ಟ್ರಂಪ್ 2.0: ಮೊದಲ ದಿನವೇ ಸುಗ್ರೀವಾಜ್ಞೆಗಳ ಸೆಂಚುರಿ

ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಸುಗ್ರೀವಾಜ್ಞೆಗಳ ಮಹಾಪೂರ ಹರಿದಿದೆ. ಯು.ಎಸ್ ನಲ್ಲಿ ‘ಅಧ್ಯಕ್ಷೀಯ ಕಾರ್ಯಕಾರಿ ಆಜ್ಞೆ’ಗಳು ಎಂದು ಕರೆಯಲಾಗುವ ಸುಮಾರು ನೂರರಷ್ಟು ಸುಗ್ರೀವಾಜ್ಞೆಗಳನ್ನು ಟ್ರಂಪ್ ಆಗಲೇ ಮಾಡಿದ್ದಾರೆ. ಇವುಗಳಲ್ಲಿ ಪ್ರಮುಖವಾದವು – ಕಾನೂನುಬಾಹಿರ ವಲಸೆ ಮತ್ತು ವಲಸೆಗಾರರ ಮೇಲೆ ಕಠಿಣ ಕ್ರಮಗಳು, ಯು.ಎಸ್ ನಾಗರಿಕತೆ, ಇಂಧನ ಮತ್ತು ಪರಿಸರ ನೀತಿಗಳು, ಸಾಮಾಜಿಕ ನ್ಯಾಯದ ಕ್ರಮಗಳ ರದ್ದು, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರದ್ದತಿ, ಯು.ಎಸ್ ಸರಕಾರಿ ನೌಕರರ ಹಕ್ಕುಗಳನ್ನು ಮೊಟಕುಗೊಳಿಸುವ, ಜನವರಿ 2021ರಲ್ಲಿ ಯು.ಎಸ್ ಸಂಸತ್ ಭವನದಲ್ಲಿ ದೊಂಬಿ ಮಾಡಿದವರಿಗೆ ಕ್ಷಮಾದಾನ, ಪ್ಯಾರೀಸ್ ಒಪ್ಪಂದ ವಿಶ್ವ ಆಹಾರ ಸಂಸ್ಥೆ ಇತ್ಯಾದಿ ಅಂತರ್ರಾಷ್ಟ್ರೀಯ – ವಿಷಯಗಳಿಗೆ ಈ ಸುಗ್ರೀವಾಜ್ಞೆಗಳು ಸಂಬಂಧಿಸಿವೆ.

– ವಸಂತರಾಜ ಎನ್.ಕೆ

ಇವುಗಳಲ್ಲಿ ಕೆಲವು ಸಂವಿಧಾನ ಮತ್ತು ಈಗಿರುವ ಹಲವು ಕಾನೂನು ಕಟ್ಟಳೆಗಳನ್ನು ಉಲ್ಲಂಘಿಸುವಂತಹದ್ದು ಆಗಿದ್ದು ಇವುಗಳ ವಿರುದ್ಧ ವಿವಿಧ ಬಾಧಿತರು ಕೋರ್ಟಿನ ಮೆಟ್ಟಲು ಹತ್ತಲಿದ್ದಾರೆ. ಮತ್ತು ಪ್ರತಿಭಟನೆ, ಪ್ರತಿರೋಧಗಳನ್ನು ಕೈಗೊಳ್ಳಲಿದ್ದಾರೆ. ಈಗಾಗಲೇ ಜನ್ಮತಃ ನಾಗರಿಕತೆಯ ರದ್ದತಿ ಆಜ್ಞೆ ಸಂವಿಧಾನದ ಉಲ್ಲಂಘನೆಯೆಂದು 22 ಡೆಮೊಕ್ರಾಟಿಕ್ ರಾಜ್ಯಗಳ ಪರವಾಗಿ ಅರ್ಜಿ ಸಲ್ಲಿಸಲಾಗಿದೆ. ಸಿಯಾಟಲ್ ಕೋರ್ಟು ಅದರ ಜಾರಿಗೆ ತಡೆಯಾಜ್ಞೆಯನ್ನೂ ಸಹ ನೀಡಿದೆ.

