ಜನಗಣರಾಜ್ಯೋತ್ಸವದ ಸಂದೇಶಕ್ಕೆ ಕಿವಿಗೊಡೋಣ

ಟ್ರಾಕ್ಟರ್ ಪೆರೇಡ್‍ಗೆ ದೆಹಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಅನುಮತಿ ನೀಡಿದೆ.  ರೈತ ಸಮುದಾಯ ಭಾರತದ ತ್ರಿವರ್ಣ ಧ್ವಜವನ್ನು ಹೊತ್ತು ಲಕ್ಷ ಲಕ್ಷ ಸಂಖ್ಯೆಯಲ್ಲಿ ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ದನಿ ಎತ್ತುವ ಒಂದು ಅದ್ಭುತ ಪ್ರದರ್ಶನವನ್ನು ನೋಡಲಿದ್ದಾರೆ.  ಈ ಪ್ರದರ್ಶನ ಮನರಂಜನೆಯಲ್ಲ, ದೇಶಭಕ್ತಿಯ ಉನ್ಮಾದದಲ್ಲಿ ಕುಣಿದು ಕುಪ್ಪಳಿಸುವ ಪ್ರಹಸನವಲ್ಲ, ಸೇನಾಬಲ ಪ್ರಭುತ್ವದ ಸಾಮರ್ಥ್ಯ ಪ್ರದರ್ಶಿಸುವ ಮೆರವಣಿಗೆಯಲ್ಲ. ಇದು ಪ್ರಜಾತಂತ್ರ ವ್ಯವಸ್ಥೆಯಲ್ಲಿ, ಗಣತಂತ್ರದಲ್ಲಿ ಸಾರ್ವಭೌಮ ಪ್ರಜೆಗಳಿಗೆ ಇರುವ ಶಕ್ತಿ ಪ್ರದರ್ಶನ. ಇದು ಅಭೂತಪೂರ್ವ, ಚಾರಿತ್ರಿಕ ಮತ್ತು ಭವಿಷ್ಯದ ದೃಷ್ಟಿಯಿಂದ ಮಹತ್ತರವಾದ ಒಂದು ಘಳಿಗೆ. ಈ ಶಕ್ತಿ ಪ್ರದರ್ಶನದ ಹಿಂದೆ ದಮನಿಸುವ ದನಿ ಇಲ್ಲ, ಕೂಡಿ ಬಾಳುವ ದನಿ ಇದೆ. ವಿಧ್ವಂಸಕ ಛಾಯೆ ಇಲ್ಲ ಸೌಹಾರ್ದತೆಯ ಧ್ವನಿ ಇದೆ. ಗುಂಡಿಟ್ಟು ಕೊಲ್ಲುವ ಮನಸುಗಳಿಲ್ಲ, ಪರಸ್ಪರ ಅಪ್ಪಿಕೊಂಡು ಬದುಕುವ ಪ್ರೀತಿ ಇದೆ. ಅನ್ಯರ ಚಿಂತನೆ ಇಲ್ಲ ಐಕ್ಯತೆಯ ಭಾವ ಇದೆ. ನಾವು-ಅವರು ಎನ್ನುವ ಭೇದ ಇಲ್ಲ. ನಾವು ಎನ್ನುವ ಉದಾತ್ತ ಭಾವನೆ ಮಾತ್ರ ಇದೆ. ಇದೇ ನಿಜವಾದ ಗಣತಂತ್ರ, ನೈಜ ಪ್ರಜಾತಂತ್ರ.

