ಗಣತಂತ್ರ ಪರೇಡ್ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ
ನವದೆಹಲಿ, ಜನವರಿ 19: ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ರ‍್ಯಾಲಿಗೆ ಸಂಬಂಧಿಸಿದಂತೆ ನಿರ್ದೇಶನ ಕೋರಿ ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ಪರಿಶೀಲಿಸಿದೆ.
“ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಪೊಲೀಸರದ್ದು. ಹೀಗಾಗಿ ರೈತರ ಟ್ರ್ಯಾಕ್ಟರ್ ರ‍್ಯಾಲಿಗೆ ಅವಕಾಶ ನೀಡಬೇಕೋ ಬೇಡವೋ ಎಂಬುದನ್ನು ಪೊಲೀಸರು ಮೊದಲು ನಿರ್ಧರಿಸಬೇಕಿದೆ. ಅವರೇ ಈ ವಿಷಯದಲ್ಲಿ ಮೊದಲು ನಿರ್ಧಾರ ತೆಗೆದುಕೊಳ್ಳಬೇಕಿರುವವರು” ಎಂದು ಹೇಳಿದೆ.
ಸೋಮವಾರ ವಿಚಾರಣೆ ನಡೆಸಿದ ಎಸ್.ಎ ಬೊಬ್ಡೆ ಅವರನ್ನೊಳಗೊಂಡ ಪೀಠವು, “ಪೊಲೀಸರು ಕಾನೂನಿನಡಿಯಲ್ಲಿ ಎಲ್ಲಾ ಅಧಿಕಾರ ಬಳಸಿಕೊಳ್ಳಲು ಅವಕಾಶವಿದೆ” ಎಂದು ತಿಳಿಸಿದ್ದು, ಜನವರಿ 20ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಕಳೆದ ವಾರ ಕೇಂದ್ರದ ಮೂರು ವಿವಾದಿತ ಕೃಷಿ ಕಾಯ್ದೆಗಳಿಗೆ ತಡೆಯೊಡ್ಡಿದ್ದ ಸುಪ್ರೀಂ ಕೋರ್ಟ್, ನಾಲ್ಕು ಸದಸ್ಯರನ್ನೊಳಗೊಂಡ ಸಮಿತಿ ರಚಿಸಿ ರೈತರು ಹಾಗೂ ಕೇಂದ್ರದ ನಡುವಿನ ಬಿಕ್ಕಟ್ಟನ್ನು ಶಮನಗೊಳಿಸಲು ಮುಂದಾಗಿತ್ತು. ಆದರೆ ಈ ಸಮಿತಿಯ ಯಾವುದೇ ಸಭೆಗಳಿಗೂ ಹೋಗುವುದಿಲ್ಲ ಎಂದು ರೈತ ಸಂಘಟನೆಗಳು ಈಗಾಗಲೇ ನಿರ್ಧಾರವನ್ನು ಮಾಡಿವೆ.
ಕೇಂದ್ರ ಸರಕಾರ ಕೋರ್ಟ್, ಹಾಗೂ ಪೊಲೀಸ್ ಮೂಲಕ ರೈತರ ಹೋರಾಟಕ್ಕೆ ತಡೆ ಒಡ್ಡುವ ಪ್ರಯತ್ನ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಚಳುವಳಿ ತಡೆಯಲು ಸಾಧ್ಯವಿಲ್ಲ. ಕಾಯ್ದೆ ವಾಪಸ್ಸಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಗಣರಾಜ್ಯೋತ್ಸವದ ಟ್ರಾಕ್ಟರ್ ಪರೇಡ ನ್ನು ಶಾಂತಿಯುತವಾಗಿ ನಡೆಸುತ್ತೇವೆ ಎಂದು AIKS ನ ಅಖಿಲ ಭಾರತ ಅಧ್ಯಕ್ಷರಾದ ಅಶೋಕ ಧವಳೆ ಸ್ಪಷ್ಟಪಡಿಸಿದ್ದಾರೆ.