ಪ್ರಮುಖ ಸುಗ್ರೀವಾಜ್ಞೆಗಳ ಹೂರಣ ಮತ್ತು ಪರಿಣಾಮಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ:

ಹಲವು ಆಜ್ಞೆ’ಗಳ ಮೂಲಕ ‘ಕಾನೂನುಬಾಹಿರ ವಲಸೆ ಮತ್ತು ವಲಸೆಗಾರರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇವನ್ನು ಜಾರಿ ಮಾಡಲು ನೆರವಾಗಲು ದಕ್ಷಿಣದ ಮೆಕ್ಸಿಕೊ-ಯು.ಎಸ್ ಗಡಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಅಕ್ರಮ ವಲಸೆಯಲ್ಲಿ ತೊಡಗಿರುವ ಕೆಲವು ಅಂತರರಾಷ್ಟ್ರೀಯ ಗ್ಯಾಂಗುಗಳನ್ನು “ವಿದೇಶೀ ಭಯೋತ್ಪಾದಕ ಸಂಸ್ಥೆಗಳೆಂದು ನಿಗದಿಸಲಾಗಿದೆ. ಇವುಗಳ ವಿರುದ್ಧ ವಿದೇಶೀ ವೈರಿಗಳ ಕಾನೂನು 1798ರ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು
ನಿರ್ದೇಶಿಸಲಾಗಿದೆ. “ನಿರಾಶ್ರಿತರಿಗೆ ಪ್ರವೇಶಾತಿ ಕಾರ್ಯಕ್ರಮ” ವನ್ನು 90 ದಿನದವರೆಗೆ ಸ್ಥಗಿತಗೊಳಿಸಲಾಗಿದೆ. ಇದರ ಪ್ರಕಾರ ಈಗಾಗಲೇ ಈ ಕಾರ್ಯಕ್ರಮದಡಿ ಪ್ರವೇಶಾತಿ ಕೊಡಲಾಗಿದ್ದ 1660 ಅಫ್ಘಾನಿ ನಿರಾಶ್ರಿತರ (ಅವರಲ್ಲಿ ಹಲವರು ಯು.ಎಸ್ ಮಿಲಿಟರಿ ಸಿಬ್ಬಂದಿಗಳ ಕುಟುಂಬದವರೂ ಸೇರಿದ್ದಾರೆ) ವಿಮಾನಯಾನವನ್ನು ರದ್ದುಗೊಳಿಸಲಾಗಿದೆ. ಟ್ರಂಪ್

ಇದನ್ನೂ ಓದಿ: ಕೊತ್ತಲ ಬಸವೇಶ್ವರ ಭಾರತೀಯ ಸಂಸ್ಕೃತಿ ಉತ್ಸವ’ಕ್ಕೆ ರೋವರ್ ಮತ್ತು ರೇಂಜರ್ಸ್‌ ವಿದ್ಯಾರ್ಥಿಗಳನ್ನು ನಿಯೋಜನೆ – ಎಸ್‌ಎಫ್‌ಐ ಆಕ್ರೋಶ