– ನಾ ದಿವಾಕರ

ಕಳೆದ 60 ದಿನಗಳಿಂದ ದೆಹಲಿಯ ಸುತ್ತಲೂ ಬೀಡುಬಿಟ್ಟಿರುವ ದೇಶದ ರೈತ ಸಮುದಾಯದ ದಿಟ್ಟ ಹೋರಾಟಕ್ಕೆ ಕೊನೆಗೂ ಆಡಳಿತ ವ್ಯವಸ್ಥೆ ಮಣಿದಿದೆ. ಗಣರಾಜ್ಯೋತ್ಸವ ದಿನದಂದು ರೈತರು ರಾಜಧಾನಿ ದೆಹಲಿಯಲ್ಲಿ ಟ್ರಾಕ್ಟರ್ ಮೆರವಣಿಗೆಯ ಮೂಲಕ ಜನಗಣರಾಜ್ಯೋತ್ಸವ ಆಚರಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಇಡೀ ದೇಶದಲ್ಲಿ ಹೋರಾಟದ ಅಲೆಗಳನ್ನು ಸೃಷ್ಟಿಸಿದೆ. ಟ್ರಾಕ್ಟರ್ ಪೆರೇಡ್‍ಗೆ ಅನುಮತಿ ನೀಡುವುದಿಲ್ಲ ಎಂಬ ಹಠಮಾರಿ ಧೋರಣೆಯಿಂದ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸ್ ಇಲಾಖೆ ಹಿಂದೆ ಸರಿದಿದ್ದರೆ ಅದು ಔದಾರ್ಯವೇನೂ ಅಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಾಗ್ರಹಕ್ಕೆ ಎಂತಹುದೇ ಸರ್ಕಾರವಾದರೂ ಮಣಿಯಲೇಬೇಕು ಎನ್ನುವುದನ್ನು ಕೇಂದ್ರ ಸರ್ಕಾರ ಅರ್ಥಮಾಡಿಕೊಳ್ಳಬೇಕಿದೆ. ರೈತರ ಟ್ರಾಕ್ಟರ್ ಪೆರೇಡ್‍ನಲ್ಲಿ ಎರಡು ಲಕ್ಷ ಟ್ರಾಕ್ಟರ್‍ಗಳ ಮೆರವಣಿಗೆಯೇ ರಾಷ್ಟ್ರ ಮಟ್ಟದಲ್ಲಿ ಸಂಚಲನ ಮೂಡಿಸಲಿದೆ. ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿ ಇದೇ ರೀತಿಯ ಕಾರ್ಯಕ್ರಮ ನಡೆಯಲಿದೆ.

ಕರ್ನಾಟಕ ಸರ್ಕಾರವೂ ಸೇರಿದಂತೆ ಬಿಜೆಪಿ ಆಡಳಿತದ ಎಲ್ಲ ರಾಜ್ಯಗಳಲ್ಲಿ ಈ ಜನಗಣರಾಜ್ಯೋತ್ಸವಕ್ಕೆ ಅಡ್ಡಿ ಆತಂಕ ಉಂಟುಮಾಡುವ ಪ್ರಯತ್ನಗಳು ನಡೆದಿವೆ. ಉತ್ತರಪ್ರದೇಶದ ಪೆಟ್ರೋಲ್ ಬಂಕ್ ಗಳಲ್ಲಿ ಟ್ರಾಕ್ಟರ್ ಗಳಿಗೆ ಪೆಟ್ರೋಲ್/ಡೀಸೆಲ್ ನೀಡುವುದಿಲ್ಲ ಎಂಬ ಬೋರ್ಡ್‍ಗಳನ್ನು ನೇತುಹಾಕಲಾಗಿದೆ. ಕರ್ನಾಟಕದ ಬೆಳಗಾವಿಯಲ್ಲಿ ಬೆಂಗಳೂರಿಗೆ ಹೊರಟಿದ್ದ ರೈತರ ಟ್ರಾಕ್ಟರ್ಗಳನ್ನು ವಶಪಡಿಸಿಕೊಳ್ಳುವ ಬೆದರಿಕೆ ಹಾಕಲಾಗಿದೆ. ದೆಹಲಿಯ ಸುತ್ತ ನೆರೆದಿರುವ ರೈತರ ಮುಷ್ಕರವನ್ನು ಭಂಗಗೊಳಿಸಲು ಸಾಕಷ್ಟು ವಿಧ್ವಂಸಕ ಪ್ರಯತ್ನಗಳು ನಡೆದಿವೆ. ಲಕ್ಷಾಂತರ ರೈತರು ಸೇರಿರುವ ಕಡೆ ಪ್ರಕ್ಷುಬ್ಧ ವಾತಾವರಣ ಉಂಟುಮಾಡಲು, ಗಲಭೆ ಸೃಷ್ಟಿಸಲು ಸಂಚು ನಡೆಸಿದ್ದನ್ನು ರೈತರೇ ಕಂಡುಹಿಡಿದು, ಈ ಕೃತ್ಯಕ್ಕೆ ಮುಂದಾಗಿದ್ದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇಂತಹ ಮೂರು ನಾಲ್ಕು ಘಟನೆಗಳು ಈಗಾಗಲೇ ನಡೆದಿವೆ.

