ನಾಚಿಕೆ ಇಲ್ಲದ ನಾಯಕರು !

ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯ ಸಚಿವ ಸಂಪುಟವನ್ನು ವಿಸ್ತರಣೆ ಮಾಡಿದ ಬಳಿಕ ಮೂಲ ಬಿಜೆಪಿ ಶಾಸಕರ ಅಸಮಾಧಾನ ತಾರಕ್ಕೇರಿದೆ. ಇದರೊಂದಿಗೆ ಕೆಲವು ಹಿರಿಯ ಸಚಿವರ ಖಾತೆ ಬದಲಾವಣೆಗೆ ಮುಖ್ಯಮಂತ್ರಿ ಕೈ ಹಾಕಿದ್ದರಿಂದ ಹಿರಿಯ ಸಚಿವರು ಮುನಿಸಿಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ. ಇದರ ಪರಿಣಾಮ ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕು. ಯಡಿಯೂರಪ್ಪನವರ ಮಟ್ಟಿಗೆ ಖಾತೆಗಳ ಹಂಚಿಕೆ ಮುಗಿದಿದ್ದರೂ ಅದರ ಬಗೆಗಿನ ಅತೃಪ್ತಿಯು ಯಡಿಯೂರಪ್ಪನವರು ಅಂದುಕೊಂಡಂತೆ ಅಷ್ಟು ಸುಲಭವಾಗಿ ಬಗೆಹರಿಯಲಾರದು.

ಯಾರಿಗೆ ಯಾವ ಖಾತೆ ನೀಡಬೇಕು ಎಂಬುದು ಮುಖ್ಯಮಂತ್ರಿಯವರ ಅಧಿಕಾರ ಎಂದು ಎಲ್ಲರೂ ಹೇಳುತ್ತಾರೆ. ಬಿಜೆಪಿಗಳು ಸಹ ಅದೇ ಮಂತ್ರವನ್ನು ಪಠಿಸುತ್ತಿರುತ್ತಾರೆ. ಆದರೆ ಅದೇ ಬಿಜೆಪಿ ಪಕ್ಷದಲ್ಲಿ ಪ್ರತಿಯೊಂದು ವಿಷಯದಲ್ಲೂ ಆರೆಸ್ಸೆಸ್ ಹಸ್ತಕ್ಷೇಪ ಮಾಡುತ್ತಿರುವುದನ್ನು ರಾಜ್ಯದ ಜನ ಆತಂಕದಿಂದಲೇ ಗಮನಿಸುತ್ತಾ ಬಂದಿದ್ದಾರೆ. ಇದರ ಜೊತೆಯಲ್ಲಿ ಕೇಂದ್ರದ ಕೆಲವು ಘಟಾನುಗಟಿ ಸಚಿವರು ಪ್ರಧಾನಮಂತ್ರಿ ಸಲಹೆಯಂತೆ ರಾಜ್ಯ ಸರ್ಕಾರದ ಆಗುಹೋಗುಗಳಲ್ಲಿ ಒಳಗೊಳಗೆ ಮಧ್ಯಪ್ರವೇಶ ಮಾಡುತ್ತಾರೆ. ಬಿಜೆಪಿ ಗಣಗಳು ಇದನ್ನು ಯಾವ ವೇದಿಕೆಯಲ್ಲೂ ಪ್ರಸ್ತಾಪಿಸುವುದಿಲ್ಲ.

ಬಿಜೆಪಿ ತನ್ನನ್ನು ಒಂದು ಮಾದರೀ ರಾಜಕೀಯ ಪಕ್ಷ ಎಂದು ಅಂದುಕೊಳ್ಳುತ್ತದೆ. ಆದರೆ ಆ ಪಕ್ಷದೊಳಗೆ ಸಚಿವ ಸ್ಥಾನಕ್ಕಾಗಿ ನಡೆಯುವ ಕಚ್ಚಾಟ ಕಿತ್ತಾಟವನ್ನು ನೋಡಿದರೆ ಯಾರು ಯಾರಿಗೆ ಮಾದರಿ ಎಂಬ ಪ್ರಶ್ನೆ ಎದ್ದು ನಿಲ್ಲುತ್ತದೆ. ಬಿಜೆಪಿಯಲ್ಲಿರುವ ಎಲ್ಲಾ ಶಾಸಕರಿಗೂ ಸಚಿವರಾಗಬೇಕೆಂಬ ಹಂಬಲ. ಅದನ್ನು ಸಾಧಿಸಲು ಅವರು ಏನು ಬೇಕಾದರೂ ಮಾಡಲು ಸಿದ್ಧ. ಪ್ರತಿ ಸಲ ಸಂಪುಟ ವಿಸ್ತರಣೆಯಾದಾಗ ಅವರು ಎದ್ದು ನಿಲ್ಲುತ್ತಾರೆ. ಮುಖ್ಯಮಂತ್ರಿಗಳ ಬಲಹೀನತೆ, ನ್ಯೂನತೆಗಳನ್ನು ಬಳಸಿಕೊಳ್ಳಲೂ ಹೇಸುವುದಿಲ್ಲ. ಎಲ್ಲರೂ ಹೆಚ್ಚು ಲಾಭದಾಯಕವಾದ ದಪ್ಪ ಗಾದಿಗಳನ್ನೇ ಬಯಸುತ್ತಾರೆ. ಜಾತಿ ಆಧಾರದಲ್ಲಿ ಲಾಭಿ ಮಾಡುತ್ತಾರೆ. ಗುಂಪುಗಾರಿಕೆ ಮಾಡಿ ಸರ್ಕಾರವನ್ನು ಉರುಳಿಸುವ ಬೆದರಿಕೆ ಹಾಕುತ್ತಾರೆ. ಈ ಮೂಲಕ ತಾವು ಇನ್ನುಳಿದವರಂತೆ ಉಪ್ಪು ಖಾರ ಉಣ್ಣುವವರೇ ಆಗಿದ್ದೇವೆ ಎಂಬುದನ್ನು ಒಪ್ಪಿಕೊಳ್ಳಲು ಹೇಸುವುದಿಲ್ಲ. ಇವರು ನಾಚಿಕೆ ಇಲ್ಲದ ನಾಯಕರು! ಇವರು ಯಾರಿಗೂ ಮಾದರಿಯಾಗಲು ಸಾಧ್ಯವಿಲ್ಲ.