ಇದೇ ರೀತಿ ಕ್ಯೂಬಾ, ಹೈತಿ, ನಿಕರಾಗುವ ಮತ್ತು ವೆನೆಜುವೇಲಾ ಗಳ ನಿರಾಶ್ರಿತರ ಪೆರೋಲ್ ಕಾರ್ಯಕ್ರಮಗಳನ್ನೂ ಸ್ಥಗಿತಗೊಳಿಸಲಾಗಿದೆ. ವಲಸೆಗಾರರನ್ನು ಅವರ ಪ್ರಕರಣಗಳ ತನಿಖೆ ಆಗುವವರೆಗೆ ಯು.ಎಸ್ ಗೆ ಪ್ರವೇಶ ಕೊಡುವ ನೀತಿ ರದ್ದು ಮಾಡಿ ಮೆಕ್ಸಿಕೊ ಗೆ ತಕ್ಷಣವೇ ವಾಪಸು ಕಳಿಸುವ ಆಜ್ಞೆಯನ್ನೂ ಮಾಡಲಾಗಿದೆ. ಇವೆಲ್ಲವನ್ನು ಜಾರಿ ಮಾಡಲು ಗೃಹ ಇಲಾಖೆ ಸಿಬ್ಬಂದಿ ಜತೆಗೆ ಮಿಲಿಟರಿ ಸಿಬ್ಬಂದಿಯನ್ನೂ ತೊಡಗಿಸಲಾಗುವುದು. ಈಗಾಗಲೇ ವಲಸೆ ನಿರಾಕರಿಸಿದ
ವಿದೇಶೀಯರನ್ನು ವಾಪಸು ಕಳಿಸಲು ಕ್ರಮಕೈಗೊಳ್ಳಲಾಗುವುದು. ಇಂತಹ 18 ಸಾವಿರ ಭಾರತೀಯ ನಾಗರಿಕರಿದ್ದಾರೆ ಎನ್ನಲಾಗಿದೆ. ಇವಲ್ಲದೆ ಸುಮಾರು 1.2 ಕೋಟಿ ಅಕ್ರಮ (ಅಂದರೆ ಯಾವುದೇ ಅಧಿಕೃತ ದಾಖಲೆಯಿಲ್ಲದೆ ವಾಸಿಸುತ್ತಿರುವ) ವಲಸೆಗಾರರನ್ನು ಗುರುತಿಸಿ ವಾಪಸು ಕಳಿಸುವ ಕ್ರಮವನ್ನು ಕೈಗೊಳ್ಳಲು ಈ ಆಜ್ಞೆಗಳು ಅನುವಾಗುತ್ತವೆ. ಇಂತಹ ಸುಮಾರು 7.25 ಲಕ್ಷ ಭಾರತೀಯ ವಲಸೆಗಾರರಿದ್ದಾರೆ ಎನ್ನಲಾಗಿದೆ. ವಲಸಿಗರಿಗೆ ಮಾತ್ರವಲ್ಲ ಅವರಿಗೆ ಸಹಾಯ ಮತ್ತು ಬೆಂಬಲ
ನೀಡುವ ವ್ಯಕ್ತಿ, ಸಂಸ್ಥೆ, ಸಂಘಟನೆಗಳಿಗೂ ಕಠಿಣ ಶಿಕ್ಷೆ ವಿಧಿಸಲಾಗುವುದು. ಟ್ರಂಪ್

ಜನ್ಮತಃ ನಾಗರಿಕತೆ ರದ್ದತಿ

ಯು.ಎಸ್ ನಲ್ಲಿ ಜನಿಸಿದರೆ ತನ್ನಿಂತಾನೇ ನಾಗರಿಕತೆ ಕೊಡುವ ಸುಮಾರು ಒಂದು ಶತಮಾನದಿಂದ ಇರುವ ಸಂವಿಧಾನಿಕ ಹಕ್ಕನ್ನು ಇನ್ನೂ 30 ದಿನಗಳಲ್ಲಿ ಜಾರಿಯಾಗುವಂತೆ ರದ್ದು ಮಾಡುವ ಆಜ್ಞೆ ಮಾಡಲಾಗಿದೆ. ಈಗಾಗಲೇ ಪಾಲಕರು ನಾಗರಿಕ ಅಥವಾ ಶಾಶ್ವತ ನಿವಾಸಿ (ಹಸಿರು ಕಾರ್ಡು ಇದ್ದ) ಅಲ್ಲವಾದರೆ ಅಂತಹ ಅವರ ಮಗುವಿಗೆ ಯು.ಎಸ್ ನಾಗರಿಕತೆ ಸಿಗುವುದಿಲ್ಲ. ಅಂದರೆ ಎಚ್-1 ಮುಂತಾದ ತಾತ್ಕಾಲಿಕ ವಾಸ, ಕೆಲಸದ ವೀಸಾ ಪಡೆದು ಕಾನೂನುಬದ್ಧ ವಲಸೆಗಾರರ
ಮಕ್ಕಳಿಗೂ ಇನ್ನು ಮೇಲೆ ನಾಗರಿಕತೆ ಸಿಗುವುದಿಲ್ಲ. ಎಚ್.1, ಕೆಲಸದ ಮುಂತಾದ ತಾತ್ಕಾಲಿಕ ನಿವಾಸದ ವೀಸಾ ಹೊಂದಿರುವ ಲಕ್ಷಾಂತರ ಭಾರತೀಯರಿಗೆ ಇನ್ನ ಮೇಲೆ ಹುಟ್ಟುವ ಮಕ್ಕಳಿಗೆ ಇದು ಅನ್ವಯವಾಗಲಿದೆ. ಈಗಾಗಲೇ ಹೇಳಿದಂತೆ ಇದು ಕೋರ್ಟು ಮೆಟ್ಟಿಲು ಹತ್ತಿದ್ದು ತಡೆಯಾಜ್ಞೆ ಸಹ ಕೊಡಲಾಗಿದೆ. ಇದರ ವಿರುದ್ಧ ಅಪೀಲ್ ಮಾಡಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ. ಟ್ರಂಪ್