ದೆಹಲಿಯಲ್ಲಿ ನೆರೆದಿರುವುದು ರೈತರೇ ಅಲ್ಲ ಎಂದಿದ್ದಾಯಿತು, ದಲ್ಲಾಳಿಗಳು , ಕಾಂಗ್ರೆಸ್ ಏಜೆಂಟರು ಎಂದು ಹೀಗಳೆದಿದ್ದಾಯಿತು. ಇದು ವಿರೋಧ ಪಕ್ಷಗಳ ಕುಮ್ಮಕ್ಕು, ಪಿತೂರಿ ಎಂದು ಆರೋಪ ಹೊರಿಸಿದ್ದಾಯಿತು. ದೆಹಲಿಯ ಸುತ್ತ ಐದು ಗಡಿಗಳಲ್ಲಿ ರಸ್ತೆ ಕಂದಕಗಳನ್ನು ತೋಡಿ ಮಾರ್ಗ ಬಂದ್ ಮಾಡಲಾಯಿತು. ಬೃಹತ್ ಗಾತ್ರದ ಸಿಮೆಂಟ್ ಬ್ಯಾರಿಕೇಡ್, ಮುಳ್ಳು ತಂತಿ, ಜೆಸಿಬಿ ಹೀಗೆ ಕೃತಕ ಗೋಡೆಗಳನ್ನು ನಿರ್ಮಿಸುವ ಮೂಲಕ ರೈತರು ರಾಜಧಾನಿಗೆ ಪ್ರವೇಶಿಸದಂತೆ ತಡೆಹಿಡಿಯಲಾಯಿತು. ರೈತರ ನಡುವೆ ಖಲಿಸ್ತಾನಿಗಳಿದ್ದಾರೆ, ಭಯೋತ್ಪಾದಕರಿದ್ದಾರೆ, ನಗರ ನಕ್ಸಲರಿದ್ದಾರೆ, ತುಕಡೆ ತುಕಡೆ ಗ್ಯಾಂಗ್ ಇದೆ, ಇಸ್ಲಾಮಿಕ್ ಉಗ್ರರಿದ್ದಾರೆ, ಹೀಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಲೇ ದೇಶದ ಜನಸಾಮಾನ್ಯರ ದಿಕ್ಕು ತಪ್ಪಿಸಲು ಕೇಂದ್ರ ಸರ್ಕಾರ, ಗೃಹ ಸಚಿವಾಲಯ, ಆಡಳಿತಾರೂಢ ಬಿಜೆಪಿ ಮತ್ತು ಸಂಘಪರಿವಾರ ಮತ್ತು ಅವರ ಬಾಲಂಗೋಚಿ ಸಂಘಟನೆಗಳು, ಚಿಂತಕರು ಹುಯಿಲೆಬ್ಬಿಸಿದ್ದೂ ಆಯಿತು.

