ಬೆಂಗಳೂರು: ಸಾರಿಗೆ ನೌಕರರು ಕೇಳುತ್ತಿರುವ ಹಿಂಬಾಕಿ ಮತ್ತು ವೇತನ ಪರಿಷ್ಕರಣೆ ಬೇಡಿಕೆಯನ್ನು ಈಡೇರಿಸುವುದು ಸದ್ಯದ ಸ್ಥಿತಿಯಲ್ಲಿ ಅಸಾಧ್ಯ ಎಂದು ಹೈಕೋರ್ಟಿನಲ್ಲಿ ಸರಕಾರ ವಾದಿಸಿತು.
ಆಗಸ್ಟ್ 4ರಂದು ಅರ್ಜಿಯ ತುರ್ತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್.ಮುದ್ಗಲ್ ಮತ್ತು ನ್ಯಾಯಮೂರ್ತಿ ಎಂ.ಜೆ.ಎಸ್.ಕಮಲ್ ರಿದ್ದ ಹೈಕೋರ್ಟಿನ ವಿಭಾಗೀಯ ಪೀಠದ ಮುಂದೆ ವಾದ ಮಂಡಿಸಿದ ಸಾರಿಗೆ ಇಲಾಖೆ ಪರ ವಕೀಲೆ ಎಚ್.ಆರ್.ರೇಣುಕಾ, ”ಸಾರಿಗೆ ನೌಕರರ ವೇತನ ಪರಿಷ್ಕರಣೆಯನ್ನು 4 ವರ್ಷಕ್ಕೊಮ್ಮೆ ನಡೆಸಲಾಗುತ್ತದೆ. ಕೊರೊನಾ ಕಾರಣದಿಂದ ಈವರೆಗೆ ವೇತನ ಪರಿಷ್ಕರಣೆ ನಡೆದಿಲ್ಲ. ಕೋವಿಡ್ ಕಾಲದಲ್ಲಿ ವಜಾಗೊಂಡಿದ್ದ ಬಹುತೇಕ ನೌಕರರನ್ನು ಮರಳಿ ಸೇವೆಗೆ ಪಡೆಯಲಾಗಿದೆ. ಈಗ ಅವರು ಹಿಂಬಾಕಿ ಮತ್ತು ವೇತನ ಪರಿಷ್ಕರಣೆ ಕೋರುತ್ತಿದ್ದಾರೆ. ಸದ್ಯದ ಸ್ಥಿತಿಯಲ್ಲಿಇದು ಅಸಾಧ್ಯ. ಈ ನಿಟ್ಟಿನಲ್ಲಿ ಸಂಧಾನ ಸಭೆ ನಿರಂತರವಾಗಿ ನಡೆಯುತ್ತಿರುವ ನಡುವೆಯೇ ಮುಷ್ಕರಕ್ಕೆ ಕರೆ ನೀಡಲಾಗಿದೆ,” ಎಂದು ವಿವರಿಸಿದರು.
ಸಾರಿಗೆ ಸಿಬ್ಬಂದಿ ಸಭೆ
”ಕಾರ್ಮಿಕ ಸಂಧಾನ ಅಧಿಕಾರಿ ಸಮ್ಮುಖದಲ್ಲಿ ಸಂಧಾನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ನಡುವೆ ಸಾರಿಗೆ ಇಲಾಖೆ ಕಾರ್ಯದರ್ಶಿ, ಸಚಿವರು ಸಭೆ ನಡೆಸಿದ್ದಾರೆ. ಸಿಎಂ ಸಮಕ್ಷಮದಲ್ಲಿ ಸಾರಿಗೆ ಸಿಬ್ಬಂದಿ ಸಭೆ ನಡೆದಿದೆ. ಕಾರ್ಮಿಕ ನ್ಯಾಯ ಮಂಡಳಿಯಲ್ಲಿಆ.7ರಂದು ವಿಚಾರಣೆ ನಿಗದಿಯಾಗಿದೆ. ಹಾಗಾಗಿ ಕನಿಷ್ಠ ಎರಡು ದಿನದ ಮಟ್ಟಿಗೆ ವಿಚಾರಣೆ ಮುಂದೂಡಬೇಕು,” ಎಂದು ಕೋರಿದರು.