ಇಂಧನ ಮತ್ತು ಪರಿಸರ ನೀತಿಗಳು

“ರಾಷ್ಟ್ರೀಯ ಇಂಧನ ತುರ್ತು ಪರಿಸ್ಥಿತಿ” ಹೇರುವ ಆಜ್ಞೆ ಸಹ ಮೊದಲ ದಿನದ ಸುಗ್ರೀವಾಜ್ಞೆಗಳಲ್ಲಿ ಸೇರಿದೆ. ತೈಲ ಬಾವಿಗಳನ್ನು ಕೊರೆಯುವುದರ ಮೇಲೆ ಇದ್ದ ಎಲ್ಲ ನಿರ್ಬಂಧಗಳನ್ನು ಕಿತ್ತು ಹಾಕಲಾಗಿದೆ. ಇದರಲ್ಲಿ ಅಲಾಸ್ಕಾ ರಾಜ್ಯದ ಪರಿಸರ-ಸೂಕ್ಷ್ಮ ಕರಾವಳಿ ಪ್ರದೇಶಗಳಲ್ಲಿ ತೈಲ ಬಾವಿ ಕೊರೆಯಲು ಇದ್ದ ನಿರ್ಬಂಧಗಳೂ ಸೇರಿವೆ. ಇದರ ಜತೆಗೆ ಪುನರ್ನವೀಕರಣದ ಇಂಧನಗಳಿಗೆ ಕೊಡುವ ಉತ್ತೇಜನಗಳನ್ನೂ ಹಿಂತೆಗೆದುಕೊಳ್ಳಲಾಗಿದೆ. ಭೂ ಅಥವಾ ಸಾಗರ ಪ್ರದೇಶಗಳಲ್ಲಿ ಹೊಸ ಪವನ
ಶಕ್ತಿ ಪ್ರಾಜೆಕ್ಟುಗಳಿಗೆ ಉತ್ತೇಜನ ನೀಡುವ (ಅನುಮತಿ, ಜಾಗ, ಪರ್ಮಿಟ್, ಲೀಸ್, ಸಾಲ ಮುಂತಾದ) ಎಲ್ಲ ಕ್ರಮಗಳನ್ನು ಸ್ಥಗಿತಗೊಳಿಸಲಾಗಿದೆ. 2030ರೊಳಗೆ ಅರ್ಧದಷ್ಟು ವಾಹನಗಳು ವಿದ್ಯುತ್ ವಾಹನಗಳಾಗಿರಬೇಕೆಂಬ ಮತ್ತು ಫೆಡೆರಲ್ ಸರಕಾರ ವಿದ್ಯುತ್ ವಾಹನ ಇತ್ಯಾದಿ ಶುದ್ಧ ಇಂಧನ ಬಳಸುವ ಉತ್ಪನ್ನಗಳ ಖರೀದಿಗೆ ನಿಗದಿ ಪಡಿಸಿದ ಗುರಿಗಳಿರುವ ಅಧ್ಯಕ್ಷ ಬೈಡೆನ್ ಅವರ 2022ರ ಆಜ್ಞೆಯನ್ನು ರದ್ದುಗೊಳಿಸಲಾಗಿದೆ. ಹವಾಮಾನ ಬದಲಾವಣೆ ಆತಂಕಗಳಿಂದಾಗಿ ಸ್ಥಗಿತಗೊಳಿದ್ದ ದ್ರವ ಸ್ವಾಭಾವಿಕ ಅನಿಲಗಳ (ಎಲ್.ಎನ್,ಜಿ) ರಫ್ತಿಗೆ ಅರ್ಜಿಗಳನ್ನು ಪರಿಶೀಲಿಸಲು ಆರಂಭಿಸಲು ಆಜ್ಞೆ ಮಾಡಲಾಗಿದೆ. ಟ್ರಂಪ್