ಆದರೆ ಈ ಎಲ್ಲ ಆರೋಪಗಳನ್ನೂ ತಮ್ಮ ಶಾಂತಿಯುತ, ಪ್ರಜಾಸತ್ತಾತ್ಮಕ ಹೋರಾಟದ ಮೂಲಕ, ತಮ್ಮ ದಿಟ್ಟ ಛಲ, ಬದ್ಧತೆ ಮತ್ತು ಶಿಸ್ತುಬದ್ಧ ನಡವಳಿಕೆಯ ಮೂಲಕ ರೈತ ಸಮುದಾಯ ಒಮ್ಮೆಲೆ ತೊಡೆದುಹಾಕಿದೆ. ಮುಷ್ಕರವನ್ನು ಭಂಗಗೊಳಿಸಲು ನ್ಯಾಯಾಂಗವನ್ನೂ ಬಳಸಿಕೊಂಡ ಕೇಂದ್ರ ಸರ್ಕಾರ ,ನ್ಯಾಯಾಲಯದ ಮೂಲಕ ಕೃಷಿ ಮಸೂದೆಗಳ ಬಗ್ಗೆ ಚರ್ಚಿಸಲು ಏಕಪಕ್ಷೀಯ ಸಮಿತಿಯನ್ನು ರಚಿಸಲೂ ಮುಂದಾಗಿತ್ತು. ಮಹಿಳೆಯರೇಕೆ ಮುಷ್ಕರದಲ್ಲಿದ್ದಾರೆ ಎಂದು ಕೇಳುವ ಮೂಲಕ ದೇಶದ ಸರ್ವೋಚ್ಚ ನ್ಯಾಯಾಲಯ ಹೋರಾಟವನ್ನು ಭಂಗಗೊಳಿಸುವ ಮತ್ತೊಂದು ಮಾರ್ಗವನ್ನು ಅನುಸರಿಸಿತ್ತು. ಒಂದೂವರೆ ವರ್ಷದ ಕಾಲ ಮಸೂದೆಗಳನ್ನು ಅಮಾನತಿನಲ್ಲಿಡುವ ಕೇಂದ್ರ ಸರ್ಕಾರದ ಪ್ರಸ್ತಾವವನ್ನೂ ರೈತ ಸಂಘಟನೆಗಳು ತಿರಸ್ಕರಿಸಿದವು.

ಭಾರತದ ರೈತರ ಪಾಲಿಗೆ ಮತ್ತು ಜನಸಾಮಾನ್ಯರ ಪಾಲಿಗೆ ಮರಣಶಾಸನವಾಗಿರುವ ಮೂರು ಕೃಷಿ ಮಸೂದೆಗಳು ನೇಣುಗಂಬದಂತೆ ನಮ್ಮೆದುರು ನಿಂತಿವೆ. “ಇಂದು ಗಲ್ಲಿಗೇರಿಸುವ ಬದಲು ಇನ್ನು ಎರಡು ವರ್ಷದ ನಂತರ ಗಲ್ಲಿಗೇರಿಸುತ್ತೇವೆ” (ಖ್ಯಾತ ಚಿಂತಕ ಶಿವಸುಂದರ್ ಅವರ ಮಾತುಗಳು) ಎನ್ನುವ ಕೇಂದ್ರ ಸರ್ಕಾರದ ವಿಕೃತ ಧೋರಣೆಗೆ ರೈತ ಸಂಘಟನೆಗಳು ಜಗ್ಗದೆ ಇರುವುದೇ ಜನಪರ ಹೋರಾಟಕ್ಕೆ ಸಂದ ದಿಗ್ವಿಜಯ. ಈ ಹೋರಾಟ ದೇಶದ ಶ್ರಮಜೀವಿಗಳಿಗೆ, ಕಾರ್ಮಿಕರಿಗೆ ಮತ್ತು ಶೋಷಿತ ಜನಸಮುದಾಯಗಳಿಗೆ ಹೊಸ ಶಕ್ತಿ ನೀಡುವ ಒಂದು ಜನಾಂದೋಲನವಾಗಿ ರೂಪುಗೊಂಡಿದೆ. ಜನಗಣರಾಜ್ಯೋತ್ಸವ ಮತ್ತು ಟ್ರಾಕ್ಟರ್ ಪೆರೇಡ್‍ಗೆ ದೇಶಾದ್ಯಂತ ದೊರೆಯುತ್ತಿರುವ ಜನಬೆಂಬಲವೇ ಇದಕ್ಕೆ ಸಾಕ್ಷಿಯಾಗಿದೆ.

