ಮುಷ್ಕರ ನಡೆಸಿದರೆಂದು 45 ಕಾರ್ಮಿಕರನ್ನು ವಜಾಗೊಳಿಸಿದ ಟೊಯೊಟಾ ಕಿರ್ಲೋಸ್ಕರ್

ರಾಮನಗರ: ಜಿಲ್ಲೆಯ ಬಿಡದಿ ಕೈಗಾರಿಕಾ ವಲಯದಲ್ಲಿರುವ ಟೊಯೊಟಾ ಕಿರ್ಲೋಸ್ಕರ್ ಕಂಪನಿ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸಿ ಸುಮಾರು 45 ಕಾರ್ಮಿರನ್ನು ಟೊಯೊಟಾ ಆಡಳಿತ ಮಂಡಳಿ ಕೆಲಸದಿಂದ ವಜಾ ಮಾಡಿದೆ.

ಕಾರ್ಮಿಕರ ವಜಾ ಮಾಡಿರುವ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಆಡಳಿತ ಮಂಡಳಿಯು ತಾನು ತೆಗೆದುಕೊಂಡಿರುವ ಶಿಸ್ತು ಕ್ರಮವನ್ನು ಸಮರ್ಥಿಸಿಕೊಂಡಿದೆ. ಇನ್ನುಳಿದ 21 ನೌಕರರ ವಿರುದ್ಧ ಸಣ್ಣ ಶಿಸ್ತಿನ ಕ್ರಮಗಳೊಂದಿಗೆ ಕೆಲಸಕ್ಕೆ ತೆಗೆದುಕೊಂಡಿದೆ.

ಕಾರ್ಮಿಕರ ಮೇಲೆ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಟಿಕೆಎಂ ನೌಕರರ ಸಂಘದ ನೇತೃತ್ವದಲ್ಲಿ ಕೆಲವು‌ ತಿಂಗಳ ಹಿಂದೆ ‌ಸಾವಿರಾರು‌ ಕಾರ್ಮಿಕರು ಮುಷ್ಕರ ನಡೆಸಿದ್ದರು. ಇದರಿಂದಾಗಿ ಹಲವು ಬಾರಿ ಕಂಪನಿ‌ ಲಾಕೌಟ್ ಘೋಷಿಸಿತ್ತು. ಕಡೆಗೆ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಸಂಧಾನ ಸಭೆಯೂ ನಡೆದು ಕಾರ್ಖಾನೆ ಪುನರಾರಂಭಗೊಂಡಿತ್ತು.

ಇದನ್ನು ಓದಿ: ಟೊಯೋಟಾ ಕಿರ್ಲೋಸ್ಕರ್ ಆಡಳಿತ ಮಂಡಳಿಯಿಂದ ಕಿರುಕಳ : ಕಾರ್ಮಿಕರ ಅಹೋರಾತ್ರಿ ಧರಣಿ

ನಿಯಮಬಾಹಿರವಾಗಿ ಮುಷ್ಕರ ನಡೆಸಿದ ಆರೋಪದ‌ ಮೇಲೆ ಟೊಯೊಟಾ ಕಿರ್ಲೋಸ್ಕರ್‌ ಮೋಟಾರ್ಸ್‌ ಕಂಪನಿಯು 66 ನೌಕರರನ್ನು ಸೇವೆಯಿಂದ ಅಮಾನತು ಮಾಡಿ, ಅವರ ವಿರುದ್ಧ ತನಿಖೆಗೆ ಆದೇಶಿಸಿತ್ತು. ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ‌ಕಂಪನಿ‌ ‌ನಿಯಮಗಳ ಪ್ರಕಾರ 45 ಕಾರ್ಮಿಕರನ್ನು ಸೇವೆಯಿಂದ ವಜಾ‌ ಮಾಡಿರುವುದಾಗಿ ಕಂಪನಿ ಸಮರ್ಥಿಸಿಕೊಳ್ಳುತ್ತಿದೆ.

ಇದನ್ನು ಓದಿ: ಕಾರ್ಮಿಕರ ಮೇಲಿನ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಜಿಲ್ಲಾಧಿಕಾರಿ ಕಛೇರಿ ಮುತ್ತಿಗೆ

ಶಿಸ್ತಿನ ವಿಚಾರಣೆಯನ್ನು ಮೂರನೇ ವ್ಯಕ್ತಿಯಿಂದ, ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ನಡೆಸಲಾಯಿತು. ವಿಚಾರಣೆಯ ಪ್ರಕ್ರಿಯೆಯಲ್ಲಿ ಅಮಾನತುಗೊಂಡ ಸದಸ್ಯರಿಗೆ ತಮ್ಮ ಪ್ರಕರಣವನ್ನು ಸಮರ್ಥಿಸಿಕೊಳ್ಳಲು ಅಗತ್ಯವಾದ ಅವಕಾಶಗಳನ್ನು ಒದಗಿಸಲಾಯಿತು. ಈಗ ವಿಚಾರಣೆಗಳು ಪೂರ್ಣಗೊಂಡ ನಂತರ, ಆಡಳಿತ ಮಂಡಳಿ ಗಂಭೀರ ದುಷ್ಕೃತ್ಯದಲ್ಲಿ ತೊಡಗಿದ್ದ 45 ಕಾರ್ಮಿಕರನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದೆ ಎಂದು ಟೊಯೊಟಾ ಕಿರ್ಲೋಸ್ಕರ್ ಕಂಪನಿ ಹೇಳಿದೆ.

ಕಾರ್ಮಿಕರ ವಜಾಕ್ಕೆ ಕಾರ್ಮಿಕ ಸಂಘಟನೆ ಖಂಡನೆ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆ ಮತ್ತೆ ತನ್ನ ಹಠಮಾರಿ ಧೋರಣೆ ಮತ್ತು ಕಾರ್ಮಿಕ ವಿರೋಧಿ ನೀತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, 66 ಕಾರ್ಮಿಕರನ್ನು ಅಮಾನತ್ತು ಮಾಡಲಾಗಿತ್ತು. ಮತ್ತು 8 ಜನ ಸದಸ್ಯರನ್ನು ಕೆಲಸದಿಂದ ವಜಾ ಮಾಡಿತ್ತು.

ಮುಷ್ಕರ ನಿರತ 66 ಜನ ಸದಸ್ಯರಲ್ಲಿ 45 ಸದಸ್ಯರನ್ನು ಸೇವೆಯಿಂದ ವಜಾ ಮಾಡುವ ಮೂಲಕ, ಟೊಯೊಟಾ ಕಾರ್ಖಾನೆ ಮತ್ತೊಮ್ಮೆ ತನ್ನ ದುರಹಂಕಾರದ ಪರಮಾವಧಿಯನ್ನು ನಿರೂಪಿಸಿದೆ. ಇದನ್ನು ಕಾರ್ಮಿಕ ಸಂಘವು ಅತಿ ಕಠಿಣವಾಗಿ ಖಂಡಿಸುತ್ತದೆ ಎಂದು ಟಿಕೆಎಮ್ಇಯು ಕಾರ್ಮಿಕ ಸಂಘಟನೆ ತಮ್ಮ ಆಕ್ರೋಶ ವ್ಯಕ್ತಪಡಿಸಿದೆ.

 

Donate Janashakthi Media

Leave a Reply

Your email address will not be published. Required fields are marked *