ಸಾಮಾಜಿಕ ನ್ಯಾಯದ ಕ್ರಮಗಳ ರದ್ದು

ಕರಿಯರು, ಲ್ಯಾಟಿನೊ, ವಿಶೇಷಚೇತನರು, ಲೈಂಗಿಕ ಅಲ್ಪಸಂಖ್ಯಾತರು ಇತ್ಯಾದಿ ವಂಚಿತ ಸಮುದಾಯಗಳ ನಡುವೆ ಸಾಮಾಜಿಕ ನ್ಯಾಯವನ್ನು ಸಾಧಿಸುವ ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆಯ ಸರಕಾರಿ ಉದ್ಯೋಗ ಮತ್ತು ಸವಲತ್ತುಗಳಲ್ಲಿನ ಎಲ್ಲ ನಿರ್ದಿಷ್ಟ ಕ್ರಮಗಳನ್ನು, ನೀತಿಗಳನ್ನು ಸ್ಥಗಿತಗೊಳಿಸಿ ಶುದ್ಧ ಮೆರಿಟ್ ಮಾತ್ರ ಪರಿಗಣಿಸುವಂತೆಯೂ ಆಜ್ಞೆ ಹೊರಡಿಸಲಾಗಿದೆ. ಖಾಸಗಿ ಕ್ಷೇತ್ರದಲ್ಲಿಯೂ ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವ
‘ತಾರತಮ್ಯದ’ ಕ್ರಮಗಳು, ಆದ್ಯತೆಗಳು, ನಿರ್ದೇಶನಗಳು, ನೀತಿಗಳು, ಕಾರ್ಯಕ್ರಮಗಳು , ಚಟುವಟಿಕೆಗಳನ್ನು ನಿಲ್ಲಿಸಲು ಆರಂಭಿಸಲು ಆಜ್ಞೆ ಹೊರಡಿಸಲಾಗಿದೆ. ಈ ಆಜ್ಞೆ ಲಿಂಡನ್ ಜಾನ್ಸನ್ 1965ರಲ್ಲಿ ಹೊರಡಿಸಿದ “ಸಮಾನ ಉದ್ಯೋಗ ಅವಕಾಶ’ದ ಕಾನೂನುಗಳಿಂದ ಆರಂಭಿಸಿ ಹಲವು ದಶಕಗಳ ‘ಸಕಾರಾತ್ಮಕ ತಾರತಮ್ಯ’ದ ಕ್ರಮಗಳನ್ನು ರದ್ದು ಪಡಿಸಿದೆ. ಟ್ರಂಪ್