ಇಷ್ಟಾಗಿಯೂ ಈ ಮಸೂದೆಗಳು ಜನಪರವಾಗಿವೆ, ಇದನ್ನು ವಿರೋಧಿಸುವವರು ದೇಶದ್ರೋಹಿಗಳು ಎಂದು ವಾದಿಸುವ ಒಂದು ವರ್ಗ ನಮ್ಮ ನಡುವೆ ಇರುವುದು ದುರಂತ. ಒಬ್ಬ ವ್ಯಕ್ತಿಯ ಸುತ್ತ ಪ್ರಭಾವಳಿಯನ್ನು ಸೃಷ್ಟಿಸುವುದು, ವ್ಯಕ್ತಿ ಆರಾಧನೆಯನ್ನು ಪೋಷಿಸುವುದು ಮತ್ತು ಅಂಧ ಅನುಸರಣೆ ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗುತ್ತದೆ ಎಂದು ಡಾ ಬಿ ಆರ್ ಅಂಬೇಡ್ಕರ್ ಹೇಳಿದ್ದುದನ್ನು ಇಲ್ಲಿ ಸ್ಮರಿಸಬೇಕಾಗುತ್ತದೆ. ದೆಹಲಿಯ ಸುತ್ತ ನೆರೆದಿರುವ ಮುಷ್ಕರ ನಿರತರು ರೈತರೇ ಅಲ್ಲ ದಲ್ಲಾಳಿಗಳು ಎಂದು ವಾದಿಸುವ ಅಪ್ರಬುದ್ಧ ಸುಶಿಕ್ಷಿತರಿಗೆ, ಹಿತವಲಯದ ವಂದಿಮಾಗಧರಿಗೆ ಈ 26ರಂದು ನಡೆಯುವ ಪರ್ಯಾಯ ಗಣರಾಜ್ಯೋತ್ಸವ ಅಥವಾ ಜನಗಣರಾಜ್ಯೋತ್ಸವ ತಕ್ಕ ಉತ್ತರ ನೀಡಲಿದೆ.

ಇಂದು ಈ ‘ ದಲ್ಲಾಳಿಗಳಿಗೇ ’ ಸುಪ್ರೀಂ ಕೋರ್ಟ್ ಮನ್ನಣೆ ನೀಡಿದೆ. ಈ ‘ ದಲ್ಲಾಳಿಗಳ ’ ಆಗ್ರಹಗಳಿಗೆ ಕೇಂದ್ರ ಸರ್ಕಾರ ಮಣಿದಿದೆ. ಈ ‘ ದಲ್ಲಾಳಿಗಳ ’ ಟ್ರಾಕ್ಟರ್ ಪೆರೇಡ್‍ಗೆ ದೆಹಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಅನುಮತಿ ನೀಡಿದೆ. ಆತ್ಮನಿರ್ಭರ ಭಾರತದ ಭ್ರಮಾಲೋಕದಲ್ಲಿ ತೇಲಾಡುತ್ತಿರುವ ಹಿತವಲಯದ ಸುಶಿಕ್ಷಿತರು, ಇದೇ 26ರಂದು ತಾವು ಪರಿಭಾವಿಸಿರುವ ಖಲಿಸ್ತಾನಿಗಳು-ಭಯೋತ್ಪಾದಕರು-ನಗರ ನಕ್ಸಲರು- ಉಗ್ರರು-ತುಕಡೆ ತುಕಡೆ ಗುಂಪುಗಳು, ಭಾರತದ ತ್ರಿವರ್ಣ ಧ್ವಜವನ್ನು ಹೊತ್ತು ಲಕ್ಷ ಲಕ್ಷ ಸಂಖ್ಯೆಯಲ್ಲಿ ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ದನಿ ಎತ್ತುವ ಒಂದು ಅದ್ಭುತ ಪ್ರದರ್ಶನವನ್ನು ನೋಡಲಿದ್ದಾರೆ.

