ರಾಮಮಂದಿರ | ಜನವರಿ 22 ರ ಮೊದಲು 3 ದಿನಗಳ ಕಾಲ ಪಕ್ಕದ ಜಿಲ್ಲೆಗಳಿಂದ ಅಯೋಧ್ಯೆಗೆ ಪ್ರಯಾಣ ನಿಷೇಧ!

ಲಖ್ನೋ: ಬಾಬರಿ ಮಸೀದಿ ಒಡೆದು ಕಟ್ಟಲಾಗಿರುವ ಕಟ್ಟಡವಾದ ರಾಮಮಂದಿರದಲ್ಲಿ ನಡೆಯುವ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಅಯೋಧ್ಯೆಗೆ ಹೊಂದಿಕೊಂಡಿರುವ ಉತ್ತರ ಪ್ರದೇಶದ ಜಿಲ್ಲೆಗಳು ಜನವರಿ 22 ರಂದು  ಮೂರು ದಿನಗಳ ಕಾಲ ತಮ್ಮ ನಿವಾಸಿಗಳು ನಗರಕ್ಕೆ ಪ್ರಯಾಣಿಸುವುದನ್ನು ನಿಷೇಧಿಸಿವೆ. ಅಯೋಧ್ಯೆಯ ಸುತ್ತಮುತ್ತಲಿನ ಜಿಲ್ಲೆಗಳಾದ ಬಸ್ತಿ, ಗೊಂಡಾ, ಸುಲ್ತಾನ್‌ಪುರ, ಬಾರಾಬಂಕಿ, ಅಂಬೇಡ್ಕರ್ ನಗರ ಮತ್ತು ಅಮೇಥಿ ಜಿಲ್ಲೆಗಳು ತಮ್ಮ ಗಡಿಯಲ್ಲಿ ನಿಯೋಜನೆಗೊಂಡಿರುವ ಭದ್ರತಾ ಪಡೆಗಳಿಗೆ ಅಯೋಧ್ಯೆಯತ್ತ ಯಾರಿಗೂ ತೆರಳಲು ಅವಕಾಶ ನೀಡದಂತೆ ಸೂಚನೆ ನೀಡಿವೆ.

“ಆಹ್ವಾನವಿಲ್ಲದವರಿಗೆ ಅಯೋಧ್ಯೆ ಪ್ರವೇಶಿಸಲು ಅವಕಾಶವಿಲ್ಲ. ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಎರಡು ಮೂರು ದಿನಗಳ ಮೊದಲು ನಾವು ಅಯೋಧ್ಯೆಯಿಂದ ಹೊರಗಿನವರನ್ನು ಸ್ಥಳಾಂತರಿಸಲು ಪ್ರಾರಂಭಿಸುತ್ತೇವೆ” ಎಂದು ಅಯೋಧ್ಯೆಯ ಪೊಲೀಸ್ ಮಹಾನಿರೀಕ್ಷಕ ಪ್ರವೀಣ್ ಕುಮಾರ್ ಹೇಳಿದ್ದಾರೆ. ಆಚರಣೆಗಳು ಜನವರಿ 16 ರಿಂದ ಪ್ರಾರಂಭವಾಗಲಿದ್ದು, ಅಯೋಧ್ಯೆ ಆಡಳಿತವು ಸುಧಾರಿತ ಭದ್ರತೆ ಮತ್ತು ಸಂಚಾರ ನಿರ್ವಹಣಾ ಕ್ರಮಗಳನ್ನು ಒಳಗೊಂಡಿರುವ ಸಮಗ್ರ ಯೋಜನೆಯನ್ನು ಜಾರಿಗೆ ತಂದಿದೆ. ರಾಮಮಂದಿರ

