ಡೊನಾಲ್ಡ್ ಟ್ರಂಪ್ ಅವರೇ ಈ ಪ್ರತಿಭಟನೆಗೆ ಕುಮ್ಮಕ್ಕು ನೀಡಿದ್ದಾರೆ’ ಎಂದು ಆರೋಪಿಸಿದ್ದಾರೆ.
ಭಾರತದಲ್ಲೂ ಟ್ರಂಪ್ ನಡೆಗೆ ಖಂಡನೆ ವ್ಯಕ್ತವಾಗಿದ್ದು, ಟ್ರಂಪ್ ನ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವು ಕೆಲಸ ಇದಾಗಿದೆ 220 ವರ್ಷಗಳಲ್ಲಿ ಇಂತಹ ದುರ್ಘಟನೆಯನ್ನು ಅಮೇರಿಕಾ ನೋಡಿರಲಿಲ್ಲ, ಟ್ರಂಪ್ ಇಂತಾಹ ಹಿಂದಾಚಾರವನ್ನು ನಡೆಸಿ ಬಿಟ್ಟ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.