ಲೈಂಗಿಕ ಅಲ್ಪಸಂಖ್ಯಾತರ ಅಮಾನ್ಯತೆ

ಗಂಡು, ಹೆಣ್ಣು ಎರಡೂ ಅಲ್ಲದ ದೈಹಿಕ, ಮಾನಸಿಕ ಕಾರಣಗಳಿಂದಾಗಿ ಬದಲಿ ಲೈಂಗಿಕ ಅಸ್ಮಿತೆ ಮತ್ತು ಲೈಂಗಿಕತೆ ಹೊಂದಿರುವುದು ಸಹಜವೆಂದು ಒಪ್ಪಿಕೊಂಡು ಅವರ ಮದುವೆ, ಲೈಂಗಿಕ ಆಯ್ಕೆ ಮತ್ತಿತರ ಹಕ್ಕುಗಳಿಗೆ ಇದುವರೆಗೆ ಕೊಟ್ಟಿದ್ದ ಮಾನ್ಯತೆಯನ್ನು ಮತ್ತು ಅವರ ರಕ್ಷಣೆಯ ಎಲ್ಲ ಕ್ರಮಗಳನ್ನು ಒಂದು ಅಧ್ಯಕ್ಷೀಯ ಆಜ್ಞೆ ರದ್ದು ಮಾಡಿದೆ. ಲೈಂಗಿಕ ಅಲ್ಪಸಂಖ್ಯಾತರು ಸೈನ್ಯಕ್ಕೆ ಸೇರಲು ಹಿಂದಿನ ಸರಕಾರ ಕೊಟ್ಟಿದ್ದ ಅವಕಾಶವನ್ನು ಸಹ ರದ್ದು ಮಾಡಲಾಗಿದೆ.

ಸರಕಾರಿ ನೌಕರರ ಹಕ್ಕುಗಳು ಮೊಟಕು

ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆಯ ಜಾರಿಯ ಮೇಲುಸ್ತುವಾರಿ ನೋಡುವ, ಉತ್ತೇಜಿಸುವ ಸರಕಾರದ ಘಟಕಗಳ ಉದ್ಯೋಗಿಗಳಿಗೆ ಈಗ ರಜಾ ಕೊಡಲಾಗಿದೆ, ಮತ್ತು ಮುಂದೆ ಉದ್ಯೋಗ ನಷ್ಟ ಕಾದಿದೆ. ವಲಸೆ-ನಿರೋಧ, ಮಿಲಿಟರಿ, ಆಂತರಿಕ ಭದ್ರತಾ ಸಿಬ್ಬಂದಿ ಬಿಟ್ಟು ಎಲ್ಲ ಸರಕಾರಿ ಉದ್ಯೋಗಗಳಿಗೆ ನೇಮಕಾತಿ ಕ್ರಮಗಳನ್ನು ಸ್ಥಗಿತಗೊಳಿಸುವ ಆಜ್ಞೆ ಹೊರಡಿಸಲಾಗಿದೆ. ‘ಮನೆಯಿಂದ ಕೆಲಸ ಮಾಡುವ’ ಸವಲತ್ತನ್ನು ತಕ್ಷಣವೇ ರದ್ದು ಮಾಡಲಾಗಿದೆ. ಟ್ರಂಪ್ ತಮ್ಮ
ಮೊದಲ ಅವಧಿಯಲ್ಲಿ ಜಾರಿ ಮಾಡಿದ್ದ ಸರಕಾರಿ ನೀತಿಗಳನ್ನು ಒಪ್ಪದ ಮತ್ತು ಜಾರಿ ಮಾಡದ ಉದ್ಯೋಗಿಗಳ ವಜಾ ಮಾಡುವುದನ್ನು ಸುಲಭಗೊಳಿಸುವ ‘ಶೆಡ್ಯೂಲ್ ಎಫ್’ ಮತ್ತೆ ಜಾರಿಗೆ ತರಲಾಗಿದೆ. ಸರಕಾರಿ ಉದ್ಯೋಗಿಗಳ ಹಕ್ಕುಗಳನ್ನು ಹರಣ ಮಾಡುವ ಮತ್ತು ಅದನ್ನು ರಾಜಕೀಯಕರಣಗೊಳಿಸುವ ಕ್ರಮವೆಂದು ಇದನ್ನು ಹಿಂದೆ ಆಪಾದಿಸಲಾಗಿತ್ತು.