ಈ ಪ್ರದರ್ಶನ ಮನರಂಜನೆಯಲ್ಲ, ದೇಶಭಕ್ತಿಯ ಉನ್ಮಾದದಲ್ಲಿ ಕುಣಿದು ಕುಪ್ಪಳಿಸುವ ಪ್ರಹಸನವಲ್ಲ, ಸೇನಾಬಲ ಪ್ರಭುತ್ವದ ಸಾಮರ್ಥ್ಯ ಪ್ರದರ್ಶಿಸುವ ಮೆರವಣಿಗೆಯಲ್ಲ. ಇದು ಪ್ರಜಾತಂತ್ರ ವ್ಯವಸ್ಥೆಯಲ್ಲಿ, ಗಣತಂತ್ರದಲ್ಲಿ ಸಾರ್ವಭೌಮ ಪ್ರಜೆಗಳಿಗೆ ಇರುವ ಶಕ್ತಿ ಪ್ರದರ್ಶನ. ಇದು ಅಭೂತಪೂರ್ವ, ಚಾರಿತ್ರಿಕ ಮತ್ತು ಭವಿಷ್ಯದ ದೃಷ್ಟಿಯಿಂದ ಮಹತ್ತರವಾದ ಒಂದು ಘಳಿಗೆ. ಈ ಶಕ್ತಿ ಪ್ರದರ್ಶನದ ಹಿಂದೆ ದಮನಿಸುವ ದನಿ ಇಲ್ಲ, ಕೂಡಿ ಬಾಳುವ ದನಿ ಇದೆ. ವಿಧ್ವಂಸಕ ಛಾಯೆ ಇಲ್ಲ ಸೌಹಾರ್ದತೆಯ ಧ್ವನಿ ಇದೆ. ಗುಂಡಿಟ್ಟು ಕೊಲ್ಲುವ ಮನಸುಗಳಿಲ್ಲ, ಪರಸ್ಪರ ಅಪ್ಪಿಕೊಂಡು ಬದುಕುವ ಪ್ರೀತಿ ಇದೆ. ಅನ್ಯರ ಚಿಂತನೆ ಇಲ್ಲ ಐಕ್ಯತೆಯ ಭಾವ ಇದೆ. ನಾವು-ಅವರು ಎನ್ನುವ ಭೇದ ಇಲ್ಲ. ನಾವು ಎನ್ನುವ ಉದಾತ್ತ ಭಾವನೆ ಮಾತ್ರ ಇದೆ. ಇದೇ ನಿಜವಾದ ಗಣತಂತ್ರ, ನೈಜ ಪ್ರಜಾತಂತ್ರ.