ಕೇರಳದಲ್ಲಿ ಸಿಪಿಐ(ಎಂ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್)ದ ಸರ್ಕಾರವಿದೆ. ಸ್ವಾತಂತ್ರ್ಯಾ ನಂತರ ಅನೇಕ ಬಾರಿ ಅಲ್ಲಿ ಎಲ್‌ಡಿಎಫ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ ಅಲ್ಲಿ ಒಮ್ಮೆಯೂ ಶಾಸಕರು ಮಂತ್ರಿ ಸ್ಥಾನಕ್ಕಾಗಿ ಜಗಳವಾಡಿದ ಉದಾಹರಣೆ ಇಲ್ಲ. ಮುಖ್ಯಮಂತ್ರಿ ವಹಿಸಿಕೊಡುವ ಜವಾಬ್ದಾರಿಯನ್ನು ಅವರು ಪ್ರಾಮಾಣಿಕವಾಗಿ ನಿರ್ವಹಿಸುತ್ತಾರೆ. ಹಣಗಳಿಕೆ ಅವರ ಸೇವೆಯ ಗುರಿಯಲ್ಲ. ಮುಖ್ಯಮಂತ್ರಿ ತನ್ನ ಜವಾಬ್ದಾರಿಯ ನಿರ್ವಹಣೆಯ ಭಾಗವಾಗಿ ಸಚಿವರನ್ನು ಅವರ ಸ್ಥಾನದಿಂದ ಬದಲಾಯಿಸಬಹುದು, ಸಂಪುಟದಿಂದ ತೆಗೆದು ಹಾಕಬಹುದು. ಅಂತಹ ಸಂದರ್ಭದಲ್ಲಿಯೂ ಕಮ್ಯುನಿಸ್ಟ್ ಸಚಿವ ಸಂಪುಟದಲ್ಲಿ ಅತೃಪ್ತಿ, ಅಸಮಾಧಾನ ಉಂಟಾಗುವ ಪ್ರಶ್ನೆಯೇ ಇಲ್ಲ. ಕೇರಳದ ಇಂದಿನ ಪಿಣರಾಯಿ ವಿಜಯನ್ ನೇತೃತ್ವದ ಸಚಿವ ಸಂಪುಟ ಎಲ್ಲರಿಗೂ ಮಾದರಿಯಾಗಿದೆ. ಪಶ್ಚಿಮ ಬಂಗಾಳ ಮತ್ತು ತ್ರಿಪುರ ರಾಜ್ಯಗಳಲ್ಲಿಯೂ ಸಿಪಿಐ(ಎಂ) ನೇತೃತ್ವದ ಸರ್ಕಾರಗಳು ಬಂದಿವೆ. ಮಾದರಿ ಆಡಳಿತ ವ್ಯವಸ್ಥೆಯನ್ನು ನೀಡಿ ದಾಖಲೆ ಸ್ಥಾಪಿಸಿದ್ದಾರೆ.

ಬಿಜೆಪಿ ಒಂದು ಬಂಡವಾಳಶಾಹಿ ಭೂಮಾಲಿಕ ಪಕ್ಷ. ದೇಶ ವಿದೇಶಗಳ ಕಾರ್ಪೊರೇಟ್ ಕಂಪೆನಿಗಳಿಂದ ಹಣದ ಹೊಳೆಯಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮತ್ತೆ ಮತ್ತೆ ಅಧಿಕಾರಕ್ಕೆ ಬರುವುದಕ್ಕಾಗಿ ಬಿಜೆಪಿ ಇಂತಹ ಹಣವನ್ನೇ ಅವಲಂಬಿಸಿದೆ. ಕರ್ನಾಟಕದಲ್ಲಿ ಅದೇ ಬಿಜೆಪಿಗರು ಅಧಿಕಾರದಲ್ಲಿರುವುದರಿಂದ ಅವರು ಹಣಕ್ಕಾಗಿ ಜೊಲ್ಲು ಸುರಿಸುತ್ತಾರೆ. ಶಾಸಕರಾಗಿ, ಸಚಿವರಾಗಿ ಆಯ್ಕೆಯಾದವರು ಜನರಿಂದಲೂ, ಸರ್ಕಾರದ ಬೊಕ್ಕಸದಿಂದಲೂ ಕದಿಯುತ್ತಾರೆ. ಕದಿಯುವ ಅವಕಾಶ ಸಿಗದಾಗ ಮರಗುತ್ತಾರೆ!

Donate Janashakthi Media

Leave a Reply

Your email address will not be published. Required fields are marked *