ತ್ರಿಪುರಾದಲ್ಲಿ ಪ್ರಜಾಪ್ರಭುತ್ವದ ಕೊಲೆ-ಸಂಪೂರ್ಣ ರಿಗ್ಗಿಂಗ್ – ಸಿಪಿಐಎಂ ಆರೋಪ

ಹೊಸದಾಗಿ ಮತದಾನ ನಡೆಸಿ-ಚುನಾವಣಾ ಆಯೋಗಕ್ಕೆ ಆಗ್ರಹ ಸಿಪಿಐಎಂ

ನವದೆಹಲಿ : ಸೆಪ್ಟೆಂಬರ್ 5 ರಂದು ತ್ರಿಪುರಾದ ಬೊಕ್ಸಾನಗರ ಮತ್ತು ಧನ್‌ಪುರದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ರಾಜ್ಯ ಸರ್ಕಾರದ ನೇರ ಮೇಲ್ವಿಚಾರಣೆಯಲ್ಲಿ ಸಂಪೂರ್ಣ ರಿಗ್ಗಿಂಗ್ ನಡೆದಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಪಾದಿಸಿದೆ. ಭಯೋತ್ಪಾದನೆಯ ಅಸಾಧಾರಣ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಯಿತು. ಸಿಪಿಐ(ಎಂ)ನ ಮತಗಟ್ಟೆ ಏಜೆಂಟರ ಮೇಲೆ ದೈಹಿಕ ಹಲ್ಲೆ ನಡೆಸಿ ಅವರು ಕರ್ತವ್ಯ ನಿರ್ವಹಿಸದಂತೆ ತಡೆಯಲಾಯಿತು. ಬೊಕ್ಸಾನಗರದಲ್ಲಿ 16 ಮತ್ತು ಧನಪುರದಲ್ಲಿ 19 ಸಿಪಿಐ(ಎಂ) ಮತಗಟ್ಟೆ ಏಜೆಂಟರು ಮಾತ್ರ ಮತಗಟ್ಟೆಗೆ ಪ್ರವೇಶಿಸಲು ಸಾಧ್ಯವಾಯಿತು. ಅವರನ್ನೂ ಭಯದ ವಾತಾವರಣ ನಿರ್ಮಿಸಿ  ದೈಹಿಕವಾಗಿ ಹೆದರಿಸಿ,ಬೆದರಿಸಿ ಹೊರಹಾಕಲಾಯಿತು.

ಈ ಉಪಚುನಾವಣೆಗಳು ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಒಂದು  ಪ್ರಹಸನವಾಗಿ ಬಿಟ್ಟಿವೆ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯೂರೋ ಈ ಚುನಾವಣೆಗಳನ್ನು ರದ್ದುಗೊಳಿಸಬೇಕು  ಮತ್ತು ಕಟ್ಟುನಿಟ್ಟಾದ ಭದ್ರತಾ ಕ್ರಮಗಳೊಂದಿಗೆ ಹೊಸ ಮತದಾನಕ್ಕೆ ವ್ಯವಸ್ಥೆ ಮಾಡಬೇಕು ಎಂದು  ಚುನಾವಣಾ ಆಯೋಗಕ್ಕೆ ಕರೆ ನೀಡಿದೆ. `ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ’ ನಡೆಸುವ ಚುನಾವಣಾ ಆಯೋಗದ ಆದೇಶದ ಇಂತಹ ನಿರ್ಲಜ್ಜ ಉಲ್ಲಂಘನೆಯಲ್ಲಿ ಭಾಗಿಯಾಗಿರುವ ಯಾವ ಅಧಿಕಾರಿಯನ್ನೂ ಹೊಸ ಚುನಾವಣೆಯ ಸಂದರ್ಭದಲ್ಲಿ ನಿಯೋಜಿಸಬಾರದು ಎಂದಿರುವ ಅದು ಇಂತಹ ಭಯೋತ್ಪಾದನೆಗೆ ಕಾರಣರಾದವರನ್ನು ಗುರುತಿಸಿ ಶಿಕ್ಷಿಸಬೇಕು ಎಂದೂ ಆಗ್ರಹಿಸಿದೆ.

ಇದನ್ನೂ ಓದಿತ್ರಿಪುರಾ | ಸಿಪಿಐಎಂ ಮತ್ತೆ ತೆಕ್ಕೆಗೆ ಪಡೆಯಲಿದೆಯೆ ‘ಮಾಣಿಕ್ ಸರ್ಕಾರ್’ ಕ್ಷೇತ್ರ?