26ರಂದು ನಾವು ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡ ದಿನವನ್ನು ಆಚರಿಸುತ್ತಿದ್ದೇವೆ.. ಈ ಸಂವಿಧಾನ ನಮ್ಮನ್ನು, ಅಂದರೆ ಈ ದೇಶದ ಕಟ್ಟಕಡೆಯ ಮನುಷ್ಯನನ್ನೂ ಒಳಗೊಂಡಂತಹ ಪ್ರಜೆಗಳನ್ನು, ಸಾರ್ವಭೌಮ ಪ್ರಜೆಗಳು ಎಂದೇ ಪರಿಗಣಿಸುತ್ತದೆ. ಈ ಸಾರ್ವಭೌಮತ್ವವೇ ಪ್ರಜಾತಂತ್ರದ ಅಂತಃಸತ್ವ ಎನ್ನುವುದನ್ನು ಆಳುವ ವರ್ಗಗಳು, ಜನಪ್ರತಿನಿಧಿಗಳು, ಆಳುವವರ ಭಟ್ಟಂಗಿಗಳು, ವಂದಿಮಾಗಧರು ಮತ್ತು ತಮ್ಮ ಸ್ವಂತಿಕೆಯನ್ನೇ ಕಳೆದುಕೊಡಿರುವ ಮಾಧ್ಯಮಗಳು, ಸುದ್ದಿಮನೆಗಳು ಅರ್ಥಮಾಡಿಕೊಳ್ಳಬೇಕಿದೆ. ತಮ್ಮ ಜೀವನೋಪಾಯದ ಹಕ್ಕುಗಳಿಗಾಗಿ, ಬದುಕುವ ಹಕ್ಕುಗಳಿಗಾಗಿ ಹೋರಾಡುವ ಜನರಲ್ಲಿ ವಿಧ್ವಂಸಕರನ್ನು ಕಾಣುವ ವಿಕೃತ ಮನೋಭಾವದಿಂದ ಈ ವರ್ಗ ಹೊರಬರಬೇಕಿದೆ. ಇಂದು ರೈತರು, ನಾಳೆ ಕಾರ್ಮಿಕರು ಮತ್ತೊಂದು ದಿನ ಸಮಸ್ತ ಶೋಷಿತರು.

ಶೋಷಕ ವ್ಯವಸ್ಥೆಯಲ್ಲಿ ಶೋಷಣೆಯ ಬಿಂದುಗಳು ತೊಟ್ಟಿಕ್ಕುತ್ತಲೇ ಕೆಳಹಂತವನ್ನು ನಿಧಾನವಾಗಿ ತಲುಪುತ್ತವೆ. ನೆಲಮಟ್ಟದಿಂದ ಆರಂಭವಾಗುವ ಶೋಷಣೆಯ ಹೆಜ್ಜೆಗಳು ಪಾತಾಳ ತಲುಪುವವರೆಗೂ ಜೀವಂತವಾಗಿರುತ್ತವೆ. ನೆಲದ ಮೇಲಿರುವವರು ಇದರ ಬಿಸಿ ತಮಗೆ ತಟ್ಟುವುದಿಲ್ಲ ಎಂದು ಭಾವಿಸುವುದು ಮೂರ್ಖತನವಾಗುತ್ತದೆ. ಏಕೆಂದರೆ ಶೋಷಣೆಗೆ ಹಲವು ಮುಖಗಳಿವೆ, ಹಲವು ಆಯಾಮಗಳೂ ಇವೆ. ಶೋಷಕರಿಗೆ ವಿಭಿನ್ನ ಮುಖವಾಡಗಳೂ ಇರುತ್ತವೆ. ಶೋಷಣೆಗೊಳಗಾಗುವವರಿಗೆ ಇರುವುದು ಒಂದೇ ಮುಖ. ಅದು ಶೋಷಿತರದ್ದು. ರೈತ ಚಳುವಳಿ ಇದನ್ನು ಸ್ಪಷ್ಟಪಡಿಸಿದೆ. ಟ್ರಾಕ್ಟರ್ ಪೆರೇಡ್ ಇದನ್ನು ಸಾಂಕೇತಿಕವಾಗಿ ಧೃಡೀಕರಿಸುತ್ತದೆ.

26ರಂದು ನಡೆಯಲಿರುವ ಜನಗಣರಾಜ್ಯೋತ್ಸವ ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ಒಂದು ಹೊಸ ಆಯಾಮವನ್ನು ನೀಡುವ ಜನಾಂದೋಲನವಾಗಿ ರೂಪುಗೊಳ್ಳಲಿದೆ. ಈ ಸದಾಶಯದೊಂದಿಗೆ ಮುನ್ನಡೆಯೋಣ.

-0-0-0-

 

 

Donate Janashakthi Media

Leave a Reply

Your email address will not be published. Required fields are marked *