ಜಟಾಪಟಿಯಲ್ಲೆ ಮುಗಿದ ಸಭೆ : ಟಫ್ ರೂಲ್ಸ್ ಕುರಿತು ನಾಳೆ ನಿರ್ಧಾರ

ಬೆಂಗಳೂರು: ಕಾಡ್ಗಿಚ್ಚಿನಂತೆ ಕರೊನಾ ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ಸರ್ಕಾರ ಮುಂದೇನು ಮಾಡಬೇಕೆಂಬ ಬಗ್ಗೆ ಬೆಂಗಳೂರಿನ‌ ಶಾಸಕ-ಸಂಸದರು ಹಲವು ಸಲಹೆ ನೀಡಿದ್ದಾರೆ.

ಬೆಂಗಳೂರು ಸಚಿವರು ಮತ್ತು ಜನಪ್ರತಿನಿಧಿಗಳ ಸಭೆಯ ಬಳಿಕ ಕಂದಾಯ ಸಚಿವ ಆರ್‌.ಅಶೋಕ ಅವರು ಸುದ್ದಿಗೋಷ್ಠಿ ನಡೆಸಿ ನಾಳಿನ ಸರ್ವಪಕ್ಷಗಳ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.

ತಜ್ಞರು ನೀಡಿರುವ ವರದಿಯನ್ನು ಆಧರಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಮುಖ್ಯಮಂತ್ರಿಯವರಿಗೆ ಅಧಿಕಾರ ನೀಡಲಾಗಿದೆ. ನಾಳೆ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸರ್ವ ಪಕ್ಷಗಳ ನಾಯಕರ ಸಭೆ ನಡೆಯಲಿದೆ. ಆ ಬಳಿಕ ಕಟ್ಟುನಿಟ್ಟಿನ ನಿಯಮವನ್ನು ಪ್ರಕಟಿಸಲಿದ್ದಾರೆ ಎಂದು ಅಶೋಕ ಹೇಳಿದರು.

ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು

1) ವೈದ್ಯಕೀಯ ಆಮ್ಲಜನಕದ ಅಗತ್ಯ ಇರುವವರಿಗೆ ಮಾತ್ರ ಆಸ್ಪತ್ರೆ ಸೇರಿಸಲು ವ್ಯವಸ್ಥೆ. ಈಗ ಅಗತ್ಯ ಇಲ್ಲದವರೂ ಆಸ್ಪತ್ರೆಗೆ ದಾಖಲಾಗಿರುವುದರಿಂದ ಹಾಸಿಗೆ ಸಮಸ್ಯೆ ಉಂಟಾಗಿದೆ. ಕೋವಿಡ್‌ ಸೋಂಕಿತರನ್ನು ಮೊದಲಿಗೆ ಕೋವಿಡ್‌ ಆರೈಕೆ ಕೇಂದ್ರಗಳಿಗೆ ದಾಖಲಿಸಲಾಗುವುದು. ಉಸಿರಾಟದ ಸಮಸ್ಯೆ ಬಂದರೆ ಮಾತ್ರ ಅವರನ್ನು ಆಸ್ಪತ್ರೆಗೆ ಸೇರಿಸಲಾಗುವುದು.

2) ರೆಮ್‌ಡಿಸಿವಿರ್‌ ಇಂಜೆಕ್ಷನ್‌ ಕೊರತೆ ಇಲ್ಲ. 20 ಸಾವಿರ ದಾಸ್ತಾನು ಇದೆ. ಇದರ ಅವಶ್ಯಕತೆ ಇಲ್ಲದವರೂ ಖರೀದಿಸುತ್ತಿರುವುದರಿಂದ ಸಮಸ್ಯೆ ಆಗಿದೆ. ಸರ್ಕಾರದ ಆಸ್ಪತ್ರೆಯಲ್ಲಿ ದಾಸ್ತಾನು ಇದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊರತೆ ಇದೆ. ಖಾಸಗಿ ಆಸ್ಪತ್ರೆಗಳಿಗೂ ಪೂರೈಕೆ ಮಾಡಲಾಗುವುದು.