ಇದಕ್ಕೆ ಮೊದಲು ಸಿಪಿಐ(ಎಂ)ನ ತ್ರಿಪುರಾ ರಾಜ್ಯ ಕಾರ್ಯದರ್ಶಿ ಜಿತೇಂದ್ರ ಚೌಧರಿಯವರೂ ತ್ರಿಪುರಾ ರಾಜ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದು ಹೊಸದಾಗಿ ಚುನಾವಣೆ ನಡೆಸುವಂತೆ ಆಗ್ರಹಿಸಿದ್ದರು. ಆಳುವ ಬಿಜೆಪಿ ಪೊಲಿಸ್‍ ಮತ್ತು ಆಡಳಿತದ ಒಂದು ವಿಭಾಗವನ್ನು ಬಳಸಿಕೊಂಡು ಅಸಾಧಾರಣ ಭಯದ ವಾತಾವರಣವನ್ನು ಕಲ್ಪಿಸಿತು. ಚುನಾವಣಾ ಕ್ಷೇತ್ರಕ್ಕೆ ಸಂಬಂಧಪಡದವರೆಲ್ಲರನ್ನೂ ಸಪ್ಟಂಬರ್ 3 ರ ಸಂಜೆ ಕ್ಷೇತ್ರದಿಂದ ಹೊರಕಳಿಸಬೇಕಾಗಿತ್ತು. ಅದರ ಬದಲು ಸುತ್ತಲಿನ ಪ್ರದೇಶಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಮಧ್ಯಪ್ರವೇಶಿಸಲು ಅವಕಾಶ ಕೊಡಲಾಯಿತು, ಅವರನ್ನು ಇಡೀ ಕ್ಷೇತ್ರದ ಮುಖ್ಯ ಸ್ಥಳಗಳಲ್ಲಿ ನಿಯೋಜಿಸಲಾಯಿತು. ಮತದಾನದ ದಿನ ಬೆಳಿಗ್ಯೆ ಮತದಾನಕ್ಕೆ ಬರುತ್ತಿದ್ದ ಹಲವರನ್ನು ಬೆದರಿಸಿ ಮನೆ ಕಳಿಸಲಾಯಿತು ಎಂದು ಸಿಪಿಐ(ಎಂ) ತ್ರಿಪುರಾ ರಾಜ್ಯಸಮಿತಿ ಹೇಳಿದೆ.

ಈ ಚುನಾವಣಾ ಪ್ರಹಸನ ಮತ್ತೆ ನಡೆಯದಂತೆ ತಡೆಯಲು ಚುನಾವಣಾ ಆಯೋಗವು ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕು ಎಂದು ಸಿಪಿಐಎಂ ಒತ್ತಾಯಿಸಿದೆ. 

  • ಮತದಾರರಲ್ಲಿ ಭಯ ಹುಟ್ಟಿಸಲು ಭಯೋತ್ಪಾದಕ ಗಲಭೆಕೋರರಿಗೆ ನೇತೃತ್ವ ನೀಡಿರುವ ಬಿಕಾಶ್‍ ದೇಬಬರ್ಮನನ್ನು ಬಂಧಿಸಬೇಕು.
  • ಸೆಪಾಹಿಜಾಲಾದ ಎಸ್‍.ಪಿ.ಯನ್ನು ಮತ್ತು ಎರಡೂ ಕ್ಷೇತ್ರಗಳ ಆರ್.ಒ.ಗಳನ್ನು ತೆಗೆಯಬೇಕು ಮತ್ತು
  • ಮತದಾನ ನಡೆಯಲಿರುವ ಸಬ್ ಡಿವಿಜನಿನ ನೌಕರರು ಒತ್ತಡದಲ್ಲಿ  ಕೆಲಸ ಮಾಡಬೇಕಾದ್ದರಿಂದ, ಈ ಜಿಲ್ಲೆಯ ಹೊರಗಿನಿಂದ ಚುನಾವಣಾ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹಿಸಿದೆ.

ಈ ವಿಡಿಯೋ ನೋಡಿINDIA V/S NDA : ಬಿಜೆಪಿ ವಿರುದ್ಧ ವಿಪಕ್ಷಗಳ ಸಂಕಲ್ಪ ಏನು? ಸಿಪಿಐಎಂನ ಸೀತಾರಾಂ ಯೆಚೂರಿ ಹೇಳುವುದೇನು?

 

Donate Janashakthi Media

Leave a Reply

Your email address will not be published. Required fields are marked *