ಶತಕೋಟ್ಯಾಧಿಪತಿ ಮತ್ತು ಅತ್ಯಂತ ದುಷ್ಟ ಉದ್ಯಮಿಯೆಂದು ಕುಖ್ಯಾತನಾದ ಎಲೊನ್ ಮಸ್ಕ್ ನಾಯಕತ್ವದಲ್ಲಿ ಹೊಸ “ಸರಕಾರದ ದಕ್ಷತೆಯ ವಿಭಾಗ” ವೊಂದನ್ನು ತೆರೆಯಲಾಗಿದೆ. ಇದು “ಸರಕಾರದ ದಕ್ಷತೆ” ಉತ್ತಮ ಪಡಿಸುವ ಹೆಸರಲ್ಲಿ ಸಾಮಾಜಿಕ ಮತ್ತು ಸಾಮುದಾಯಿಕ ಸೇವೆಯ ಸರಕಾರಿ ಉದ್ಯೋಗಗಳನ್ನು ಕಡಿತಗೊಳಿಸುವ ನಿರೀಕ್ಷೆಯಿದೆ. ಈಗಾಗಲೇ ಮಿತವ್ಯಯದ ಹೆಸರಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಯಲ್ಲಿ ವ್ಯಾಪಕ ಕಡಿತ ಮತ್ತು ಹೊಸ ನೇಮಕಾತಿ ಮಾಡಿದ್ದರಿಂದ ಲಾಸ್ ಏಂಜಲೀಸ್ ಕಾಡ್ಗಿಚ್ಚು ನಿಯಂತ್ರಿಸುವಲ್ಲಿ ವಿಳಂಬ ಮತ್ತಿತರ ಪ್ರಮಾದಗಳು ಜರುಗಿವೆ ಎನ್ನಲಾಗಿದೆ.

ಸಂಸತ್ ಭವನದಲ್ಲಿ ದೊಂಬಿ ಮಾಡಿದವರಿಗೆ ಕ್ಷಮಾದಾನ

ಜನವರಿ 6, 2021ರಂದು ‘ಕ್ಯಾಪಿಟೊಲ್ ಹಿಲ್’ ಎಂದು ಕರೆಯಲಾಗುವ ಸಂಸತ್ ಭವನದಲ್ಲಿ ದೊಂಬಿ ಮಾಡಿದವರು ಎನ್ನಲಾದ ಸುಮಾರು 1500 ಆಪಾದಿತರಿಗೆ ಕ್ಷಮಾದಾನ ಮಾಡುವ ಆಜ್ಞೆ ಹೊರಡಿಸಲಾಗಿದೆ. ಈ ಆಪಾದಿತರು ಅಂದು ಸಂಸತ್ ಭವನಕ್ಕೆ ಕಾನೂನುಬಾಹಿರವಾಗಿ ನುಗ್ಗಿ ಭದ್ರತಾ ಸಿಬ್ಬಂದಿ, ಸಂಸತ್ ಸದಸ್ಯರು, ಸಂಸತ್ ಭವನದ ಸಿಬ್ಬಂದಿಗಳ ಮೇಲೆ ಹಿಂಸಾತ್ಮಕ ದಾಳಿ ಮಾಡಿ ಹಲವು ಸಾವು-ನೋವುಗಳಾಗಿದ್ದವು. ಇವರಲ್ಲಿ ಹಲವರು ಕುಖ್ಯಾತವಾದ ಟ್ರಂಪ್ ಬೆಂಬಲಿಗರ ಉಗ್ರಗಾಮಿ ಗುಂಪುಗಳ ಸದಸ್ಯರು ಮತ್ತು ನಾಯಕರಾಗಿದ್ದರು. 2020ರಲ್ಲಿ ವಾಶಿಂಗಟನ್ ನಲ್ಲಿ ಕರಿಯ ಯುವಕನೊಬ್ಬನ ಕೊಲೆ ಮಾಡಿ ಶಿಕ್ಷೆ ಅನುಭವಿಸುತ್ತಿದ್ದ ಇಬ್ಬರು ಪೋಲಿಸ್ ಅಧಿಕಾರಿಗಳಿಗೆ ಸಹ ಕ್ಷಮಾದಾನ ಮಾಡುವ ಆಜ್ಞೆ ಸಹ ಹೊರಡಿಸಲಾಗಿದೆ.

