ಪಾಟ್ನಾ : ಇಂದು ಮುಂಜಾನೆಯಿಂದಲೇ ಬಿಹಾರದ ಪ್ರತಿಪಕ್ಷಗಳಾದ ರಾಷ್ಟ್ರೀಯ ಜನತಾದಳ(ಆರ್ಜೆಡಿ), ಕಾಂಗ್ರೆಸ್ ಮತ್ತು ಎಡಪಕ್ಷಗಳ ನೇತೃತ್ವದಲ್ಲಿ ಬಿಹಾರದ ವಿವಿಧ ಜಿಲ್ಲೆಗಳಲ್ಲಿ ತೀವ್ರಸ್ವರೂಪದ ಪ್ರತಿಭಟನೆಗಳನ್ನು ನಡೆಸಿದರು.
ಕೃಷಿ ಕಾನೂನುಗಳ ತಿದ್ದುಪಡಿ ವಿರೋಧಿಸಿ, ಹಣದುಬ್ಬರ, ಬೆಲೆ ಏರಿಕೆ, ಅಪರಾಧ ಕೃತ್ಯಗಳ ಹೆಚ್ಚಳ ಮತ್ತು ಬಿಹಾರದ ಪ್ರತಿಪಕ್ಷದ ಕೆಲವು ಶಾಸಕರ ಮೇಲೆ ಆಡಳಿತ ಪಕ್ಷವು ನಡೆಸುತ್ತಿರುವ ಅನುಚಿತ ನಡೆಯನ್ನು ವಿರೋಧಿಸಿ ಬಿಹಾರದಲ್ಲಿ ಬಂದ್ಗೆ ಕರೆ ನೀಡಿದ್ದರು.
ಇದನ್ನು ಓದಿ : ಕೃಷಿ ಕಾಯ್ದೆಗಳ ಶವಯಾತ್ರೆ ಪ್ರತಿಭಟನೆಗೆ ತಡೆ ಸಿಪಿಐ(ಎಂ) ಖಂಡನೆ
ಆರ್ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳು ಜಂಟಿಯಾಗಿ ಹೆದ್ದಾರಿಗಳಲ್ಲಿ ವಾಹನಗಳನ್ನು ತಡೆದರು, ರೈಲುಗಳ ಸಂಚಾರವನ್ನು ಸ್ಥಗಿತಗೊಳ್ಳುವಂತೆ ತೀವ್ರವಾದ ಪ್ರತಿಭಟನಾ ಧರಣಿಯನ್ನು ನಡೆಸಿದರು. ಅಲ್ಲದೆ, ಹೆದ್ದಾರಿಯ ರಸ್ತೆಗಳಲ್ಲಿ ಕೆಲವೆಡೆ ವಾಹನಗಳ ಟೈರ್ಗಳನ್ನು ಪಂಕ್ಚರ್ ಮಾಡಿದರು ಮತ್ತು ಟೈರ್ಗಳನ್ನು ಸುಡುವ ಮೂಲಕ ಹೋರಾಟವನ್ನು ನಡೆಸಿದರು.
ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರದ ಸಿಎಂ ನಿತೀಶ್ ಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿವಿಧ ಜಿಲ್ಲೆಗಳಲ್ಲಿ ಪೂರ್ವ ಮಧ್ಯದ ರೈಲು ಸೇವೆಗಳನ್ನು ಅಸ್ತವ್ಯಸ್ತಗೊಳಿಸಿದರು.
ಇದನ್ನು ಓದಿ : ಭಾರತ ಬಂದ್ : 32 ಸ್ಥಳಗಳಲ್ಲಿ ಜಂಟಿ ಹೋರಾಟ, ನಾಲ್ಕು ಶತಾಬ್ದಿ ರೈಲುಗಳು ರದ್ದು
ಆರ್ಜೆಡಿ ಮುಖಂಡ ಹಾಗೂ ಪ್ರತಿಪಕ್ಷದ ನಾಯಕ ತೇಜಶ್ವಿ ಯಾದವ್ ಅವರು ಕೇಂದ್ರದ ಹೊಸ ಕೃಷಿ ಮಸೂದೆಗಳು ರೈತ ವಿರೋಧಿಯಾಗಿದೆ ಮತ್ತು ಎನ್ಡಿಎ ಸರ್ಕಾರ ಬಡ ವಿರೋಧಿ ಸರಕಾರವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಪಾಟ್ನಾದಲ್ಲಿ ಆರ್ಜೆಡಿ ಬೆಂಬಲಿಗರು ರಸ್ತೆರಸ್ತೆಗಳಲ್ಲಿ ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು. ಪಕ್ಷದ ರಾಜ್ಯ ನಾಯಕರು ವಿವಿಧ ಜಿಲ್ಲೆಗಳಲ್ಲಿ ನಡೆದ ಧರಣಿಯಲ್ಲಿ ಭಾಗವಹಿಸಿದ್ದರು.
ರಾಜ್ಯದಲ್ಲಿ ಮುಂಜಾಗ್ರತ ಕ್ರಮವಾಗಿ ಸರಕಾರ ಹೆಚ್ಚಿನ ಭದ್ರತೆಯನ್ನು ನಿಯೋಜಿಸಿದ್ದರು. ಇದುವರೆಗೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.