ಭೋಪಾಲ: ಅನಾರೋಗ್ಯದ ಕಾರಣಗಳನ್ನು ನೀಡಿ, 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಮದುವೆ ಸಮಾರಂಭದಲ್ಲಿ ನೃತ್ಯ ಮಾಡಿರುವ ವಿಡಿಯೋ ಒಂದು ಸಾಕಷ್ಟು ವೈರಲ್ ಆಗಿದ್ದು, ಈ ಬಗ್ಗೆ ಅವರ ಮೇಲೆ ಟೀಕೆಗಳನ್ನು ಮಾಡಲಾಗುತ್ತಿದೆ.
ಭೋಪಾಲ್‌ನ ಸಂಸದೆ ಪ್ರಗ್ಯಾ ಠಾಕೂರ್ ತಮ್ಮ ನಿವಾಸದಲ್ಲಿ ಎರಡು ಅತ್ಯಂತ ಬಡ ಕುಟುಂಬಗಳ ಯುವತಿಯರ ವಿವಾಹವನ್ನು ಏರ್ಪಡಿಸಿದ್ದರು. ಈ ಸಂದರ್ಭ 51 ವರ್ಷದ ಪ್ರಗ್ಯಾ ಠಾಕೂರ್, ಅತ್ಯಂತ ಸಂತೋಷದಿಂದ ನೃತ್ಯ ಮಾಡಿದ್ದು, ಅಷ್ಟು ಮಾತ್ರವಲ್ಲದೇ ಇತರರಿಗೂ ನೃತ್ಯ ಮಾಡಲು ಆಹ್ವಾನ ನೀಡಿದ್ದಾರೆ. ಬನ್ನಿ ನೃತ್ಯ ಮಾಡಿ ಎಂದು ಕೈ ಬೀಸಿ ಕರೆದಿರುವ ದೃಶ್ಯಗಳು ವೈರಲ್ ಆಗಿವೆ.
ಪ್ರಮುಖ ಆರೋಗ್ಯದ ಸಮಸ್ಯೆಗಳ ಕಾರಣ ಒಡ್ಡಿ ಸದಾ ಗಾಲಿಕುರ್ಚಿಯಲ್ಲಿ ತೆರಳುತ್ತಿದ್ದ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಇತ್ತೀಚೆಗಷ್ಟೇ ಬಾಸ್ಕೆಟ್‌ಬಾಲ್ ಆಡಿ ಅಚ್ಚರಿ ಮೂಡಿಸಿದ್ದರು. ಇದೀಗ ನೃತ್ಯ ಮಾಡುವ ಮೂಲಕ ಎಲ್ಲರ ಟೀಕೆಗೆ ಗುರಿಯಾಗಿದ್ದಾರೆ.
ಜುಲೈ ಮೊದಲ ವಾರದಲ್ಲಿ ಪ್ರಗ್ಯಾ ಸಿಂಗ್ ಠಾಕೂರ್ ಭೋಪಾಲ್‌ನಲ್ಲಿ ಬಾಸ್ಕೆಟ್‌ಬಾಲ್ ಆಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ ಬಿಜೆಪಿ ನಾಯಕಿ ಪ್ರಗ್ಯಾ ಸಿಂಗ್ ಠಾಕೂರ್, ಭಾರೀ ಸರಳ, ಸುಲಭವಾಗಿ ಬಾಸ್ಕೆಟ್ ಬಾಲ್ ಅನ್ನು ಆಡುವುದನ್ನು ಈ ವೀಡಿಯೋದಲ್ಲಿ ನೋಡಬಹುದಾಗಿದೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಬ್ರಿಜೇಶ್ ಕಾಳಪ್ಪ ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು “ಕೇವಲ ನಕ್ಸಲ್ ಬೆಂಬಲಿಗೆ ಎಂಬ ಆರೋಪವನ್ನಿಟ್ಟುಕೊಂಡು ಕೊನೆಯವರೆಗೂ ಜಾಮೀನು ನಿರಾಕರಿಸಿದ ಕಾರಣ ಸ್ಟ್ಯಾನ್ ಸ್ವಾಮಿ ಮೃತಪಟ್ಟರು. ಇದೇ ವೇಳೆ ಅನಾರೋಗ್ಯದ ಕಾರಣವನ್ನು ನೀಡಿ ಜಾಮೀನು ಪಡೆದು ಹೊರಗಿರುವ ಭಯೋತ್ಪಾದನೆ ಆರೋಪಿ ಪ್ರಜ್ಞಾ ಠಾಕೂರ್ ಇಲ್ಲಿದ್ದಾರೆ ನೋಡಿ. ನ್ಯಾಯಾಂಗವು ನಿಜಕ್ಕೂ ಮುಗ್ಧವಾಗಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ಪ್ರಮುಖ ಕಾರಣವೆಂದರೆ ಒಬ್ಬ ಬಿಜೆಪಿ ಸಂಸದರೂ ಆಗಿರುವ ಪ್ರಜ್ಞಾ ಸಿಂಗ್ ಠಾಕೂರ್ ಮಾಲೆಗಾಂವ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು ಜಾಮೀನಿನ ಮೇಲೆ ಹೊರಗಿದ್ದಾರೆ. ಅವರ ಆರೋಗ್ಯ ಸುಧಾರಿಸಿರುವ ಕಾಂಗ್ರೆಸ್ ನಾಯಕ ನರೇಂದ್ರ ಸಲೂಜಾ “ನಮ್ಮ ಭೋಪಾಲ್ ಸಂಸದೆ ಸಹೋದರಿ ಪ್ರಗ್ಯಾ ಠಾಕೂರ್ ಬಾಸ್ಕೆಟ್ ಬಾಲ್ ಆಡುವುದನ್ನು, ಯಾರದೇ ಬೆಂಬಲವಿಲ್ಲದೆ ನಡೆಯುವುದನ್ನು ಅಥವಾ ಈ ರೀತಿ ಸಂತೋಷದಿಂದ ಕುಣಿಯುವುದನ್ನು ನಾವು ನೋಡಿದಾಗಲೆಲ್ಲಾ ನನಗೆ ತುಂಬಾ ಸಂತೋಷವಾಗುತ್ತದೆ?” ಎಂದು ಕುಟುಕಿದ್ದಾರೆ.
ಅನಾರೋಗ್ಯದ ಕಾರಣವನ್ನು ಉಲ್ಲೇಖಿಸಿ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದಿರುವ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರ ಬಾಸ್ಕೆಟ್ ಬಾಲ್ ಆಡುವುದು ಹಾಗೂ ನೃತ್ಯ ಮಾಡುತ್ತಿರುವ ದೃಶ್ಯಗಳ ಬಗ್ಗೆ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.