ಪ್ಯಾರೀಸ್ ಒಪ್ಪಂದ ಮತ್ತು ವಿಶ್ವ ಆಹಾರ ಸಂಸ್ಥೆಗಳಿಂದ ಹೊರಕ್ಕೆ

ಹವಾಮಾನ ಬದಲಾವಣೆ ತಡೆಯಲು ಜಾಗತಿಕ ಕ್ರಮಗಳನ್ನು ನಿರ್ದೇಶಿಸುವ ಪ್ಯಾರೀಸ್ ಕಾಪ್ ಒಪ್ಪಂದದಿಂದ ಮತ್ತೆ ಯು.ಎಸ್ ನ್ನು ಹೊರಗೆ ತರುವ ಆಜ್ಞೆ ಸಹ ಬಂದಿದೆ. ಟ್ರಂಪ್ ಮೊದಲ ಅವಧಿಯಲ್ಲಿ ಸಹ ಇಂತಹ ಕ್ರಮ ಕೈಗೊಳ್ಳಲಾಗಿತ್ತು. ಹವಾಮಾನ ಬದಲಾವಣೆಗೆ ಕಾರಣವಾದ ಅನಿಲಗಳ ಹೊರಸೂಸುವಿಕೆಯಲ್ಲಿ ಚಾರಿತ್ರಿಕವಾಗಿ ಅತಿ ದೊಡ್ಡ ಪಾಲು ಇರುವ ಮತ್ತು ಈಗಲೂ ಎರಡನೇ ಅತಿ ದೊಡ್ಡ ಅನಿಲಗಳ ಹೊರಸೂಸುವಿಕೆ ಕೊಡುವ ದೇಶವಾದ ಯು.ಎಸ್ ಈ ಒಪ್ಪಂದದಿಂದ ಹೊರನಡೆಯುವುದು ಅತ್ಯಂತ ಬೇಜವಾಬ್ದಾರಿ ಕ್ರಮ.

ಅದೇ ರೀತಿಯಲ್ಲಿ ಜಾಗತಿಕ ಕೊವಿದ್ ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಿರಲಿಲ್ಲ ಮತ್ತು ಪ್ರಮಾದಗಳನ್ನು ಮಾಡಿದೆಯೆಂದು ಆಪಾದಿಸಿ ವಿಶ್ವ ಆಹಾರ ಸಂಸ್ಥೆಯಿಂದ ಸಹ ಹೊರಕ್ಕೆ ಬರುವ ಕುರಿತು ಸಹ ಆಜ್ಞೆ ಹೊರಡಿಸಲಾಗಿದೆ.

ಯೆಮೆನ್ ನ ಹೌತಿ ಗೆರಿಲ್ಲಾ ಸಂಘಟನೆಯನ್ನು ಜಾಗತಿಕ ಭಯೋತ್ಪಾದಕ ಸಂಘಟನೆಗಳ ಮತ್ತು ಕ್ಯೂಬಾವನ್ನು ಮತ್ತೆ ಜಾಗತಿಕ ಭಯೋತ್ಪಾದಕ ದೇಶಗಳ ಪಟ್ಟಿಗೆ ಮತ್ತೆ ಸೇರಿಸುವ ಆಜ್ಞೆ ಹೊರಡಿಸಲಾಗಿದೆ.

ಮೆಕ್ಸಿಕೊ ಕೊಲ್ಲಿಯನ್ನು ಅಮೆರಿಕ ಕೊಲ್ಲಿ ಎಂದು ಕರೆಯುವುದೂ ಆಜ್ಞೆಗಳಲ್ಲಿ ಸೇರಿದೆ.

ಇದನ್ನೂ ನೋಡಿ: ತೊಗರಿಗೆ ವಿಶೇಷ ಪ್ಯಾಕೇಜ್ ನೀಡಲು ಆಗ್ರಹಿಸಿ “ಕಲಬುರಗಿ ಬಂದ್

Donate Janashakthi Media

Leave a Reply

Your email address will not be published. Required fields are marked *