ನವದೆಹಲಿ: ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ಹಿಂದಿನ ಪ್ರಧಾನ ಕಾರ್ಯದರ್ಶಿ ಎಸ್. ಸುಧಾಕರ ರೆಡ್ಡಯವರು ಆಗಸ್ಟ್ 22 ರಂದು ನಿಧನರಾಗಿದ್ದಾರೆ. ಅವರಿಗೆ ನಮನಗಳನ್ನು ಸಲ್ಲಿಸುತ್ತ ಸಿಪಿಐ(ಎಂ) ಪೊಲಿಟ್‍ಬ್ಯುರೊ ಈ ಕೆಳಗಿನ ಹೇಳಿಕೆಯನ್ನು ನೀಡಿದೆ: ಸುರವರಂ
ಸುರವರಂ ಸುಧಾಕರ ರೆಡ್ಡಿ ಅವರ ನಿಧನಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ಸ್ ವಾದಿ) ಪೊಲಿಟ್‍ಬ್ಯುರೊ ತೀವ್ರ ದುಃಖ ವ್ಯಕ್ತಪಡಿಸುತ್ತದೆ. ತಮ್ಮ ಜೀವನಪರ್ಯಂತ ಕಾರ್ಮಿಕ ವರ್ಗ ಮತ್ತು ದಮನಿತರ ಹಿತಾಸಕ್ತಿಗಳ ಪ್ರತಿಪಾದಕರಾಗಿದ್ದ ಸುಧಾಕರ ರೆಡ್ಡಿ ನ್ಯಾಯ, ಸಮಾನತೆ ಮತ್ತು ಸಮಾಜವಾದದ ಆದರ್ಶಗಳಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟವರು.
ಕರ್ನೂಲ್ ಮತ್ತು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ನಾಯಕರಾಗಿದ್ದಾಗಲೇ ಸಕ್ರಿಯ ಚಟುವಟಿಕೆಗಳಲ್ಲಿ ತೊಡಗುವುದರಿಂದ ಆರಂಭಿಸಿ, ಐತಿಹಾಸಿಕ ಯುವ ಮತ್ತು ವಿದ್ಯಾರ್ಥಿ ಹೋರಾಟಗಳಲ್ಲಿ ಎಐಎಸ್‍ಎಫ್ ಮತ್ತು ಎಐವೈಎಫ್ ಗೆ ನೇತೃತ್ವ ನೀಡುವ ವರೆಗೆ, ಅವರು ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ಸಾಮಾಜಿಕ ಪರಿವರ್ತನೆಗೆ ತಮ್ಮ ಅಚಲ ಬದ್ಧತೆಯನ್ನು ಪ್ರದರ್ಶಿಸಿದರು.
ಇದನ್ನೂ ಓದಿ: ಸಾಂಸ್ಕೃತಿಕ ಲೋಕದ ಮುಖ್ಯ ಉಸಿರು ಸಮುದಾಯ: ಬರಗೂರು
ನಲ್ಗೊಂಡದಿಂದ ಎರಡು ಬಾರಿ ಸಂಸತ್ ಸದಸ್ಯರಾಗಿ, ಕಾಮ್ರೇಡ್ ರೆಡ್ಡಿ ತಮ್ಮ ಸಮಗ್ರತೆ, ಶಾಸಕೀಯ ಒಳನೋಟ ಮತ್ತು ಕಾರ್ಮಿಕರ ಹಕ್ಕುಗಳಿಂದ ಹಿಡಿದು ಕೃಷಿ ಸಂಕಷ್ಟದ ವರೆಗಿನ ವಿಷಯಗಳ ಪ್ರತಿಪಾದನೆಗಳಿಂದಾಗಿ ಎದ್ದು ಕಾಣುತ್ತಿದ್ದರು. ತಳಮಟ್ಟದಲ್ಲಿ, ಅವರು ಪ್ರಬಲ ಜನ ಚಳುವಳಿಗಳನ್ನು ಮುನ್ನಡೆಸಿದರು.
ಭಾರತ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ (2012–2019), ಅವರು ಕೋಮುವಾದ ಮತ್ತು ಸರ್ವಾಧಿಕಾರಶಾಹಿಯ ವಿರುದ್ಧ ಐಕ್ಯ ಕಾರ್ಯಾಚರಣೆಯನ್ನು ಬೆಸೆಯುವಲ್ಲಿ ಒಂದು ನಿರ್ಣಾಯಕ ಪಾತ್ರ ವಹಿಸಿದರು. ಸಿಪಿಐನ ಅತ್ಯುತ್ತಮ ನಾಯಕರಲ್ಲಿ ಒಬ್ಬರಾದ ಅವರನ್ನು ಎಡ ಪಕ್ಷಗಳು ಮತ್ತು ಶಕ್ತಿಗಳ ನಡುವಿನ ಐಕ್ಯತೆಯನ್ನು ಬಲಪಡಿಸುವಲ್ಲಿ ಅವರು ಮಾಡಿದ ಪ್ರಯತ್ನಗಳಿಗಾಗಿ ಸ್ಮರಿಸಲಾಗುವುದು.
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)ದ ಪೊಲಿಟ್ ಬ್ಯೂರೋ ಭಾರತ ಕಮ್ಯುನಿಸ್ಟ್ ಪಕ್ಷದ ಸಮಸ್ತ ಸದಸ್ಯರಿಗೆ ಮತ್ತು ಅವರ ಪತ್ನಿ ಮತ್ತು ಮಕ್ಕಳಿಗೆ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತದೆ.
ಇದನ್ನೂ ನೋಡಿ: ಧರ್ಮಸ್ಥಳ | ಅಸಹಜ ಸಾವುಗಳು, ಅತ್ಯಾಚಾರಗಳು, ಕೊಲೆಗಳು ಮತ್ತು ಭೂಕಬಳಿಕೆ ನಂಟಿನ ಬಗ್ಗೆ ತನಿಖೆಯಾಗಲಿ – ಎಡಪಕ್ಷಗಳ ಆಗ್ರಹ