ಇದನ್ನೂ ಓದಿ: ರಾಜ್ಯ ಶಿಕ್ಷಣ ನೀತಿ | ಆಯೋಗಕ್ಕೆ ಸಮೀಕ್ಷಾ ವರದಿ ಸಲ್ಲಿಸಿದ ಎಐಎಸ್‌ಇಸಿ

ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಐಟಿಎಂಎಸ್) ಅನ್ನು ನಗರದಾದ್ಯಂತ ಸಾರ್ವಜನಿಕ ಸಿಸಿಟಿವಿ ಕ್ಯಾಮೆರಾಗಳೊಂದಿಗೆ ಜೋಡಿಸಲಾಗಿದ್ದು, ಜಾಗರೂಕ ಕಣ್ಗಾವಲು ಖಾತ್ರಿಪಡಿಸಲಾಗಿದೆ. ಅಯೋಧ್ಯೆಯ ಹಳದಿ ವಲಯವು ಮುಖವನ್ನು ಗುರುತಿಸುವ ತಂತ್ರಜ್ಞಾನ ಒಳಗೊಂಡಿರುವ ಕೃತಕ ಬುದ್ಧಿಮತ್ತೆ ಆಧಾರಿತ ಕ್ಯಾಮೆರಾಗಳನ್ನು ಹೊಂದಿದ್ದು, ಇದನ್ನು ಐಟಿಎಂಎಸ್ ಮತ್ತು ಕೇಂದ್ರೀಯ ನಿಯಂತ್ರಣ ಕೊಠಡಿಯಿಂದ ಮೇಲ್ವಿಚಾರಣೆ ಮಾಡಲಾಗುತ್ತದೆ. ಇದು ಪ್ರಮುಖ ಕ್ಷೇತ್ರಗಳಲ್ಲಿ ಒಟ್ಟಾರೆ ಮೇಲ್ವಿಚಾರಣೆ ಮತ್ತು ಭದ್ರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ರಾಮಮಂದಿರ

ಬಹು ನಿರೀಕ್ಷಿತ ಸಮಾರಂಭದ ದೃಷ್ಟಿಯಿಂದ ಅಯೋಧ್ಯೆಯ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ಸುಮಾರು 10,000 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ (ಡಿಜಿ) (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಹೇಳಿದ್ದಾರೆ. ಜನವರಿ 22 ರಂದು ಪ್ರಧಾನಿಯವರ ಭೇಟಿಯ ಅಂತಿಮ ಕಾರ್ಯಕ್ರಮವನ್ನು ಪಡೆದ ನಂತರ ಇನ್ನೆರಡು ದಿನಗಳಲ್ಲಿ ಅಂತಿಮ ಭದ್ರತಾ ಯೋಜನೆ, ಭದ್ರತೆ ನಿಯೋಜನೆ ಮತ್ತು ಸಂಚಾರ ಬದಲಾವಣೆಗಳನ್ನು ಅಂತಿಮಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ. ರಾಮಮಂದಿರ

“ಅಗತ್ಯವನ್ನು ವಿಶ್ಲೇಷಿಸಿದ ನಂತರ ಭಾರೀ ವಾಹನಗಳ ಸಂಚಾರ ಮಾರ್ಗವನ್ನು ಜನವರಿ 17 ಅಥವಾ 18 ಕ್ಕೆ ಜಾರಿಗೊಳಿಸಲಾಗುವುದು. ಅಯೋಧ್ಯೆಯಲ್ಲಿ ಟ್ರಾಫಿಕ್ ದಟ್ಟಣೆಯನ್ನು ತಪ್ಪಿಸಲು ಲಕ್ನೋ, ಕಾನ್ಪುರ ಮತ್ತು ಇತರ ಜಿಲ್ಲೆಗಳಿಂದ ಭಾರೀ ವಾಹನಗಳನ್ನು ಬೇರೆ ಮಾರ್ಗಗಳಿಗೆ ತಿರುಗಿಸಲಾಗುವುದು” ಎಂದು ಅವರು ಒತ್ತಿ ಹೇಳಿದ್ದಾರೆ. ಭದ್ರತೆ ಮತ್ತು ಸಂಚಾರ ವ್ಯವಸ್ಥೆಗೆ ಅಂತಿಮ ರೂಪ ನೀಡಲು ಸಂಬಂಧಿಸಿದ ಪೊಲೀಸ್ ಅಧಿಕಾರಿಗಳು ಅಯೋಧ್ಯೆಗೆ ಭೇಟಿ ನೀಡಿ ಮೊಕ್ಕಾಂ ಹೂಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅಯೋಧ್ಯಾ ಧಾಮ್ ರೈಲು ನಿಲ್ದಾಣ ಮತ್ತು ವಿವಿಧ ಸ್ಥಳಗಳಿಂದ ಅಯೋಧ್ಯೆಗೆ ಆಗಮಿಸುವ ರೈಲುಗಳಲ್ಲಿ ಹೆಚ್ಚಿನ ಭದ್ರತೆಗಾಗಿ ಜಿಆರ್‌ಪಿಗೆ ಈಗಾಗಲೇ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಒದಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೊ ನೋಡಿ: ‘ಸೌಹಾರ್ದತೆಗೆ ಸಮಾನತೆ ಅತ್ಯಗತ್ಯ’ – ಪ್ರೊ. ಬರಗೂರು Janashakthi Media

Donate Janashakthi Media

Leave a Reply

Your email address will not be published. Required fields are marked *