ಬೆಂಗಳೂರು: ಗದುಗಿನ ತೋಂಟದ ಸಿದ್ದಲಿಂಗ ಸ್ವಾಮೀಜಿ ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ರಾಷ್ಟ್ರೀಯ ಪ್ರಶಸ್ತಿಯು ಈ ಬಾರಿ ನ್ಯಾ. ಎಚ್.ಎನ್.ನಾಗಮೋಹನ ದಾಸ್ ಅವರಿಗೆ ಲಭಿಸಿದೆ. ಪ್ರಶಸ್ತಿ ಮೊತ್ತವಾಗಿ ನೀಡಲಾಗುವ ಹಣವನ್ನು ಸಂವಿಧಾನ ಓದು ಅಭಿಯಾನಕ್ಕೆ ಬಳಸುವೆ ಎಂದು ನ್ಯಾ.ಎಚ್.ಎನ್.ನಾಗಮೋಹನ ದಾಸ್ ಘೋಷಿಸಿದ್ದಾರೆ.
“ಕೆಲವು ವ್ಯಕ್ತಿಗಳಿಗೆ ಪ್ರಶಸ್ತಿ ನೀಡುವುದರಿಂದ ಪ್ರಶಸ್ತಿಯ ಗೌರವ ಹೆಚ್ಚಾಲಿದೆ. ಕೆಲವರಿಗೆ ಕೆಲವು ಪ್ರಶಸ್ತಿಗಳನ್ನು ನೀಡುವುದರಿಂದ ವ್ಯಕ್ತಿಗಳ ಗೌರವ ಹೆಚ್ಚಾಗುತ್ತದೆ. ನನ್ನಂಥ ಸಾಧಾರಣ ನ್ಯಾಯಾಧೀಶನನ್ನು ಗುರುತಿಸಿ, ಈ ಪ್ರಶಸ್ತಿಯನ್ನು ನೀಡುತ್ತಿರುವುದು ನನ್ನ ಪಾಲಿಗೆ ಮಹತ್ತರವಾದ ದಿನ. ಇದಕ್ಕಿಂತ ಹೆಚ್ಚು ನಾನು ಆಪೇಕ್ಷಿಸುವುದೂ ಇಲ್ಲ. ಈ ಪ್ರಶಸ್ತಿಯಿಂದಾಗಿ ನನ್ನ ಜವಾಬ್ದಾರಿಯೂ ಹೆಚ್ಚಾಗಿದೆ. ಕಾಯಕ ಚಳವಳಿಯ ಸಂದೇಶವನ್ನು, ವಚನ ಚಳವಳಿಯ ಸಂದೇಶವನ್ನು ಇನ್ನೂ ಹೆಚ್ಚು ಜನರಿಗೆ ತಲುಪಿಸುವ ಕೆಲಸವನ್ನು ನಾನು ಮಾಡಬೇಕಾಗಿದೆ” ಎಂದು ಪ್ರಶಸ್ತಿಗೆ ಆಯ್ಕೆ ಮಾಡಿದ ಸಂದರ್ಭದಲ್ಲಿ ನ್ಯಾ.ಎಚ್.ಎನ್.ನಾಗಮೋಹನ ದಾಸ್ ಹೇಳಿದರು.
“ನನಗೆ ಬರುವ ಪಿಂಚಣಿ ಹಣವೇ ಜೀವನಕ್ಕೆ ಸಾಕು” ಎನ್ನುವ ನ್ಯಾ.ನಾಗಮೋಹನ ದಾಸ್ ಇದುವರೆಗೂ ಬಂದಿರುವ ಪ್ರಶಸ್ತಿಗಳ ಹಣವನ್ನು ಸಾಮಾಜಿಕ ಕೆಲಸಗಳಿಗೆ ವಿನಿಯೋಗಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಬೀದರ್‌ನ ಬಸವ ಪ್ರಶಸ್ತಿ, ಮುರುಘಾ ಮಠದ ಜಯದೇವ ಪ್ರಶಸ್ತಿ, ಮಂಡ್ಯದ ಮಾದೇಗೌಡರ ಪ್ರಶಸ್ತಿ… ಹೀಗೆ ಬಂದ ಅನೇಕ ಪ್ರಶಸ್ತಿಗಳ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಅವರು ಈ ಹಿಂದೆಯೂ ಬಳಸಿದ್ದಾರೆ.
