ತ್ರಿಪುರಾದಲ್ಲಿ 20 ಪುರಸಭೆಗಳಲ್ಲಿ ಏಳನ್ನು ಯಾವುದೇ ಸ್ಪರ್ಧೆ ನಡೆಯದಂತೆ ಮಾಡಿ ಅವಿರೋಧವಾಗಿ ‘ಗೆದ್ದರೆ’, ‘ಚುನಾವಣೆ’ ನಡೆದ ಉಳಿದ 13ರಲ್ಲಿ 5 ಪುರಸಭೆ/ನಗರಸಭೆಗಳಲ್ಲಿ ಮತಗಟ್ಟೆ ವಶ ಸೇರಿದಂತೆ ಸಂಪೂರ್ಣವಾಗಿ ಮತ್ತು 8ರಲ್ಲಿ ಭಾಗಶಃ ಚುನಾವಣಾ ಮೋಸ ನಡೆಸಿ ಬಿಜೆಪಿ ಭಾರೀ ‘ಗೆಲುವು’ ಪಡೆದಿದೆ!
ಈ ಫಲಿತಾಂಶವನ್ನು ಉತ್ತಮ ಆಡಳಿತಕ್ಕೆ ಜನರ ಆದ್ಯತೆ ಎಂದು ನರೇಂದ್ರ ಮೋದಿ ಶ್ಲಾಘಿಸಿರುವುದು ಮತ್ತು ಅಮಿತ್ ಶಾ ಬಿಜೆಪಿಯ ಅಭಿವೃದ್ಧಿ ರಾಜಕಾರಣದಲ್ಲಿ ಜನಗಳಲ್ಲಿರುವ ಅಚಲ ನಂಬಿಕೆ ಎಂದು ಜೈಕಾರ ಹಾಕಿರುವುದು ಈ ಚುನಾವಣಾ ಮೋಸದ ಕಸರತ್ತಿಗೆ ಬಿಜೆಪಿಯ ಉನ್ನತ ನಾಯಕತ್ವದ ಆಶೀರ್ವಾದ ಇದೆ ಎಂಬುದನ್ನು ತೋರಿಸುತ್ತದೆ.
ತ್ರಿಪುರಾದಲ್ಲಿ ಮುನ್ಸಿಪಲ್ ಚುನಾವಣೆ ಎಂಬ ಹೆಸರಿನಲ್ಲಿ ನಡೆಸಿರುವ ಪ್ರಹಸನ ಬಿಜೆಪಿ ಅಗರ್ತಲಾ ಮಹಾನಗರ ಸಭೆ ಸೇರಿದಂತೆ 20 ನಗರ ಪ್ರದೇಶದ ಸ್ಥಳೀಯ ಸಂಸ್ಥೆಗಳಲ್ಲಿ 334 ಸ್ಥಾನಗಳಲ್ಲಿ 329 “ಗೆಲ್ಲಲು” ದಾರಿಮಾಡಿ ಕೊಟ್ಟಿದೆ. ಇವುಗಳಲ್ಲಿ 112 ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿರುವುದರಿಂದ ಯಾವುದೇ ಸ್ಪರ್ಧೆಯಿಲ್ಲದೆ ಏಳು ಪುರಸಭೆಗಳನ್ನು ಸಂಸ್ಥೆಗಳನ್ನು ವಶಪಡಿಸಿಕೊಳ್ಳಲಾಯಿತು.
ಅಗರ್ತಲಾ ಕಾರ್ಪೊರೇಷನ್ ಇತರ 13 ನಗರ ಸಂಸ್ಥೆಗಳಿಗೆ, ನವೆಂಬರ್ 25ರಂದು ಚುನಾವಣೆಗಳು ನಡೆದವು. ಅದರಲ್ಲಿ ಕಂಡಿದ್ದು ವ್ಯಾಪಕ ಪ್ರಮಾಣದಲ್ಲಿ ಮತಗಟ್ಟೆ ವಶ, ವಿರೋಧ ಪಕ್ಷದ ಅಭ್ಯರ್ಥಿಗಳ ಪೋಲಿಂಗ್ ಏಜೆಂಟರ ಮೇಲೆ ಹಲ್ಲೆಗಳು ಮತ್ತು ಮತ ಹಾಕಲು ಬಯಸುವ ಮತದಾರರನ್ನು ತಡೆಯುವುದು. ಇದರ ಫಲಿತಾಂಶವೆಂದರೆ, ಅಗರ್ತಲಾ ಕಾರ್ಪೋರೇಷನ್‌ನ ಎಲ್ಲಾ 51 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ- ನಿಜವಾಗಿಯೂ ಒಂದು ಪರಿಪೂರ್ಣ ದಾಖಲೆ!
ಸಿಪಿಐ(ಎಂ) ಮತ್ತು ಎಡರಂಗ ಅಗರ್ತಲಾ ಕಾರ್ಪೊರೇಷನ್ ಮತ್ತು ಇತರ ನಾಲ್ಕು ಪುರಸಭೆಗಳ ಚುನಾವಣೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿವೆ. ಏಕೆಂದರೆ ಅಲ್ಲಿ ನಡೆದಿರುವುದು ಸಂಪೂರ್ಣವಾಗಿ ಮೋಸದ ಚುನಾವಣೆ. ಎಂಟು ಇತರ ಪುರಸಭೆಗಳಲ್ಲಿ ಮತಗಟ್ಟೆ ವಶಪಡಿಸಿಕೊಳ್ಳುವುದು ಹೆಚ್ಚಾಗಿ ಆಯ್ದ ಕಡೆಗಳಲ್ಲಿ ಮಾತ್ರ ನಡೆದಿದೆ. ಆದರೂ ಬೆದರಿಸುವ ತಂತ್ರಗಳು ಮತ್ತು ಮತದಾರರಿಗೆ ಅಡ್ಡಿಪಡಿಸುವುದು ಎಲ್ಲ ಕಡೆಗಳಲ್ಲಿ ನಡೆದಿದೆ.
