ಹೈದರಾಬಾದ್: ಆಡಳಿತರೂಢ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ಪಕ್ಷದ ನಾಲ್ವರು ಶಾಸಕರ ಖರೀದಿ ಯತ್ನ ಪ್ರಕರಣಕ್ಕೆ ಆರೋಪಿಗಳನ್ನು ಬಂಧಿಸುವ ಅಗತ್ಯವಿಲ್ಲವೆಂದು ಎಸಿಬಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಆದೇಶವನ್ನು ತೆಲಂಗಾಣ ಹೈಕೋರ್ಟ್ ಸೂಚನೆ ನೀಡಿದೆ.
ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ನೇತೃತ್ವದ ಟಿಆರ್‌ಎಸ್(ಈಗ ಬಿಆರ್‌ಎಸ್) ಪಕ್ಷದ ಶಾಸಕರನ್ನು ಬಿಜೆಪಿಗೆ ಸೆಳೆಯಲು ಯತ್ನಿಸಿದ ಮೂವರು ಆರೋಪಿಗಳಾದ ರಾಮಚಂದ್ರ ಭಾರತಿ ಅಲಿಯಾಸ್ ಸತೀಶ್ ಶರ್ಮಾ, ಕೆ.ನಂದಕುಮಾರ್ ಮತ್ತು ಡಿಪಿಎಸ್‌ಕೆವಿಎನ್ ಸಿಂಹಯಾಜುಲು ಅವರು ಸೈಬರಾಬಾದ್ ಪೊಲೀಸ್ ಆಯುಕ್ತರ ಮುಂದೆ 24 ಗಂಟೆಗಳ ಒಳಗೆ ಶರಣಾಗುವಂತೆ ತೆಲಂಗಾಣ ಹೈಕೋರ್ಟ್ ಆದೇಶ ನೀಡಿದೆ.
ಬುಧವಾರ ರಾತ್ರಿ ಹೈದರಾಬಾದ್ ಸಮೀಪದ ಫಾರ್ಮ್ ಹೌಸ್ ಒಂದರಲ್ಲಿ ಬಿಜೆಪಿಗೆ ಪಕ್ಷಾಂತರವಾಗಲು ನಾಲ್ವರು ಶಾಸಕರಿಗೆ ಆಮಿಷವೊಡ್ಡಿ, 250 ಕೋಟಿ ರೂಪಾಯಿ ವ್ಯವಹಾರ ನಡೆಯುತ್ತಿತ್ತು. ಫಾರ್ಮ್ ಹೌಸ್ ನ ಮಾಲಕ ಶಾಸಕ ಪೈಲಟ್ ರೋಹಿತ್ ರೆಡ್ಡಿ, ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದರು. ಲಂಚ ನೀಡುತ್ತಿದ್ದಾಗ ಆರೋಪಿಗಳನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಶಾಸಕರು ಬಿಜೆಪಿಗೆ ಸೇರದಿದ್ದರೆ, “ಕ್ರಿಮಿನಲ್ ಪ್ರಕರಣಗಳು ಮತ್ತು ಇಡಿ (ಜಾರಿ ನಿರ್ದೇಶನಾಲಯ) / ಸಿಬಿಐ ದಾಳಿಗಳು ನಡೆಯುತ್ತವೆ ಹಾಗೂ ಬಿಆರ್‌ಎಸ್ ಪಕ್ಷದ ನೇತೃತ್ವದ ತೆಲಂಗಾಣ ಸರಕಾರವನ್ನು ಉರುಳಿಸಲಾಗುವುದು ಎಂದು ಬೆದರಿಸಲಾಗಿತ್ತುʼʼ ಎನ್ನುವುದಾಗಿ ರೋಹಿತ್ ರೆಡ್ಡಿ ಎಫ್‌ಐಆರ್‌ನಲ್ಲಿ ಹೇಳಿದ್ದಾರೆ.
ಪ್ರಕರಣದಲ್ಲಿ, ಲಂಚದ ಹಣದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಮತ್ತು ಸಿಆರ್‌ಪಿಸಿಯ ಸೆಕ್ಷನ್ 41 (ಎ) ಪ್ರಕಾರ ಪೊಲೀಸರು ನೋಟಿಸ್ ನೀಡಬಹುದು. ಪ್ರಕರಣದ ತನಿಖೆಗೆ ಆರೋಪಿಗಳನ್ನು ಕರೆಯಬಹುದು ಎಂದು ಉಲ್ಲೇಖಿಸಿ ಎಸಿಬಿ ನ್ಯಾಯಾಲಯದ ನ್ಯಾಯಾಧೀಶರು ಗುರುವಾರ ಆದೇಶ ನೀಡಿದ್ದರು.
ಆರೋಪಿಗಳನ್ನು ಸುಪರ್ದಿಗೆ ಪಡೆಯಲು ಕೋರಿದ್ದ ಪೊಲೀಸರ ಮನವಿಯನ್ನು ಕೆಳ ನ್ಯಾಯಾಲಯವು ತಿರಸ್ಕರಿಸಿತ್ತು ಮತ್ತು ಆರೋಪಿಗಳನ್ನು ಬಿಡುಗಡೆ ಮಾಡಲಾಗಿತ್ತು.