“ಸಂವಿಧಾನ ಓದು ಅಭಿಯಾನ ಹೇಗೆ ನಡೆಯುತ್ತಿದೆ?” ಎಂದು ಅವರಲ್ಲಿ ಕೇಳಿದಾಗ, “ಸಂವಿಧಾನ ಓದು ಅಭಿಯಾನವನ್ನು ನಿರಂತರವಾಗಿ ಮೂರು ವರ್ಷಗಳಿಂದ ನಡೆಸಲಾಗುತ್ತಿದೆ. ಕೊರೊನಾ ಇದ್ದರೂ ಚಿಂತಿಸದೆ ಆನ್‌ಲೈನ್ ಮೂಲಕ ಅಭಿಯಾನವನ್ನು ನಡೆಸಿದ್ದೇವೆ. ಪ್ರತಿ ತಿಂಗಳು ಸುಮಾರು 20 ಕಾರ್ಯಕ್ರಮ ನಡೆಸಲಾಗಿದೆ. ಈಗಲೂ ಆನ್‌ಲೈನ್‌ನಲ್ಲಿ ಕಾರ್ಯಕ್ರಮ ಮುಂದುವರಿದಿದೆ. ಕೊರೊನಾ ಕಡಿಮೆಯಾಗಿರುವುದರಿಂದ ಆಹ್ವಾನ ಬಂದಿವೆ. ಹೋಗಲು ಆರಂಭಿಸಿದ್ದೇನೆ. ‘ಸಂವಿಧಾನ ಓದು’ ಕೃತಿಯ ಸುಮಾರು 2 ಲಕ್ಷ ಪ್ರತಿಗಳು ಮಾರಾಟವಾಗಿವೆ. ಈ ಕೃತಿ ಇಂಗ್ಲಿಷ್, ಹಿಂದಿಗೆ ಭಾಷಾಂತರವಾಗಿದೆ. ಮಲಯಾಳಂಗೂ ತರ್ಜುಮೆಯಾಗಿದ್ದು, ಬಿಡುಗಡೆಯಾಗಬೇಕಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕಾರ್ಯಕ್ರಮ ನಡೆದಿದ್ದು, ವಿದ್ಯಾರ್ಥಿ ಯುವಜನರು ಕಾರ್ಯಕ್ರಮ ಕೇಳಿದ್ದಾರೆ. ಎಲ್ಲ ಜನವರ್ಗವೂ ಈ ಕಾರ್ಯಕ್ರಮಗಳನ್ನು ನಡೆಸಬೇಕೆಂದು ಕೇಳಿಕೊಳ್ಳುತ್ತಿದೆ. ಮಠಗಳಲ್ಲಿ ಕಾರ್ಯಕ್ರಮವನ್ನು ನಡೆಸಲಾಗಿದೆ. ಹೀಗೆ ಸಂವಿಧಾನ ಓದು ಅಭಿಯಾನ ಮುಂದುವರಿದಿದೆ” ಎಂದರು.
ಸಮಸಮಾಜದ ನಿರ್ಮಾಣಕ್ಕಾಗಿ ಜೀವನವಿಡೀ ಸೇವೆ ಸಲ್ಲಿಸಿದ ಗದುಗಿನ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿಯವರ ಮೂರನೇ ವರ್ಷದ ಸ್ಮರಣೆ ಅಂಗವಾಗಿ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಪ್ರಶಸ್ತಿ ಪ್ರದಾನ, ಸನ್ಮಾನ ಗ್ರಂಥಗಳ ಬಿಡುಗಡೆ ಸಮಾರಂಭವನ್ನು ಅಕ್ಟೋಬರ್ 16ರಂದು ಹಮ್ಮಿಕೊಳ್ಳಲಾಗಿದೆ. ಅಂದು ಗದಗದ ತೋಂಟದ ಸಿದ್ಧಲಿಂಗ ಸ್ವಾಮೀಜಿ ಶಿವಾನುಭವ ಮಂಟಪದಲ್ಲಿ ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಪ್ರಶಸ್ತಿ ಫಲಕದೊಂದಿಗೆ 5 ಲಕ್ಷ ರೂ. ನಗದು ಪುರಸ್ಕಾರವನ್ನು ನ್ಯಾ.ನಾಗಮೋಹನ ದಾಸ್ ಅವರಿಗೆ ನೀಡಲಾಗುತ್ತಿದೆ.
ಕಾರ್ಯಕ್ರಮದ ಸಾನ್ನಿಧ್ಯವನ್ನು ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ವಹಿಸಿಕೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಸ್ವಾಮೀಜಿ ಅವರನ್ನು ಸನ್ಮಾನಿಸಲಾಗುವುದು. ಕಲಬುರಗಿಯ ಹಿರಿಯ ಸಾಹಿತಿ ಪ್ರೊ.ಬಾಲಚಂದ್ರ ಜಯಶೆಟ್ಟಿ ರಚಿಸಿದ ‘ಮಹಾ ಮಾನವತಾವಾದಿ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ’ ಹಿಂದಿ ಆವೃತ್ತಿ ಗ್ರಂಥ ಲೋಕಾರ್ಪಣೆಗೊಳ್ಳಲಿದೆ. ನಿವೃತ್ತ ಪ್ರಾಚಾರ್ಯ ಅಲ್ಲಮ ಪ್ರಭು ಬೆಟ್ಟದೂರು ಉಪನ್ಯಾಸ ಇರಲಿದೆ.