ಗುವಾಹಟಿ: ಅಸ್ಸಾಂ ರಾಜ್ಯದಲ್ಲಿ ಮಳೆಯ ಆರ್ಭಟಕ್ಕೆ ಕೊಂಚ ಬಿಡುವು ಲಭಿಸಿದೆ. ಆದರೂ ಪ್ರವಾಹದಿಂದಾಗಿ ಮುಳುಗಡೆಯಾದ ಊರುಗಳಲ್ಲಿ ಸಿಲುಕಿಕೊಂಡಿರುವ ಜನರು ಪರದಾಡುತ್ತಿದ್ದಾರೆ. ಭಾನುವಾರ (ಜೂನ್ 26) ಐವರು ಸಾವನ್ನಪ್ಪುವ ಮೂಲಕ ಅಸ್ಸಾಂ ಪ್ರವಾಹದಲ್ಲಿ ಇದುವರೆಗೆ 127 ಮಂದಿ ಮೃತಪಟ್ಟಿದ್ದಾರೆ. ರಾಜ್ಯಾದ್ಯಂತ 74,706 ಹೆಕ್ಟೇರ್ ಪ್ರದೇಶದಲ್ಲಿ ಪ್ರವಾಹದ ನೀರು ಹರಿದು ಬೆಳೆ ಹಾನಿ ಸಂಭವಿಸಿದೆ. ರಾಜ್ಯದ ವಿವಿದೆಡೆ ನಿರ್ಮಾಣ ಮಾಡಿರುವ 564 ಪರಿಹಾರ ಶಿಬಿರಗಳಲ್ಲಿ 2,17,413 ಮಂದಿ ವಾಸ್ತವ್ಯ ಹೂಡಿದ್ದಾರೆ.
ಅಸ್ಸಾಂನ ಬಾರ್ಪೇಟಾ, ಕ್ಯಾಚಾರ್, ದರ್ರಾಂಗ್, ಕರೀಮ್‌ಗಂಜ್ ಮತ್ತು ಮೊರಿಗಾಂವ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದು, 22 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವರ್ಷದ ಪ್ರವಾಹ ಮತ್ತು ಭೂಕುಸಿತದಲ್ಲಿ ಪ್ರಾಣ ಕಳೆದುಕೊಂಡವರ ಒಟ್ಟು ಸಂಖ್ಯೆ ಈಗ 127ಕ್ಕೆ ಏರಿದೆ. ಈ ಪೈಕಿ 17ಕ್ಕೂ ಹೆಚ್ಚು ಜನರು ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ.
ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ಇತರೆ ತಂಡಗಳು ತಮ್ಮ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಮುಂದುವರೆಸುತ್ತಿವೆ.
ಕ್ಯಾಚಾರ್ ಜಿಲ್ಲೆಯಲ್ಲಿ ಒಟ್ಟು 2,77,158 ಜನರು ಬಾಧಿತರಾಗಿದ್ದಾರೆ. ಸಿಲ್ಚಾರ್‌ನಲ್ಲಿ ಕನಿಷ್ಠ 96,972 ಜನರು ಇನ್ನೂ ಬಳಲುತ್ತಿದ್ದಾರೆ. ಸಿಲ್ಚಾರ್‌ನಲ್ಲಿ 25,223 ಜನ ಸೇರಿದಂತೆ ಜಿಲ್ಲೆಯ 230 ಪರಿಹಾರ ಶಿಬಿರಗಳಲ್ಲಿ 1.09 ಲಕ್ಷಕ್ಕೂ ಹೆಚ್ಚು ಜನರು ನೆಲೆಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೆನ್ನೆ ಸಿಲ್ಚಾರ್ ಪಟ್ಟಣಕ್ಕೆ ಭೇಟಿ ನೀಡಿ, ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸಿದ್ದಾರೆ.
ಬಾರ್ಪೇಟಾ ಅತ್ಯಂತ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದ್ದು, ಸುಮಾರು ಏಳು ಲಕ್ಷ ಜನರು ಸಂಕಷ್ಟದಲ್ಲಿದ್ದಾರೆ. ನಾಗಾವ್ (5.13 ಲಕ್ಷ ಜನರು) ಮತ್ತು ಕ್ಯಾಚಾರ್ (2.77 ಲಕ್ಷಕ್ಕೂ ಹೆಚ್ಚು ಜನರು)ನಲ್ಲಿ ಸಿಲುಕಿದ್ದಾರೆ. ಬಜಾಲಿ, ಬಕ್ಸಾ, ಬರ್ಪೇಟಾ, ಬಿಸ್ವನಾಥ್, ಕ್ಯಾಚಾರ್, ಚಿರಾಂಗ್, ದರ್ರಾಂಗ್, ಧೇಮಾಜಿ, ಧುಬ್ರಿ, ದಿಬ್ರುಗಢ್, ದಿಮಾ ಹಸಾವೊ, ಗೋಲ್‌ಪಾರಾ, ಗೋಲಾಘಾಟ್, ಹೈಲಕಂಡಿ, ಹೊಜೈ, ಕಾಮ್ರೂಪ್, ಕಾಮ್ರೂಪ್ ಮೆಟ್ರೋಪಾಲಿಟನ್, ಕರ್ಬಿ ಆಂಗ್ಲಾಂಗ್ ವೆಸ್ಟ್, ಕರೀಂಗಂಜ್, ಲಾಖ್‌ಪುರ್, ಕರೀಂಗಂಜ್ ಪ್ರವಾಹದಿಂದ ಹಾನಿಗೊಳಗಾದ ಜಿಲ್ಲೆಗಳಾಗಿವೆ.