3) ಸಾವಿನ ಪ್ರಮಾಣ ಹೆಚ್ಚಾದರೆ ಬಯಲಿನಲ್ಲಿ ಕಟ್ಟಿಗೆ ಮೂಲಕ ಶವದಹನ ಮಾಡಲು ವ್ಯವಸ್ಥೆ. ಕೋವಿಡ್‌ನಿಂದ ಮೃತಪಟ್ಟವರ ಶವಗಳನ್ನು ಏಕಕಾಲಕ್ಕೆ ಆಸ್ಪತ್ರೆಗಳು ಬಿಡುಗಡೆ ಮಾಡುತ್ತಿರುವುದರಿಂದ ವಿದ್ಯುತ್‌ ಚಿತಾಗಾರಗಳಲ್ಲಿ ಒತ್ತಡ ಉಂಟಾಗಿದೆ. ಏಕ ಕಾಲಕ್ಕೆ ಬಿಡುಗಡೆ ಮಾಡುವುದಕ್ಕೆ ಬದಲು, ಬೆಳಗ್ಗಿನಿಂದ ಶವಗಳನ್ನು ಅಂತ್ಯ ಸಂಸ್ಕಾರಕ್ಕೆ ಬಿಡುಗಡೆ ಮಾಡಲು ಆಸ್ಪತ್ರೆಗಳಿಗೆ ಸೂಚನೆ ನೀಡಲಾಗುವುದು.

4) ಶವಗಳನ್ನು ಸಾಗಿಸಲು 49 ಆಂಬ್ಯುಲೆನ್ಸ್‌ಗಳನ್ನು ಮೀಸಲಿಡಲಾಗಿದೆ. ಅಲ್ಲದೆ, ವಿದ್ಯುತ್‌ ಚಿತಾಗಾರಗಳು 24 ಗಂಟೆ ಕಾರ್ಯ ನಿರ್ವಹಿಸಲಿವೆ. ಕೋವಿಡ್‌ನಿಂದ ಮೃತಪಟ್ಟವರ ಶವ ಸಾಗಿಸಲು ಹಣ ಪಡೆಯುವಂತಿಲ್ಲ.

5) 24x 7 ಕಾರ್ಯನಿರ್ವಹಿಸಲು ಕೋವಿಡ್‌ ನಿಯಂತ್ರಣ ಕೊಠಡಿಯ ಉಸ್ತುವಾರಿಯನ್ನು ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳಿಗೆ ವಹಿಸಲಾಗುವುದು.

6) ಖಾಸಗಿ ಆಸ್ಪತ್ರೆಗಳು ಇನ್ನೂ ಸುಮಾರು ಆರರಿಂದ ಏಳು ಸಾವಿರ ಹಾಸಿಗೆಗಳನ್ನು ನೀಡಬೇಕು. ಅದಕ್ಕಾಗಿ ಸಭೆ ನಡೆಸಿದ್ದೇವೆ.

7) ವಾರಾಂತ್ಯದ ಲಾಕ್‌ಡೌನ್‌ ಬಗ್ಗೆ ಪ್ರಸ್ತಾಪ ಆಗಿಲ್ಲ. ಲಾಕ್‌ಡೌನ್‌ ಬೇಡ ಎಂದು ಸಭೆಯಲ್ಲಿ ಎಲ್ಲರೂ ಹೇಳಿದ್ದಾರೆ.

8) ಕೋವಿಡ್‌ ಇಡೀ ವಿಶ್ವದಲ್ಲಿ ಹರಡಿದೆ. ನಾವು ಇಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌, ಕಮ್ಯುನಿಷ್ಟ್‌ ಎಂದು ಕೂತರೆ ಆಗುವುದಿಲ್ಲ. ಎಲ್ಲರೂ ಸೇರಿ ನಿಭಾಯಿಸಬೇಕಾಗಿದೆ. ಎಲ್ಲ ರಾಜಕಾರಣಿಗಳೂ ಸೇರಿ ನಿಭಾಯಿಸಿ ಬೆಂಗಳೂರು ಮಾದರಿ ಎಂಬುದನ್ನು ತೋರಿಸಬೇಕು

9) ರಮ್ಜಾನ್‌ಗೆ ರಿಯಾಯಿತಿ ನೀಡಬೇಕು ಎಂದು ಶಾಸಕ ಜಮೀರ್‌ ಖಾನ್‌ ಮನವಿ ಮಾಡಿದ್ದಾರೆ. ನಿಯಮಗಳು ಹಿಂದು, ಮುಸ್ಲಿಂ, ಕ್ರೈಸ್ತರಿಗೆ ಅನ್ವಯವಾಗುತ್ತದೆ ಎಂದು ತಿಳಿಸಿದರು.