ಇದನ್ನೂ ಓದಿ: ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಆಹ್ವಾನ
ಅರ್ಜಿದಾರರ ಪರ ವಾದಿಸಿದ ವಕೀಲೆ ದೀಕ್ಷಾ ಅಮೃತೇಶ್, ”ರಾಜ್ಯ ಸರಕಾರವು ಅಗತ್ಯ ಸೇವೆಗಳ ನಿರ್ವಹಣಾ ಕಾಯಿದೆ-2013(ಎಸ್ಮಾ) ಅಡಿ ಜು.14ರಿಂದ ಅನ್ವಯಿಸುವಂತೆ ಮುಷ್ಕರಕ್ಕೆ ನಿಷೇಧ ವಿಧಿಸಿದೆ. ಆದರೆ ಸಾರಿಗೆ ನೌಕರರು ಮಂಗಳವಾರದಿಂದಲೇ ಮುಷ್ಕರಕ್ಕೆ ನಿರ್ಧರಿಸಿದ್ದಾರೆ. ಇದರಿಂದ ಜನ ಸಾಮಾನ್ಯರಿಗೆ ಭಾರಿ ಸಮಸ್ಯೆಯಾಗಲಿದೆ. ಸಾರಿಗೆ ನೌಕರರ ಮತ್ತು ಸಕ್ಷಮ ಪ್ರಾಧಿಕಾರದ ನಡುವೆ ಒಮ್ಮತ ಮೂಡಿಸಲು ಉನ್ನತ ಮಟ್ಟದ ಸಭೆ ನಡೆಸಲು ಆದೇಶಿಸಬೇಕು. ಮುಷ್ಕರ ನಡೆಸಲು ಸಿಬ್ಬಂದಿಗೆ ಅವಕಾಶ ನೀಡಬಾರದು,” ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ”ಸರಕಾರ ಮತ್ತು ಸಾರಿಗೆ ಇಲಾಖೆ ನಡುವೆ ಹೊಂದಾಣಿಕೆ ಇಲ್ಲವೇ ಎಂದು ಮೌಖಿಕವಾಗಿ ಪ್ರಶ್ನಿಸಿತು. ಅಂತಿಮವಾಗಿ, ಮುಖ್ಯಮಂತ್ರಿ ಮತ್ತು ಸಾರಿಗೆ ಸಿಬ್ಬಂದಿ ಮಧ್ಯೆ ನಡೆದಿರುವ ಸಭೆಯ ನಿರ್ಧಾರಗಳನ್ನು ಸಲ್ಲಿಸಬೇಕು. ಸಾರ್ವಜನಿಕರಿಗೆ ಸಮಸ್ಯೆಯಾಗುವುದರಿಂದ ಒಂದು ದಿನದ ಮಟ್ಟಿಗೆ ಮುಷ್ಕರವನ್ನು ಪ್ರತಿಭಟನಾಕಾರರು ಮುಂದೂಡಬೇಕು,” ಎಂದು ನಿರ್ದೇಶಿಸಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.
ನೌಕರರ ವಿರುದ್ಧ ಶಿಸ್ತು ಕ್ರಮಕ್ಕೆ ಮನವಿ
ಅರ್ಜಿದಾರರು, ಸಾರಿಗೆ ನೌಕರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಸಾರಿಗೆ ನೌಕರರ ಸಂಘಟನೆಗಳೊಂದಿಗೆ ಚರ್ಚೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಬೇಕು. ಮುಷ್ಕರಕ್ಕೆ ಕರೆ ನೀಡಿರುವ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳು ಹಾಗೂ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು.
ಅಲ್ಲದೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಪ್ರಯಾಣಿಕರ ಹಕ್ಕು ರಕ್ಷಣೆ ಮಾಡಲು ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯಿದೆ ಮತ್ತು ಕೈಗಾರಿಕಾ ವಿವಾದ ಕಾಯಿದೆಗಳಡಿಯಲ್ಲಿಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಘಿಸಿ, ಮುಷ್ಕರ ಮುಂದುವರಿಯುವುದಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಇದನ್ನೂ ನೋಡಿ: ಮಹೇಶ ಜೋಶಿಯನ್ನು ಮನೆಗೆ ಕಳುಹಿಸಿ : ಕನ್ನಡ ಸಾಹಿತ್ಯ ಪರಿಷತ್ ಉಳಿಸಿ Janashakthi Media
