ನವದೆಹಲಿ/ ಬೆಂಗಳೂರು ಫೆ 14 : ಗ್ರೇಟಾ ಥನ್ ಬರ್ಗ್ ಮತ್ತು ಇತರರು ಭಾರತದ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದ, “ಟೂಲ್ಕಿಟ್”ನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದ ಆರೋಪದಡಿ ಬೆಂಗಳೂರಿನ “ಫ್ರೈಡೇ ಫಾರ್ ಫ್ಯೂಚರ್” ಅಭಿಯಾನದ ಸಂಸ್ಥಾಪಕರಲ್ಲಿ ಒಬ್ಬರಾದ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ NDTVಯಲ್ಲಿ ವರದಿಯಾಗಿದೆ.
ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಿದ್ಧವಾಗಿದ್ದ ಹೋರಾಟದ ರೂಪರೇಷೆವನ್ನು ಬೇರೆಯವರಿಗೆ ಕಳುಹಿಸಿದ್ದು ರೈತರ ಪ್ರತಿಭಟನೆ ವೇಳೆ ಕುಮ್ಮಕ್ಕು ನೀಡಿದ ಆರೋಪ ಬೆಂಗಳೂರು ಮೂಲದ ಹೋರಾಟಗಾರ್ತಿ ದಿಶಾ ರವಿ ಮೇಲೆ ಕೇಳಿ ಬಂದಿದ್ದು ದೆಹಲಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ದಿಶಾ ರವಿ, ಬೆಂಗಳೂರಿನ ಪ್ರತಿಷ್ಠಿತ ಮಹಿಳಾ ಕಾಲೇಜುಗಳಲ್ಲಿ ಒಂದಾಗಿರುವ ಮೌಂಟ್ ಕಾರ್ಮಲ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾಳೆ. ದಿಶಾ ರವಿ ವಿರುದ್ಧ ದೇಶದ್ರೋಹ, ಅಪರಾಧ ಒಳಸಂಚು ಸೇರಿದಂತೆ ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿವೆ.
ಫೆಬ್ರವರಿ 4ರಂದು ಸ್ವೀಡಿಶ್ ಹವಾಮಾನ ಹೋರಾಟಗಾರ್ತಿ ಗ್ರೇಟಾ ಥನ್ ಬರ್ಗ್ ಮಾಡಿದ್ದ ಟೂಲ್ಕಿಟ್ ಟ್ವೀಟ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ನಡೆದ ಹಿಂಸಾಚಾರದ ನಂತರ ಇವರ ಈ ಟ್ವೀಟ್ ಪ್ರತಿಭಟನೆಯ ಬಗ್ಗೆ ಜಾಗತಿಕ ಗಮನವನ್ನು ಸೆಳೆಯಲು ಸಹಾಯಕವಾಗಿತ್ತು.
ಇದನ್ನೂ ಓದಿ : ಗ್ರೇಟಾ ಹಂಚಿಕೊಂಡಿದ್ದ ಟೂಲ್ ಕಿಟ್ ನಲ್ಲಿ ಏನಿದೆ?
ಪೊಲೀಸರು ಆಕೆಯನ್ನು ಮನೆಯಿಂದಲೆ ಬಂಧಿಸಿರುವುದಾಗಿ ತಿಳಿದು ಬಂದಿದೆ. ಆಕೆಯ ತಂದೆ ಮೈಸೂರಿನಲ್ಲಿ ಅಥ್ಲೆಟಿಕ್ಸ್ ತರಬೇತುದಾರರಾಗಿದ್ದರೆ. ದೆಹಲಿ ಪೊಲೀಸರ ಸೈಬರ್ ಅಪರಾಧ ವಿಶೇಷ ಕೋಶವು ಫೆಬ್ರವರಿ 4 ರಂದು ದೇಶದ್ರೋಹ, ಕ್ರಿಮಿನಲ್ ಪಿತೂರಿ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ಎ, 120 ಎ ಮತ್ತು 153 ಎ ಅಡಿಯಲ್ಲಿ “ಟೂಕ್ ಕಿಟ್ ಸ್ಟುಷ್ಟಿಕರ್ತರ”ವಿರುದ್ಧ ಗುಂಪುಗಳ ನಡುವೆ ದ್ವೇಷವನ್ನು ಬೆಳೆಸುವ ಆರೋಪದ ಮೇಲೆ ಮೊದಲ ಮಾಹಿತಿ ವರದಿಯನ್ನು (ಎಫ್‌ಐಆರ್) ದಾಖಲಿಸಿತ್ತು.