ಆಡಳಿತ ಪ್ರತಿಪಕ್ಷಗಳ ಜಟಾಪಟಿ : ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಶಾಸಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಇಷ್ಟು ದಿನ ಕಳೆದರೂ ವ್ಯವಸ್ಥೆ ಇಲ್ಲದೆ ಜನರು ಪರದಾಡುತ್ತಿದ್ದಾರೆ, ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನೆಗಳನ್ನೆಸೆದರು. ಈ ವೇಳೆ ಕಳೆದ ಒಂದು ವರ್ಷದ ಹಿಂದೆ ಮೂಲಸೌಕರ್ಯ ಹೇಗಿತ್ತು, ಈಗ ಏನೆಲ್ಲ ಬದಲಾವಣೆ ಆಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ವಿವರಣೆ ನೀಡುತ್ತಿದ್ದಂತೆ ಪ್ರತಿಪಕ್ಷ ಸದಸ್ಯರ ಆಕ್ರೋಶ ಹೆಚ್ಚಾಯಿತು.

ಈ ನಡುವೆ ಶಾಸಕರು ಹಲವು ಸಲಹೆ ನೀಡಿದ್ದಾರೆ. ಆಹಾರವಾಗಲಿ ಅಥವಾ ಔಷಧವಾಗಲಿ ನ್ಯಾಯಯುತವಾಗಿ ವಿತರಿಸಿ. ರಾಜ್ಯದಲ್ಲಿ ಒಂದೆಡೆ ಹಾಸಿಗೆ ಇಲ್ಲ, ಮತ್ತೊಂದೆಡೆ ತೀವ್ರ ನಿಗಾ ಘಟಕದಲ್ಲಿ ಸ್ಥಳಾವಕಾಶ ಇಲ್ಲ, ಮಗದೊಂದೆಡೆ ಆಮ್ಲಜನಕದ ದಾಸ್ತಾನು ಇಲ್ಲ ಎಂಬ ಭಯಾನಕ ಪರಿಸ್ಥಿತಿ ಉಂಟಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಬೆಂಗಳೂರು ನಗರದಲ್ಲಿ ಕನಿಷ್ಠ 25,000 ಹಾಸಿಗೆಗಳನ್ನು ವ್ಯವಸ್ಥೆ ಮಾಡಿ ಎಂದು ರಾಮಲಿಂಗಾರೆಡ್ಡಿ ಸಲಹೆ ನೀಡಿದರು.

ಮನೆಯಲ್ಲಿ ದಿಗ್ಬಂಧನದಲ್ಲಿರುವ (ಹೋಮ್ ಐಸೋಲೇಷನ್) ಜನರು ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಲಾಕ್​ಡೌನ್​ಗಿಂತಲೂ ದಂಡಪ್ರಕ್ರಿಯ ಸಂಹಿತೆ ಪರಿಚ್ಛೇಧ 144 ಜಾರಿ ಮಾಡಿ ಗುಂಪು ಸೇರುವುದನ್ನು ತಡೆಯುವುದು ಉತ್ತಮ. ಕಲ್ಯಾಣ ಮಂಟಪ, ಸಮುದಾಯ ಭವನ, ಮಾರುಕಟ್ಟೆಗಳಲ್ಲಿ ಜನಸಂದಣಿ ನಿಯಂತ್ರಿಸಿ, ನೈಟ್ ಕರ್ಫ್ಯೂ ಸಮಯ ಬದಲಾವಣೆ ಅಗತ್ಯವಿಲ್ಲ, ಕೊಳಗೇರಿಗಳಲ್ಲಿ ಲಸಿಕಾ ಆಭಿಯಾನಕ್ಕೆ ಒತ್ತು ಕೊಡಿ ಎಂಬ ಸಲಹೆಗಳು ವ್ಯಕ್ತವಾದವು.

Donate Janashakthi Media

Leave a Reply

Your email address will not be published. Required fields are marked *