ಈ ಫಲಿತಾಂಶವನ್ನು ಉತ್ತಮ ಆಡಳಿತಕ್ಕೆ ಜನರ ಆದ್ಯತೆ ಎಂದು ನರೇಂದ್ರ ಮೋದಿ ಶ್ಲಾಘಿಸಿರುವುದು ಮತ್ತು ಅಮಿತ್ ಶಾ ಬಿಜೆಪಿಯ ಅಭಿವೃದ್ಧಿ ರಾಜಕಾರಣದಲ್ಲಿ ಜನಗಳಲ್ಲಿರುವ ಅಚಲ ನಂಬಿಕೆ ಎಂದು ಜೈಕಾರ ಹಾಕಿರುವುದು ಈ ಚುನಾವಣಾ ಮೋಸದ ಕಸರತ್ತಿಗೆ ಬಿಜೆಪಿಯ ಉನ್ನತ ನಾಯಕತ್ವದ ಆಶೀರ್ವಾದ ಇದೆ ಎಂಬುದನ್ನು ತೋರಿಸುತ್ತದೆ.
ಸಿಪಿಐ(ಎಂ) ಅಭ್ಯರ್ಥಿಗಳು, ಕಾರ್ಯಕರ್ತರು ಮತ್ತು ಪೋಲಿಂಗ್ ಏಜೆಂಟ್‌ಗಳ ವಿರುದ್ಧ ಬೆದರಿಕೆಗಳು ಮತ್ತು ಹಿಂಸಾಚಾರ ನವೆಂಬರ್ 28ರಂದು ಚುನಾವಣಾ ಫಲಿತಾಂಶದ ಪ್ರಕಟಣೆಯ ನಂತರವೂ ಮುಂದುವರೆದಿದೆ. ಇದು ಬಿಜೆಪಿ 2018ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಈ ರಾಜ್ಯದಲ್ಲಿ ಸ್ಥಾಪಿಸಿರುವ ಹಿಂಸಾಚಾರದ ಫ್ಯಾಸಿಸ್ಟ್ ತೆರನ ವಿಧಾನ. ಹಲವೆಡೆ ಸಿಪಿಐ(ಎಂ) ಕಾರ್ಯಕರ್ತರು ಮತ್ತು ಬೆಂಬಲಿಗರು ದಾಳಿಗಳನ್ನು ಎದುರಿಸಿ ನಿಂತರು, ತಮ್ಮ ಮತ ಹಾಕುವಲ್ಲಿ ಯಶಸ್ವಿಯಾದರು.
ಮಹಾ ಬಾಜಾಬಜಂತ್ರಿಯೊಂದಿಗೆ ಚುನಾವಣಾ ಕಣಕ್ಕೆ ಇಳಿದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಶ್ಚಿಮ ಬಂಗಾಲದಲ್ಲಿ ಕೊಡುತ್ತಿರುವ ಹಿಂಸಾಚಾರ ಮತ್ತು ಬೆದರಿಕೆಗಳಿಂದ ಚುನಾವಣೆಗಳನ್ನು ಹುಸಿಗೊಳಿಸುವ ತನ್ನದೇ ಕಹಿ ಔಷಧಿಯನ್ನು ಇಲ್ಲಿ ತಾನೂ ಸೇವಿಸಬೇಕಾಗಿ ಬಂದಿದೆ.
ಪುರಸಭಾ ಚುನಾವಣೆಗಳಲ್ಲಿ ಟಿಎಂಸಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ ಎಂಬ ಅದರ ದಾವೆಗೆ ಯಾವುದೇ ಆಧಾರವಿಲ್ಲ. ವಿಕೃತಗೊಂಡ ಫಲಿತಾಂಶಗಳು ಕೂಡ ಎಡರಂಗ 19.65% ರಷ್ಟು ಮತಗಳನ್ನು ಪಡೆದರೆ, ಟಿಎಂಸಿ 15.39% ಮತ ಪಡೆದಿದೆ. ಎಡರಂಗ 149 ವಾರ್ಡುಗಳಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಟಿಎಂಸಿ 56ರಲ್ಲಿ ಎರಡನೆಯ ಸ್ಥಾನ ಪಡೆದಿದೆ.
ಬಿಪ್ಲಬ್ ದೇಬ್ ಸರ್ಕಾರದ ದುರಾಡಳಿತದಿಂದಾಗಿ ಜನಗಳಲ್ಲಿ ಪರಕೀಯ ಭಾವ ಹೆಚ್ಚುತ್ತಿರುವುದರಿಂದಾಗಿ, ಬಿಜೆಪಿ ತನ್ನ ಆಳ್ವಿಕೆಯನ್ನು ಉಳಿಸಿಕೊಳ್ಳಲು ಹೆಚ್ಚುಹೆಚ್ಚಾಗಿ ಹಿಂಸಾಚಾರ ಮತ್ತು ಚುನಾವಣಾ ಮೋಸವನ್ನೇ ಅವಲಂಬಿಸಬೇಕಾಗುತ್ತದೆ.
ಪೀಪಲ್ಸ್ ಡೆಮಾಕ್ರಸಿ ಸಂಪಾದಕೀಯ